ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಆರ್‌.ಆರ್. ನಗರ ಉಪಚುನಾವಣೆ

ಕುಸುಮಾ ವಿರುದ್ಧದ ಎಫ್‌ಐಆರ್‌ ವಾಪಸು ಪಡೆಯುವಂತೆ ಪಟ್ಟು: ಕಾಂಗ್ರೆಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆರ್‌.ಆರ್. ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ದಾಖಲಿಸಿರುವ ಎಫ್‌ಐಆರ್ ವಾಪಸು ಪಡೆಯಬೇಕು’ ಎಂದು ಆಗ್ರಹಿಸಿ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ ಎದುರು ಕೆಪಿಸಿಸಿ ಮಹಿಳಾ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಳಿಕ ಡಿಸಿಪಿ ಸಂಜೀವ್ ಪಾಟೀಲ ಅವರಿಗೆ ಕಾಂಗ್ರೆಸ್‌ ನಾಯಕಿಯರಾದ ಶಾಸಕಿಯರಾದ ಸೌಮ್ಯಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಉಮಾಶ್ರೀ ಮನವಿ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ನಿಯಮ ಉಲ್ಲಂಘನೆ ಆರೋಪದ ಮೇಲೆ ಕುಸುಮಾ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಠಾಣೆಯ ಎದುರು ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದ ಮಹಿಳಾ ಕಾರ್ಯಕರ್ತೆಯರು, ‘ಬೇಕೆ ಬೇಕು ನ್ಯಾಯ ಬೇಕು' ಎಂದು ಘೋಷಣೆ ಕೂಗಿದರು.

ಈ ವೇಳೆ, ಪ್ರತಿಭಟನೆಕಾರರು ಮತ್ತು  ಡಿಸಿಪಿ ಸಂಜೀವ್ ಪಾಟೀಲ ನಡುವೆ ಮಾತಿನ ಚಕಮಕಿಯೂ ನಡೆಯಿತು. ‘ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಅನಗತ್ಯವಾಗಿ ದೂರು ದಾಖಲಿಸಲಾಗಿದೆ. ಕೂಡಲೇ ಅದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಪೊಲೀಸ್‌ ಅಧಿಕಾರಿಗಳನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಹೆಣ್ಣು ಮಗಳನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡಿದ್ದಾರೆ. ಎಫ್ಐಆರ್ ದಾಖಲಿಸುವ ಅಗತ್ಯವೇನಿತ್ತು. ಯಾರದ್ದೋ ಒತ್ತಡಕ್ಕೆ ಒಳಗಾಗಿ ಎಫ್ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ ದಾಖಲಿಸಿದ ಅಧಿಕಾರಿಯನ್ನು ಅಮಾನತು ಮಾಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ’ ಎಂದು ಪ್ರತಿಭಟನೆಕಾರರು ಹೇಳಿದರು.

‘ಪ್ರತಿಭಟನೆಯನ್ನು ಇಲ್ಲಿಗೇ ಬಿಡುವುದಿಲ್ಲ. ಇಲ್ಲಿ ನ್ಯಾಯ ಸಿಗದೇ ಇದ್ದರೆ ನ್ಯಾಯಾಲಯಕ್ಕೆ ಹೋಗುತ್ತೇವೆ. ಎಫ್‌ಐಆರ್ ಕೈಬಿಡುವವರೆಗೂ ಸ್ಥಳದಿಂದ ಕದಲುವುದಿಲ್ಲ’ ಎಂದು ಪಟ್ಟುಹಿಡಿದು ಠಾಣೆ ಮುಂದೆ ಕುಳಿತರು.

‘ರಾಜ್ಯದಲ್ಲಿ ಇರುವುದು ಗೂಂಡಾಗಿರಿ ಸರ್ಕಾರ. ಯಾವ ತಪ್ಪು ಮಾಡಿದ್ದಾರೆಂದು ದೂರು ದಾಖಲು ಮಾಡಿದ್ದೀರಿ, ದೂರು ದಾಖಲಿಸಿರುವ ಅಧಿಕಾರಿಯನ್ನು ಅಮಾನತು ಮಾಡಿ’ ಎಂದು ಪುಷ್ಪಾ ಅಮರನಾಥ್ ಒತ್ತಾಯಿಸಿದರು.

‘ಮಹಿಳೆಯರು ರಾಜಕೀಯಕ್ಕೆ ಬರುವುದು ಕಡಿಮೆ. ಅಂಥದರಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಮ್ಮ ಅಭ್ಯರ್ಥಿ ಕುಸುಮಾ‌ ಮೇಲೆ ಎಫ್‌ಐಆರ್ ದಾಖಲಿಸಿರುವುದು ಸರಿಯಲ್ಲ. ಇಲ್ಲಿನ ಠಾಣಾಧಿಕಾರಿ ಆರ್‌ಎಸ್‌ಎಸ್‌ ಪರ ಇದ್ದಾರೆ. ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಠಾಣೆಯಿಂದ ಎತ್ತಂಗಡಿ ಮಾಡಬೇಕು. ಇಲ್ಲವೇ ಅಮಾನತು ಮಾಡಬೇಕು’ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು.

‘ಬಿಜೆಪಿಯವರು ಮಾತೆತ್ತಿದ್ದರೆ ರಾಮನ ಹೆಸರು ಹೇಳುತ್ತಾರೆ. ಮಹಿಳೆಯರಿಗೆ ಗೌರವ ಕೊಡುವ ನಮ್ಮ ಸಂಸ್ಕೃತಿ ಎಂದೂ ಹೇಳುತ್ತಾರೆ. ಆದರೆ, ಇದೇನಾ ನೀವು ಮಹಿಳೆಯರಿಗೆ ಮಾಡುತ್ತಿರುವುದು. ಇಡೀ ದೇಶವೇ ಬಿಜೆಪಿ ಸಂಸ್ಕೃತಿಯನ್ನು ನೋಡುತ್ತಿದೆ. ಕುಸುಮಾ ತುಂಬಾ ಧೈರ್ಯವಂತೆ. ಅವರ ಜೊತೆ ನಾವೆಲ್ಲರೂ ಇದ್ದೇವೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು