ಬುಧವಾರ, ಜೂನ್ 23, 2021
25 °C
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ

ಸಂತ್ರಸ್ತೆ ಎಸ್‌ಐಟಿ ಎದುರು ಹಾಜರಾಗಲಿ: ಸಿದ್ದರಾಮಯ್ಯ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂತ್ರಸ್ತ ಯುವತಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಹಾಜರಾಗಿ ತನ್ನ ಹೇಳಿಕೆ ದಾಖಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.

ಶುಕ್ರವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಯುವತಿ ಮರೆಯಾಗಿದ್ದುಕೊಂಡು ವಿಡಿಯೊ ಹೇಳಿಕೆ ಬಿಡುಗಡೆ ಮಾಡುವ ಬದಲಿಗೆ ನೇರವಾಗಿ ಎಸ್‌ಐಟಿ ಎದುರು ಹಾಜರಾಗಲಿ. ಅಲ್ಲಿ ತನ್ನ ಹೇಳಿಕೆಯನ್ನು ದಾಖಲು ಮಾಡಲಿ’ ಎಂದರು.

‘ಯುವತಿ ತನ್ನ ತಂದೆ, ತಾಯಿಗೆ ರಕ್ಷಣೆ ಕೊಡಿಸುವಂತೆ ಮನವಿ ಮಾಡಿ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ್ದಾಳೆ. ಆ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿದ್ದೇನೆ. ಯುವತಿ ಮತ್ತು ಆಕೆಯ ಕುಟುಂಬದ ಸದಸ್ಯರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದೇನೆ’ ಎಂದು ತಿಳಿಸಿದರು.

ಯುವತಿ ರಕ್ಷಣೆ ಕೇಳಿದಾಗ ಸೂಕ್ತ ಕ್ರಮ ಜರುಗಿಸುವುದು ಸರ್ಕಾರದ ಕರ್ತವ್ಯ. ಈ ಕುರಿತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಜತೆಗೂ ಚರ್ಚಿಸಲಾಗುವುದು ಎಂದು ಹೇಳಿದರು.

‘ಅತ್ಯಾಚಾರ ಪ್ರಕರಣ ದಾಖಲಿಸಲು ಸಿದ್ದರಾಮಯ್ಯ ಒತ್ತಾಯಿಸಿದ ಬಳಿಕ ಅವರ ಮೇಲಿನ ಗೌರ ಕಡಿಮೆಯಾಗಿದೆ’ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾನೊಬ್ಬ ವಕೀಲ ಮತ್ತು ವಿರೋಧ ಪಕ್ಷದ ನಾಯಕ. ಸತ್ಯ ಹೇಳಿದ್ದಕ್ಕಾಗಿ ಗೌರವ ಕಡಿಮೆ ಆಗುವುದಾದರೆ ನಾನೇನು ಮಾಡಲಿ’ ಎಂದು ಕೇಳಿದರು.

ತಮ್ಮ ಬಳಿ ಪ್ರಬಲ ಸಾಕ್ಷ್ಯವಿದೆ ಎಂಬ ರಮೇಶ ಹೇಳಿಕೆ ಕುರಿತು ಕೇಳಿದಾಗ, ‘ಅವರಿಗೆ ಆಘಾತ (ಶಾಕ್‌) ಆಗದಿದ್ದರೆ ಸಾಕು. ಮಹಾನಾಯಕರು ಯಾರು ಎಂಬುದು ನನಗೆ ಗೊತ್ತಿಲ್ಲ. ಹಲವು ಮಹಾ ನಾಯಕರು ಇದ್ದಾರೆ. ಅವರ ಪ್ರಕಾರ ಯಾರು ಮಹಾನಾಯಕ ಯಾರು ಎಂಬುದು ತಿಳಿದಿಲ್ಲ. ಸಾಕ್ಷ್ಯ ಇದ್ದರೆ ಮಾರ್ಚ್‌ 13ಕ್ಕೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಬೇಕಿತ್ತು’ ಎಂದರು.

ಮೀಸಲಾತಿ ವಂಚಿಸುವ ಹುನ್ನಾರ: ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ₹ 50 ಲಕ್ಷದವರೆಗಿನ ಮೊತ್ತದ ಕಾಮಗಾರಿಗಳ ಟೆಂಡರ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರಿಗೆ ಮೀಸಲಾತಿ ಒದಗಿಸುವ ಕಾನೂನು ತರಲಾಗಿತ್ತು. ಈ ಮೀಸಲಾತಿ ವಂಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಗೆ (ಕೆಟಿಪಿಪಿ) ಬಿಜೆಪಿ ಸರ್ಕಾರ ತಿದ್ದುಪಡಿ ತಂದಿದೆ ಎಂದು ಸಿದ್ದರಾಮಯ್ಯ ದೂರಿದರು.

₹ 2 ಕೋಟಿವರೆಗಿನ ವೆಚ್ಚದ ಕಾಮಗಾರಿಗಳ ಗುತ್ತಿಗೆಯನ್ನು ಕೆಆರ್‌ಐಡಿಎಲ್‌ ಮೂಲಕ ಟೆಂಡರ್‌ ಇಲ್ಲದೆ ತಮಗೆ ಬೇಕಾದವರಿಗೆ ನೀಡಲು ಸರ್ಕಾರದಲ್ಲಿರುವವರು ಈ ತಿದ್ದುಪಡಿ ತಂದಿದ್ದಾರೆ. ಇದು ಭ್ರಷ್ಟಾಚಾರಕ್ಕೂ ಕಾರಣವಾಗಲಿದೆ ಎಂದರು.

ಏಕಪಕ್ಷೀಯ ಹೇಳಿಕೆ

‘ವಿಧಾನಮಂಡಲ ಕಲಾಪಕ್ಕೆ ಕಾಂಗ್ರೆಸ್‌ ಅಡ್ಡಿಪಡಿಸಿಲ್ಲ. ಬಜೆಟ್‌ ಮೇಲಿನ ಚರ್ಚೆ ಸೇರಿದಂತೆ ಹಲವು ವಿಷಯಗಳಲ್ಲಿ ನಾವು ಮಾತನಾಡಿದ್ದೇವೆ. ಸಚಿವ ಸ್ಥಾನದಲ್ಲಿದ್ದವರಿಗೆ ಸಂಬಂಧಿಸಿದ ಸಿ.ಡಿ ವಿಚಾರ ಇದ್ದಾಗ ಪ್ರಸ್ತಾಪಿಸದೇ ಇರಲು ಸಾಧ್ಯವೆ? ಈ ವಿಷಯದಲ್ಲಿ ವಿಧಾನಸಭೆಯ ಅಧ್ಯಕ್ಷರು ಸರ್ಕಾರದಲ್ಲಿ ಇರುವವರಿಗೆ ಬುದ್ಧಿಮಾತು ಹೇಳಬೇಕಿತ್ತು. ಆದರೆ, ಏಕಪಕ್ಷೀಯವಾಗಿ ವಿರೋಧ ಪಕ್ಷದ ಬಗ್ಗೆ ಮಾತನಾಡಿರುವಂತಿದೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಟಿಕಾಯತ್‌ ವಿರುದ್ಧ ಎಫ್‌ಐಆರ್‌ಗೆ ಖಂಡನೆ: ‘ಬೆಂಗಳೂರಿಗೆ ಮುತ್ತಿಗೆ ಹಾಕಿ ಎಂದು ಹೇಳಿಕೆ ನೀಡುವುದು ಪ್ರಚೋದನಕಾರಿ ಭಾಷಣ ಅಲ್ಲ. ಈ ವಿಚಾರದಲ್ಲಿ ರೈತ ನಾಯಕ ರಾಕೇಶ್‌ ಟಿಕಾಯತ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದನ್ನು ಖಂಡಿಸುತ್ತೇನೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು