ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ 2021 Live: ಮತ ಚಲಾವಣೆ ವೇಳೆ ಯಡಿಯೂರಪ್ಪ ಯಡವಟ್ಟು?
LIVE

ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ವಿಧಾನ ಪರಿಷತ್‌ ಸಭಾನಾಯಕ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್‌, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೇರಿ ಒಟ್ಟು 90 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ರಾಜಕೀಯ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪೈಕಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಕಣದಲ್ಲಿರುವ ಏಕೈಕ ಮಹಿಳೆ.ಒಟ್ಟು 98,846 ಮತದಾರರಿದ್ದು, ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಮತಚಲಾವಣೆ ಆಗುತ್ತಿದೆ. ರಾಜ್ಯದಾದ್ಯಂತ 6,073 ಮತಗಟ್ಟೆಗಳನ್ನು ತೆರೆಯಲಾಗಿದೆ. ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮತದಾನ ಮಾಡಲಿದ್ದಾರೆ. ಡಿಸೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
Last Updated 10 ಡಿಸೆಂಬರ್ 2021, 13:40 IST
ಅಕ್ಷರ ಗಾತ್ರ
12:5110 Dec 2021

ಮತ ಚಲಾವಣೆ ವೇಳೆ ಯಡಿಯೂರಪ್ಪ ಯಡವಟ್ಟು?

ಶಿವಮೊಗ್ಗ: ಶಿಕಾರಿಪುರ ಪುರಸಭೆಯ ಮತಗಟ್ಟೆಯಲ್ಲಿ ಮತ ಚಲಾಯಿಸುವಾಗ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಯಡವಟ್ಟು ಮಾಡಿಕೊಂಡಿದ್ದಾರಾ ಎಂಬ ವದಂತಿ ಮತದಾನದ ನಂತರ ಹರಿದಾಡಿತು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಬೇಸರದ ಮುಖದಲ್ಲಿ ಹೊರಬಂದ ಅವರು ಮತಗಟ್ಟೆ ಅಧಿಕಾರಿಗಳ ಬಳಿ ತಪ್ಪಾಗಿದ್ದರೆ ಬ್ಯಾಲೆಟ್‌ ಪೇಪರ್‌ ಬೇರೆ ಕೊಡುತ್ತೀರಾ ಎಂದು ಪ್ರಶ್ನಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ. ಮತ ಚಲಾಯಿಸುವಾಗ ಯಡಿಯೂರಪ್ಪ ಅವರು ತಮ್ಮ ಪಕ್ಷದ ಅಭ್ಯರ್ಥಿ ಡಿ.ಎಸ್.ಅರುಣ್‌ ಬದಲು ಬೇರೆ ಅಭ್ಯರ್ಥಿಗೆ ಮತ ಚಲಾಯಿಸಿ ಬಿಟ್ಟರಾ? ಅಥವಾ ತಪ್ಪು ಪ್ರಾಶಸ್ತ್ಯದ ಅಂಕಿ ನಮೂದಿಸಿಬಿಟ್ಟಾರಾ ಎಂಬ ಚರ್ಚೆಗಳು ಕ್ಷೇತ್ರದಲ್ಲಿ ನಡೆಯುತ್ತಿವೆ.

12:4910 Dec 2021

ಮತದಾನ ಬಹಿಷ್ಕರಿಸಿದ್ದು ಏಳು, ಬದ್ಧರಾಗಿದ್ದು ಒಬ್ಬರು

ಶಿವಮೊಗ್ಗ: ಮೂರು ವರ್ಷಗಳಿಂದ ಮರಳು ಕ್ವಾರಿಯ ರಾಜಧನ ₹ 2.48 ಕೋಟಿ ಪಂಚಾಯಿತಿಗೆ ನೀಡಿಲ್ಲ ಎಂಬ ಕಾರಣಕ್ಕೆ ತೀರ್ಥಹಳ್ಳಿ ತಾಲ್ಲೂಕು ನಾಲೂರು –ಕೊಳಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಎಲ್ಲ 7 ಸದಸ್ಯರೂ ಮತದಾನ ಬಹಿಷ್ಕರಿಸಿದ್ದರು. ಕೊನೆಯ ಕ್ಷಣದಲ್ಲಿ 6 ಸದಸ್ಯರು ಒತ್ತಡ, ಆಮಿಷಕ್ಕೆ ಮಣಿದು ಮತ ಚಲಾಯಿಸಿದರು. ಸದಸ್ಯ ಬಿ.ಜಿ.ಸಂದೀಪ್‌ ಗಾರ್ಡರ ಗದ್ದೆ ಅವರು ಮತ ಚಲಾಯಿಸದೆ ಬದ್ಧತೆ ಪ್ರದರ್ಶಿಸಿದರು.

12:4810 Dec 2021

ಬೆಳಗಾವಿಯಲ್ಲಿ ಶೇ 99.97ರಷ್ಟು ಮತದಾನ

ಬೆಳಗಾವಿ: ಜಿಲ್ಲೆಯಲ್ಲಿ ವಿಧಾನಪರಿಷತ್‌ ದ್ವಿಸದಸ್ಯ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆ ಶಾಂತಿಯುತವಾಗಿ ಮುಗಿಗಿದ್ದು, ಶೇ 99.97ರಷ್ಟು ಮತದಾನವಾಗಿದೆ. 8,849 ಮತದಾರರ ಪೈಕಿ 8,846 ಮಂದಿ ಮತ ಹಕ್ಕು ಚಲಾಯಿಸಿದ್ದಾರೆ. ರಾಮದುರ್ಗ, ಬೆಳಗಾವಿ ಮತ್ತು ಅಥಣಿ ತಾಲ್ಲೂಕಿನಲ್ಲಿ ತಲಾ ಒಬ್ಬರು ಮತದಾನದಿಂದ ದೂರ ಉಳಿದಿದ್ದಾರೆ.  ಉಳಿದ ತಾಲ್ಲೂಕುಗಳಲ್ಲಿ ಶೇ 100ರಷ್ಟು ಮತದಾನವಾಗಿದೆ.

12:4410 Dec 2021

ಗೋಕಾಕದಲ್ಲಿ ಶೇ 100ರಷ್ಟು ಮತದಾನ

ಗೋಕಾಕ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ 100ರಷ್ಟು ಮತದಾನವಾಗಿದೆ.

ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶಾಂತಿಯುತ ಮತದಾನವಾಗಿದೆ. 35 ಮತಗಟ್ಟೆಗಳಲ್ಲಿ ಎಲ್ಲ 684 ಮತದಾರರೂ (323 ಪುರುಷರು ಹಾಗೂ 361 ಮಹಿಳೆಯರು) ಹಕ್ಕು ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಶಾಸಕ ರಮೇಶ ಜಾರಕಿಹೊಳಿ ನಗರಸಭೆಯ ಮತಗಟ್ಟೆ 261ರಲ್ಲಿ ಮತದಾನ ಮಾಡಿದರು. ಗೋಕಾಕ ಮತ್ತು ಅರಭಾವಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ ಚಲಾಯಿಸಿದರು. ಕೆಲ ಗ್ರಾಮಗಳಲ್ಲಿ ಪಂಚಾಯಿತಿ ಸದಸ್ಯರೆಲ್ಲರು ಒಟ್ಟಾಗಿ ಬಂದು ಸರದಿಯಲ್ಲಿ ಮತದಾನ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಾಲ್ಲೂಕಿನ ಗುಜನಾಳ ಗ್ರಾಮದಲ್ಲಿ ಮತಗಟ್ಟೆ ಮುಂದೆ ಕುಳಿತಿದ್ದರು. ಅವರ ಪುತ್ರ ರಾಹುಲ್ ಜಾರಕಿಹೊಳಿ ಕೊಣ್ಣೂರ ಪುರಸಭೆ ಹಾಗೂ ಪುತ್ರಿ ಪ್ರಿಯಾಂಕಾ ಶಿಂಧಿಕುರಬೇಟ ಗ್ರಾಮದಲ್ಲಿ ಮತಗಟ್ಟೆ ಏಜೆಂಟರಾಗಿ ಕಾರ್ಯನಿರ್ವಹಿಸಿ ಗಮನಸೆಳೆದರು. ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಮುಖಂಡ ಅಶೋಕ ಪೂಜಾರಿ ಮಮದಾಪೂರ ಗ್ರಾಮದಲ್ಲಿ ಮತಗಟ್ಟೆ ಏಜೆಂಟ್‌ ಆಗಿ ಕಾರ್ಯನಿರ್ವಹಿಸಿದರು.

12:3310 Dec 2021

ಬಸವರಾಜ ಬೊಮ್ಮಾಯಿ ವಿಶ್ವಾಸ

11:2410 Dec 2021

ಸಚಿವೆ ಶಶಿಕಲಾ ಜೊಲ್ಲೆ ಮತದಾನ

ಬೆಳಗಾವಿಯ ವಿಧಾನಪರಿಷತ್ ಚುನಾವಣೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ನಿಪ್ಪಾಣಿಯಲ್ಲಿ ಮತ ಚಲಾಯಿಸಿದರು.

11:2210 Dec 2021

ಬಾಲಚಂದ್ರ ಜಾರಕಿಹೊಳಿ ಮತದಾನ

ಬೆಳಗಾವಿಯ ವಿಧಾನಪರಿಷತ್ ಚುನಾವಣೆಯಲ್ಲಿ ಅರಭಾವಿ ಶಾಸಕ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿಯಲ್ಲಿ ಮತ ಚಲಾಯಿಸಿ ವಿಜಯದ ಸಂಕೇತ ಪ್ರದರ್ಶಿಸಿದರು.

11:1910 Dec 2021

ಸಚಿವ ಉಮೇಶ ಕತ್ತಿ ಮತದಾನ

ಬೆಳಗಾವಿಯ ವಿಧಾನಪರಿಷತ್ ಚುನಾವಣೆಯಲ್ಲಿ ಸಚಿವ ಉಮೇಶ ಕತ್ತಿ ಅವರು ಹುಕ್ಕೇರಿಯಲ್ಲಿ ಮತ ಚಲಾಯಿಸಿದರು.

11:0810 Dec 2021

ಮತದಾನದ ವೇಳೆ ಶ್ರೀಗಳ ಫೋಟೊ ಪ್ರದರ್ಶಿಸಿದ ಲಕ್ಷ್ಮಿ!

ಬೆಳಗಾವಿ: ವಿಧಾನಪರಿಷತ್‌ ಚುನಾವಣೆ ಅಂಗವಾಗಿ ಇಲ್ಲಿನ ಮಹಾನಗರ ಪಾಲಿಕೆ ಮತಗಟ್ಟೆ ಸಂಖ್ಯೆ 161ರಲ್ಲಿ ಶುಕ್ರವಾರ ಮತದಾನದ ವೇಳೆ, ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ತಮ್ಮ ಮೊಬೈಲ್‌ ಫೋನ್‌ನಲ್ಲಿದ್ದ ಬಾಳೆಹೊನ್ನೂರು ರಂಭಾಪುರಿ ಮಠದ ಲಿಂ.ವೀರಗಂಗಾಧರ ಸ್ವಾಮೀಜಿ ಫೋಟೊ ಪ್ರದರ್ಶಿಸಿ ಗಮನಸೆಳೆದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ನಾನೂ ಎಂದಿಗೂ ಅವರನ್ನು ನಂಬಿದ್ದೇನೆ. ನಿತ್ಯವೂ ಆರಾಧಿಸುತ್ತೇನೆ.  ಯಾವುದೇ ಉತ್ತಮ ಕೆಲಸಕ್ಕೆ ಮುನ್ನ, ಅಜ್ಜನನ್ನು ಸ್ಮರಿಸಿಕೊಂಡೆ ಮುಂದೆ ಹೆಜ್ಜೆ ಇಡುತ್ತೇನೆ. ಹಾಗಾಗಿ ಮತದಾನದ ವೇಳೆ ಫೋಟೊ ಪ್ರದರ್ಶಿಸಿ ಒಳಿತಾಗಲೆಂದು ಪ್ರಾರ್ಥಿಸಿದೆ’ ಎಂದು ತಿಳಿಸಿದರು.

10:2110 Dec 2021

ಶೋಭಾ ಕರಂದ್ಲಾಜೆ ಮತದಾನ

ಚಿಕ್ಕಮಗಳೂರು:  ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೊಪ್ಪ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮತದಾನ ಮಾಡಿದರು.