ಯುವ ಕಾಂಗ್ರೆಸ್ ಪಟ್ಟಕ್ಕೆ ಪೈಪೋಟಿ

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಎನ್‌ಎಸ್‌ಯುಐ ಅಧ್ಯಕ್ಷ ಎಚ್.ಎಸ್. ಮಂಜುನಾಥ್, ಮಾಜಿ ಸಚಿವ ಎಂ.ಆರ್.ಸೀತಾರಾಂ ಪುತ್ರ ರಕ್ಷಾ ರಾಮಯ್ಯ, ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮಿಥುನ್ ರೈ ಸೇರಿ ಏಳು ಮಂದಿ ಕಣದಲ್ಲಿ ಇದ್ದಾರೆ.
ಡಿ. 31ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಇದೇ 7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಂತರ ಚುನಾವಣಿಗೆ ದಿನ ಘೋಷಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಭವ್ಯಾ, ಸಂದೀಪ ನಾಯಕ ಮತ್ತು ಸಯ್ಯದ್ ಖಾಲಿದ್ ಕಣದಲ್ಲಿರುವ ಇತರರು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಬಿರುಸಿನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಅದರಲ್ಲೂ ಮಂಜುನಾಥ್ (ಒಕ್ಕಲಿಗ), ಮಿಥುನ್ (ಬಂಟ), ರಕ್ಷಾ ರಾಮಯ್ಯ(ಹಿಂದುಳಿದ ವರ್ಗ), ಮೊಹಮ್ಮದ್ ನಲಪಾಡ್ (ಮುಸ್ಲಿಂ) ಈ ಪಟ್ಟದ ಮೇಲೆ ಕಣ್ಣಿಟ್ಟಿದ್ದು, ಹಿರಿಯ ನಾಯಕರ ಮೂಲಕ ತಮ್ಮ ಪರ ಒಲವು ಮೂಡಿಸಲು ಮುಂದಾಗಿದ್ದಾರೆ. ಈ ಮಧ್ಯೆ, ಯಾರನ್ನು ಬೆಂಬಲಿಸಬೇಕು ಎನ್ನುವ ವಿಚಾರದಲ್ಲಿ ಹಿರಿಯ ನಾಯಕ ರಲ್ಲಿ ಏಕ ಅಭಿಪ್ರಾಯ ಇಲ್ಲ ಎನ್ನಲಾಗಿದೆ.
ಎನ್‌ಎಸ್‌ಯುಐ ಅಧ್ಯಕ್ಷರಾಗಿ ಮಂಜುನಾಥ್ ಸಕ್ರಿಯವಾಗಿದ್ದರು. ವಿದ್ಯಾರ್ಥಿ ಸಮಸ್ಯೆಗಳ ಪರ ಹೋರಾಟ ಮಾಡಿ ಪಕ್ಷದ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅನೇಕರು ಮಂಜುನಾಥ್ ಪರ ಇದ್ದಾರೆ. ಆದರೆ, ಕೆಲವರು ರಕ್ಷಾ ರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಇನ್ನೂ ಕೆಲವರು ಮಿಥುನ್ ಮತ್ತು ನಲಪಾಡ್ ಪರವಾಗಿಯೂ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.