ಮಂಗಳವಾರ, ಅಕ್ಟೋಬರ್ 27, 2020
19 °C

ಸಂಸದರಾಗಿ ಹೀಗಾ ಮಾತನಾಡುವುದು? ಕಂಗನಾ ಪ್ರಕರಣದಲ್ಲಿ ರಾವುತ್‌ಗೆ ಕೋರ್ಟ್‌ ತರಾಟೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರ ಬಂಗಲೆ ಧ್ವಂಸ ಪ್ರಕರಣ ವಿರುದ್ಧದ ಅರ್ಜಿ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್‌ ಶಿವಸೇನೆ ಸಂಸದ ಸಂಜಯ್‌ ರಾವುತ್‌ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

‘ಒಬ್ಬ ಸಂಸದರಾಗಿ ಮಾತನಾಡುವ ರೀತಿಯೇ ಇದು?’ ಎಂದು ಹೈಕೋರ್ಟ್‌ ರಾವುತ್‌ ಅವರನ್ನು ಪ್ರಶ್ನೆ ಮಾಡಿದೆ.

ಶಿವಸೇನೆ ಆಡಳಿತರುವ ‘ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್’ (ಬಿಎಂಸಿ) ಸೆಪ್ಟೆಂಬರ್ 9 ರಂದು ತಮ್ಮ ಬಂಗಲೆಯನ್ನು ಧ್ವಂಸಗೊಳಿಸಿದ್ದರ ವಿರುದ್ಧ ರನೌತ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅರ್ಜಿಯಲ್ಲಿ ರಾವುತ್‌ ಅವರನ್ನೂ ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ರಾವುತ್‌ ಅವರು ಬೆದರಿಕೆ ಹಾಕಿದ್ದಾರೆ‌ ಎಂಬ ಆರೋಪದ ಮೇಲೆ ಪ್ರಶ್ನೆ ಮಾಡಿರುವ ಹೈಕೋರ್ಟ್‌ ‘ಒಬ್ಬ ಸಂಸದರಾಗಿ ಮಾತನಾಡುವ ರೀತಿಯೇ ಇದು?’ ಎಂದು ಕೇಳಿದೆ.

‘ಅರ್ಜಿದಾರರು (ರನೌತ್‌) ಹೇಳಿದ್ದನ್ನು ನಾವು ಸಹ ಒಪ್ಪುವುದಿಲ್ಲ. ಆದರೆ ಮಾತನಾಡುವ ರೀತಿಯೇ ಇದು? ನಾವೂ ಮಹಾರಾಷ್ಟ್ರದವರು. ನಾವೆಲ್ಲರೂ ಹೆಮ್ಮೆಯ ಮಹಾರಾಷ್ಟ್ರದವರು. ಆದರೆ ನಾವು ಹೋಗಿ ಯಾರದೋ ಮನೆಯನ್ನು ಒಡೆಯುವುದಿಲ್ಲ. ಇದು ಪ್ರತಿಕ್ರಿಯಿಸುವ ಮಾರ್ಗವೇ? ನಿಮಗೆ ಕರುಣೆ ಇಲ್ಲವೇ?’ ಎಂದು ನ್ಯಾಯಮೂರ್ತಿಗಳಾದ ಎಸ್. ಜೆ. ಕಥವಲ್ಲಾ ಮತ್ತು ಆರ್. ಐ. ಚಾಗ್ಲಾ ಅವರ ವಿಭಾಗೀಯ ಪೀಠ ಪ್ರಶ್ನೆ ಮಾಡಿತು. ‌

ಇದಕ್ಕೂ ಮುನ್ನ ಮಂಗಳವಾರ ನಡೆದ ವಿಚಾರಣೆ ವೇಳೆ ರಾವುತ್‌ ಅಫಿಡವಿಟ್ ಸಲ್ಲಿಸಿದ್ದರು. ಅದರಲ್ಲಿ, ತಾವು ರನೌತ್‌ಗೆ ಬೆದರಿಕೆ ಹಾಕಿಲ್ಲ ಎಂದು ತಿಳಿಸಿದ್ದರು. ಅಲ್ಲದೆ, ಅರ್ಜಿದಾರರು (ರನೌತ್‌) ವ್ಯಾಖ್ಯಾನಿಸುತ್ತಿರುವ ರೀತಿಯಲ್ಲಿ ನಾನು ಹೇಳಿಕೆ ನೀಡಿಲ್ಲ ಎಂದು ಅವರು ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಕಂಗನಾ ಬಗ್ಗೆ ಸಂದರ್ಶನದಲ್ಲಿ ಮಾತಾಡಿರುವುದಾಗಿಯಾದರೂ ರಾವುತ್‌ ಈಗ ಒಪ್ಪಿಕೊಂಡಿದ್ದಾರೆ ಎಂದು ಹೇಳಿತು. ಯಾಕೆಂದರೆ, ರನೌತ್‌‌ ವಿರುದ್ಧ ರಾವುತ್‌ ಏನನ್ನೂ ಮಾತನಾಡಿಲ್ಲ ಎಂದು ಇದಕ್ಕೂ ಹಿಂದೆ ಅವರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದರು.

ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ರಾವುತ್‌ ಅವರು ನಟಿ ಕಂಗನಾ ರನೌತ್‌ ಅವರ ಬಂಗಲೆ ಧ್ವಂಸಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು ಎಂದು ಆರೋಪಿಸಲಾಗಿದೆ. ‘ಕಾನೂನು ಎಂದರೇನು? ಅದನ್ನು ಕೆಡವುತ್ತೇವೆ ( ವಾಟ್‌ ಈಸ್‌ ಲಾ? ಉಖಾಡ್‌ ದೇಂಗೆ)’ ಎಂದು ಹೇಳಿದ್ದರು.

‘ನೀವು ಸಂಸದರು. ನಿಮಗೆ ಕಾನೂನಿನ ಬಗ್ಗೆ ಗೌರವವಿಲ್ಲವೇ? ಕಾನೂನು ಎಂದರೇನು ಎಂದು ಕೇಳುತ್ತೀರಾ ನೀವು? ಎಂದು ನ್ಯಾಯಪೀಠ ಪ್ರಶ್ನೆ ಮಾಡಿತು.

ನಟಿ ಕಂಗನಾ ರನೌತ್‌ ಅವರ ಬಂಗಲೆ ಧ್ವಂಸ ಕಾರ್ಯಕ್ಕೆ ಈಗಾಗಲೇ ತಡೆ ನೀಡಿರುವ ಹೈಕೋರ್ಟ್‌ ಅರ್ಜಿಯ ಅಂತಿಮ ಹಂತದ ವಿಚಾರಣೆ ನಡೆಸುತ್ತಿದೆ. ತಮ್ಮ ಬಂಗಲೆ ವಿರುದ್ಧ ಅಕ್ರಮ ಕಾರ್ಯಚರಣೆ ನಡೆದಿದ್ದು, ₹2 ಕೋಟಿ ಪರಿಹಾರ ನೀಡಬೇಕು ಎಂದು ಕೋರಿ ಕಂಗನಾ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು