ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯ ಸುಧಾರಣೆಗೆ ಆಧುನಿಕ ತಂತ್ರಜ್ಞಾನ: ವೆಂಕಯ್ಯ ನಾಯ್ಡು ಸಲಹೆ

ಬೆಂಗಳೂರು ತಂತ್ರಜ್ಞಾನ ಶೃಂಗ ಆರಂಭ
Last Updated 17 ನವೆಂಬರ್ 2021, 10:16 IST
ಅಕ್ಷರ ಗಾತ್ರ

ಬೆಂಗಳೂರು: ಆಧುನಿಕ ತಂತ್ರಜ್ಞಾನ, ನಾವೀನ್ಯತೆ , ಸಂಶೋಧನೆ ಮತ್ತು ಜ್ಞಾನದ ಬೆಳವಣಿಗೆಗಳು ದೇಶದ ಕೃಷಿ ಸ್ಥಿತಿಯ ಸುಧಾರಣೆಗೂ‌ ಹೆಚ್ಚು ಒತ್ತು ಕೊಟ್ಟು ಮುನ್ನಡೆಯಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು.

24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, `ಐ.ಟಿ. ಮತ್ತು ಬಿ.ಟಿ.ಯೊಂದಿಗೆ ಎಲ್ಲರೂ ಕರ್ತವ್ಯಪ್ರಜ್ಞೆಯನ್ನು (ಡ್ಯೂಟಿ) ಮೈಗೂಡಿಸಿಕೊಂಡಾಗ ದೇಶವು ಶಕ್ತಿಶಾಲಿಯಾಗಿ (ಮೈಟಿ) ಹೊರಹೊಮ್ಮುತ್ತದೆ. ಕೃಷಿಯು ದೇಶದ ಪ್ರಧಾನ ಕಸುಬಾಗಿರುವುದರಿಂದ ತಾಂತ್ರಿಕತೆಯು ಅದಕ್ಕೆ ಪೂರಕವಾಗಿರಬೇಕು’ ಎಂದರು.

ಜಗತ್ತು ಈಗ ಜ್ಞಾನಾಧಾರಿತವಾಗಿ ರೂಪುಗೊಳ್ಳುತ್ತಿದ್ದು, ಕೋವಿಡ್ ನಂತರ ಡಿಜಿಟಲೀಕರಣಗೊಳ್ಳುತ್ತಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ನೀತಿಗಳು ಎಷ್ಟೇ ಚೆನ್ನಾಗಿದ್ದರೂ ಅಂತಿಮವಾಗಿ ತಂತ್ರಜ್ಞಾನದ ಲಾಭಗಳನ್ನು ಸಮಾಜದ ಕಟ್ಟಕಡೆಯ ಮನುಷ್ಯನಿಗೆ ತಲುಪಿಸಬೇಕಾದ್ದು ಮುಖ್ಯ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಇದನ್ನು ಸಾಧಿಸಿಕೊಂಡು ಬಂದಿದೆ. ತಂತ್ರಜ್ಞಾನದ ಮೂಲಕ ಇಡೀ ವ್ಯವಸ್ಥೆಯನ್ನು ಪರಿವರ್ತಿಸಬೇಕೆಂಬುದೇ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯೂ ಆಗಿದೆ ಎಂದರು.

ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಖಾಸಗಿ ವಲಯದ ಪಾತ್ರ ಬಹುಮುಖ್ಯ. ಇದಕ್ಕೆ ಪೂರಕವಾಗಿ ಪ್ರಧಾನಿಯವರು `ಸುಧಾರಣೆ-ಸಾಧನೆ-ಪರಿವರ್ತನೆ’ ಎಂಬುದನ್ನೇ ಮಂತ್ರವಾಗಿಸಿಕೊಂಡು ನೀತಿಗಳನ್ನು ರೂಪಿಸುತ್ತಿದ್ದಾರೆ. ಜಗತ್ತಿನ ವಿಖ್ಯಾತ ಉದ್ದಿಮೆಗಳಲ್ಲೆಲ್ಲ ಭಾರತೀಯರು ನಾಯಕತ್ವ ವಹಿಸಿಕೊಂಡಿರುವುದು ಭಾರತೀಯರಾದ ನಮ್ಮ ಬೌದ್ಧಿಕ ಪ್ರಗತಿಯನ್ನು ದೃಢಪಡಿಸುತ್ತದೆ ಎಂದು ನಾಯ್ಡು ನುಡಿದರು.

ನಿರ್ದಿಷ್ಟವಾಗಿ ಬೆಂಗಳೂರು ಮತ್ತು ಒಟ್ಟಾರೆ ಭಾರತ ದೇಶವು ಅತ್ಯಂತ ಕ್ರಿಯಾಶೀಲವಾಗಿವೆ. ಇದಕ್ಕೆ ತಕ್ಕಂತೆ ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಸಾರವಾದ `ಹಂಚಿಕೊಳ್ಳುವಿಕೆ ಮತ್ತು ಇನ್ನೊಬ್ಬರ ಬಗ್ಗೆ ಗಮನ ಹರಿಸುವಿಕೆ (ಕಾಳಜಿ)’ ಎರಡನ್ನೂ ನಾವು ತಂತ್ರಜ್ಞಾನದ ಧಾರೆಗಳ ಮೂಲಕ ಮುಂದುವರಿಸಿಕೊಂಡು ಹೋಗಬೇಕು. ತಾಂತ್ರಿಕತೆ ಹಾಗೂ ನಾವೀನ್ಯತೆಯು ಅಂತಿಮ ಸಮಾಜದಲ್ಲಿ ಸಂತೋಷವನ್ನುಂಟು ಮಾಡುವ ಉದ್ದೇಶ ಹೊಂದಿರಬೇಕು ಎಂದರು.

ಕನ್ನಡದಲ್ಲಿ ಭಾಷಣ, ಪುನೀತ್ ನಿಧನಕ್ಕೆ ಸಂತಾಪ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕನ್ನಡದಲ್ಲೇ ಸರಾಗವಾಗಿ ತಮ್ಮ ಭಾಷಣ ಆರಂಭಿಸಿ, ಕೆಲವು ಸಾಲುಗಳನ್ನು ಮಾತನಾಡಿ ಗಮನ ಸೆಳೆದರು. ಬಳಿಕ ಅವರು, ಇತ್ತೀಚೆಗೆ ಅಕಾಲಿಕವಾಗಿ ಅಗಲಿದ ಕನ್ನಡ ಚಿತ್ರರಂಗದ ಜನಪ್ರಿಯ ನಟ ಪುನೀತ್ ರಾಜಕುಮಾರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT