ಶುಕ್ರವಾರ, ಅಕ್ಟೋಬರ್ 23, 2020
21 °C
ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ

ಹತ್ರಾಸ್‌ ಅತ್ಯಾಚಾರ: ಉತ್ತರ ಪ್ರದೇಶ ಸರ್ಕಾರ ವಜಾಕ್ಕೆ ಕರ್ನಾಟಕದಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಅಖಿಲ ಭಾರತ ಯುವಜನ ಪ್ರಜಾಸತ್ತಾತ್ಮಕ ಸಂಘಟನೆಗಳು ಗುರುವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರೆ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಕಾರ್ಯಕರ್ತರು ತಾಲ್ಲೂಕಿನ ಕಮಲಾಪುರದಲ್ಲಿ ಪ್ರತಿಭಟಿಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟ

ಒಕ್ಕೂಟದ ಕಾರ್ಯಕರ್ತರು ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ರಾಷ್ಟ್ರಪತಿಯವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಸಲ್ಲಿಸಿದರು.

‘ಕೆಳ ವರ್ಗಕ್ಕೆ ಸೇರಿದ ಯುವತಿಯ ಮೇಲೆ ಬಲಾತ್ಕಾರ ಮಾಡಿ ಆಕೆಯ ಹತ್ಯೆ ಮಾಡಲಾಗಿದೆ. ಬಳಿಕ ಅವರ ಕುಟುಂಬ ಸದಸ್ಯರನ್ನು ದೂರವಿಟ್ಟು ತಡರಾತ್ರಿ ಪೊಲೀಸರೇ ಆಕೆಯ ಶವವನ್ನು ಸುಟ್ಟು ಹಾಕಿದ್ದಾರೆ. ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ನೆರವಾಗಿದ್ದಾರೆ. ನಿಜಕ್ಕೂ ಇದು ಪೈಶಾಚಿಕ ಕೃತ್ಯ. ಇದು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ. ಕೂಡಲೇ ರಾಷ್ಟ್ರಪತಿಯವರು ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.


ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಹೊಸಪೇಟೆಯ ರೋಟರಿ ವೃತ್ತದಲ್ಲಿ ಧರಣಿ ನಡೆಸಿದರು

‘ತೆಲಂಗಾಣದಲ್ಲಿ ಕೆಲ ತಿಂಗಳ ಹಿಂದೆ ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದರು. ಈ ಘಟನೆಯಲ್ಲಿ ಶಾಮಿಲಾದವರನ್ನು ಕೂಡ ಅದೇ ರೀತಿ ಎನ್‌ಕೌಂಟರ್‌ ಮಾಡಬೇಕು. ಆಗ ಯಾರೊಬ್ಬರೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಮುಂದಾಗುವುದಿಲ್ಲ. ದೇಶದಲ್ಲಿ ಮಹಿಳೆಯರು, ಅದರಲ್ಲೂ ದಲಿತರು ಸುರಕ್ಷಿತವಾಗಿಲ್ಲ. ದೇಶದ ಎಲ್ಲ ರಾಜ್ಯ ಸರ್ಕಾರಗಳು, ಪೊಲೀಸ್‌ ಅಧಿಕಾರಿಗಳು ಕನಿಷ್ಠ ಮಾನವೀಯತೆಯಿಂದ ವರ್ತಿಸಿ, ಎಲ್ಲ ಮಹಿಳೆಯರಿಗೂ ಸುರಕ್ಷತೆ ಒದಗಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದ್ದಾರೆ.

ಮುಖಂಡರಾದ ಸೋಮಶೇಖರ್‌ ಬಣ್ಣದಮನೆ, ಕೆ.ಎಂ. ಸಂತೋಷ್‌ ಕುಮಾರ್‌, ಎಂ.ಸಿ. ವೀರಸ್ವಾಮಿ, ಬಿ.ಇ. ಶೇಕ್ಷಾವಲಿ, ಜಿ. ಶ್ರೀನಿವಾಸ್‌, ಗುಜ್ಜಲ್‌ ನಾಗರಾಜ, ಮುನ್ನಿ, ಮರಡಿ ಜಂಬಯ್ಯ ನಾಯಕ, ತಾಯಪ್ಪ ನಾಯಕ, ನಿಂಬಗಲ್‌ ರಾಮಕೃಷ್ಣ, ಜೆ. ಶಿವಕುಮಾರ, ಗೋಪಾಲ್‌, ರಮೇಶ ಇದ್ದರು.


ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಕಾರ್ಯಕರ್ತರು ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು

ಅಖಿಲ ಭಾರತ ಯುವಜನ ಪ್ರಜಾಸತ್ತಾತ್ಮಕ ಸಂಘಟನೆ

ಸಂಘಟನೆಯ ಕಾರ್ಯಕರ್ತರು ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ, ಯೋಗಿ ಆದಿತ್ಯನಾಥ್‌ ವಿರುದ್ಧ ಘೋಷಣೆ ಕೂಗಿದರು. ‘ತಳ ಸಮುದಾಯದ ಯುವತಿಯರ ಮೇಲೆ ಸತತವಾಗಿ ಅತ್ಯಾಚಾರಗಳು ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಅದನ್ನು ತಡೆಯುವಲ್ಲಿ ವಿಫಲವಾಗಿದೆ. ಕೂಡಲೇ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಹೇರಬೇಕು’ ಎಂದು ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಯವರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. 

ಜಿಲ್ಲಾ ಅಧ್ಯಕ್ಷ ಪ್ರಶಾಂತ್‌ ಬಡಿಗೇರ್‌, ತಾಲ್ಲೂಕು ಅಧ್ಯಕ್ಷ ಹುಲುಗಪ್ಪ,ಶಿವ, ಸುರೇಶ್‌, ರವಿ, ಅಭಿಷೇಕ್‌ ಇದ್ದರು.

ವಾಲ್ಮೀಕಿ ನಾಯಕ ಮಹಾಸಭಾ

‘ಉತ್ತರ ಪ್ರದೇಶದಲ್ಲಿ ದಲಿತ ಜನಾಂಗಕ್ಕೆ ಸೇರಿದ ಯುವತಿಯ ಮೇಲೆ ನಡೆದ ಪೈಶಾಚಿಕ ಕೃತ್ಯದಿಂದ ಮನುಷ್ಯಕುಲ ತಲೆತಗ್ಗಿಸುವಂತಾಗಿದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕು’ ಎಂದು ರಾಷ್ಟ್ರಪತಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮಹಾಸಭಾ ಕಮಲಾಪುರ ಘಟಕದ ಅಧ್ಯಕ್ಷ ಗಂಗಪ್ಪ, ಉಪಾಧ್ಯಕ್ಷರಾದ ಎಂ. ಪರಶುರಾಮ, ಚಿದಾನಂದಪ್ಪ, ಕಾರ್ಯದರ್ಶಿ ಮಾರಣ್ಣ, ಸಹ ಕಾರ್ಯದರ್ಶಿ ವೀರೇಶ, ಚಿರಂಜೀವಿ, ನಾಗರಾಜ, ಕುಪೇಂದ್ರ, ಶಂಕರ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು