ಸ್ಯಾಂಟ್ರೊ ರವಿ ಯಾರು, ಏನು ಆತನ ಹಿನ್ನೆಲೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡಿರುವ ಸ್ಯಾಂಟ್ರೊ ರವಿ ಇತಿಹಾಸ ಕೆದಕಿದರೆ, ದೊಡ್ಡ ಕಥೆಯೇ ತೆರೆದುಕೊಳ್ಳುತ್ತದೆ. ಮಂಡ್ಯದ ಮಂಜುನಾಥ್, ವೇಶ್ಯಾವಾಟಿಕೆ ದಂಧೆ ಮೂಲಕ ‘ಸ್ಯಾಂಟ್ರೊ ರವಿ’ ಆಗಿ ಬೆಳೆದು, ಇಂದು ಹಲವು ರಾಜಕಾರಣಿಗಳ ಮೂಲಕ ವರ್ಗಾವಣೆ ದಂಧೆಯಲ್ಲಿ ಗುರುತಿಸಿಕೊಂಡು ಸುದ್ದಿಯಾಗಿದ್ದಾನೆ.
ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರೊಬ್ಬರ ಮಗನಾದ ಮಂಜುನಾಥ್, ಸಣ್ಣ ವಯಸ್ಸಿನಲ್ಲಿ ದಾರಿ ತಪ್ಪಿದ್ದ. ಅಪರಾಧ ಹಿನ್ನೆಲೆಯುಳ್ಳವರ ಜೊತೆ ಸೇರಿದ್ದ. ತಂದೆ ಅಕಾಲಿಕ ಮರಣವಾದ ನಂತರ, ಮಂಜುನಾಥ್ ಮತ್ತಷ್ಟು ದಾರಿ ತಪ್ಪಿದ್ದ.
ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಈತ, ಮಂಡ್ಯದಲ್ಲಿ ಕೆಲ ಮಹಿಳೆಯರ ಸಂಗ ಬೆಳೆಸಿದ್ದ. ಅವರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸಲಾರಂಭಿಸಿದ್ದ. ಗ್ರಾಹಕರನ್ನು ಪರಿಚಯಿಸಿಕೊಳ್ಳುತ್ತಿದ್ದ ಈತ, ಅವರು ಹೇಳಿದ ಸ್ಥಳಕ್ಕೆ ಹಾಗೂ ಸಮಯಕ್ಕೆ ಮಹಿಳೆಯರನ್ನು ಕರೆದೊಯ್ಯುತ್ತಿದ್ದ. ಇದಕ್ಕಾಗಿ ಈತ, ಸ್ಯಾಂಟ್ರೊ ಕಾರೊಂದನ್ನು ಖರೀದಿಸಿದ್ದ. ಈತನ ಕೃತ್ಯವನ್ನು ಪತ್ತೆ ಮಾಡಿದ್ದ ಮಂಡ್ಯದ ಪೊಲೀಸರು, ಮಂಜುನಾಥ್‌ನನ್ನು 2000ನೇ ವರ್ಷದಲ್ಲಿ ಬಂಧಿಸಿದ್ದರು. ಸ್ಯಾಂಟ್ರೊ ಕಾರು ಬಳಸಿ ರವಿ ಹೆಸರಿನಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದರಿಂದ ಈತನಿಗೆ, ಸ್ಯಾಂಟ್ರೊ ರವಿ ಹೆಸರು ಕೊಟ್ಟರು. ಅಂದಿನಿಂದ ಈತ, ಮಂಜುನಾಥ್ ಅಲಿಯಾಸ್ ‘ಸ್ಯಾಂಟ್ರೊ ರವಿ’ಯಾದ.
ಒಮ್ಮೆ ಸಿಕ್ಕಿಬಿದ್ದ ಈತನ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಇದು ಮಂಜುನಾಥ್‌ನ ವೇಶ್ಯಾವಾಟಿಕೆ ದಂಧೆಗೆ ಅಡ್ಡಿಯಾಯಿತು. ಅವಾಗಲೇ ಆತ, ಮಂಡ್ಯ ಬಿಟ್ಟು ಮೈಸೂರು ಸೇರಿದ್ದ. ಅಲ್ಲಿಯೇ ತನ್ನ ವೇಶ್ಯಾವಾಟಿಕೆ ಮುಂದುವರಿಸಿದ್ದ.
ಮಹಿಳೆಯರ ಜೊತೆಯಲ್ಲಿ ಹುಡುಗಿಯರನ್ನು ತನ್ನ ಗಾಳಕ್ಕೆ ಸಿಲುಕಿಸಿಕೊಂಡ. ಸಣ್ಣ–ಪುಟ್ಟ ಕೆಲಸ ಮಾಡುತ್ತಲೇ ತೆರೆಮರೆಯಲ್ಲಿ ವೇಶ್ಯಾವಾಟಿಕೆ ದಂಧೆಯ ವ್ಯಾಪ್ತಿ ಹೆಚ್ಚಿಸಿದ. ನಂತರ, ರಾಜಕಾರಣಿಗಳ ಪರಿಚಯವಾಯಿತು. ಅವರಿಗೂ ವೇಶ್ಯಾವಾಟಿಕೆ ಸೇವೆ ನೀಡಲಾರಂಭಿಸಿದ್ದ. ಅಂದಿನಿಂದಲೇ ಈತನಿಗೆ ರಾಜಕಾರಣಿಗಳು ಆಪ್ತರಾದರು. ಕೆಲ ರಾಜಕಾರಣಿಗಳು ಹೇಳಿದ ಕೂಡಲೇ, ಅವರ ವಿಳಾಸಕ್ಕೆ ಹುಡುಗಿಯರನ್ನು ಕರೆದುಕೊಂಡು ಹೋಗುತ್ತಿದ್ದನೆಂಬ ಮಾಹಿತಿ ಪೊಲೀಸ್ ವಲಯದಲ್ಲಿದೆ.
ಉದ್ಯೋಗ, ಹಣದ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ. ಇಷ್ಟವಿಲ್ಲದಿದ್ದರೂ ಕೆಲವರು ಈತನ ಬೆದರಿಕೆಗೆ ಹೆದರಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಯಾರಾದರೂ ಈತನನ್ನು ಪ್ರಶ್ನಿಸಿದರೆ, ರಾಜಕಾರಣಿಗಳನ್ನು ಬಳಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದ.
ಕೆಲ ಯುವತಿಯರಿಗೆ ಮತ್ತು ಬರುವ ಔಷಧಿ ಬೆರೆಸಿದ್ದ ಪಾನೀಯ ಕುಡಿಸಿ, ಅವರನ್ನು ನಗ್ನಗೊಳಿಸಿ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ. ನಂತರ, ಅದೇ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪವೂ ಈತನ ಮೇಲಿದೆ.
ಸದ್ಯ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇವುಗಳನ್ನೂ ಓದಿ
ಬೊಮ್ಮಾಯಿಗಾಗಲಿ, ಅವರ ಪುತ್ರನಿಗಾಗಲಿ ಸ್ಯಾಂಟ್ರೊ ರವಿ ಜತೆ ಸಂಬಂಧವಿಲ್ಲ: ಬಿಜೆಪಿ
ಸ್ಯಾಂಟ್ರೊ ರವಿ, ಕುಮಾರಸ್ವಾಮಿ ಸಂಬಂಧ ಯಾವ ರೀತಿಯದ್ದು ತಿಳಿಯಬೇಕಿದೆ: ಜ್ಞಾನೇಂದ್ರ
ಸಿ.ಟಿ.ರವಿ ನಾನು. ಸ್ಯಾಂಟ್ರೊ ರವಿ ಯಾರೋ ಗೊತ್ತಿಲ್ಲ: ಸಿ.ಟಿ.ರವಿ
ಸ್ಯಾಂಟ್ರೊ ರವಿ ಬಿಜೆಪಿಯ ಉತ್ಪನ್ನ: ಕಾಂಗ್ರೆಸ್ ವಕ್ತಾರ ಲಕ್ಷ್ಮಣ
ಸ್ಯಾಂಟ್ರೊ ರವಿ ಪ್ರಕರಣ:ಸಮಗ್ರ ತನಿಖೆಗೆ ಸೂಚನೆ: ಸಿ.ಎಂ
ಸ್ಯಾಂಟ್ರೊ ರವಿ ಪ್ರಕರಣ | ಗೃಹ ಸಚಿವರ ಮನೆಯಲ್ಲೇ ಹಣ ಎಣಿಕೆ: ಕುಮಾರಸ್ವಾಮಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.