ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಬರಹಗಾರ, ಡಿಆರ್‌ಡಿಒ ನಿವೃತ್ತ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ನಿಧನ

Last Updated 2 ಜುಲೈ 2021, 11:22 IST
ಅಕ್ಷರ ಗಾತ್ರ

ಬೆಂಗಳೂರು: ವಿಜ್ಞಾನ ಬರಹಗಾರ, ಡಿಆರ್‌ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ (61) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

ವಾರದ ಹಿಂದೆ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮೆದುಳಿಗೆ ಆಮ್ಲಜನಕ ಸರಬರಾಜು ಆಗುವುದು ನಿಂತಿದ್ದರಿಂದ ಅವರ ಮೆದುಳು ನಿಷ್ಕ್ರಿಯವಾಗಿ ಸಾವಿಗೀಡಾದರು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ವಿಜ್ಞಾನಿಯಾಗಿ 22 ವರ್ಷ ಕಾರ್ಯನಿರ್ವಹಿಸಿದ್ದ ಅವರು ನಂತರ ಸ್ವಯಂ ನಿವೃತ್ತಿ ಪಡೆದು ಜೈನ್ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು.

ವಿಜ್ಞಾನದ ವಿಷಯಗಳನ್ನು ಸರಳವಾಗಿ ಬರೆಯುವ ಕಲೆ ಅವರಿಗೆ ಸಿದ್ಧಿಸಿತ್ತು. ಹಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಚಿರಪರಿಚಿತರಾಗಿದ್ದ ಅವರು, ‘ಪ್ರಜಾವಾಣಿ’ಗೂ ಹಲವು ಲೇಖನಗಳನ್ನು ಬರೆದಿದ್ದರು.

ಕನ್ನಡ ಪುಸ್ತಕ ಪ್ರಾಧಿಕಾರದ ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಶುಕ್ರವಾರ (ಜುಲೈ 2) ಘೋಷಿಸಲಾಗಿತ್ತು. ಆದರೆ, ಪ್ರಶಸ್ತಿ ಘೋಷಿಸಿದ ದಿನವೇ ಅವರು ನಿಧನರಾಗಿದ್ದಾರೆ.

ಸುಧೀಂದ್ರ ಹಾಲ್ದೊಡ್ಡೇರಿ ಅವರುಬೆಂಗಳೂರಿನ ‘ಭಗವಾನ್ ಮಹಾವೀರ್ ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್’ ವಿದ್ಯಾಸಂಸ್ಥೆಯಲ್ಲಿ ‘ಏರೋಸ್ಪೇಸ್ ಎಂಜಿನಿಯರಿಂಗ್’ ವಿಭಾಗದ ಪ್ರೊಫೆಸರ್ ಆಗಿದ್ದರು. ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಇವರ ವಿಜ್ಞಾನ ಲೇಖನಗಳು ಪ್ರಕಟವಾಗಿವೆ.

‘ಇಂಟರ್ನೆಟ್ ಎಂಬ ಮಾಯಾಜಾಲ,’ ‘ಕಂಪ್ಯೂಟರ್: ಎಲ್ಲಿಂದ ಎಲ್ಲಿಯವರೆಗೆ,’ ‘ಕಂಪ್ಯೂಟರ್: ಮಕ್ಕಳಿಗೊಂದು ಕೈಪಿಡಿ’ ಅವರ ಪ್ರಕಟಿತ ಕೃತಿಗಳು. 2018ರ ‘ಕನ್ನಡ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ,’ 2020ರ ‘ಅನುಪಮಾ ನಿರಂಜನ ಪ್ರಶಸ್ತಿ,’ ‘ಉತ್ತಮ ಕಾರ್ಯಕ್ಷಮತೆ ಪುರಸ್ಕಾರ,’ ’ರಾಷ್ಟ್ರೀಯ ವಿಜ್ಞಾನ ದಿನ ಪ್ರಶಸ್ತಿ’ ಇವರಿಗೆ ಸಂದಿದೆ. ಕರ್ನಾಟಕ ರಾಜ್ಯ ಸರ್ಕಾರದ ‘ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ– ವಿಷನ್‌ ಗ್ರೂಪ್’ 2011ನೇ ಸಾಲಿನ ಅತ್ಯುತ್ತಮ ವಿಜ್ಞಾನ ಸಂವಹನಕಾರ ಪ್ರಶಸ್ತಿ ನೀಡಿ ಗೌರವಿಸಿದೆ.

ಸದ್ಯ ‘ಎಲ್ ಆ್ಯಂಡ್ ಟಿ’ ಸಂಸ್ಥೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT