ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಸಿದರೆ ತಪ್ಪೇನಿದೆ: ಬಸವರಾಜ ಬೊಮ್ಮಾಯಿ

Last Updated 14 ನವೆಂಬರ್ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು/ಕಲಬುರಗಿ: ‘ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಸಿದರೆ ತಪ್ಪೇನಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಕಲಬುರಗಿ ತಾಲ್ಲೂಕಿನ ಮಡಿಯಾಳ ತಾಂಡಾದಲ್ಲಿ ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿವೇಕ’ ಶಾಲಾ ಕೊಠಡಿಗಳ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಸ್ವಾಮಿ ವಿವೇಕಾನಂದರು ಸನ್ಯಾಸಿ. ಜಗತ್ತಿಗೆ ವಿವೇಕ ನೀಡಿದವರು. ಅವರನ್ನು ಪ್ರೇರಣೆಯಾಗಿ ಇಟ್ಟುಕೊಂಡು ಉತ್ತಮ ವಾತಾವರಣ ಕಲ್ಪಿಸಲು ಈ ಪರಿಕಲ್ಪನೆ ರೂಪಿಸಲಾಗಿದೆ’ ಎಂದರು.

ಕೇಸರಿ ಬಣ್ಣ ಬಳಿಯಲು ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ ಎಂಬ ಕಾಂಗ್ರೆಸ್, ಜೆಡಿಎಸ್‌ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ,‘ಎಲ್ಲದರಲ್ಲೂ ರಾಜಕಾರಣ ಮಾಡುವುದು ಬಹಳ ಕೆಳ ಮಟ್ಟದ್ದು. ಕೇಸರಿ ಬಣ್ಣ ಭಾರತದ ಧ್ವಜದಲ್ಲಿಯೇ ಇದೆ. ಕೇಸರಿ ಕಂಡರೆ ಏಕೆ ಸಿಟ್ಟು? ಸ್ವಾಮಿ ವಿವೇಕಾನಂದರು ತೊಟ್ಟಿದ್ದು ಕೇಸರಿ ಬಣ್ಣದ ಕಾವಿ. ಕೇಸರಿ ಎಂದರೆ ಕೆಲವರ ಕಣ್ಣು ಕೆಂಪಗಾಗುತ್ತದೆ. ವಿವೇಕ ಎಂದರೆ ಎಲ್ಲರಿಗೂ ಜ್ಞಾನ. ಅದನ್ನುಕಲಿಯಲಿ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಏನೇ ಪ್ರಗತಿ ಮಾಡಿದರೂ ವಿವಾದ ಸೃಷ್ಟಿ ಮಾಡುವ ಚಟ ಬಿದ್ದಿದೆ. ಪ್ರಗತಿ ಆಗಲು ಅವರಿಗೆ (ವಿರೋಧ ಪಕ್ಷಗಳು) ಆಸಕ್ತಿ ಇಲ್ಲ. ಇದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಶಿಕ್ಷಣದ ಕೇಸರೀಕರಣ ಆಗುತ್ತಿಲ್ಲ. ಬದಲಾಗಿ ಮಕ್ಕಳಲ್ಲಿ ವಿವೇಕ ಮೂಡಿಸುವುದಾಗಿದೆ.ವಿವೇಕರ ಹೆಸರಿನಲ್ಲಿ ಕೊಠಡಿ ನಿರ್ಮಾಣ ಮಾಡುವುದು ಕೇಸರೀಕರಣವಾಗುವುದಿಲ್ಲ’ ಎಂದೂಹೇಳಿದರು.

7,600 ಕೊಠಡಿ ನಿರ್ಮಾಣ: ‘ಈ ಯೋಜನೆಯಡಿ ಪ್ರಸಕ್ತ ವರ್ಷ ಹೊಸತಾಗಿ 7,600 ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ 2 ಸಾವಿರ ಕೊಠಡಿಗಳು ಕಲ್ಯಾಣಕರ್ನಾಟಕದಲ್ಲೇ ನಿರ್ಮಾಣವಾಗಲಿವೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಮೂರು ವರ್ಷ ನಿರಂತರವಾಗಿ ಕೊಠಡಿಗಳ ನಿರ್ಮಾಣ ಮಾಡಿದರೆ ಮೂಲಸೌಕರ್ಯ ಕೊರತೆ ನೀಗುತ್ತದೆ. ಆ 15ರೊಳಗೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ದುರಸ್ತಿಗೆ ತೀರ್ಮಾನಿಸಲಾಗಿದ್ದು, ಇದಕ್ಕಾಗಿ ₹ 250 ಕೋಟಿ ನೀಡಲಾಗಿದೆ. ಶಿಕ್ಷಣದ ಕೊರತೆ ಬಹಳ ದಿನಗಳಿಂದ ಇತ್ತು. ‌1956ರ ಕರ್ನಾಟಕ ಏಕೀಕರಣವಾದ ಬಳಿಕ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಇಷ್ಟೊಂದು ಪ್ರಮಾಣದ ಶಾಲಾ ಕೊಠಡಿಗಳ ನಿರ್ಮಾಣವಾಗುತ್ತಿವೆ. ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ನಾಲ್ಕು ಸಾವಿರ ಕೊಠಡಿಗಳನ್ನಷ್ಟೇ ನಿರ್ಮಾಣ ಮಾಡಿತ್ತು’ ಎಂದು ಹೇಳಿದರು.

‘ನಮ್ಮ ಸರ್ಕಾರ ಬರೀ ಆದೇಶಗಳನ್ನಷ್ಟೇ ಹೊರಡಿಸಿಲ್ಲ. ಬದಲಾಗಿ, ಅವುಗಳ ಅನುಷ್ಠಾನಕ್ಕೆ ನಿರಂತರ ನಿಗಾ ವಹಿಸಲಾಗಿದ್ದು, ಸಕಾಲಕ್ಕೆ ಹಣವನ್ನೂ ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳಿಗೆ ಕೆಲಸ ಹಚ್ಚಿದ್ದೇವೆ’ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.‌ನಾಗೇಶ್ ಮಾತನಾಡಿ, ‘ಮುಂದಿನ ವಾರದಲ್ಲಿ 1–1 ಶಿಕ್ಷಕರ ಆಯ್ಕೆ ಪ್ರಕ್ರಿಯೆ ಜರುಗಲಿದ್ದು, ಡಿಸೆಂಬರ್ ತಿಂಗಳಿಂದ ಹೊಸದಾಗಿ ನೇಮಕಗೊಂಡ ಶಿಕ್ಷಕರು ತರಗತಿಗಳನ್ನು ನಡೆಸಲಿದ್ದಾರೆ. 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಸಂದರ್ಭದಲ್ಲಿ ಅಷ್ಟು ಸಂಖ್ಯೆಯ ಶಿಕ್ಷಕರು ಆಯ್ಕೆಯಾಗದಿದ್ದರೆ, ಮತ್ತೆ ನೇಮಕ ಪ್ರಕ್ರಿಯೆ ನಡೆಸಲಾಗುವುದು’ ಎಂದು ತಿಳಿಸಿದರು.

ಮತ್ತೆ ಕಾಣಿಸಿದ ಪೇಸಿಎಂ ಪೋಸ್ಟರ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರಕ್ಕೆ ಭೇಟಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಕೆಲವರು ಕಲಬುರಗಿಯ ಸಂಗಮೇಶ್ವರ ಕಾಲೊನಿಯಲ್ಲಿ ಪೇಸಿಎಂ ಭಿತ್ತಿಚಿತ್ರಗಳನ್ನು ಅಂಟಿಸಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಮಹಾನಗರ ಪಾಲಿಕೆ ಹಾಗೂ ಪೊಲೀಸರು ಅವುಗಳನ್ನು ತೆರವುಗೊಳಿಸಿದರು.

ಈ ಬಗ್ಗೆ ಬ್ರಹ್ಮಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.

‘ಕೇಸರೀಕರಣದ ಹುನ್ನಾರ’
‘ಶಾಲೆಗಳಲ್ಲಿ ಕೊಠಡಿಗಳಿಲ್ಲ ಇಲ್ಲ. ಪಠ್ಯಪುಸ್ತಕ ನೀಡಿಲ್ಲ. ಮಧ್ಯಾಹ್ನದ ಬಿಸಿಯೂಟವಿಲ್ಲ. ಶಿಕ್ಷಕರೂ ಇಲ್ಲ. ಆ ಬಗ್ಗೆ ಗಮನಹರಿಸುವ ಬದಲು ಶಾಲೆಗಳಿಗೆ ಬಿಜೆಪಿ ಕೇಸರಿ ಬಣ್ಣ ಬಳಿಯಲು ಹೊರಟಿದೆ. ಆ ಮೂಲಕ, ಶಾಲೆಗಳನ್ನೂ ಕೇಸರೀಕರಣ ಮಾಡಲು ಮುಂದಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಟೀಕಿಸಿದರು.

‘ಕೇಸರಿ ಬಣ್ಣದ ಬಗ್ಗೆ ಕಾಂಗ್ರೆಸ್‌ಗೆ ಭಯ ಇಲ್ಲ, ಗೌರವ ಇದೆ. ಆದರೆ, ಮಕ್ಕಳ ಮನಸ್ಸಿನಲ್ಲಿ ಕೇಸರೀಕರಣ ತುಂಬುವ ಹುನ್ನಾರಕ್ಕೆ ಮಾತ್ರ ನಮ್ಮ ಆಕ್ಷೇಪ. ಕಳೆದ ಮೂರು ವರ್ಷಗಳಿಂದ ಬಿಜೆಪಿ ಇದೇ ಕೆಲಸ ಮಾಡುತ್ತಿದೆ. ಜವಾಬ್ದಾರಿಯುತವಾಗಿ ಮಕ್ಕಳಿಗೆ ಶಿಕ್ಷಣ ನೀಡುವುದು ಬಿಟ್ಟು, ಈ ಕೆಲಸಕ್ಕೆ ಹೊರಟಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದರು.

‘ವಿವೇಕ ಅಲ್ಲ, ಅವಿವೇಕ’
‘ಶಿಕ್ಷಣದ ವಿಚಾರದಲ್ಲಿ ಸರ್ಕಾರದ ಆದ್ಯತೆ ನೋಡಿದರೆ ಮಕ್ಕಳ ಭವಿಷ್ಯವನ್ನು ನಾಶ ಮಾಡಲು ಹೊರಟಂತಿದೆ. ಇದು, ವಿವೇಕ ಅಲ್ಲ, ಅವಿವೇಕದ ಪರಮಾವಧಿ’ ಎಂದು ಟೀಕಿಸಿದ ಕೆಪಿಸಿಸಿ ವಕ್ತಾರ ಪ್ರಿಯಾಂಕ್‌ ಖರ್ಗೆ, ‘ಸ್ವಾಮಿ ವಿವೇಕಾನಂದರ ಯೋಚನಾ ದೃಷ್ಟಿ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇಲ್ಲ‌. ಕೇಸರಿಯೇ ಯಾಕೆ ಬೇಕು? ಬೇಕಿದ್ದರೆ ತ್ರಿವರ್ಣಗಳನ್ನೂ ಕೊಠಡಿಗಳ ಗೋಡೆಗೆ ಬಳಿಯಿರಿ’ ಎಂದರು.

‘ಇದು ಬಣ್ಣದ ಪ್ರಶ್ನೆ ಅಲ್ಲ, ಮಕ್ಕಳ ಭವಿಷ್ಯದ ಪ್ರಶ್ನೆ. ಶಾಲೆಗಳಿಗೆ ಎಷ್ಟು ಮೂಲಸೌಕರ್ಯ ಒದಗಿಸಿದ್ದಾರೆ ಎನ್ನುವುದು ಮುಖ್ಯ. ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ಸರ್ಕಾರ ಯಾಕೆ ಆಸಕ್ತಿ ತೋರಿಸುತ್ತಿಲ್ಲ’ ಎಂದರು.

‘ಕೇಸರಿ ಬಿಜೆಪಿಯವರ ಗುತ್ತಿಗೆ ಅಲ್ಲ’
‘ಕೇಸರಿ ಬಣ್ಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಅದು ಅವರ (ಬಿಜೆಪಿಯವರ) ಗುತ್ತಿಗೆ ಅಲ್ಲ’ ಎಂದು ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಹೇಳಿದರು.

‘ದೇಶಕ್ಕೆ ಶಿಕ್ಷಣ ವ್ಯವಸ್ಥೆಗೆ ನೆಹರೂ ಹಾಕಿದ್ದ ವೈಜ್ಞಾನಿಕ ತಳಹದಿಯನ್ನು ಬಿಜೆಪಿಯವರು ಬುಡಮೇಲು ಮಾಡುತ್ತಿದ್ದಾರೆ. ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ’ವನ್ನು ನಮ್ಮ ಶಿಕ್ಷಣ ಸಚಿವರು ‌ಓದಬೇಕು. ಶೇ 14ರಷ್ಟಿದ್ದ ಸಾಕ್ಷರತೆಯನ್ನು ಶೇ 72ಕ್ಕೆ ತರಲು ನೆಹರೂ ಅವರು ಕಾರಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT