ಭಾನುವಾರ, ಸೆಪ್ಟೆಂಬರ್ 19, 2021
23 °C
ಕುಶಾಲನಗರ : ಕೋವಿಡ್ ಮಾರ್ಗಸೂಚಿ ಅನ್ವಯ ಜಲಕ್ರೀಡೆಗೆ ನಿರ್ಬಂಧ

ದುಬಾರೆ ಕಾವೇರಿ ನದಿಯಲ್ಲಿ ಜಲಕ್ರೀಡೆ ಸ್ಥಗಿತ: ಪ್ರವಾಸಿಗರಿಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಕೋವಿಡ್ ಮಾರ್ಗಸೂಚಿ ಅನ್ವಯ ಜಲಕ್ರೀಡೆಗೆ ನಿರ್ಬಂಧ ಹೇರಲಾಗಿದ್ದು, ಈ ಹಿನ್ನೆಲೆಯಲ್ಲಿ ದುಬಾರೆ ಕಾವೇರಿ ನದಿಯಲ್ಲಿ ನಡೆಯುತ್ತಿದ್ದ ಜಲಕ್ರೀಡೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಪ್ರವಾಸಿಗರಿಗೆ ತೀವ್ರ ನಿರಾಸೆ ಉಂಟಾಗಿದೆ.

ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆಗೆ ದೂರದ ಊರುಗಳಿಂದ ನಿತ್ಯ ತಂಡೋಪತಂಡವಾಗಿ ಪ್ರವಾಸಿಗರು ಆಗಮಿಸುತ್ತಿದ್ದಾರೆ‌‌. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದರೊಂದಿಗೆ ಕಾವೇರಿ ನದಿಯಲ್ಲಿ ನಡೆಯುತ್ತಿದ್ದ ಜಲಕ್ರೀಡೆ ಹಾಗೂ ದೋಣಿ ವಿಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಭ್ರಮಿಸುತ್ತಿದ್ದರು. ಆದರೆ ಈಗ ಕೋವಿಡ್ ನಿಯಮ ಅನ್ವಯ ಜಲಕ್ರೀಡೆಗೆ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ದುಬಾರೆ ರಾಫ್ಟಿಂಗ್ ಸಾಹಸ ಕ್ರೀಡೆ ಸ್ಥಗಿತಗೊಂಡಿದೆ.

ಕಾವೇರಿ ನದಿಯಲ್ಲಿ ರಾಫ್ಟಿಂಗ್ ಕ್ರೀಡೆ ಸ್ಥಗಿತಗೊಳಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸೂಚನೆ ನೀಡಿದೆ. 10 ದಿನದ ಹಿಂದಷ್ಟೇ ದುಬಾರೆ ಕಾವೇರಿ ನದಿಯಲ್ಲಿ ಆರಂಭಗೊಂಡಿದ್ದ ರಾಫ್ಟಿಂಗ್ ಸಾಹಸ ಕ್ರೀಡೆ ಇಂದಿನಿಂದ ಸ್ಥಗಿತಗೊಳಿಸಲಾಗಿದೆ. ದುಬಾರೆಗೆ ಬರುವ ಪ್ರವಾಸಿಗರು ಕೇವಲ ಕಾವೇರಿ ವೀಕ್ಷಣೆ ಮಾಡಿಕೊಂಡು ನಿರಾಸೆಯಿಂದ ಹಿಂತಿರುಗುವಂತೆ ಆಗಿದೆ. ಎಲ್ಲ ಕ್ಷೇತ್ರಗಳನ್ನು ಮುಕ್ತಗೊಳಿಸಿರುವ ಸರ್ಕಾರ ಕೋವಿಡ್ ನೆಪದಲ್ಲಿ ಜಿಮ್ ಹಾಗೂ ಜಲಕ್ರೀಡೆಗೆ ಅವಕಾಶ ನೀಡದಿರುವುದು ಸರಿಯಾದ ಕ್ರಮವಲ್ಲ ಎಂದು ಪ್ರವಾಸಿಗ ಅಂತೋಣಿ ಅಸಮಾಧಾನ ವ್ಯಕ್ತಪಡಿಸಿದರು.

ಡಿಸಿ ಬಳಿಗೆ ನಿಯೋಗ: ದುಬಾರೆ ಜಲಕ್ರೀಡೆ ಅಸೋಸಿಯೇಶನ್ ಅಧ್ಯಕ್ಷ ಸಿ.ಎಲ್.ವಿಶ್ವ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಭೇಟಿಯಾಗಿ ಜಲಕ್ರೀಡೆ ನಡೆಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಸರ್ಕಾರ ಕೋವಿಡ್ 5 ಮಾರ್ಗಸೂಚಿಯಲ್ಲಿ ಜಿಮ್ ಹಾಗೂ ಜಲಕ್ರೀಡೆಗೆ ನಿರ್ಬಂಧ ಹೇರಿದೆ. ಮುಂದಿನ ಮಾರ್ಗಸೂಚಿಯಲ್ಲಿ ಈ ನಿರ್ಬಂಧವನ್ನು ತೆರವುಗೊಳಿಸುವ ಸಾಧ್ಯತೆ ಇದೆ.ಆದ್ದರಿಂದ ಸ್ವಲ್ಪ ಸಮಯದವರೆಗೆ ಜಲಕ್ರೀಡೆ ಸ್ಥಗಿತ ಮಾಡಿ.ಮುಂದಿನ‌ ಮಾರ್ಗಸೂಚಿ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಆತಂಕದಲ್ಲಿ ಮಾಲೀಕರು ಹಾಗೂ ಕಾರ್ಮಿಕರು: ದುಬಾರೆ ಕಾವೇರಿ ನದಿಯಲ್ಲಿ ರಾಫ್ಟಿಂಗ್ ಮೂಲಕ ತಮ್ಮ ಜೀವನ ಕಂಡುಕೊಂಡಿದ್ದ ರಾಫ್ಟಿಂಗ್ ಮಾಲೀಕರು ಮತ್ತು ಕಾರ್ಮಿಕರು ರಾಫ್ಟಿಂಗ್ ಸ್ಥಗಿತದಿಂದ
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು