ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಯಾರ ಹಕ್ಕು ಕಿತ್ತುಕೊಳ್ಳುತ್ತಿಲ್ಲ: ಸ್ವಾಮೀಜಿ

ಬೆಂಗಳೂರಿನ ಸಮಾವೇಶದ ಬಗ್ಗೆ ಚರ್ಚಿಸಲು ಫೆ. 10ರಂದು ಸಭೆ
Last Updated 7 ಫೆಬ್ರುವರಿ 2021, 15:30 IST
ಅಕ್ಷರ ಗಾತ್ರ

ಶಿರಾ: ಪ್ರವರ್ಗ ‘2ಎ’ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮುದಾಯವು ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ನಗರ ಹೊರವಲಯದ ಆಂಜನೇಯ ಸ್ವಾಮಿ ದೇವಸ್ಥಾನ ತಲುಪಿದೆ.

ಪಾದಯಾತ್ರಿಗಳು ಬೆಂಗಳೂರು ತಲುಪಿದ ನಂತರ ಸಮಾವೇಶ ನಡೆಸುವ ಬಗ್ಗೆ ಚರ್ಚಿಸಲು ತುಮಕೂರಿನಲ್ಲಿ ಫೆ. 10ರಂದು ಸಮುದಾಯದ ಜನಪ್ರತಿನಿಧಿ ಗಳ ಸಭೆ ನಡೆಸಲು ಪಾದಯಾತ್ರೆ ನೇತೃತ್ವವಹಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಿರ್ಧರಿಸಿದ್ದಾರೆ.

‘ಮೀಸಲಾತಿ ವಿಚಾರದಲ್ಲಿ ಕೆಲವು ರಾಜಕಾರಣಿಗಳು ಸಣ್ಣಪುಟ್ಟ ಸಮುದಾಯಗಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಶೇಕಡ 69ರಷ್ಟು ಮೀಸಲಾತಿ ನೀಡಲು ಅವಕಾಶ ಇದೆ. ಪ್ರವರ್ಗ ‘2ಎ’ನಲ್ಲಿ ಮೀಸಲಾತಿಯನ್ನು ಶೇಕಡ 30ಕ್ಕೆ ಹೆಚ್ಚಿಸಿದರೆ ಯಾರಿಗೂ ತೊಂದರೆ ಆಗುವುದಿಲ್ಲ. ನಾವು ಯಾರ ಹಕ್ಕನ್ನು ಕಿತ್ತುಕೊಳ್ಳುತ್ತಿಲ್ಲ. ನಮ್ಮ ಹಕ್ಕನ್ನು ಪಡೆಯಲು ಹೋರಾಡುತ್ತಿದ್ದೇವೆ’ ಎಂದು ಸ್ವಾಮೀಜಿ ತಿಳಿಸಿದರು.

‘ಬೆಂಗಳೂರಿನಲ್ಲಿ ಫೆ. 15ರಂದು ಸಮಾವೇಶ ಮಾಡಬೇಕು ಎಂದು ನಿರ್ಧರಿಸಿದ್ದೆವು. ಆದರೆ, ಈಗ ಸಮಾವೇಶ ನಡೆಸುವ ದಿನದ ಬಗ್ಗೆ ಚರ್ಚಿಸಲು ಫೆ. 10ರಂದು ತುಮಕೂರಿನಲ್ಲಿ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಸಮುದಾಯದ ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ವಿವಿಧ ಹಂತದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.

‘ಈ ಮುಂಚೆ ನಿತ್ಯ ಸರಾಸರಿ 25 ಕಿ.ಮೀ ಕ್ರಮಿಸುತ್ತಿದ್ದೆವು. ಈಗ ಸರಾಸರಿ 10 ಕಿ.ಮೀ ಸಾಗುತ್ತಿದ್ದೇವೆ’ ಎಂದು ಸ್ವಾಮೀಜಿ ತಿಳಿಸಿದರು.

ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಇದ್ದರು.

ರಂಭಾಪುರಿ ಶ್ರೀ ವಿರುದ್ಧ ಆಕ್ರೋಶ

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ ನೀಡುವ ಬಗ್ಗೆ ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ದೂರಿ ಪಾದಯಾತ್ರೆ ಯಲ್ಲಿ ಭಾಗವಹಿಸಿದ್ದ ಭಕ್ತರು ರಂಭಾಪುರಿ ಶ್ರೀ ವಿರುದ್ಧ ‌ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ಹೋರಾಟ ಅವರಿಗೆ ಇಷ್ಟವಿಲ್ಲದಿದ್ದರೆ ಬೆಂಬಲ ಕೊಡುವುದು ಬೇಡ. ಆದರೆ ಷಡ್ಯಂತ್ರ ‌‌ನಡೆಸಿ ಸಮುದಾಯ ಒಡೆಯುವ ಕೆಲಸ ಮಾಡುವುದು ತಪ್ಪು. ರಾಜ್ಯದ ಮಠಗಳ ಅಭಿವೃದ್ಧಿಯಲ್ಲಿ ಪಂಚಮಸಾಲಿಗಳ ಕೊಡುಗೆ ಮಹತ್ವದಾಗಿದೆ. ಅದನ್ನು ಮಠಾಧೀಶರು ಅರಿತುಕೊಳ್ಳಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT