ಮಂಗಳವಾರ, ಅಕ್ಟೋಬರ್ 27, 2020
28 °C
ಸ್ಥಾನ ಪಲ್ಲಟಗೊಂಡ 73, ತಡೆಯಾಜ್ಞೆ ತಂದ 62 ಹಿರಿಯ ಅಧಿಕಾರಿಗಳ ಅಳಲು

ಬಗೆಹರಿಯದ ಹಿರಿಯ ಅಧಿಕಾರಿಗಳ ಹುದ್ದೆ ಗೊಂದಲ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹದಿಮೂರು ವರ್ಷಗಳ ಬಳಿಕ ಹುದ್ದೆ ಬದಲಿಸಿಕೊಂಡ 75 ಮತ್ತು ಕೆಎಟಿಯಿಂದ ತಡೆಯಾಜ್ಞೆ ತಂದು ಹಳೆಯ ಹುದ್ದೆಯಲ್ಲೇ ಮುಂದುವರಿದಿರುವ 62 ಸೇರಿ ಒಟ್ಟು 137 ಹಿರಿಯ ಅಧಿಕಾರಿಗಳ ‘ಹುದ್ದೆ’ ಗೊಂದಲ ವರ್ಷ ಕಳೆದರೂ ಬಗೆಹರಿದಿಲ್ಲ!

ಹೈಕೋರ್ಟ್ ನಿರ್ದೇಶನದನ್ವಯ ಕೆಪಿಎಸ್‌ಸಿ 2019 ರ ಆಗಸ್ಟ್‌ 22ರಂದು 1998 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಿತ್ತು. ಇದರಿಂದ ಒಟ್ಟು 173 ಅಧಿಕಾರಿಗಳ ಹುದ್ದೆ ಬದಲಾಗಿತ್ತು.

ಈ ಪೈಕಿ, ಹಲವರಿಗೆ ಕೆಲ ತಿಂಗಳುಗಳಿಂದ ಸಂಬಳವೇ ಬಂದಿಲ್ಲ. ಹುದ್ದೆ ಬದಲಿಸಿಕೊಂಡವರಿಗೆ ಇನ್ನೂ ಸೇವಾ ಜೇಷ್ಠತೆ ಮತ್ತು ವೇತನ ನಿಗದಿಪ‍ಡಿಸದ ಕಾರಣ ಕಿರಿಯ ಶ್ರೇಣಿಯ ಹುದ್ದೆಯಲ್ಲಿ ತಮಗಿಂತ ಕಿರಿಯ ಅಧಿಕಾರಿಗಳ ಕೆಳಗೆ ಕೆಲಸ ಮಾಡುತ್ತಿದ್ದಾರೆ. ಹಳೆ ಹುದ್ದೆಯಲ್ಲೇ ಮುಂದುವರಿಯಲು ಬಯಸಿ ಕೋರಿಕೆ ಸಲ್ಲಿಸಿದರೂ, ಅದಕ್ಕೆ ಅವಕಾಶ ಇಲ್ಲವೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಸ್ಪಷ್ಟಪಡಿಸಿರುವುದರಿಂದ ತಡೆಯಾಜ್ಞೆ ಮೇಲೆ ಮುಂದುವರಿದವರು ಕೆಎಟಿ ಆದೇಶಕ್ಕೆ ಕಾಯುತ್ತಿದ್ದಾರೆ.

ಹುದ್ದೆ ಬದಲಿಸಿದವರಿಗಾಗಿ ಸರ್ಕಾರ, ‘ಕರ್ನಾಟಕ ನಾಗರಿಕ ಸೇವೆ 1998 ನೇ ಗೆಜೆಟೆಡ್‌ ಪ್ರೊಬೇಷನರ್ಸ್ ಪರೀಕ್ಷಾರ್ಥ ಘೋಷಣೆ ಮತ್ತು ವೇತನ ನಿಗದಿ (ವಿಶೇಷ) ನಿಯಮಗಳು–2020’ ಜಾರಿಗೊಳಿಸುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧರಿಸಿ, ನಿಯಮದ ಕರಡನ್ನು ಗೆಜೆಟ್ ಹೊರಡಿಸಿ (ಜೂನ್‌ 15) ಎರಡು ತಿಂಗಳು ಕಳೆದರೂ, ಇನ್ನೂ ನಿಯಮ ಅಂತಿಮಗೊಂಡಿಲ್ಲ. ಹುದ್ದೆ ಬದಲಿಸಿಕೊಂಡ 75 ಅಧಿಕಾರಿಗಳನ್ನು ‘ವಿಶೇಷ ಪ್ರಕರಣ’ವೆಂದು ಪರಿಗಣಿಸಿ, ಹಿಂದಿನ ಹುದ್ದೆಯಲ್ಲಿ ಪೂರ್ಣಗೊಳಿಸಿದ ಪ್ರೊಬೇಷನರಿ ಅವಧಿಯನ್ನು ಪರಿಗಣಿಸಿ ಹೊಸ ಹುದ್ದೆಯಲ್ಲಿ ವಿನಾಯಿತಿ ಮತ್ತು ತಾರತಮ್ಯ ಆಗದಂತೆ ವೇತನ ನಿಗದಿ‍ಪಡಿಸಲು ವಿಶೇಷ ನಿಯಮದಲ್ಲಿ ಅವಕಾಶವಿದೆ.

ಆದರೆ, ವೇತನ ನಿಗದಿ‍ಪಡಿಸಿದರೂ, ಸೇವಾ ಜ್ಯೇಷ್ಠತೆ ನೀಡುವ ಬಗ್ಗೆ ನಿಯಮದಲ್ಲಿ ಉಲ್ಲೇಖ ಇಲ್ಲವೆಂದು ವಿಶೇಷ ನಿಯಮಕ್ಕೆ 20ಕ್ಕೂ ಹೆಚ್ಚು ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಹೀಗಾಗಿ, ನಿಯಮ ಅಂತಿಮಗೊಳಿಸುವ ವಿಷಯದಲ್ಲಿ ಗೊಂದಲ ಮುಂದುವರಿ
ದಿದೆ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ಅತ್ತ ಹುದ್ದೆ ಬದಲಿಸಿಕೊಂಡವರು ಮತ್ತು ಇತ್ತ ಕೆಎಟಿಯಿಂದ ತಡೆಯಾಜ್ಞೆ ತಂದವರು ಕಾನೂನು ಹೋರಾಟ ಮತ್ತು ನ್ಯಾಯ ಸಿಕ್ಕಿದರೂ ಸರ್ಕಾರ ಅದನ್ನು ಜಾರಿಗೊಳಿಸಲು ನಿರಾಸಕ್ತಿ ತೋರಿಸುತ್ತಿದೆ ಎಂದು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ. ಈ ಪೈಕಿ, ಅರ್ಧಕ್ಕೂ ಹೆಚ್ಚು ಅಧಿಕಾರಿಗಳಿಗೆ ಇನ್ನು ಆರು ವರ್ಷಕ್ಕೂ ಕಡಿಮೆ ಸೇವಾ ಅವಧಿ ಬಾಕಿ ಇದೆ. ಅವರಲ್ಲಿ ಕೆಲವರು, ‘ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗದ ಅಸಹಾಯಕ ಸ್ಥಿತಿಯಲ್ಲಿದ್ದೇವೆ’ ಎಂದು ಅಲವತ್ತುಕೊಂಡಿದ್ದಾರೆ.

ಕೆಎಟಿಯಿಂದ ತಡೆಯಾಜ್ಞೆ ತಂದಿರುವ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ‘ಕೆಪಿಎಸ್‌ಸಿ ಮಾಡಿದ ತಪ್ಪಿನಿಂದ ನಾವು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ನನಗೆ ಒಂಬತ್ತು ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಹುದ್ದೆ ಬದಲಿಸಿಕೊಂಡರೆ, ಸೇವಾ ಜ್ಯೇಷ್ಠತೆ ಪ್ರಕಾರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕ ಹುದ್ದೆ ಸಿಗಬೇಕು. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. 1998ನೇ ಬ್ಯಾಚಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿ ಎಂದು ಹೇಳಿಕೊಳ್ಳಲು ಕೂಡಾ ನಾಚಿಕೆ ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹುದ್ದೆ ಬದಲಾದವರ ಹಿತರಕ್ಷಣೆಗಾಗಿ ರೂಪಿಸಿದ ವಿಶೇಷ ನಿಯಮಕ್ಕೆ ಫಲಾನುಭವಿಗಳಿಂದಲೇ ಹಲವು ಆಕ್ಷೇಪಣೆಗಳು ಬಂದಿವೆ. ಶೀಘ್ರವೇ ನಿಯಮ ಅಂತಿಮಗೊಳ್ಳಲಿದೆ
    -ಮುಲ್ಲೈ ಮೊಹಿಲನ್, ಉಪ‍ ಕಾರ್ಯದರ್ಶಿ, ಡಿಪಿಎಆರ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು