ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಕಲುಷಿತ ನೀರು ಸೇವನೆ; ನಿರ್ಲಕ್ಷ್ಯಕ್ಕೆ ಅಮಾಯಕ ಮಹಿಳೆ ಸಾವು

ಕಲುಷಿತ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಕಡೆಗಣನೆ; ಸಾವಿಗೆ ಹೊಣೆ ಯಾರು?
Last Updated 11 ಜನವರಿ 2023, 4:34 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದಲ್ಲಿ ಕಲುಷಿತ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಕೂಡ ಅದನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಅಮಾಯಕ ಮಹಿಳೆಯೊಬ್ಬರು ಮಂಗಳವಾರ ಸಾವನ್ನಪ್ಪಿದ್ದಾರೆ.

ನಗರದ ರಾಣಿಪೇಟೆಯ 12ನೇ ಕ್ರಾಸ್‌ ನಿವಾಸಿ ಲಕ್ಷ್ಮಿದೇವಿ (50) ಮೃತ ಮಹಿಳೆ. 54ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಬಡಾವಣೆಯಲ್ಲಿ ಆರೋಗ್ಯ ಇಲಾಖೆಯವರು ಬೀಡು ಬಿಟ್ಟಿದ್ದಾರೆ. ಆದರೆ, ವಾಂತಿ, ಭೇದಿ ಪ್ರಕರಣಗಳು ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದೇ ಬಡಾವಣೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಕಚೇರಿ ಇದೆ. ಹೀಗಿದ್ದರೂ ಅಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ.

2015ರಲ್ಲಿ ನಗರದಲ್ಲಿ ಕೈಗೆತ್ತಿಕೊಂಡ 24X7 ಕುಡಿಯುವ ನೀರಿನ ಕಾಮಗಾರಿ ಬಳಿಕ ನಗರದ ಹಲವೆಡೆ ನೀರು ಕಲುಷಿತಗೊಂಡು ಪೂರೈಕೆ ಆಗುತ್ತಿರುವುದು ಸಾಮಾನ್ಯವಾಗಿದೆ. ಗುತ್ತಿಗೆದಾರರು ಬದಲಾದ ಕಾರಣ ಎಲ್ಲಿ ನೀರು ಕಲುಷಿತಗೊಳ್ಳುತ್ತಿದೆ ಎನ್ನುವುದು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಕೈಚೆಲ್ಲಿ ಕೂತ್ತಿದ್ದಾರೆ. ಇದರ ಪರಿಣಾಮ ಜನ ಸಮಸ್ಯೆ ಎದುರಿಸುವಂತಾಗಿದೆ.

ಕಲುಷಿತ ನೀರಿನ ಸಮಸ್ಯೆ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಲವು ಸಲ ಪ್ರಸ್ತಾಪಿಸಿದ್ದಾರೆ. ವಿಷಯ ಎತ್ತಿದಾಗಲೆಲ್ಲಾ ಅಧಿಕಾರಿಗಳು, ‘ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಎಂದಿನಂತೆ ಭರವಸೆ ನೀಡಿ ಕೈತೊಳೆದುಕೊಳ್ಳುತ್ತಾರೆ. ಆದರೆ, ಗಂಭೀರವಾಗಿ ವಿಷಯವನ್ನು ಪರಿಗಣಿಸಿ ಬಗೆಹರಿಸದ ಕಾರಣ ಅಮಾಯಕ ಜೀವವೊಂದು ಬಲಿಯಾಗಿದೆ. ಇದಕ್ಕೆ ಯಾರು ಹೊಣೆ? ಉತ್ತರದಾಯಿತ್ವ ಯಾರದ್ದು? ಯಾರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ?

ನಗರದಿಂದ ಮೂರು ಕಿ.ಮೀ ಅಂತರದಲ್ಲಿ ತುಂಗಭದ್ರಾ ಜಲಾಶಯವಿದೆ. ಜಲಾಶಯದ ಮಗ್ಗುಲಲ್ಲೇ ಇರುವ ಟಿ.ಬಿ. ಡ್ಯಾಂ ಪ್ರದೇಶದಲ್ಲಿ ನೀರಿಗೆ ಸಮಸ್ಯೆ ಇದೆ. ಇನ್ನು, ಹಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಇದೆ. ಶುದ್ಧ ಕುಡಿವ ನೀರು ಮರೀಚಿಕೆಯಾಗಿದೆ. ವಿವಿಧ ರಾಜಕೀಯ ಪಕ್ಷಗಳವರು ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದಾರೆ. ಆದರೆ, ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ. ಸಮಸ್ಯೆ ನನೆಗುದಿಗೆ ಬಿದ್ದಿದೆ.

‘ವಿಜಯನಗರ ಸಾಮ್ರಾಜ್ಯ ಎಂದೆಲ್ಲಾ ನಮ್ಮ ರಾಜಕೀಯ ನಾಯಕರುಗಳು ಭಾಷಣ ಮಾಡುತ್ತಾರೆ. ಅವರ ಯೋಗ್ಯತೆಗೆ ಕನಿಷ್ಠ ಶುದ್ಧ ಕುಡಿಯುವ ನೀರು ಜನರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ತುಂಗಭದ್ರಾ ಜಲಾಶಯವಿದ್ದರೂ ಏನು ಪ್ರಯೋಜನ? ಮಹಿಳೆ ಸಾವಿಗೆ ಯಾರು ಹೊಣೆ? ನಿರ್ಲಕ್ಷ್ಯ ವಹಿಸಿದ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

****

ವಾಟರ್‌ ಪೈಪ್‌, ಯುಜಿಡಿ ಪೈಪ್‌ ಒಂದೇ ಕಡೆ ಇದ್ದು, ಲಿಕೇಜ್‌ ಇರುವ ಸಾಧ್ಯತೆ ಇದೆ. ಆದರೆ, ಮಹಿಳೆ ಸಾವಿಗೆ ಇನ್ನಷ್ಟೇ ಕಾರಣ ಗೊತ್ತಾಗಬೇಕಿದೆ.

–ಮನೋಹರ್‌ ನಾಗರಾಜ್‌, ಪೌರಾಯುಕ್ತ, ನಗರಸಭೆ

****

ಕಲುಷಿತ ನೀರು ಸೇವಿಸಿ ರಾಣಿಪೇಟೆಯ ಅನೇಕ ಜನ ಅಸ್ವಸ್ಥಗೊಂಡಿದ್ದಾರೆ. ಆರೋಗ್ಯ ಇಲಾಖೆಯ ತಂಡ ವಾರ್ಡ್‌ನಲ್ಲಿ ಬೀಡು ಬಿಟ್ಟಿದೆ.

–ರೂಪೇಶ್‌ ಕುಮಾರ್‌, ನಗರಸಭೆ ಸದಸ್ಯ

****

ಮೃತ ಮಹಿಳೆಗೆ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಲಾಗಿತ್ತು. ಆದರೆ, ಅವರು ಆರ್‌ಎಂಪಿ ವೈದ್ಯರ ಬಳಿ ತೋರಿಸಿಕೊಂಡು ಮನೆಯಲ್ಲೇ ಉಳಿದರು.

–ಶಂಕರ ನಾಯಕ, ಪ್ರಭಾರ ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT