ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನಾವಣೆ | ಕಾಂಗ್ರೆಸ್: ‘ಕುಟುಂಬ’ಕ್ಕೂ ಹೊಸಬರಿಗೂ ಮಣೆ

ಬಿಜೆಪಿ ನಾಯಕ ಮಂಜು ಮಗನಿಗೂ ಕೈ ಟಿಕೆಟ್‌ l ಎಸ್‌.ಆರ್‌. ಪಾಟೀಲ್‌, ಧರ್ಮಸೇನ ಹೆಸರಿಲ್ಲ
Last Updated 22 ನವೆಂಬರ್ 2021, 20:21 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಹಾಲಿ ಸದಸ್ಯರಲ್ಲಿ ನಾಲ್ವರಿಗೆ ಮಾತ್ರ ಟಿಕೆಟ್‌ ನೀಡಲಾಗಿದೆ. ಅದರ ಜತೆಯಲ್ಲೇ ಟಿಕೆಟ್‌ ಹಂಚಿಕೆಯಲ್ಲಿ ಕುಟುಂಬ ರಾಜಕಾರಣದ ನಂಟು ಮುಂದುವರಿದಿದೆ.

ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಅವರ ಹೆಸರು ಪಟ್ಟಿಯಲ್ಲಿಲ್ಲ. ವಿಜಯಪುರ– ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರಕ್ಕೆ ಒಂದು ಅಭ್ಯರ್ಥಿಯನ್ನು ಮಾತ್ರ ಪ್ರಕಟಿಸಿದ್ದು, ಹಾಲಿ ಸದಸ್ಯ ಸುನೀಲ ಗೌಡ ಪಾಟೀಲರಿಗೆ ಮತ್ತೆ ಅವಕಾಶ ನೀಡಲಾಗಿದೆ. ಇವರು ವಿಜಯಪುರ ಶಾಸಕ ಎಂ.ಬಿ. ಪಾಟೀಲರ ತಮ್ಮ.

25 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಎಂಟು ಕ್ಷೇತ್ರಗಳಿಗೆ ಕಾಂಗ್ರೆಸ್‌ ಇನ್ನೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ವಿಧಾನ ಪರಿಷತ್‌ನ ಹಾಲಿ ಸದಸ್ಯರಾದ ಎಸ್‌. ರವಿ, ಬಳ್ಳಾರಿಯ ಕೆ.ಸಿ. ಕೊಂಡಯ್ಯ ಮತ್ತು ಶಿವಮೊಗ್ಗದ ಆರ್‌. ಪ್ರಸನ್ನ ಕುಮಾರ್‌ ಅವರಿಗೆ ಮತ್ತೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಎಸ್‌.ರವಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಸೋದರ ಸಂಬಂಧಿ. ಮತ್ತೆ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದ ಮೈಸೂರಿನ ಆರ್‌. ಧರ್ಮಸೇನ ಅವರಿಗೆ ಟಿಕೆಟ್‌ ಕೈತಪ್ಪಿದೆ. ಜಿಲ್ಲಾ ಆರೋಗ್ಯಾಧಿಕಾರಿಯಾಗಿ ನಿವೃತ್ತರಾಗಿರುವ ಡಾ.ಡಿ. ತಿಮ್ಮಯ್ಯ ಅವರಿಗೆ ಅವಕಾಶ ನೀಡಲಾಗಿದೆ.

ರಾಯಚೂರು ಕ್ಷೇತ್ರದಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಅಮರೇಗೌಡ ಬಯ್ಯಾಪುರ ಅವರ
ಸಹೋದರನ ಮಗ ಶರಣ ಗೌಡ ಅನ್ನದಾನ ಗೌಡ ಪಾಟೀಲ, ಬೆಳಗಾವಿ ಕ್ಷೇತ್ರದಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ತಮ್ಮ ಚನ್ನರಾಜ ಹಟ್ಟಿಹೊಳಿಗೆ ಟಿಕೆಟ್‌ ಘೋಷಿಸಲಾಗಿದೆ.

ಹುಬ್ಬಳ್ಳಿ–ಧಾರವಾಡ–ಗದಗ–ಹಾವೇರಿ ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಅವರನ್ನೇ ಕಣಕ್ಕಿಳಿಸಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಒಮ್ಮೆ ಪರಿಷತ್‌ ಸದಸ್ಯರಾಗಿದ್ದು, ಹಿಂದಿನ ಬಾರಿ ಸೋತಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ಮತ್ತೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ತುಮಕೂರು ಕ್ಷೇತ್ರದಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಅವರ ಮಗ ಆರ್‌. ರಾಜೇಂದ್ರ ಕಣಕ್ಕಿಳಿಯಲಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಇವರು ಸೋತಿದ್ದರು.

ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದು, ನಂತರ ಬಿಜೆಪಿ ಸೇರಿರುವ ಹಾಸನದ ಎ. ಮಂಜು ಅವರ ಮಗ ಡಾ. ಮಂಥರ್‌ ಗೌಡ ಅವರಿಗೆ ಕೊಡಗು ಕ್ಷೇತ್ರದ ಟಿಕೆಟ್‌ ದೊರಕಿದೆ. ಸಚಿವ ಎಸ್‌.ಟಿ. ಸೋಮಶೇಖರ್‌ ವಿಶೇಷಾಧಿಕಾರಿಯಾಗಿದ್ದ ಎಂ.ಜಿ.ಗೂಳಿಗೌಡ (ದಿನೇಶ್‌ ಗೂಳಿಗೌಡ) ಅವರನ್ನು ಮಂಡ್ಯದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತಿದೆ.

‘ಪಕ್ಷಕ್ಕೆ ದುಡಿದವರಿಗೆ ಅವಕಾಶ’

‘ಅಭ್ಯರ್ಥಿಗಳ ಆಯ್ಕೆಯಲ್ಲಿ ವೈಯಕ್ತಿಕ ತೀರ್ಮಾನವಿಲ್ಲ. ಪಕ್ಷದ ವರಿಷ್ಠರು ಮತ್ತು ರಾಜ್ಯ ಮುಖಂಡರು ಸಮಾಲೋಚಿಸಿ, ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ನೀಡಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎಸ್‌.ಆರ್‌. ಪಾಟೀಲ ಅವರನ್ನು ಕಡೆಗಣಿಸಲಾಗಿದೆ ಎಂಬುದು ಸರಿಯಲ್ಲ. ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಬೇರೆ ಕಾರ್ಯಸೂಚಿ ಪಕ್ಷದ ಮುಂದೆ ಇದೆ’ ಎಂದರು.

ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ಕೆ.ಸಿ. ಕೊಂಡಯ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂಬ ಆರೋಪವೂ ಆಧಾರರಹಿತ. ಕೆಲವು ಮುಖಂಡರು ಹಾಗೆ ಹೇಳಿರಬಹುದು. ಆದರೆ, ಎಲ್ಲ ಮುಖಂಡರ ಅಭಿಪ್ರಾಯ ಆಲಿಸಿ ತಿರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗಳಿಸುವ ನಿರೀಕ್ಷೆ ಇದೆ. ಪಕ್ಷದ ಸ್ಥಳೀಯ ಮುಖಂಡರು ಮತ್ತು ಮತದಾರರ ಅಪೇಕ್ಷೆಯಂತೆ ಹೊಸಬರಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT