ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು ಹಾಕಿದ್ದ ಬಳ್ಳಾರಿ ರೆಡ್ಡಿಗಳು ಏನಾದರೂ ಎನ್ನುವುದು ನೆನಪಿರಲಿ: ಸಿದ್ದರಾಮಯ್ಯ

Last Updated 23 ಆಗಸ್ಟ್ 2022, 16:06 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಶಾಸಕ ಬೋಪಯ್ಯ ಅವರು ಕೊಡಗಿಗೆ ಬರಲಿ ನೋಡ್ಕೋತಿವಿ ಎಂದು ನನಗೆ ಸವಾಲು ಹಾಕುತ್ತಾರೆ. ಇದೇ ರೀತಿ ಸವಾಲು ಹಾಕಿದ್ದ ಬಳ್ಳಾರಿ ರೆಡ್ಡಿಗಳು ಏನಾದರೂ ಎನ್ನುವುದು ಇವರ ನೆನಪಲ್ಲಿರಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ವಿಚಾರವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಕೊಡಗು ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಿರುವುದರಿಂದ ಕಾನೂನಿಗೆ ಮನ್ನಣೆ ನೀಡಿ ಆಗಸ್ಟ್ 26ರ ಪ್ರತಿಭಟನೆಯನ್ನು ಮುಂದೂಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಪಕ್ಷದ ನಾಯಕರ ಜೊತೆ ಚರ್ಚಿಸಿ ಪ್ರತಿಭಟನೆಯ ಮುಂದಿನ ದಿನವನ್ನು ನಿರ್ಧಾರ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ನಿಷ್ಕ್ರಿಯತೆ, ಭದ್ರತಾ ವೈಫಲ್ಯ ಮತ್ತು ಅತಿವೃಷ್ಟಿ ಪರಿಹಾರದಲ್ಲಿ ಸ್ಥಳೀಯ ಶಾಸಕರ ಭ್ರಷ್ಟಾಚಾರದ ವಿರುದ್ಧ ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೆವು. ಲಕ್ಷಾಂತರ ಮಂದಿ ಭಾಗವಹಿಸುವ ಈ ಸಮಾವೇಶದಲ್ಲಿ ಸರ್ಕಾರದ ವೈಫಲ್ಯ ಬಯಲಾಗುತ್ತದೆ ಎಂಬ ಭೀತಿಯಲ್ಲಿ ನಿಷೇದಾಜ್ಞೆ ಹೇರಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಮ್ಮ ಪ್ರತಿಭಟನೆಗೆ ಹೆದರಿ ಅದನ್ನು ರದ್ದುಪಡಿಸಬೇಕೆಂಬ ಉದ್ದೇಶದಿಂದಲೇ ಬಿಜೆಪಿ ಅದೇ ದಿನ ಜನಜಾಗೃತಿ ಸಮಾವೇಶ ನಡೆಸಲು ಹೊರಟಿದೆ. ಪೊಲೀಸರ ನಿಷ್ಕ್ರಿಯತೆಯನ್ನು ಮುಚ್ಚಿಹಾಕುವ ದುರುದ್ದೇಶದಿಂದಲೇ ಪಕ್ಷದಿಂದ ಸಮಾವೇಶ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಜನ ಸುಲಭದಲ್ಲಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

‘ಕೊಡಗಿನ ಜನರು ನೇರ ನಡೆ-ನುಡಿಯ ನ್ಯಾಯದ ಪರವಾಗಿರುವ ಜನ. ನಮ್ಮ ಪ್ರತಿಭಟನೆ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರದ ವಿರುದ್ಧವಾಗಿತ್ತೇ ಹೊರತು ಕೊಡಗಿನ ಜನರ ವಿರುದ್ಧವಾಗಿರಲಿಲ್ಲ. ಅಲ್ಲಿನ ಜನ ಬಿಜೆಪಿ ಶಾಸಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಬಿಜೆಪಿಗೆ ಬುದ್ಧಿ ಕಲಿಸಲಿದ್ದಾರೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಪ್ರತಿಭಟನೆ ವಿರೋಧ ಪಕ್ಷದ ಹಕ್ಕು. ಆಡಳಿತ ಪಕ್ಷ ಪ್ರತಿಭಟನೆಗೆ ಕಾರಣ ತಿಳಿದುಕೊಂಡು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಆದರೆ ಬಿಜೆಪಿ ಶಾಸಕ ಬೋಪಯ್ಯ ಅವರು ಕೊಡಗಿಗೆ ಬರಲಿ ನೋಡ್ಕೋತಿವಿ ಎಂದು ನನಗೆ ಸವಾಲು ಹಾಕುತ್ತಾರೆ. ಇದೇ ರೀತಿ ಸವಾಲು ಹಾಕಿದ್ದ ಬಳ್ಳಾರಿ ರೆಡ್ಡಿಗಳು ಏನಾದರೂ ಎನ್ನುವುದು ಇವರ ನೆನಪಲ್ಲಿರಲಿ’ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ನನ್ನ ಮೇಲೆ ಮೊಟ್ಟೆ ಒಡೆದದ್ದು ತಪ್ಪು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಯಡಿ‌ಯೂರಪ್ಪ ಹೇಳಿದ್ದಾರೆ. ಈಗ ಇವರಿಬ್ಬರು ಅದೇ ಘಟನೆಯ ವಿರುದ್ಧ ನಾವು ಮಾಡುವ ಪ್ರತಿಭಟನೆಯನ್ನೂ ತಪ್ಪು ಎಂದು ಹೇಳುತ್ತಿದ್ದಾರೆ. ಯಾಕಿಂತಹ ದ್ವಂದ್ವ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನ ಈಗಾಗಲೇ ರೊಚ್ಚಿಗೆದ್ದಿದ್ದಾರೆ. ಜನಾಕ್ರೋಶವನ್ನು ಬೇರೆ ಕಡೆ ತಿರುಗಿಸುವ ಉದ್ದೇಶದಿಂದ ಇಂತಹ ಧರ್ಮ-ದೇವರಿಗೆ ಸಂಬಂಧಿಸಿದ ವಿವಾದವನ್ನು ಸೃಷ್ಟಿಸಿ ನನ್ನನ್ನು ಹಿಂದುವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜ್ಞಾವಂತ ಮತದಾರರಿಗೆ ಈ ಕಳ್ಳಾಟವೆಲ್ಲ ಗೊತ್ತಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೊಡಗು ಜಿಲ್ಲೆ 2019, 2020, 2021 ಮತ್ತು ಈ ವರ್ಷ ನಿರಂತರವಾಗಿ ಅತಿವೃಷ್ಟಿಗೆ ಈಡಾಗಿದೆ. ನಮ್ಮ ಸರ್ಕಾರ 750 ಮನೆಗಳನ್ನು ಕಟ್ಟಿಸಿಕೊಟ್ಟಿದ್ದನ್ನು ಬಿಟ್ಟರೆ ಬಿಜೆಪಿ ಸರ್ಕಾರ ಯಾವ ಹೊಸ ಮನೆ ಕಟ್ಟಿಕೊಟ್ಟಿಲ್ಲ, ಪರಿಹಾರವನ್ನೂ ಸರಿಯಾಗಿ ವಿತರಿಸಿಲ್ಲ, ಕುಸಿದುಬಿದ್ದಿರುವ ಸೇತುವೆ-ರಸ್ತೆಗಳು ದುರಸ್ತಿಯಾಗಿಲ್ಲ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಮಳೆಯಿಂದ ಮಣ್ಣು ಕುಸಿದ ಜಾಗಗಳಲ್ಲಿ ಸೇತುವೆಯ ಬದಲಿಗೆ ವೆಂಟೆಡ್ ಡ್ಯಾಮ್ ಕಟ್ಟಿದ್ದಾರೆ. ಇದರಿಂದ ಕಸ-ಕಲ್ಲು, ಮರದ ತುಂಡುಗಳು ಹರಿವ ನೀರಿಗೆ ಅಡ್ಡವಾಗಿ, ಮನೆ-ಶಾಲೆಗಳಿಗೆ ನೀರು ನುಗ್ಗಿದೆ. ಕೆಲವು ಸಂತ್ರಸ್ತರಿಗೆ ಬಿಜೆಪಿ ಅವರು ಹತ್ತು ಸಾವಿರ ರೂಪಾಯಿ ಪರಿಹಾರದ ಚೆಕ್ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಡಿಕೇರಿಯಲ್ಲಿ ಮಿನಿವಿಧಾನಸೌಧ ನಿರ್ಮಿಸಲಾಗಿದ್ದು ಅದಕ್ಕೆ ತಡೆಗೋಡೆ ಕಟ್ಟಿದ್ದಾರೆ. ₹7.5 ಕೋಟಿ ವೆಚ್ಚದ ಈ ತಡೆಗೋಡೆ ಆಗಲೇ ಬಿದ್ದುಹೋಗಿದೆ. ಸಿಎಂ ಬೊಮ್ಮಾಯಿ ಭೇಟಿ ವೇಳೆಯೂ ಅದನ್ನು ಮುಚ್ಚಿಟ್ಟಿದ್ದಾರೆ. ನಾನು ಕೂಡಾ ಅಲ್ಲಿಗೆ ಹೋಗಬಾರದೆಂದು ಶಾಸಕರು ಮತ್ತು ಗುತ್ತಿಗೆದಾರರು ಸೇರಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಅತಿವೃಷ್ಟಿ ಪರಿಹಾರ ಕಾರ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪರಿಹಾರ ಕಾಮಗಾರಿಗಳನ್ನು ನೋಡಿದರೆ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿರುವುದು ಗೊತ್ತಾಗುತ್ತದೆ. ಕಳೆದ 3 ವರ್ಷಗಳ ಅತಿವೃಷ್ಟಿ ಕಾಮಗಾರಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರ್ಕಾರ ಸಮಗ್ರವಾಗಿ ತನಿಖೆ ಮಾಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಕೊಡಗಿನಲ್ಲಿ ನನ್ನ ವಿರುದ್ಧ ನಡೆದ ಪ್ರತಿಭಟನೆ ಪೂರ್ವಯೋಜಿತ ಎನ್ನುವುದು ಪೊಲೀಸರ ನಿಷ್ಕ್ರಿಯತೆಯಿಂದ ಸ್ಪಷ್ಟವಾಗಿದೆ. ಮೊದಲ ಸಲ ಪ್ರತಿಭಟನೆ ನಡೆದಾಗಲೇ ಪೊಲೀಸರು ಎಚ್ಚರಿಕೆ ವಹಿಸಬೇಕಾಗಿತ್ತು. ಆದರೆ, ಅವರು ಕಣ್ಣುಮುಚ್ಚಿಕೊಂಡು ಶಾಮೀಲಾಗಿದ್ದ ಕಾರಣದಿಂದಲೇ ನಂತರ 3-4 ಕಡೆ ಪ್ರತಿಭಟನೆ ನಡೆದವು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬಿಜೆಪಿ ನಾಯಕರು ಹುಟ್ಟು ಸುಳ್ಳುಕೋರರು. ಮೊಟ್ಟೆ ಎಸೆದವನು ಕಾಂಗ್ರೆಸ್ ಕಾರ್ಯಕರ್ತನೆಂದು ಈಗ ಸುಳ್ಳು ಹೇಳುತ್ತಿದ್ದಾರೆ. ಮಾಜಿ ಸಚಿವ ಜಿ.ವಿಜಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರೂ ಮೊಟ್ಟೆ ಎಸೆದ ಸಂಪತ್ ನಮ್ಮ ಪಕ್ಷದವನಲ್ಲ, ಬಿಜೆಪಿಯವನು ಎಂದು ಹೇಳಿ, ರಾಜ್ಯ ಸರ್ಕಾರದ ಸುಳ್ಳನ್ನು ಬಯಲು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಎಸಿಬಿ ರದ್ದತಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ತೀರ್ಪು ಹೊರಬಿದ್ದ ದಿನವೇ ಎಂದು ಹೇಳಿದ್ದೇವೆ. ನಾವು ತೀರ್ಪಿನ ವಿರುದ್ಧ ಮೇಲ್ಮನವಿ ಹಾಕುವುದಿಲ್ಲ. ತೀರ್ಪಿನ ಜಾರಿಗೆ ಸಂಪೂರ್ಣ ಸಹಕಾರ ಕೊಡುತ್ತೇವೆ‌ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT