ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಕುಲದ ಸಮಸ್ಯೆ ನಿವಾರಣೆಗೆ ಶ್ರಮಿಸಿ: ವೆಂಕಯ್ಯನಾಯ್ಡು

ಹವಾಮಾನ ಬದಲಾವಣೆ, ಕೃಷಿಯಲ್ಲಿ ಹೆಚ್ಚಿನ ಸಂಶೋಧನೆ- ವಿಜ್ಞಾನಿಗಳಿಗೆ ವೆಂಕಯ್ಯನಾಯ್ಡು ಸಲಹೆ
Last Updated 16 ಆಗಸ್ಟ್ 2021, 20:08 IST
ಅಕ್ಷರ ಗಾತ್ರ

ಬೆಂಗಳೂರು: ಮನುಕುಲ ಎದುರಿಸುತ್ತಿರುವ ಹವಾಮಾನ ಬದಲಾವಣೆ, ಕೃಷಿ, ಆರೋಗ್ಯ ಮತ್ತು ಔಷಧ ಕ್ಷೇತ್ರಗಳಲ್ಲಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಸಂಶೋಧನೆಗಳನ್ನು ನಡೆಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ವಿಜ್ಞಾನಿಗಳಿಗೆ ಸಲಹೆ ನೀಡಿದರು.

ನಗರದ ಜವಾಹರಲಾಲ್‌ ನೆಹರು ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ (ಜೆಎನ್‌ಸಿಎಎಸ್‌ಆರ್‌) ನಾವೀನ್ಯತೆ ಮತ್ತು ಅಭಿವೃದ್ಧಿ ಕೇಂದ್ರದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ವಿಜ್ಞಾನಿಗಳು ತಮ್ಮ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದರ ಜತೆಗೆ ಜನರ ಜೀವನ ಸುಧಾರಣೆ ಮಾಡುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಜನರ ಜೀವನವು ಸಂತಸ, ಆರೋಗ್ಯ ಮತ್ತು ಸುಗಮಗೊಳಿಸುವುದು ವಿಜ್ಞಾನದ ಪರಮ ಉದ್ದೇಶವಾಗಿದೆ ಎಂದು ಹೇಳಿದರು.

ವೈಜ್ಞಾನಿಕ ಸಂಶೋಧನೆಗಳು ಅಂತಿಮವಾಗಿ ಸಮಾಜ ಅಗತ್ಯಕ್ಕೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಸಂಶೋಧನೆಗಳು ಜನೋಪಯೋಗಿ ಬಳಕೆಗಾಗಿ ಪರಿವರ್ತನೆಗೊಳ್ಳುವುದು ಅವಶ್ಯ. ಜೆಎನ್‌ಸಿಎಎಸ್‌ಆರ್‌ ದೇಶಿ ಸಂಶೋಧನೆಯನ್ನು ಆಧರಿಸಿ ಹಲವು ನವೋದ್ಯಮಗಳ ಸ್ಥಾಪನೆಗೆ ಕಾರಣವಾಗಿರುವುದು ಮತ್ತು 300 ಪೇಟೆಂಟ್‌ಗಳನ್ನು ಪಡೆದಿರುವುದು ಹೆಮ್ಮೆಪಡುವ ವಿಚಾರ ಎಂದು ಅವರು ಶ್ಲಾಘಿಸಿದರು.

ವಿಜ್ಞಾನದಲ್ಲಿನ ಹೊಸ ಕ್ಷೇತ್ರಗಳಾದ ಸಿಂಥೆಟಿಕ್‌ ಬಯಾಲಜಿ, ಕಂಪ್ಯುಟೇಷನಲ್‌ ಬಯಾಲಜಿ, ಹೈ ಪರ್ಫಾಮೆನ್ಸ್‌ ಎಂಜಿನಿಯರಿಂಗ್‌ ಮೆಟಿರಿಯಲ್‌, ಆರ್ಟಿಫಿಷಿಯಲ್‌ಇಂಟೆಲಿಜೆನ್ಸ್‌ಗಳ ಮೇಲೆ ಹೆಚ್ಚಿನ ಸಂಶೋಧನೆ ನಡೆಸಬೇಕು ಎಂದು ಅವರು ಜೆಎನ್‌ಸಿಎಎಸ್‌ಆರ್‌ ವಿಜ್ಞಾನಿಗಳಿಗೆ ಸಲಹೆ ನೀಡಿದರು.

ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ 65 ರಷ್ಟು ಮಂದಿ 25 ವರ್ಷ ವಯಸ್ಸಿಗಿಂತ ಕಡಿಮೆ ಪ್ರಾಯದವರಿದ್ದಾರೆ. ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜತೆಗೆ, ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಗೆ ತರುವ ಪ್ರಯತ್ನ ಮಾಡಬೇಕು ಎಂದು ನಾಯ್ಡು ಹೇಳಿದರು.

ಬೆಂಗಳೂರು ಒಂದು ಕಾಲಕ್ಕೆ ಅತಿ ಹೆಚ್ಚು ಕೆರೆ– ಕುಂಟೆಗಳನ್ನು ಹೊಂದಿದ್ದ ನಗರವಾಗಿತ್ತು. ಒತ್ತುವರಿ ಮತ್ತು ಇತರ ಕಾರಣಗಳಿಂದ ಸಾಕಷ್ಟು ಕೆರೆಗಳು ಕಣ್ಮರೆಯಾಗಿವೆ. ಈಗ ಉಳಿದಿರುವ ಕೆರೆಗಳನ್ನು ಸ್ವಚ್ಛವಾಗಿ ಮತ್ತು ಶುದ್ಧವಾಗಿ ಇಟ್ಟುಕೊಳ್ಳುವ ಕೆಲಸ ಆಗಬೇಕು. ಕ್ರಿಯಾಶೀಲರಾಗಿರುವ ಹೊಸ ಮುಖ್ಯಮಂತ್ರಿಯವರು ಈ ಬಗ್ಗೆ ಗಮನಹರಿಸುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜ್ಞಾನಿ ಸಿ.ಎನ್‌.ಆರ್.ರಾವ್‌ ಇದ್ದರು.

ಕನ್ನಡದಲ್ಲಿ ಮಾತನಾಡಿದ ವೆಂಕಯ್ಯನಾಯ್ಡು

ವೆಂಕಯ್ಯನಾಯ್ಡು ಅವರು ಕಾರ್ಯಕ್ರಮದ ಮೊದಲ ಐದು ನಿಮಿಷಗಳು ಕನ್ನಡದಲ್ಲಿ ಮಾತನಾಡಿದರು. ನೆರೆದಿದ್ದ ಗಣ್ಯರು ಮತ್ತು ಸಂಸ್ಥೆಯ ಬಗ್ಗೆ ಕನ್ನಡದಲ್ಲಿ ತಮ್ಮ ಭಾವನೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT