ಭಾನುವಾರ, ಅಕ್ಟೋಬರ್ 24, 2021
21 °C

ಸಿದ್ದರಾಮಯ್ಯ ಯಾರು: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಚುನಾವಣೆಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ನಿರ್ಧರಿಸುವುದು ನಮ್ಮ ಪಕ್ಷದ ಆಂತರಿಕ ವಿಚಾರ. ಇಂತಹವರಿಗೇ ಟಿಕೆಟ್‌ ಕೊಡಿ ಎಂದು ಹೇಳಲು ಸಿದ್ದರಾಮಯ್ಯ ಯಾರು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

‘ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ’ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ನಮ್ಮ ಪಕ್ಷದ ನಿರ್ಧಾರ. ಅದರ ಉಸಾಬರಿ ಸಿದ್ದರಾಮಯ್ಯ ಅವರಿಗೆ ಏಕೆ’ ಎಂದು ಕೇಳಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮಾಜದವರಿಗೆ 20, ಮಹಿಳೆಯರಿಗೆ 20ರಿಂದ 25 ಟಿಕೆಟ್‌ ನೀಡುತ್ತೇವೆ. ಸಿದ್ದರಾಮಯ್ಯ ಅವರನ್ನು ಕೇಳಿ ನಾನು ಅಭ್ಯರ್ಥಿ ನಿರ್ಧರಿಸಬೇಕಾ? ಆ ರೀತಿ ಹೇಳಲು ಸಿದ್ದರಾಮಯ್ಯ ಯಾರು? ನಮ್ಮ ಪಕ್ಷದ ವಿಚಾರದಲ್ಲಿ ಅವರಿಗೇನು ಅಧಿಕಾರವಿದೆ? ಕಾಂಗ್ರೆಸ್‌, ಬಿಜೆಪಿಯ ದೊಣ್ಣೆ ನಾಯಕರನ್ನು ಕೇಳಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಕಾಂಗ್ರೆಸ್‌ಗೆ ಭವಿಷ್ಯವಿಲ್ಲ: ‘ಕಾಂಗ್ರೆಸ್‌ ಸಾಗುತ್ತಿರುವ ಹಾದಿಯನ್ನು ನೋಡಿದರೆ ಆ ಪಕ್ಷಕ್ಕೆ ರಾಜಕೀಯ ಭವಿಷ್ಯ ಉಳಿದಿಲ್ಲ ಎಂಬುದು ಮನವರಿಕೆಯಾಗುತ್ತದೆ. ಬಿಜೆಪಿಯವನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಯನ್ನು ಕಾಂಗ್ರೆಸ್‌ ಪಡೆಯುವುದು ಕಷ್ಟ. ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆಯೇ ಸ್ಪರ್ಧೆ ಇದರಲಿದೆ’ ಎಂದರು.

ಇದನ್ನೂ ಓದಿ: 

ಬಿಜೆಪಿ ಕೇವಲ ಹಣ ಹಂಚಿ ಚುನಾವಣೆಯಲ್ಲಿ ಗೆಲ್ಲುತ್ತಿಲ್ಲ. ಹಣ ಮತ್ತು ಆರ್‌ಎಸ್‌ಎಸ್‌ ಬಲ ಎರಡೂ ಒಟ್ಟಿಗೆ ಬಿಜೆಪಿ ಬೆಂಬಲಕ್ಕೆ ಇವೆ. ಆರ್‌ಎಸ್‌ಎಸ್‌ 40 ವರ್ಷಗಳ ಹಿಂದಿನಂತೆ ಇಲ್ಲ. ಈಗ ಅದಕ್ಕೆ ರಾಜಕೀಯ ತಂತ್ರಗಾರಿಕೆ ಮತ್ತು ಹಣ ಎರಡೂ ಸಿಕ್ಕಿವೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಬಿಜೆಪಿಯನ್ನು ಎದುರಿಸುವ ಸ್ಥಿತಿಯಲ್ಲಿ ಉಳಿದಿಲ್ಲ ಎಂದು ಹೇಳಿದರು.

‘ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ ಹೋಳಾಗಿದೆ. ಕರ್ನಾಟಕದಲ್ಲಿ ಒಂದಷ್ಟು ಶಕ್ತಿ ಇದೆ. ಆದರೆ, ವಿಧಾನಸಭಾ ಚುನಾವಣೆಗೆ ಇನ್ನೂ 18 ತಿಂಗಳಿದೆ. ರಾಜ್ಯ ಕಾಂಗ್ರೆಸ್‌ನಲ್ಲೂ ಆಂತರಿಕ ಸಂಘರ್ಷವಿದೆ. 18 ತಿಂಗಳಲ್ಲಿ ಇಲ್ಲಿಯೂ ಏನಾದರೂ ಆಗಬಹುದು. ನಮ್ಮ ಮನೆಗೆ (ಜೆಡಿಎಸ್‌) ಬೆಂಕಿ ಇಡಲು ಕಾಂಗ್ರೆಸ್‌ನವರು ಹೊರಟಿದ್ದಾರೆ. ಅವರ ಮನೆಗೇ (ಕಾಂಗ್ರೆಸ್‌) ಬೆಂಕಿ ಇಟ್ಟುಕೊಳ್ಳುತ್ತಾರೇನೋ? ಕಾದು ನೋಡೋಣ’ ಎಂದರು.

ಜನತಾ ನಿಧಿ ಸ್ಥಾಪನೆ: ಆರ್ಥಿಕವಾಗಿ ಅಶಕ್ತರಾಗಿರುವವರಿಗೆ ನೆರವು ನೀಡುವುದಕ್ಕಾಗಿ ಪಕ್ಷದಿಂದ ‘ಜನತಾ ನಿಧಿ’ ಸ್ಥಾಪಿಸಲಾಗುವುದು ಎಂದರು.

ಭಿಕ್ಷುಕರಾಗಿಯೇ ಇರಬೇಕಾ?

ಮೀಸಲಾತಿಗಿಂತಲೂ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ನೀಡುವುದು ಮುಖ್ಯ. ಮಾತೆತ್ತಿದರೆ ಹತ್ತು ಕೆ.ಜಿ. ಅಕ್ಕಿ ಕೊಡುತ್ತೇವೆ ಎನ್ನುತ್ತಾರೆ. ಸರ್ಕಾರದ ಹಣದಲ್ಲಿ ಎಷ್ಟು ದಿನ ಭಿಕ್ಷುಕರನ್ನು ಸೃಷ್ಟಿಸುತ್ತಲೇ ಇರುತ್ತೀರಿ? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

‘ನಾವು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಅನ್ಯಾಯ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಇವರು ಯಾರ ಜೇಬು ತುಂಬಿಸಿದ್ದಾರೆ?’ ಎಂದು ಕೇಳಿದರು.

ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂ ಸಿಂಗ್‌ ಅವರು ಹಲವು ದಶಕಗಳಿಂದ ಕಲಬುರ್ಗಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಅಲ್ಲಿ ಏನು ಅಭಿವೃದ್ಧಿ ಆಗಿದೆ? ಅಲ್ಲಿನ ಪರಿಸ್ಥಿತಿಯನ್ನು ಸಮೀಪದಿಂದ ನೋಡಿದವರಿಗಷ್ಟೆ ಗೊತ್ತು ಎಂದು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು