ಭಾನುವಾರ, ನವೆಂಬರ್ 28, 2021
20 °C

ಬಿಜೆಪಿಯವರಿಂದ ಒಂದು ಮತಕ್ಕೆ ₹ 2 ಸಾವಿರ: ಸಿದ್ದರಾಮಯ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 'ಯಾವುದೇ ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಜನರ ಆಕ್ರೋಶ ಏನು ಎನ್ನುವುದು ಗೊತ್ತಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಜೆಡಿಎಸ್‌ನವರಿಗೆ ಯಾವುದೇ ಸಿದ್ಧಾಂತವಿಲ್ಲ.‌ ಅವರು ಏನೇ ಮಾಡಿದರೂ ಕೊನೆಗೆ ಬಿಜೆಪಿ ಜೊತೆ ಸೇರಿಕೊಳ್ಳುತ್ತಾರೆ. ಈಗಲೂ ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ’ ಎಂದರು.

‘ಹಾನಗಲ್, ಸಿಂದಗಿ ಕ್ಷೇತ್ರದಲ್ಲಿದೆ ಕಾಂಗ್ರೆಸ್ ಪರ ಅಲೆ ಇದೆ. ಆದರೆ, ನನಗೆ ಗೊತ್ತಿರುವ ಮಟ್ಟಿಗೆ ಬಿಜೆಪಿಯವರು ಎರಡೂ ಕ್ಷೇತ್ರಗಳಲ್ಲಿ ಒಂದು ಮತಕ್ಕೆ ₹ 2 ಸಾವಿರದಂತೆ ಹಣದ ಹೊಳೆ
ಹರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಜಾತ್ಯತೀತ ಜನತಾದಳ ಎಂದು ಹೆಸರಿಟ್ಟುಕೊಂಡಿರುವ ಪ್ರಾದೇಶಿಕ ಪಕ್ಷ, ನಡವಳಿಕೆಯಲ್ಲಿ ಜಾತ್ಯತೀತ ಅಲ್ಲ. ಅದು ಕೋಮುವಾದಿ ಪಕ್ಷ. ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ಮಾಡಿದ ನಂತರವೂ ಜೆಡಿಎಸ್‌ನವರು ಜಾತ್ಯತೀತ ಆಗುತ್ತಾರಾ’ ಎಂದು ಪ್ರಶ್ನಿಸಿದರು.

‘ಕೇಸರಿ, ಆರೆಸ್ಸೆಸ್‌ ಕಂಡರೆ ನನಗೆ ಭಯ ಇಲ್ಲ.‌ ಆದರೆ, ಶಾಂತಿ ಕದಡಿ ಸಮಾಜ ಒಡೆಯುತ್ತಾರೆ ಎನ್ನುವ ಭಯ ಅಷ್ಟೆ’ ಎಂದ ಅವರು, ‘ಸಲೀಂ, ಉಗ್ರಪ್ಪ ಅವರ ಸಂಭಾಷಣೆಯನ್ನು ನಾನು ಕೇಳಿಲ್ಲ. ಉಗ್ರಪ್ಪ ಮಾತನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ.‌ ಬಸವರಾಜ ಬೊಮ್ಮಾಯಿ ಅವರು ಮೊದಲು ಯತ್ನಾಳ್ ಹೇಳಿಕೆ ಬಗ್ಗೆ ಉತ್ತರ ಕೊಡಲಿ. ಹಿಂದೆ ಅನಂತ್ ಕುಮಾರ್, ಯಡಿಯೂರಪ್ಪ ಮಾತನಾಡಿದ್ದಾರಲ್ಲ ಅದಕ್ಕೆ ಉತ್ತರ ಕೊಡಲಿ’ ಎಂದರು.

‘ಅಧಿಕಾರಕ್ಕೆ ಬಂದ ತಕ್ಷಣ ಪಂಚಮಸಾಲಿ ಸಮುದಾಯದವರಿಗೆ ಮೀಸಲಾತಿ ನೀಡುವುದಾಗಿ ಬಿಜೆಪಿ ನಾಯಕರು ಹೇಳಿದ್ದರು. ವಾಲ್ಮೀಕಿ ಸಮುದಾಯಕ್ಕೂ ಬಿಜೆಪಿ ಆಶ್ವಾಸನೆ ಕೊಟ್ಟಿದೆ. ಅದೆಲ್ಲವನ್ನೂ ಈಗ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಪಂಚಮಸಾಲಿ ಸಮುದಾಯ ಬಿಜೆಪಿಗೆ ಪಾಠ ಕಲಿಸಲಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು