ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಾಲ್ಮೀಕಿ ಜಯಂತಿ | ವಾಲ್ಮೀಕಿ: ಆದಿಕಾವ್ಯದ ಋಷಿಕವಿ

Last Updated 30 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್ |

ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್‌ ||

(ಕವಿತಾಶಾಖೆಯ ತುದಿಯೊಳ್‌

ಅವಿರತಮೆನೆ ’ರಾಮ’, ‘ರಾಮ’ ಎಂದಿಂಗೊರಲಿಂ |

ಸವಿಯಕ್ಕರಮಂ ಬಿಡದುಲಿ–

ಯುವ ವಾಲ್ಮೀಕಿಕೋಕಿಲಕ್ಕೆರಗುವೆನಾಂ ||)

– ಕೆ. ಕೃಷ್ಣಮೂರ್ತಿ ಅವರ ಅನುವಾದ

ಇದು ಎಷ್ಟೋ ಸಾವಿರ ವರ್ಷಗಳ ಮೊದಲು ನಡೆದದ್ದು. ತನ್ನ ಸಮ್ಮುಖದಲ್ಲಿ ನಡೆದ ಹಿಂಸೆಯಿಂದ ಪರಿತಪಿಸಿದ ಜೀವವೊಂದು ಆ ಹಿಂಸೆಯನ್ನು ಶಪಿಸಿತು; ಹಿಂಸಾಹಿಂಸೆಗಳ ಧರ್ಮಾಧರ್ಮಗಳನ್ನು ವಿವೇಚಿಸಿತು; ಬಳಿಕ ತಪಿಸಿತು; ತಪದ ಫಲವಾಗಿ ಕಾವ್ಯವೊಂದು ಸಿದ್ಧವಾಯಿತು. ಆ ಜೀವದ ಶೋಕವೇ ಆ ಕಾವ್ಯದ ಶ್ಲೋಕವಾಯಿತು; ಶಾಪವೇ ಕರುಣರಸವಾಯಿತು. ಆ ಜೀವಕ್ಕೆ ಒದಗಿದ ಧರ್ಮದ ದರ್ಶನವೇ ಮೂರ್ತರೂಪವಾಗಿ ಕಾವ್ಯದ ನಾಯಕನಾಗಿ ತೋರಿಕೊಂಡ; ಇದು ಜಗದ ಆದಿಕಾವ್ಯ ಎನಿಸಿತು; ನವರಸಗಳ ಭಿತ್ತಿಯಲ್ಲಿ ಮೂಡಿದ ಈ ಪರಿಪೂರ್ಣಕಾವ್ಯ ಒಂದು ಜನಾಂಗದ ಸಂಸ್ಕೃತಿಯನ್ನೇ ಕಂಡರಿಸಿತು.

ಅಂದು ಹಿಂಸೆಯನ್ನು ಶಪಿಸಿ, ಕಣ್ಣೀರಿಟ್ಟು ಕರಗಿದ ಮಾತೃಹೃದಯದ ಆ ಜೀವವೇ ವಾಲ್ಮೀಕಿ ಮಹರ್ಷಿ ಎಂಬ ಕವಿ; ಆದಿಕವಿ; ಮಾತ್ರವಲ್ಲ, ಋಷಿಕವಿಯೆನ್ನಿ! ಅವನ ಮಹಾದರ್ಶನವೇ ರಾಮಾಯಣ ಎಂಬ ಮಹಾಕೃತಿ; ಅಷ್ಟೇಕೆ, ಶಾಶ್ವತಕಾವ್ಯ; ಇದು ಮಹಾಸಂಸ್ಕೃತಿಯೇ ಹೌದೆನ್ನಿ!! ಅದರ ನಾಯಕ ಶ್ರೀರಾಮ, ಅವನು ಕಾವ್ಯದ ನಾಯಕನಷ್ಟೇ ಅಲ್ಲ; ಭಾರತೀಯ ಸಂಸ್ಕೃತಿಯ ಆದರ್ಶ; ಧರ್ಮದ ವಿಗ್ರಹರೂಪ. ಅಂದು ವಾಲ್ಮೀಕಿ ವಿರಚಿಸಿದ ರಾಮಾಯಣ ಅದು ಇಂದಿಗೂ ನಮಗೆ ನಿತ್ಯಪಾರಾಯಣಗ್ರಂಥ; ರಾಮ ಅಂದಿನಿಂದ ಇಂದಿಗೂ ಎಂದಿಗೂ ನಮ್ಮ ಜೀವನದ ಬೆಳಕು ಎನಿಸಿದ್ದಾನೆ.

ರಾಮಾಯಣ ಒಂದು ಜೀವಂತನದಿ; ಸಂಸ್ಕೃತಿಯ ರಸಪ್ರವಾಹ. ಇದರ ಉಗಮಸ್ಥಾನವೇ ವಾಲ್ಮೀಕಿ ಎಂಬ ಪ್ರತಿಭಾಗಿರಿ. ಇದನ್ನೇ ಪರಂಪರೆ ಹೀಗೆ ಹಾಡಿ ಕೊಂಡಾಡಿರುವುದು:

ವಾಲ್ಮೀಕಿಗಿರಿಸಂಭೂತಾ ರಾಮಸಾಗರಗಾಮಿನೀ |

ಪುನಾತು ಭುವನಂ ಪುಣ್ಯಾ ರಾಮಾಯಣಮಹಾನದೀ ||

ರಾಮಾಯಣದ ಘನತೆಯನ್ನೂ ವಾಲ್ಮೀಕಿಮಹರ್ಷಿಗಳ ಹಿರಿಮೆಯನ್ನೂ ಕುರಿತು ಕೆ. ಕೃಷ್ಣಮೂರ್ತಿ ಅವರ ಈ ಮಾತುಗಳು ಮನನೀಯ:

‘ರಾಮಾಯಣವೇ ಒಂದು ಮಹಾನದಿ; ವಾಲ್ಮೀಕಿಗಿರಿಯಿಂದ ಪ್ರಭವಿಸಿ, ಸಾವಿರಾರು ಕವಿಗಳ ಪ್ರತಿಭೆಗೆ ಸ್ಫೂರ್ತಿದಾಯಿನಿಯಾಗಿ ಅನಂತಕಾಲದಿಂದಲೂ ಭಾರತಭೂಮಿಯನ್ನು ಪಾವನಗೊಳಿಸುತ್ತಿರುವ ಪುಣ್ಯಗಂಗೆ. ಉತ್ತಮ ಆದರ್ಶಗಳನ್ನು, ಉಜ್ವಲ ಧರ್ಮವನ್ನು, ಸುಂದರ ಜೀವನದ ಸ್ವರೂಪವನ್ನು ಅದರಂತೆ ಸುಂದರವಾಗಿ, ಸ್ಫುಟವಾಗಿ, ಹೃದಯಸ್ಪರ್ಶಿಯಾಗಿ ತೋರಿಸಿಕೊಡುವ ಕಾವ್ಯ ಭಾರತದಲ್ಲೇಕೆ, ವಿಶ್ವದಲ್ಲೇ ಇಲ್ಲವೆನ್ನಬಹುದು. ಅನೇಕಾನೇಕ ಶತಮಾನಗಳಿಂದ ಭಾರತದ ಕೋಟ್ಯಂತರ ಜನಗಳ ಜೀವನದ ಬೆಳಕಾಗಿ, ಆಚಾರದ ಆಲಂಬನವಾಗಿ. ಅತ್ಯಂತ ಪೂಜ್ಯವಸ್ತುವಾಗಿ, ನಿಂತಿರುವ ರಾಮಾಯಣವನ್ನು ವಿಮರ್ಶೆಮಾಡುವ ಕೆಲಸ ದೋಣಿಯಲ್ಲಿ ಸಾಗರವನ್ನು ದಾಟುವಂತೆ; ಕುರುಡುದೀಪದಿಂದ ಅರಮನೆಯ ಅಂದವನ್ನು ತೋರಿಸಹೊರಟಂತೆ. ಒಂದು ಕಡೆ ಅದು ಮಹರ್ಷಿಯ ದಿವ್ಯದರ್ಶನದ ನಿರ್ಮಲ ಸರೋವರದ ಮಹಾಕಾವ್ಯ, ಆದಿಕಾವ್ಯ. ಇನ್ನೊಂದು ಕಡೆ ಮುಂದಿನ ಕವಿಗಳಿಗೆಲ್ಲ ಮಾರ್ಗದರ್ಶಿಯಾದ ಮೂಲಕಾವ್ಯ; ಮತ್ತೊಂದು ಕಡೆ ಅದು ಪೂರ್ವ ಇತಿಹಾಸ ಮತ್ತು ವೇದಶಾಸ್ತ್ರಗಳ ಸಾರ; ಪೂರ್ವದ ಆಚಾರ–ವ್ಯವಹಾರಗಳ ಮಣಿಮುಕುರ. ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯ ಜೀವನದ ಜೀವವಾಗಿ, ಕಾಲಕಾಲಕ್ಕೆ ರೂಪಾಂತರಗಳನ್ನು ಪಡೆಯುತ್ತ ‘ಶತಕೋಟಿಪ್ರವಿಸ್ತರ’ವಾಗಿ ಬೆಳೆದ ಅಪೂರ್ವಗ್ರಂಥ.’

ಒಂದಂತೂ ದಿಟ; ವಾಲ್ಮೀಕಿ ಇಲ್ಲದೆ ರಾಮಾಯಣ ಇಲ್ಲ; ರಾಮಾಯಣ ಇಲ್ಲದೆ ವಾಲ್ಮೀಕಿ ಇಲ್ಲ. ಈ ಸಮೀಕರಣವನ್ನು ದೂರಮಾಡಿ ವಾಲ್ಮೀಕಿಯನ್ನಾಗಲೀ ರಾಮಾಯಣವನ್ನಾಗಲೀ ನೋಡಲು ಸಾಧ್ಯವಿಲ್ಲ. ಭೂಮಿಯ ಮೇಲೆ ಬೆಟ್ಟಗಳೂ ನದಿಗಳೂ ಇರುವವರೆಗೂ ರಾಮಾಯಣ ಪ್ರಚಾರಗೊಳ್ಳುತ್ತಲೇ ಇರುತ್ತದೆ ಎಂಬ ಮಾತು ರಾಮಾಯಣದಲ್ಲಿಯೇ ಬಂದಿದೆ. ರಾಮಾಯಣ ಇರುವವರೆಗೂ ವಾಲ್ಮೀಕಿಯ ಹೆಸರೂ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT