ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆಗೆ ಅನುಮತಿ ನ್ಯಾಯಾಂಗ ನಿಂದನೆ: ಅ.ನ.ಯಲ್ಲಪ್ಪರೆಡ್ಡಿ

ಸ್ವಾಮಿ ಮಲೈ, ದೇವಗಿರಿಗುಡ್ಡ ಕೆಐಒಸಿಎಲ್‌ಗೆ ವಹಿಸುವುದಕ್ಕೆ ವಿರೋಧ
Last Updated 6 ಫೆಬ್ರುವರಿ 2023, 21:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಕೆಐಒಸಿಎಲ್‌ ಕಂಪನಿಗೆ ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಮತ್ತು ದೇವಗಿರಿ ಗುಡ್ಡಗಳನ್ನು ಕಬ್ಬಿಣ ಅದಿರು ಗಣಿಗಾರಿಕೆಗೆ ಅನುಮತಿ ನೀಡಿರುವುದು ನ್ಯಾಯಾಂಗ ನಿಂದನೆ ಎಂದು ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ ತಿಳಿಸಿದ್ದಾರೆ.

ಈ ಕಂಪನಿಯು 401.57 ಹೆಕ್ಟೇರ್‌ ಪ್ರದೇಶವನ್ನು 50 ವರ್ಷಗಳಿಗೆ ಗುತ್ತಿಗೆ ಪಡೆದು ‘ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ’ ಇಲಾಖೆಯ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಗಣಿಗಾರಿಕೆಗಾಗಿ 2022 ರ ಡಿಸೆಂಬರ್‌ 16 ರಂದು ಅರಣ್ಯ ಸಂರಕ್ಷಣಾ ಕಾಯ್ದೆ 1980 ಅಡಿಯಲ್ಲೇ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ. ₹ 329.17 ಕೋಟಿ ಶುಲ್ಕ ಪಾವತಿ ಮಾಡಿದ್ದೇವೆ ಎಂದೂ ಕೆಐಒಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಹೇಳಿಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸ್ವಾಮಿಮಲೈ ಮತ್ತು ದೇವಗಿರಿಗುಡ್ಡಗಳ ಪ್ರದೇಶ
ಗಳನ್ನು ಪರಿಶೀಲನೆ ಮಾಡಿ ವರದಿ ಕೊಡುವವರೆಗೂ ಮುಂದುವರೆಯುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಇದು ಸರ್ಕಾರಗಳಿಗೆ ಸ್ಪಷ್ಟವಾಗಿ ತಿಳಿದಿದೆ. ಆದರೂ ಈ ಅನುಮತಿ ನೀಡಿರುವುದು ನೇರವಾಗಿ ನ್ಯಾಯಾಲಯ ನಿಂದನೆಯಾಗುತ್ತದೆ ಎಂದಿದ್ದಾರೆ.

‘ಸಂಡೂರು ಅರಣ್ಯ ಪ್ರದೇಶದ ಪರಿಸರಕ್ಕೆ ಕೋಟ್ಯಂತರ ವರ್ಷಗಳ ಪರಂಪರೆ ಇದೆ. ಬಿಳಿಗಿರಿರಂಗನ ಬೆಟ್ಟದಿಂದ ಬಳ್ಳಾರಿಯವರೆಗೆ ಹಬ್ಬಿದ ಈ ಪರ್ವತ ಶ್ರೇಣಿ ಅಮೂಲ್ಯ ಮತ್ತು ಅನನ್ಯವಾದ ಜೀವಿ ಸಂಕುಲವನ್ನು ಹೊಂದಿದೆ. ಕ್ರೇಟನ್‌ ಶೀಲ್ಡ್‌ ಎಂದು ಕರೆಯಲ್ಪಡುವ ಈ ಅಚಲ ಕಲ್ಲು ಹಾಸಿನ ಅಡಿಪಾಯದ ಮೇಲೆಯೇ ನಮ್ಮ ನಾಡು ನಿಂತಿದೆ ಎನ್ನಬಹುದು. ಒಂದೂವರೆ ಶತಕೋಟಿ ವರ್ಷಗಳಲ್ಲಿ ಅನೇಕ ಹವಾಮಾನ ವಿಪ್ಲವಗಳನ್ನು ಯಶಸ್ವಿಯಾಗಿಯೂ ಎದುರಿಸಿರುವುದು ಈ ಪರ್ವತಶ್ರೇಣಿಯಾದ್ಯಂತ ದಾಖಲುಗೊಂಡಿದೆ’ ಎಂದು ಅವರು ಹೇಳಿದ್ದಾರೆ.

ಇಲ್ಲಿನ ಕಾಡು ಶ್ರೀಗಂಧ, ರಕ್ತಚಂದನಗಳ ನೆಲೆವೀಡು. ಸಾವಿರಾರು ಜಾತಿಯ ಗಿಡಮೂಲಿಕೆಗಳು, ಪಾದರಸದ ಮಾಲಿನ್ಯ ಹೀರುವ ಕಮರದಂತ ಮರಗಳು ಮತ್ತು ಔಷಧೀಯ ಕೈಗಾರಿಕೆಗಳಲ್ಲಿ ಹೇರಳವಾಗಿ ಬಳಕೆಯಾಗುವ ಧೂಪದಮರ (ಬೋಸೆವೆಲ್ಲಿಯ) ಪ್ರಭೇದಗಳು ಇಲ್ಲಿವೆ. ಸಂಡೂರು ಪ್ರದೇಶದ ಶೇ 40 ರಷ್ಟು ಬೆಟ್ಟಗುಡ್ಡಗಳು ಈಗಾಗಲೇ ನಾಶವಾಗಿದ್ದು ಸಾವಿರಾರು ಎಕರೆ ಪ್ರದೇಶವು ಗುರುತು ಸಿಗದಷ್ಟು ನಾಶವಾಗಿರುವುದು ಉಪಗ್ರಹ ಸೆರೆ ಹಿಡಿದಿರುವ ಚಿತ್ರಗಳಲ್ಲಿ ಕಾಣಬಹುದು ಎಂದು ಯಲ್ಲಪ್ಪರೆಡ್ಡಿ ಹೇಳಿದ್ದಾರೆ.

ಕಬ್ಬಿಣ ಅದಿರು ಗಣಿಗಾರಿಕೆಗೆ ಅವಕಾಶ ನೀಡಿದರೆ, ಭಯಾನಕ ಸ್ಥಿತಿಗೆ ತಲುಪುವ ದಿನಗಳು ದೂರವಿಲ್ಲ. ಸರ್ಕಾರಗಳು ಕುರುಡಾಗಿರುವಾಗ ಜನರೇ ಎದುರಿಸಿ ನಿಂತು ಈ ವಿಧ್ವಂಸ ಕೃತ್ಯವನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT