ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಬಳಕೆ: ಪಾರದರ್ಶಕತೆಗೆ ಕ್ರಮ

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 17 ಸೆಪ್ಟೆಂಬರ್ 2021, 16:57 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನುದಾನ ಬಳಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲಾಗುವುದು. ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಅನುದಾನ ವೆಚ್ಚ ಮಾಡುವುದಕ್ಕೆ ಸಂಪೂರ್ಣ ನಿಯಂತ್ರಣ ಹೇರಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿ ವಾಸ ಪೂಜಾರಿ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸಮಾಜ ಕಲ್ಯಾಣ ಇಲಾಖೆ ಅಧೀನದ ಎಲ್ಲ ನಿಗಮಗಳಲ್ಲೂ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುವುದು. ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ (ಎಸ್‌ಸಿಎಸ್‌ಪಿ) ಅನುದಾನ ಬಳಕೆಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಎಸ್‌ಸಿಎಸ್‌ಪಿ ಅನುದಾನದಲ್ಲಿ ನೇರವಾಗಿ ಸಮಾಜ ಕಲ್ಯಾಣ ಇಲಾಖೆ ಅಥವಾ ನಿಗಮಗಳ ಅಧಿಕಾರಿಗಳೇ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತಿಲ್ಲ. ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಯವರ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇಲಾಖೆಯ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಖರೀದಿಸಬೇಕಿರುವ ವಸ್ತುಗಳ ಅಂದಾಜು ಪಟ್ಟಿಯನ್ನು ಮೊದಲೇ ಸಲ್ಲಿಸಲು ಸೂಚಿಸಲಾಗಿದೆ. ಮನಬಂದಂತೆ ಖರೀದಿ ಮಾಡುವುದನ್ನು ನಿರ್ಬಂಧಿಸಲಾಗುವುದು. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಸೆಕ್ಷನ್‌ 4–ಜಿ ಅಡಿಯಲ್ಲಿ ವಿನಾಯಿತಿ ನೀಡುವುದನ್ನೂ ಕಡಿಮೆ ಮಾಡಲಾಗುವುದು ಎಂದು ತಿಳಿಸಿದರು.

‘ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸುವವರನ್ನು ನಾನು ಸಹಿಸುವುದಿಲ್ಲ. ದೀರ್ಘ ಕಾಲದಿಂದ ಒಂದೇ ಕಡೆ ಇರುವವರನ್ನು ಸ್ಥಾನಪಲ್ಲಟ ಮಾಡಲಾಗುವುದು. ಕೆಲವೇ ದಿನಗಳೊಳಗೆ ಇಲಾಖೆಯಲ್ಲಿ ಮೇಲ್ನೋಟಕ್ಕೆ ಕಾಣಿಸುವಂತಹ ಬದಲಾವಣೆಗಳನ್ನು ತರಬೇಕು ಎಂಬುದು ನನ್ನ ಗುರಿ’ ಎಂದರು.

ಎಫ್‌ಐಆರ್‌ ದಾಖಲು: ಡಾ.ಬಿ.ಆರ್‌. ಅಂಬೇಡ್ಕರ್‌ ಅಬಿವೃದ್ಧಿ ನಿಗಮದ ಕಿರು ಸಾಲ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ನಿಗಮದ ತುಮಕೂರು ಜಿಲ್ಲಾ ವ್ಯವಸ್ಥಾಪಕ ಜಯಣ್ಣ ಮತ್ತು ಕಚೇರಿ ಅಧೀಕ್ಷಕಿ ಕೆ. ವೆನಿಲ್ಲಾ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸಚಿವರು ಉತ್ತರ ನೀಡಿದರು.

‘ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಕೆಲವು ಅಧಿಕಾರಿಗಳು ಪರಿಶಿಷ್ಟ ಜಾತಿಯ ಬಡವರಿಗೆ ತಲುಪಬೇಕಾದ ಅನುದಾನವನ್ನು ಲೂಟಿ ಮಾಡುತ್ತಿದ್ದಾರೆ. ನಿಗಮದ 22 ಅಧಿಕಾರಿಗಳ ವಿರುದ್ಧ ಆರೋಪವಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹರಿಪ್ರಸಾದ್‌ ಆಗ್ರಹಿಸಿದರು.

4,606 ಭವನಗಳ ಕಾಮಗಾರಿ ಬಾಕಿ

ಸಮಾಜ ಕಲ್ಯಾಣ ಇಲಾಖೆಯು 2008–09ರಿಂದ ಈವರೆಗೆ 7,352 ಡಾ.ಬಿ.ಆರ್‌. ಅಂಬೇಡ್ಕರ್‌ ಭವನ, ಬಾಬು ಜಗಜೀವನ್‌ ರಾಂ ಭವನ ಮತ್ತು ಮಹರ್ಷಿ ವಾಲ್ಮೀಕಿ ಭವನಗಳ ಕಾಮಗಾರಿಗೆ ಮಂಜೂರಾತಿ ನೀಡಿತ್ತು. ಅವುಗಳಲ್ಲಿ 2,746 ಭವನಗಳ ನಿರ್ಮಾಣ ಮುಗಿದಿದ್ದು, 4,606 ಬಾಕಿ ಇವೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕಾಂಗ್ರೆಸ್‌ನ ಆರ್‌. ಧರ್ಮಸೇನ ಪ್ರಶ್ನೆಗೆ ಉತ್ತರಿಸಿದ ಅವರು, ‘ಭವನಗಳ ನಿರ್ಮಾಣಕ್ಕೆ ಬೃಹತ್‌ ಪ್ರಮಾಣದ ಅನುದಾನ ಅಗತ್ಯವಿದೆ. ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು’ ಎಂದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 1.22 ಕೋಟಿ ಜನರಿದ್ದಾರೆ. ಅವರಲ್ಲಿ 5.5 ಲಕ್ಷ ಕುಟುಂಬಗಳಿಗೆ ಸ್ವಂತ ಮನೆ ಇಲ್ಲ. 4.5 ಲಕ್ಷ ಕುಟುಂಬಗಳ ಬಳಿ ಸ್ವಂತ ನಿವೇಶನವೂ ಇಲ್ಲ. ಈ ಕುಟುಂಬಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವುದಕ್ಕೆ ಇಲಾಖೆ ಆದ್ಯತೆ ನೀಡಲಿದೆ ಎಂದು ತಿಳಿಸಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಾಕಿ ಉಳಿದಿರುವ ಭವನಗಳ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದ ಧರ್ಮಸೇನ, ‘ಎಸ್‌ಸಿಎಸ್‌ಪಿ ಯೋಜನೆಯಲ್ಲಿ ಒಂದು ಬಾರಿಗೆ ಹೆಚ್ಚು ಅನುದಾನವನ್ನು ಈ ಉದ್ದೇಶಕ್ಕೆ ನೀಡಿ. ಅನುದಾನ ನೀಡಲು ಸಾಧ್ಯವಾಗದಿದ್ದರೆ ಅರ್ಧ ಕಾಮಗಾರಿ ಆಗಿರುವ ಕಟ್ಟಡಗಳನ್ನು ನೆಲಸಮಗೊಳಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT