ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್‌ ಆತ್ಮಹತ್ಯೆ ಯತ್ನ: ಸಂಶಯಗಳ ಹುತ್ತ

Last Updated 28 ನವೆಂಬರ್ 2020, 18:06 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌.ಸಂತೋಷ್‌ ಅವರ ಆತ್ಮಹತ್ಯೆ ಯತ್ನವು ‘ರಾಜಕೀಯ ಕಿಡಿ’ ಎಬ್ಬಿಸುವ ಲಕ್ಷಣಗಳು ಕಂಡು ಬಂದಿದ್ದು, ಈ ಕೃತ್ಯದ ಹಿಂದಿನ ಕಾರಣ ಗಳ ಬಗ್ಗೆ ರಾಜಕೀಯ ವಲಯದಲ್ಲಿ ವಿಭಿನ್ನ ಚರ್ಚೆಗಳು ಆರಂಭವಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹತ್ತಿರದ ಸಂಬಂಧಿಯೂ ಆಗಿರುವ ಸಂತೋಷ್ ಅವರನ್ನು ‘ಪ್ರಭಾವಲಯ’ ದಿಂದ ದೂರವಿಡಲಾಗಿತ್ತು. ರಾಜಕೀಯ ವಾಗಿಯೂ ಮೂಲೆ ಗುಂಪು ಮಾಡುವ ಯತ್ನ ನಡೆದಿತ್ತು. ಇದರಿಂದ ಹತಾಶರಾದ ಸಂತೋಷ್‌ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರೆ ಅಥವಾ ರಾಜಕೀಯ ಒಳಸುಳಿಗಳು ಇವೆಯೆ ಎಂಬ ಚರ್ಚೆ ಬಿಜೆಪಿಹಾಗೂ ಸಾರ್ವಜನಿಕ ವಲಯದಲ್ಲಿ ನಡೆದಿದೆ.

‘ನನ್ನ ಪತಿ ಬೇಸರವಾಗಿದ್ದರು...’
‘ರಾಜಕೀಯ ಏರುಪೇರಿನಿಂದಾಗಿ ನನ್ನ ಪತಿ ಬೇಸರವಾಗಿದ್ದರು’ ಎಂದುಎನ್‌.ಆರ್‌.ಸಂತೋಷ್‌ ಪತ್ನಿ ಜಾಹ್ನವಿ ಹೇಳಿದ್ದಾರೆ.

ಎಂ.ಎಸ್‌.ರಾಮಯ್ಯ ಆಸ್ಪತ್ರೆ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಿನ್ನೆ ಸಂಜೆ ಹೊರಗೆ ಹೋಗಿದ್ದರು. ರಾತ್ರಿ 7 ಗಂಟೆಗೆ ಮನೆಗೆ ಬಂದು ಓದಲು ಹೋಗುತ್ತೇನೆ ಎಂದು ಮಹಡಿಗೆ ಹೋದರು. ಅಡುಗೆ ಏನು ಮಾಡಲಿ ಎಂದು ಕೇಳಲು ಹೋದಾಗಲೂ ಅವರು ಬೇಜಾರದಲ್ಲಿದ್ದರು. ಏನೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ’ ಎಂದು ತಿಳಿಸಿದರು.

‘ಸ್ವಲ್ಪ ಹೊತ್ತಿನಲ್ಲೇ ಪ್ರಜ್ಞೆ ಕಳೆದುಕೊಂಡರು. ತಕ್ಷಣವೇ ರಾಮಯ್ಯ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದೆವು. ಕೌಟುಂಬಿಕವಾಗಿ ನಾವು ಚೆನ್ನಾಗಿಯೇ ಇದ್ದೇವೆ. ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ’ ಎಂದು ಜಾಹ್ನವಿ ಹೇಳಿದ್ದಾರೆ.

‘ನಿದ್ದೆ ಮಾತ್ರೆ ಸೇವಿಸಿದ್ದರಿಂದ ಪ್ರಜ್ಞೆ ತಪ್ಪಿದೆ. ಸರಿ ಹೋಗುತ್ತೆ, ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ವಿವರಿಸಿದರು.

ಯಾರು ಈ ಸಂತೋಷ್‌: ಇವರು ಯಡಿಯೂರಪ್ಪ ಅವರ ಅಕ್ಕನ ಮೊಮ್ಮಗ. ಎಬಿವಿಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿ ಇದ್ದರು. ಯಡಿಯೂರಪ್ಪ ಆಪ್ತ ಸಹಾಯಕ ಸ್ವಾಮಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೋದ ಬಳಿಕ ಸಂತೋಷ್‌ ಆಪ್ತ ಸಹಾಯಕರಾದರು. ಬಿಜೆಪಿ ತೊರೆದು ಕೆಜೆಪಿ ಮಾಡಿದಾಗಲೂ ಅವರ ಜತೆಗೆ ಇದ್ದರು.

ಬಿಜೆಪಿಯ ಇನ್ನೊಬ್ಬ ಹಿರಿಯ ಮುಖಂಡ ಕೆ.ಎಸ್‌.ಈಶ್ವರಪ್ಪ ಅವರು ಸಹಾಯಕ ವಿನಯ್‌ ಎಂಬುವರನ್ನು ಅಪಹರಣ ಮಾಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಸುದ್ದಿ ಮಾಡಿದ ಸಂತೋಷ್‌, ಆಪರೇಷನ್‌ ಕಮಲದ ಸಂದರ್ಭದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ತೊರೆದ ಶಾಸಕರನ್ನು ವಿಮಾನದ ಮೂಲಕ ಮುಂಬೈ ಕಳಿಸುವ ಕಾಯಕದಲ್ಲಿ ಮತ್ತೊಮ್ಮೆ ಸುದ್ದಿಯಾದರು. ಆಗ ಅನರ್ಹರಾಗಿದ್ದ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಿದ್ದು ಇವರೇ ಎಂದು ಹೇಳಲಾಗಿದೆ.

12 ನಿದ್ರೆ ಮಾತ್ರೆ ನುಂಗಿದ್ದ ಸಂತೋಷ್
ತಮ್ಮ ಮನೆಯಲ್ಲೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ದ್ದಾರೆ ಎನ್ನಲಾದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಆರ್. ಸಂತೋಷ್ (31) ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ಶುಕ್ರವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದ ಸಂತೋಷ್ ಅವರನ್ನುಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದರು. ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಡಾಲರ್ಸ್‌ ಕಾಲೊನಿ ನಿವಾಸಿ ಸಂತೋಷ್, ತಮ್ಮ ಮನೆಯಲ್ಲೇ 12 ನಿದ್ರೆ ಮಾತ್ರೆಗಳನ್ನು ನುಂಗಿ ಪ್ರಜ್ಞೆ ಕಳೆದುಕೊಂಡಿದ್ದರು’ ಎಂದೂ ತಿಳಿಸಿದರು.

‘ತೀವ್ರ ನಿಗಾ ಘಟಕದಲ್ಲಿ ಸಂತೋಷ್‌ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯಕ್ಕೆ ಮಾತನಾಡುವ ಸ್ಥಿತಿಯಲ್ಲಿ ಅವರಿಲ್ಲ. ಹೀಗಾಗಿ, ಹೇಳಿಕೆ ಪಡೆ ಯಲು ಸಾಧ್ಯವಾಗಿಲ್ಲ. 24 ಗಂಟೆ ಬಳಿಕವೇ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡ ಲಾಗುವುದೆಂದು ವೈದ್ಯರು ತಿಳಿಸಿದ್ದಾರೆ’ ಎಂದೂ ಮಾಹಿತಿ ನೀಡಿದರು.

‘ಯಾವುದೋ ಕಾರಣಕ್ಕೆ ಸಂತೋಷ್ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮ ಹತ್ಯೆಗೆ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ರಾಜಕೀಯ ಅಥವಾ ಕೌಟುಂಬಿಕ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿರುವ ಅನುಮಾನವಿದೆ. ತನಿಖೆ ಮುಂದುವರಿದಿದೆ’ ಎಂದರು.

‘ಡಿಕೆಶಿಯದು ಮುಟ್ಠಾಳತನದ ಹೇಳಿಕೆ’
ಬೆಳಗಾವಿ: ‘
ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವುದಕ್ಕೆ ವಿಡಿಯೊವೊಂದು ಕಾರಣ ಎಂಬ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ. ಶಿವಕುಮಾರ್ ಹೇಳಿಕೆ ಮುಟ್ಠಾಳತನದ್ದು’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದರು.

ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜನರ ದಿಕ್ಕು ತಪ್ಪಿಸುವ ಹೇಳಿಕೆಯನ್ನು ಅವರು ನೀಡಿದ್ದಾರೆ. ಅಧಿಕಾರ ಕಳೆದುಕೊಂಡಿರುವ ಅವರು ಹತಾಶರಾಗಿದ್ದಾರೆ. ಹೀಗಾಗಿ ದಿನಕ್ಕೊಂಂದು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಆರೋಪ ಮಾಡಿದರೂ ಅದಕ್ಕೆ ದಾಖಲೆಗಳಿರಬೇಕು. ಅದ್ಯಾವುದೋ ವಿಡಿಯೊ ಇರುವುದು ಗೊತ್ತಾಗಿದ್ದರೆ ಮೊದಲೇ ಯಾಕೆ ಹೇಳಲಿಲ್ಲ? ಹೇಳಿದ್ದರೆ ಆತ ಆತ್ಮಹತ್ಯೆಗೆ ಯತ್ನಿಸುವುದನ್ನುತಡೆಯಬಹುದಿತ್ತು. ಸಾಯಲಿ ಅಂತ ಕಾಯುತ್ತಿದ್ದರಾ? ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸಂತೋಷ್‌ಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವಿಧಾನಪರಿಷತ್ ಸದಸ್ಯರು, ಸಚಿವರು ಯಾರು ಎನ್ನುವುದನ್ನು ಬಹಿರಂಗಪಡಿಸಲಿ’ ಎಂದು ಸವಾಲೆಸಿದರು.

ವಿಡಿಯೊ ಕೊಡಲಿ: ಬೊಮ್ಮಾಯಿ
ರಾಯಚೂರು:
‘ಸಂತೋಷ್‌ ಆತ್ಮಹತ್ಯೆ ಯತ್ನಕ್ಕೆ ವಿಡಿಯೊ ಕಾರಣ ಎಂದು ಹೇಳಿರುವ ಡಿ.ಕೆ.ಶಿವಕುಮಾರ್ ಅವರು ಆ ವಿಡಿಯೊವನ್ನು ನೀಡಲಿ. ಆ ಬಗ್ಗೆಯೂ ತನಿಖೆ ನಡೆಸಲಾಗುವುದು' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ಸಂತೋಷ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುವುದು’ ಎಂದು ಇಲ್ಲಿ ಪ್ರತಿಕ್ರಿಯಿಸಿದರು.

ಯಾರು ಈ ಸಂತೋಷ್‌?
ಯಡಿಯೂರಪ್ಪಅಕ್ಕನ ಮೊಮ್ಮಗನಾದ ಸಂತೋಷ್, ಎಬಿವಿಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿದ್ದರು. ಯಡಿಯೂರಪ್ಪ ಆಪ್ತ ಸಹಾಯಕ ಕಾ‍.ಪು. ಸಿದ್ದಲಿಂಗಸ್ವಾಮಿ 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ರಾಜಕೀಯಕ್ಕೆ ಇಳಿದರು. ಈ ಬಳಿಕ ಸಂತೋಷ್‌ ಆಪ್ತ ಸಹಾಯಕರಾದರು.

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಪತನದ ಸಂದರ್ಭ ಮಹತ್ವದ ಪಾತ್ರವಹಿಸಿದ್ದರು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ತೊರೆದ ಶಾಸಕರನ್ನು ವಿಮಾನದ ಮೂಲಕ ಮುಂಬೈ ಕಳಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾದರು. ಆಗ ಅನರ್ಹರಾಗಿದ್ದ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಿದ್ದು ಇವರೇ ಎಂದು ಹೇಳಲಾಗಿದೆ.

ಆತ್ಮಹತ್ಯೆಗೆ ಕೇಳಿಬರುತ್ತಿರುವ ಕಾರಣಗಳು
*
ಮುಖ್ಯಮಂತ್ರಿ ಕುಟುಂಬಕ್ಕೆ ಸಂಬಂಧಿಸಿದ ‘ಖಾಸಗಿ’ ದೃಶ್ಯಾವಳಿಗಳ ವಿಡಿಯೊ ಸಿ.ಡಿ ಹಾಗೂ ಕೆಲವು ಚಿತ್ರಗಳು ಅವರ ಬಳಿ ಇತ್ತು. ವಿಧಾನಪರಿಷತ್‌ನ ಸದಸ್ಯರೊಬ್ಬರು ಮತ್ತು ಸಚಿವರೊಬ್ಬರ ಮೂಲಕ ಅದನ್ನು ಅವರು ಪಕ್ಷದ ವರಿಷ್ಠರಿಗೆ ತಲುಪಿಸಿದ್ದಾರೆ. ಇದಾದ ಬಳಿಕ, ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿ ಕೊಂಡಿದ್ದ ವರಿಷ್ಠರು, ಈ ‘ಪ್ರಕರಣ’ದ ಬಗ್ಗೆ ಪ್ರಸ್ತಾಪಿಸಿದ್ದರು ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಸಂತೋಷ್‌ ಮೇಲೆ ಒತ್ತಡ ಅಥವಾ ಬೆದರಿಕೆ ಬಂದಿದ್ದು, ಇದರಿಂದ ಹೆದರಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದೂ ಹೇಳಲಾಗುತ್ತಿದೆ. ಇದೇ ಮಾದರಿಯ ವಿಡಿಯೊ ವಿಚಾರವಾಗಿಯೇ ಹಿಂದೆ ಕೆ.ಎಸ್‌.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣಕ್ಕೆ ಅವರು ಸಂಚು ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

*ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿ, ಅಧಿಕಾರಿಗಳಿಗೆ ದಬಾವಣೆ ಮಾಡಿ ಬೇಕಾದ ಕೆಲಸ ಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಅರಸೀ ಕೆರೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ಅವರು ಅಲ್ಲಿನ ವಿವಿಧ ಇಲಾಖೆಗಳ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದರು. ಪಕ್ಷದ ವ್ಯವಹಾರಗಳಲ್ಲಿ ಕೈಹಾಕುತ್ತಿದ್ದ ಬಗ್ಗೆ ಮುಖ್ಯಮಂತ್ರಿಯವರಿಗೆ ದೂರುಗಳು ಬಂದಿ ದ್ದವು.ಮಲ್ಲೇಶ್ವರ ಪಕ್ಷದ ಕಚೇರಿ ಮುಂದೆಯೂ ಅರಸೀಕೆರೆ ಬಿಜೆಪಿ ಕಾರ್ಯಕರ್ತರು ಸಂತೋಷ್‌ ಹಸ್ತಕ್ಷೇಪದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರಾಜ್ಯ ಮಟ್ಟದ ಅಧಿಕಾರಿಗಳೂ ದೂರು ನೀಡಿದ್ದರಿಂದ ಹುದ್ದೆಗೆ ನ.26ರೊಳಗೆ ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಸೂಚಿಸಿದ್ದರು ಎಂದು ಹೇಳಲಾಗಿದೆ.

*ಅರಸೀಕೆರೆಯಲ್ಲಿ ರಾಜಕೀಯ ನೆಲೆ ಕಂಡು ಕೊಳ್ಳಲು ಸಂತೋಷ ಯತ್ನಿಸಿದ್ದರು. ಆದರೆ, ಈ ಕ್ಷೇತ್ರದಲ್ಲಿ ಮರಿಸ್ವಾಮಿ ಕಣಕ್ಕೆ ಇಳಿಸಲು ವಿಜಯೇಂದ್ರ ತಯಾರಿ ನಡೆಸಿದ್ದರು. ತಾವು ರಾಜಕೀಯವಾಗಿ ಮೂಲೆ ಗುಂಪಾಗಿ ಅಪ್ರಸ್ತುರಾಗುತ್ತಿರುವುದರಿಂದ ಖಿನ್ನತೆಗೆ ಒಳಗಾಗಿ ಮತ್ತೆ ಯಡಿಯೂರಪ್ಪ ಅವರ ಅನುಕಂಪ ಗಿಟ್ಟಿಸಲು ಈ ಕೃತ್ಯಕ್ಕೆ ಕೈಹಾಕಿರಲೂಬಹುದು ಎನ್ನಲಾಗಿದೆ.

*ಪತ್ನಿಯ ಮೇಲೆ ದೌರ್ಜನ್ಯ ನಡೆಸಿದ ಆರೋಪವೂಅವರ ಮೇಲಿದ್ದು, ಕೌಟುಂಬಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು. ವಿಚ್ಛೇದನಕ್ಕೆ ಮುಂದಾಗಿದ್ದ ವೇಳೆಯಲ್ಲಿ ಯಡಿಯೂರಪ್ಪನವರೇ ಕರೆದು ಬುದ್ದಿ ಹೇಳಿದ್ದರು. ಈ ಸಮಸ್ಯೆಯೂ ಸಂತೋಷ್‌ ಅವರನ್ನು ಕಾಡಿರಬಹುದು ಎಂದೂ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT