ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೇನ್ ಖನ್ನಾ ಮನೆಯಲ್ಲೇ ಗಾಂಜಾ ಪತ್ತೆ

ಯುವತಿ ಜೊತೆ ಶಾಂತಿನಗರದ ಐಷಾರಾಮಿ ಮನೆಯಲ್ಲಿ ವಾಸವಿದ್ದ ಡ್ರಗ್ಸ್‌ ಜಾಲದ ಆರೋಪಿ ವಿರೇನ್
Last Updated 8 ಸೆಪ್ಟೆಂಬರ್ 2020, 19:35 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್‌ಜಾಲದ ಆರೋಪಿ ದೆಹಲಿಯ ವಿರೇನ್ ಖನ್ನಾ ತನ್ನ ಮನೆಯಲ್ಲೇ ಗಾಂಜಾ ಸೇದುತ್ತಿದ್ದನೆಂಬ ಸಂಗತಿ ಬಯಲಾಗಿದೆ. ಶಾಂತಿನಗರದಲ್ಲಿರುವ ಆತನ ಮನೆಯಲ್ಲಿ ಗಾಂಜಾ ಹಾಗೂ ಅದನ್ನು ಸೇದಲು ಬಳಸುತ್ತಿದ್ದ ಸಾಧನಗಳನ್ನು ಜಪ್ತಿ ಮಾಡಿರುವ ಪೊಲೀಸರು, ಅವುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಹಾಗೂ ಅವರ ಸ್ನೇಹಿತ ಬಿ.ಕೆ.ರವಿಶಂಕರ್‌ನನ್ನು ಬಂಧಿಸಿದ್ದ ಪೊಲೀಸರು, ಅವರಿಬ್ಬರು ನೀಡಿದ್ದ ಹೇಳಿಕೆಯಂತೆ ದೆಹಲಿಯಲ್ಲಿ ಆರೋಪಿ ವಿರೇನ್‌ ಖನ್ನಾನನ್ನು ಬಂಧಿಸಿದ್ದರು. ನಗರಕ್ಕೆ ಕರೆ ತಂದು ಹೆಚ್ಚಿನ ವಿಚಾರಣೆಗಾಗಿ ಆತನನ್ನು ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ವೇಳೆ ಆತ ನೀಡುತ್ತಿರುವ ಮಾಹಿತಿ ಆಧರಿಸಿ ಮನೆ ಹಾಗೂ ಹಲವು ಪ್ರದೇಶಗಳಲ್ಲಿ ಶೋಧ ಆರಂಭಿಸಿದ್ದಾರೆ.

ನ್ಯಾಯಾಲಯದ ಶೋಧನಾ ವಾರಂಟ್ ಸಮೇತ ಮನೆಗೆ ಹೋಗಿದ್ದ ಪೊಲೀಸರು, ಪ್ರತಿ ಕೊಠಡಿಯಲ್ಲೂ ಶೋಧ ನಡೆಸಿದರು.

ಯುವತಿ ಜೊತೆ ವಾಸ: ‘ವಿರೇನ್ ಖನ್ನಾ ತಂದೆ–ತಾಯಿ ದೆಹಲಿಯಲ್ಲಿ ನೆಲೆಸಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ ವಿರೇನ್, ಶಾಂತಿನಗ
ರದಲ್ಲೇ ಐಷಾರಾಮಿ ಮನೆಯೊಂದನ್ನು ಮಾಡಿದ್ದ. ಯುವತಿಯೊಬ್ಬರ ಜೊತೆ ಆತ ವಾಸವಿದ್ದ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ‘ದಾಳಿ ವೇಳೆ ಯುವತಿಯು ಮನೆಯೊಳಗೆ ಹೋಗಲು ಅಡ್ಡಿಪಡಿಸಿದ್ದರು. ಅವರ ವಕೀಲರನ್ನು ಸ್ಥಳಕ್ಕೆ ಕರೆಸಿದ್ದರು. ಅವರೆಲ್ಲರಿಗೂ ನ್ಯಾಯಾಲಯದ ಶೋಧನಾ ವಾರಂಟ್ ತೋರಿಸಿದ ಬಳಿಕ ಮನೆಯೊಳಗೆ ಬಿಟ್ಟರು’ ಎಂದೂ ಮೂಲಗಳು ಹೇಳಿವೆ.

‘ದೆಹಲಿಗೆ ಹೋಗಿಬರುವುದಾಗಿ ಹೇಳಿ ಖನ್ನಾ ಹೋಗಿದ್ದ. ಆತನನ್ನು ಸಿಸಿಬಿ ಬಂಧಿಸಿದ್ದ ಸಂಗತಿ ಯುವತಿಗೆ ಗೊತ್ತಿರಲಿಲ್ಲ. ಮನೆಗೆ ಹೋದಾಗಲೇ ಅವರಿಗೆ ವಿಷಯ ಗೊತ್ತಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿದೆ. ಅಗತ್ಯವಿದ್ದರೆ ವಿಚಾರಣೆಗಾಗಿ ಕಚೇರಿಗೆ ಬರುವಂತೆಯೂ ಸೂಚಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಪೊಲೀಸ್‌ ಸಮವಸ್ತ್ರದಲ್ಲಿ ‍ಪಾರ್ಟಿ: ‘ಆರೋಪಿ ಖನ್ನಾ ಮನೆಯಲ್ಲಿ ಪೊಲೀಸ್ ಹಾಗೂ ಸೇನಾ ಸಮವಸ್ತ್ರಗಳು ಸಿಕ್ಕಿವೆ. ಎರಡೂ ಸಮವಸ್ತ್ರದಲ್ಲೂ ಆರೋಪಿ ಕೆಲ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದ. ಅದೇ ಸಮವಸ್ತ್ರದಲ್ಲೇ ಯುವತಿಯರ ಜೊತೆ ಆತ ಫೋಟೊ ತೆಗೆದುಕೊಂಡಿದ್ದ. ಅದನ್ನು ಸಾಮಾಜಿಕ ಜಾಲತಾಣದಲ್ಲೂ ಅಪ್‌ಲೋಡ್ ಸಹ ಮಾಡಿದ್ದ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ರಾಜ್ಯದೆಲ್ಲೆಡೆ ಡ್ರಗ್ಸ್‌ ಜಾಲದ ವಿರುದ್ಧ ಕಾರ್ಯಾಚರಣೆ: ಪ್ರವೀಣ್ ಸೂದ್‌

ಉಡುಪಿ: ಡ್ರಗ್ಸ್‌ ಜಾಲ ಮಟ್ಟಹಾಕುವ ಕಾರ್ಯಬೆಂಗಳೂರಿಗೆ ಸೀಮಿತವಾಗದೆ ಎಲ್ಲ ಜಿಲ್ಲೆಗಳಲ್ಲೂ ನಡೆಯಬೇಕು. ಗಾಂಜಾ, ಸಿಂಥೆಟಿಕ್‌ ಹಾಗೂ ಡಿಸೈನರ್‌ ಡ್ರಗ್ಸ್‌ ಬಳಕೆಯನ್ನು ಪತ್ತೆಹಚ್ಚಬೇಕು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.

ಮಂಗಳವಾರ ಎಸ್‌ಪಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯಕ್ಕೆ ಯಾವುದೇ ಮಾರ್ಗದಿಂದ ಮಾದಕ ವಸ್ತುಗಳು ಪೂರೈಕೆಯಾಗುತ್ತಿದ್ದರೂ ಅದನ್ನು ಪತ್ತೆ ಹಚ್ಚಲಾಗುವುದು. ಜಾಲದಲ್ಲಿ ಎಷ್ಟೆ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದರೂ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಅದರಂತೆ ಕಾರ್ಯಾಚರಣೆ ನಡೆಯುತ್ತಿದೆ ಎಂದರು.

ಬೆಳಗಾವಿ, ಹುಬ್ಬಳ್ಳಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಜಾಲ ಪತ್ತೆ ಹಚ್ಚಲಾಗಿದೆ. ರಾಜ್ಯವನ್ನು ಡ್ರಗ್ಸ್‌ ಮುಕ್ತಗೊಳಿಸುವುದಕ್ಕೆ ಇಲಾಖೆ ಆದ್ಯತೆ ನೀಡಿದೆ ಎಂದರು.

₹ 1.50 ಕೋಟಿ ಮೊತ್ತದ ಗಾಂಜಾ ಜಪ್ತಿ

ಕೋಲಾರ: ಜಿಲ್ಲೆಯ ಕೆಜಿಎಫ್‌ನ ಮಾರಿಕುಪ್ಪಂ ಪ್ರದೇಶದ ಮನೆಯೊಂದರ ಮೇಲೆ ಮಂಗಳವಾರ ದಾಳಿ ನಡೆಸಿದ ಪೊಲೀಸರು ₹ 1.50 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮಾರಿಕುಪ್ಪಂನ ಪಂಡಾರ್‌ ಲೈನ್‌ನಲ್ಲಿರುವ ಹಳೆ ಮನೆಯೊಂದರಲ್ಲಿ ಗಾಂಜಾ ಎಲೆಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಆಧರಿಸಿ ಮಾರಿಕುಪ್ಪಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

‘ಗಾಂಜಾ ಪತ್ತೆಯಾಗಿರುವ ಮನೆಯು ರೌಡಿ ತಂಗಂ ಕುಟುಂಬ ಸದಸ್ಯರಿಗೆ ಸೇರಿದೆ. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ’ ಎಂದು ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಾಂಜಾ ಎಲೆಗಳನ್ನು ಮೂಟೆಗಳಲ್ಲಿ ತುಂಬಿಸಿ ಇಡಲಾಗಿತ್ತು. ಆರೋಪಿಗಳು ಎಲ್ಲಿಂದ ಗಾಂಜಾ ತಂದಿದ್ದರು ಮತ್ತು ಯಾರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಪರಾರಿಯಾಗಿರುವ ಆರೋಪಿಯನ್ನು ಬಂಧಿಸಿದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT