ಶನಿವಾರ, ಮೇ 28, 2022
31 °C
ಕಾಂಗ್ರೆಸ್, ಬಿಜೆಪಿ ಮುಖಂಡರಿಗೆ ಶಾಸಕ ರೇವಣ್ಣ ತಿರುಗೇಟು

ಹಿಂಬಾಗಿಲ ರಾಜಕಾರಣ ಮಾಡುತ್ತಿಲ್ಲ: ರೇವಣ್ಣ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದವರು ನೇರವಾಗಿ ಚುನಾವಣೆ ಎದುರಿಸಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಹೊರತು ಹಿಂಬಾಗಿಲಿನಿಂದ ಬಂದು ರಾಜಕಾರಣ ಮಾಡುತ್ತಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.

ಗೌಡರ ಕುಟುಂಬದ ಯಾವ ಸದಸ್ಯರೂ ನಾಮ ನಿರ್ದೇಶನದ ಹುದ್ದೆಗಳನ್ನು ಪಡೆದುಕೊಂಡು ಹಿಂಬಾಗಿಲ ರಾಜಕಾರಣ ಮಾಡುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯ ಮುಖಂಡರ ಕುಟುಂಬದವರು ರಾಜಕೀಯದಲ್ಲಿ ಇಲ್ಲವೇ? ಎರಡು ರಾಷ್ಟ್ರೀಯ ಪಕ್ಷಗಳು ಕುಟುಂಬ ರಾಜಕಾರಣವನ್ನು ನಿಷೇಧಿಸುವ ಕಾನೂನು ತರಲಿ. ಗೌಡರ ಕುಟುಂಬದ ರಾಜಕೀಯ ಅಂತ್ಯ ಮಾಡುವುದು ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಸಾಧ್ಯವಿಲ್ಲ. ಆದರೆ. ಕಾಂಗ್ರೆಸ್‍ನ ಅವನತಿಯಾಗದಂತೆ ಮೊದಲು ಆ ಪಕ್ಷದವರು ನೋಡಿಕೊಳ್ಳಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

 ಹನೂರು ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‍– ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲವೇ ಎಂದು ಪ್ರಶ್ನಿಸಿದರು.

ದೇಶದಲ್ಲಿ ಈಗ ಗಾಂಧಿ, ನೆಹರು ಕಟ್ಟಿದ ಕಾಂಗ್ರೆಸ್ ಪಕ್ಷ ಇಲ್ಲ. ಕಾಂಗ್ರೆಸ್ ನಿರ್ನಾಮ ಆಗುವ ಕಾಲ ಸನ್ನಿಹಿತವಾಗಿದೆ ಎಂದ ರೇವಣ್ಣ ಅವರು, ಹತ್ತು ವರ್ಷ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದರೂ ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಡಿಸಲಾಗಲಿಲ್ಲ. ಮೇಕೆದಾಟು ಯೋಜನೆಯ ಜಾರಿಯ ಬಗ್ಗೆ ಈಗ ಮಾತನಾಡುತ್ತಿರುವ ಕಾಂಗ್ರೆಸ್ ಮುಖಂಡರು ಅಧಿಕಾರದಲ್ಲಿದ್ದಾಗ ಏಕೆ ಯೋಜನೆ ಜಾರಿಯ ಬದ್ಧತೆ ತೋರಲಿಲ್ಲ ಎಂದರು.

2004 ರಿಂದ 2007 ರ ಅವಧಿಯಲ್ಲಿ ಇಂಧನ ಸಚಿವನಾಗಿದ್ದಾಗಲೇ ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಮಾರ್ಗದರ್ಶನದಲ್ಲಿ ಮೇಕೆದಾಟು ಯೋಜನೆಯಲ್ಲಿ 500 ಮೆಗಾ ವಾಟ್‌ ವಿದ್ಯುತ್ ಉತ್ಪಾದನೆಯ ಪ್ರಸ್ತಾವನೆ ಸಿದ್ಧಪಡಿಸಿ ಅನುಷ್ಠಾನದ ಪ್ರಯತ್ನ ಮಾಡಿದ್ದೆ. ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಯೋಜನೆ ಅನುಷ್ಠಾನದ ಪ್ರಯತ್ನ ಮಾಡಲಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಮೇಕೆದಾಟು ಯೋಜನೆಯನ್ನು ಪ್ರಸ್ತಾಪಿಸಿ ಜನರನ್ನು ಮರುಳು
ಮಾಡಲು ಯತ್ನಿಸುತ್ತಿವೆ ಎಂದು ದೂರಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿಲ್ಲ. ಸಂಸದರ ಕಾರನ್ನು ಬಳಸಿಲ್ಲ. ಸಂಸದರ ನಿವಾಸವನ್ನೂ ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಂಡಿಲ್ಲ. ಯಾವ ಗ್ರಾಮ ಪಂಚಾಯತಿ ಸದಸ್ಯರ ಮೇಲೂ ನಾವು ಒತ್ತಡ ಹಾಕಿಲ್ಲ. ಗ್ರಾಮ ಪಂಚಾಯತಿ ಸದಸ್ಯ ಬಳಿ ನಾವು ಮತ ಯಾಚನೆ ಮಾಡಿದ್ದೇವೇಯೇ ಹೊರತು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಬೇಕೆಂದು ಬೆದರಿಕೆ ಒಡ್ಡಿಲ್ಲ. ಅಂತಹ ದಾಖಲೆಗಳಿದ್ದರೆ ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಲಿ ಎಂದು ರೇವಣ್ಣ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಮುಖಂಡರಾದ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್, ಲಕ್ಷ್ಮಣೇಗೌಡ, ರಘುಗೌಡ ಇದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು