ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಗರ್ವಭಂಗ, ಜೆಡಿಎಸ್‌ಗೆ ಮುಖಭಂಗ: ಕಾಂಗ್ರೆಸ್‌ನಿಂದ ಫಲಿತಾಂಶದ ವಿಶ್ಲೇಷಣೆ

ವಿಧಾನ ಪರಿಷತ್‌ ಚುನಾವಣೆ ಫಲಿತಾಂಶದ ವಿಶ್ಲೇಷಣೆ
Last Updated 17 ಡಿಸೆಂಬರ್ 2021, 9:09 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿಯವರ ಗರ್ವಭಂಗ ಆಗಿದೆ. ಜೆಡಿಎಸ್‌ಗೆ ಮುಖಭಂಗ ಆಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದರು.

ಪಕ್ಷದ ಮತ್ತೊಬ್ಬ ನಾಯಕ, ಮಾಜಿ ಸಂಸದ ಚಂದ್ರಪ್ಪ ಜೊತೆ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಷತ್‌ ಚುನಾವಣೆಯಲ್ಲಿ ಮತಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೆ 44,225 (ಶೇ 48ರಷ್ಟು) ಮತಗಳನ್ನು ಕಾಂಗ್ರೆಸ್‌ ಪಡೆದುಕೊಂಡಿದೆ. ಬಿಜೆಪಿ ಕೇವಲ 37,283 ಮತಗಳನ್ನು ಮಾತ್ರ ಪಡೆದುಕೊಂಡಿದೆ’ ಎಂದರು.

‘45 ಸಾವಿರಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರು ಬಿಜೆಪಿಯವರು ಎಂದು ಶಾಸಕ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದರು. ಕಟೀಲ್ ಅವರು ಚುನಾವಣೆಗೆ ಮೊದಲು ಕಾಂಗ್ರೆಸ್ ಮುಳುಗುವ ಹಡಗು ಅಂದಿದ್ದರು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಮತ ಪಡೆಯಲು ಸಾಧ್ಯವಾಗಿಲ್ಲ. ಆ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಕಡಿಮೆ ಆಗಿದೆ. ಕಾಂಗ್ರೆಸ್ ಪರವಾಗಿ ಬದಲಾವಣೆ ಪರ್ವ ಕಾಣಿಸುತ್ತಿದೆ’ ಎಂದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಮತಗಳು ಕಡಿಮೆ ಆಗಿದೆ. 1,286 ಹೆಚ್ಚು ಮತಗಳನ್ನು ಬೆಳಗಾವಿಯಲ್ಲಿ ನಾವು (ಕಾಂಗ್ರೆಸ್‌) ಪಡೆದಿದ್ದೇವೆ. ಹುಬ್ಬಳ್ಳಿ, ಗದಗ, ಹಾವೇರಿ ಭಾಗದಲ್ಲಿ ಕೇವಲ ಮೂರು ಶಾಸಕರು ಮಾತ್ರ ನಮ್ಮವರು ಇದ್ದಾರೆ. ಬಿಜೆಪಿಯ ಕೇಂದ್ರ ಸಚಿವರು, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಎಲ್ಲರೂ ಇರುವ ಭಾಗ ಅದು. ಆದರೆ, ನಮ್ಮ ಅಭ್ಯರ್ಥಿ ಸಲೀಂ ಅಹಮದ್ 833 ಮತಗಳ ಬಹುಮತ ಪಡೆದುಕೊಂಡಿದ್ದಾರೆ’ ಎಂದರು.

‘ಉತ್ತರ ಕರ್ನಾಟಕ ಅಂದರೆ ವೀರಶೈವ ಸಮಾಜ ಬಿಜೆಪಿ ಜೊತೆ ಇದೆ ಎಂಬ ಭಾವನೆ ಇತ್ತು. ಆದರೆ, ಹಿಂದುಳಿದ ವರ್ಗ ಕಾಂಗ್ರೆಸ್ ಜೊತೆಗಿದೆ ಎಂಬುದನ್ನು ಸಾಬೀತುಪಡಿಸಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಅತಿ ಹೆಚ್ಚು ಮತಗಳನ್ನು ಗಳಿಸಿದ್ದೇವೆ’ ಎಂದರು.

‘ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಅನುದಾನಗಳನ್ನೂ ಬಿಡುಗಡೆ ಮಾಡುತ್ತಿಲ್ಲ. ಯೋಜನೆಗಳನ್ನೂ ಕೊಡುತ್ತಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಸರ್ಕಾರ ಒಂದು ವರ್ಷದಿಂದ ಮುಂದೂಡಿದೆ. ಅಲ್ಲಿಯೂ ಕೂಡ ಸೋಲುತ್ತೇವೆ ಎಂದು ಬಿಜೆಪಿಯವರಿಗೆ ಭಯವಿದೆ. ಹೀಗಾಗಿ, ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ’ ಎಂದರು.

‘ದೇವಸ್ಥಾನಗಳನ್ನು ತೋರಿಸಿ ರಾಜಕಾರಣ ಮಾಡುವವರು ಕಾಂಗ್ರೆಸ್‌ನವರಲ್ಲ. ನಾವು ಅಲ್ಪಸಂಖ್ಯಾತರಿಗೆ, ಪರಿಶಿಷ್ಟ ಸಮುದಾಯಕ್ಕೆ ಟಿಕೆಟ್ ನೀಡಿದ್ದೇವೆ. ಫಲಿತಾಂಶ ಬಂದ ಬಳಿಕ ಕಟೀಲ್ ಒಂದೇ ಒಂದು ಮಾತೂ ಆಡಲಿಲ್ಲ’ ಎಂದರು.

‘ಬಿಜೆಪಿಯವರು ಅಂಬೇಡ್ಕರ್ ಭಾವಚಿತ್ರ ತೋರಿಕೆಗೆ ಇಟ್ಟುಕೊಳ್ಳುತ್ತಾರೆ. ಅವರ ಮಾತು ಜಾರಿಗೆ ತರುವುದಿಲ್ಲ. ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಮಂತ್ರಿಗಳೆಲ್ಲ ಪ್ರವಾಸ ಮಾಡಿದರೂ ಕೂಡ ಕಾಂಗ್ರೆಸ್ ಹೆಚ್ಚಿನ ಮತ ಗಳಿಸಿದೆ. ಇದು ಅವಲಂಬಿತ ಸರ್ಕಾರ, ಸ್ವತಂತ್ರ ಸರ್ಕಾರ ಅಲ್ಲ. ಅನ್ಯ ಪಕ್ಷಗಳ ಶಾಸಕರನ್ನು ಖರೀದಿಸಿ ನಡೆಯುತ್ತಿರುವ ಅವಲಂಬಿತ ಸರ್ಕಾರ ಇದು. ಸರ್ಕಾರದ ಆಡಳಿತ ವೈಫಲ್ಯದಿಂದ ಜನ ನಮ್ಮ ಪರವಾಗಿ ವಾಲುತ್ತಿದ್ದಾರೆ’ ಎಂದರು.

ಮತ್ತೊಂದು ಕಾಯ್ದೆಯ ಅವಶ್ಯಕತೆ ಇಲ್ಲ: ‘ಬಲವಂತದ ಮತಾಂತರ ನಡೆದರೆ ಕಾನೂನು ಕ್ರಮ ತೆಗೆದುಕೊಳ್ಳಲು ಈಗಾಗಲೇ ಅವಕಾಶ ಇದೆ. ಈಗಲೇ ಇರುವ ಕಾಯ್ದೆಗೆ ಮತ್ತೊಂದು ಕಾಯ್ದೆ ಅವಶ್ಯಕತೆ ಇಲ್ಲ. ಇದು ಕಾಂಗ್ರೆಸ್ ನಿಲುವು. ಇವರು ಒಂದು ಧರ್ಮವನ್ನೇ ಗುರಿಯಾಗಿ ಇಟ್ಟುಕೊಂಡಿದ್ದಾರೆ. ನಮ್ಮ ಭಾಗದಲ್ಲಿ ಬಹಳ ಹಿಂದೆಯೇ ಮುಂದುವರಿದ ವರ್ಗದವರು, ಹಿಂದುಳಿದ ವರ್ಗದವರು ಎಲ್ಲರೂ ಮತಾಂತರ ಆಗಿದ್ದಾರೆ. ಬೌದ್ಧ ಧರ್ಮಕ್ಕೆ ಅಂಬೇಡ್ಕರ್ ಮತಾಂತರ ಹೊಂದಿದರು. ಅದೇ ಒಂದೇ ದಿನ 7 ಲಕ್ಷ ಮಂದಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಯಾವ ಧರ್ಮದಲ್ಲಿ ಅಸಮಾನತೆ ಇದೆಯೋ ಆ ಧರ್ಮ ಬಿಟ್ಟು ಬೇರೆ ಧರ್ಮಕ್ಕೆ ಹೋಗುತ್ತಾರೆ’ ಎಂದು ಅವರು ಸಮರ್ಥನೆ ನೀಡಿದರು.

‘ಶಾಸಕ ಗೂಳಿಹಟ್ಟಿ ಶೇಖರ್ ಆರೆಸ್ಸೆಸ್‌ನ ಕೈಗೊಂಬೆ. ಅವರ ತಾಯಿ ಈಗ ಮತಾಂತರ ಆಗಿದ್ದಲ್ಲ. ಎಷ್ಟೋ ವರ್ಷದ ಹಿಂದೆಯೇ ಮತಾಂತರ ಆಗಿದ್ದಾರೆ. ಆದರೆ, ಗೂಳಿಹಟ್ಟಿ ಶೇಖರ್ ಆಗ ಯಾಕೆ ಮಾತಾಡಲಿಲ್ಲ, ಈಗ ಯಾಕೆ ಮಾತನಾಡುತ್ತಿದ್ದಾರೆ. ಧರ್ಮ ಪೂಜೆ ಪುರಸ್ಕಾರ ಮನೆಯಲ್ಲಿ ಇರಬೇಕು, ಬೀದಿಗೆ ತರಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT