ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗುಂಡಿ: ಎಂಜಿನಿಯರ್‌ ಜೈಲಿಗೆ ಕಳಿಸಿದರೆ ಬುದ್ದಿ ಬರಲಿದೆ- ಹೈಕೋರ್ಟ್‌ ಕಿಡಿ

Last Updated 27 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ ಮುಚ್ಚಲು ವಿಫಲವಾಗಿರುವ ಪಾಲಿಕೆಯ ಎಂಜಿನಿಯರ್‌ಗಳನ್ನು ಜೈಲಿಗೆ ಕಳಿಸಿದರೆ ಬುದ್ಧಿ ಬರುತ್ತದೆ‘ ಎಂದು ಹೈಕೋರ್ಟ್‌ ಗುರುವಾರ ಕಠಿಣಎಚ್ಚರಿಕೆ ನೀಡಿದೆ.

ಈ ಕುರಿತಂತೆಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಫೆಬ್ರುವರಿ 7ಕ್ಕೆ ಪಾಲಿಕೆಯ ಮುಖ್ಯ ಎಂಜಿನಿಯರ್ ಕೋರ್ಟ್‌ಗೆ ಖುದ್ದು ಹಾಜರಾಗಬೇಕು ಮತ್ತು ಗುಂಡಿ ಮುಚ್ಚುವ ಬಗ್ಗೆ ಹೊಸ ಪ್ರಮಾಣಪತ್ರ ಸಲ್ಲಿಸಬೇಕು’ ಎಂದು ತಾಕೀತು ಮಾಡಿದೆ.

‘ಸಾಕಷ್ಟು ಸಮಯ ನೀಡಿದರೂ ತೃಪ್ತಿಕರ ಕೆಲಸ ನಡೆದಿಲ್ಲ. ಬೆಂಗಳೂರಿನ ರಸ್ತೆಗಳ ನಿರ್ವಹಣೆಯಲ್ಲಿ ಪಾಲಿಕೆ ವಿಫಲವಾಗಿದೆ. ಆದ್ದರಿಂದ, ಈ ಹೊಣೆಯನ್ನು ಬೇರೆ ಏಜೆನ್ಸಿಗೆ ನೀಡಿ ಎಂದು ಸರ್ಕಾರಕ್ಕೆ ಆದೇಶಿಸಬೇಕಾಗುತ್ತದೆ’ ಎಂದು ಬಿಬಿಎಂಪಿಗೆ ಎಚ್ಚರಿಸಿದೆ.

‘ಪಾಲಿಕೆ ನೀಡಿರುವ ಮಾಹಿತಿಯಂತೆ 30 ಕಿ.ಮೀ ಉದ್ದದ ಪ್ರಮುಖ ರಸ್ತೆಗಳು ಮತ್ತು 482 ಕಿ.ಮೀ ಉಪ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ. ಇದನ್ನು ಅಳೆಯಲು ಯಾವ ತಂತ್ರಜ್ಞಾನ ಬಳಸುತ್ತಿದ್ದೀರಿ? ಯಾವ ತಜ್ಞರ ಸಲಹೆ ಪಡೆಯಲಾಗುತ್ತಿದೆ ಎಂದು ಬಗ್ಗೆಯೂ ವಿವರ ಇಲ್ಲ. ಇಂತಹ ವರದಿಯನ್ನು ಕೋರ್ಟ್‌ ಒಪ್ಪಲಾಗದು‘ ಎಂದು ಬಿಬಿಎಂಪಿ ನೀಡಿದ ವರದಿಯನ್ನು ನ್ಯಾಯಪೀಠ ಸಾರಾಸಗಟಾಗಿ ತಿರಸ್ಕರಿಸಿದೆ.

‘ಇವತ್ತು ರಸ್ತೆ ರಿಪೇರಿ ಮಾಡಿದರೆ ನಾಳೆ ಪುನಃ ಅಗೆಯಲಾಗುತ್ತದೆ. ಇದರಿಂದ ಪಾಲಿಕೆ ಮತ್ತು ಇತರೆ ನಗರಾಡಾಳಿತ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲ ಎಂದು ಕಾಣುತ್ತದೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

‘ಪಾಲಿಕೆ ಅನುಮತಿ ಇಲ್ಲದೆ ರಸ್ತೆ ಅಗೆಯುವ ಸಂಸ್ಥೆಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ, ಎಷ್ಟು ದಂಡ ವಿಧಿಸಿದ್ದೀರಿ, ಎಷ್ಟು ಎಫ್‌ಐರ್ ದಾಖಲಿಸಿದ್ದೀರಿ‘ ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿರುವ ನ್ಯಾಯಪೀಠ, ‘ಬಿಬಿಎಂಪಿ, ಬೆಸ್ಕಾಂ, ಜಿಐಎಎಲ್, ಜಲಮಂಡಳಿಗಳು ಅನುಮತಿ ಪಡೆದುಕಾಮಗಾರಿಗೆ ರಸ್ತೆ ಅಗೆಯಲಾಗುತ್ತಿದೆಯೇ, ಅವುಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಂದಿನ ವಿಚಾರಣೆ ವೇಳೆ ವಿವರ ನೀಡಿ’ ಎಂದು ಪೀಠ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT