ಶನಿವಾರ, ಏಪ್ರಿಲ್ 1, 2023
23 °C

ಐದು ವರ್ಷಗಳಲ್ಲಿ ವಿಶೇಷ ಅನುದಾನ: ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸೊನ್ನೆ!

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ವಿಶೇಷ ಅನುದಾನದ ರೂಪದಲ್ಲಿ ಉತ್ತರದ ರಾಜ್ಯಗಳಿಗೆ ದೊಡ್ಡ ಮಟ್ಟದ ನೆರವು ನೀಡಿದೆ. ಆದರೆ, ಕರ್ನಾಟಕಕ್ಕೆ ಚಿಕ್ಕಾಸೂ ನೀಡಿಲ್ಲ.

2017ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಷ್ಟು ಅನುದಾನ ನೀಡಿದೆ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಮಂಗಳವಾರ ಲಿಖಿತ ಉತ್ತರ ನೀಡಿರುವ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್‌ ಚೌಧರಿ ಈ ಮಾಹಿತಿ ನೀಡಿದ್ದಾರೆ.   

‘ಸಂಪನ್ಮೂಲಗಳ ಕ್ರೋಡೀಕರಣದಲ್ಲಿ ಸುಧಾರಣೆ ಆಗಿದ್ದರಿಂದ 2017–18ಕ್ಕೆ ಹೋಲಿಸಿದರೆ 2022–23ಕ್ಕೆ ರಾಜ್ಯಗಳಿಗೆ ನೀಡುತ್ತಿರುವ ನೆರವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಜತೆಗೆ, 14ನೇ ಹಣಕಾಸು ಆಯೋಗ ಹಾಗೂ 15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ನೀಡುತ್ತಿರುವ ನೆರವು ಸಹ ಜಾಸ್ತಿ ಆಗಿದೆ’ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ. 

ಉತ್ತರ ರಾಜ್ಯಗಳಾದ ಬಿಹಾರಕ್ಕೆ ₹4,598 ಕೋಟಿ, ಉತ್ತರ ಪ್ರದೇಶಕ್ಕೆ ₹2,117 ಕೋಟಿ, ಉತ್ತರಾಖಂಡಕ್ಕೆ ₹1,581 ಕೋಟಿ, ಮಧ್ಯಪ್ರದೇಶಕ್ಕೆ ₹759 ಕೋಟಿ, ಗುಜರಾತ್‌ಗೆ ₹431 ಕೋಟಿ ವಿಶೇಷ ಅನುದಾನ ಒದಗಿಸಲಾಗಿದೆ. ಈಶಾನ್ಯದ ರಾಜ್ಯಗಳಿಗೆ ಸಹ ದೊಡ್ಡ ಪಾಲು ಸಿಕ್ಕಿದೆ. ತ್ರಿಪುರಕ್ಕೆ ₹2,498 ಕೋಟಿ, ನಾಗಾಲ್ಯಾಂಡ್‌ಗೆ ₹500 ಕೋಟಿ, ಅರುಣಾಚಲ ಪ್ರದೇಶಕ್ಕೆ ₹672 ಕೋಟಿ ಕೊಡಲಾಗಿದೆ. ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶಕ್ಕೆ ₹3,501 ಕೋಟಿ, ತೆಲಂಗಾಣಕ್ಕೆ ₹1,350 ಕೋಟಿ ದೊರಕಿದೆ. ಬಿಜೆಪಿ
ಯೇತರ ಪಕ್ಷಗಳು ಆಡಳಿತ ನಡೆಸುತ್ತಿ
ರುವ ಹಲವು ರಾಜ್ಯಗಳಿಗೆ ವಿಶೇಷ ಅನುದಾನ ಸಿಕ್ಕಿಲ್ಲ. 

ಬಾಹ್ಯ ನೆರವಿನ ಯೋಜನೆಗಳಿಗೆ ಸಹಾಯಧನದಲ್ಲೂ ರಾಜ್ಯಕ್ಕೆ ಸಿಕ್ಕಿದ್ದು ಚಿಕ್ಕಾಸು. ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ₹45.50 ಕೋಟಿಯನ್ನು ಕೇಂದ್ರ ಕೊಟ್ಟಿದೆ. ಸಣ್ಣ ರಾಜ್ಯಗಳಾದ ಅಸ್ಸಾಂ (₹4845 ಕೋಟಿ), ಹಿಮಾಚಲ ಪ್ರದೇಶ (₹3,379 ಕೋಟಿ), ಉತ್ತರಾಖಂಡಕ್ಕೆ (₹4,016 ಕೋಟಿ) ಕೇಂದ್ರ ಸರ್ಕಾರ ‘ಉದಾರ’ವಾಗಿ ಸಹಾಯಧನ ಒದಗಿಸಿದೆ.

ಬಂಡವಾಳ ವೆಚ್ಚಕ್ಕಾಗಿ ವಿಶೇಷ ನೆರವಿನ ರೂಪದಲ್ಲಿ ರಾಜ್ಯಕ್ಕೆ ಮೂರು ವರ್ಷಗಳಲ್ಲಿ ಬಂದಿದ್ದು ₹2,696 ಕೋಟಿ. ಉತ್ತರ ಪ್ರದೇಶಕ್ಕೆ ₹10,113 ಕೋಟಿ, ಮಧ್ಯಪ್ರದೇಶಕ್ಕೆ ₹6,463 ಕೋಟಿ, ಮಹಾರಾಷ್ಟ್ರಕ್ಕೆ 4,674 ಕೋಟಿ, ಬಿಹಾರಕ್ಕೆ ₹6,644 ಕೋಟಿ, ಪಶ್ಚಿಮ ಬಂಗಾಳಕ್ಕೆ ₹4,826 ಕೋಟಿ ಸಿಕ್ಕಿದೆ.

---

ರಾಜ್ಯಕ್ಕೆ ತೆರಿಗೆ ಪಾಲು ಹಂಚಿಕೆ

ವರ್ಷ; ಮೊತ್ತ (₹ಕೋಟಿಗಳಲ್ಲಿ)

2017–18; 31,751

2018–19; 35,894

2019–20; 30,919

2020–21; 21,694

2021–22; 33,283

 

ದಕ್ಷಿಣದ ರಾಜ್ಯಗಳಿಗೆ ಹಣಕಾಸು ಆಯೋಗದ ಅನುದಾನ (₹ಕೋಟಿಗಳಲ್ಲಿ)

ರಾಜ್ಯ; 2017-18; 2018-19; 2019-20; 2020-21; 2021-22

ಕರ್ನಾಟಕ; 3,621; 4,333; 7,578; 6,246; 7,862

ಆಂಧ್ರ ಪ್ರದೇಶ; 6,974; 6,553; 6,451; 12,233; 21,342

ಗೋವಾ; 62; 66; 163; 85; 119

ಕೇರಳ; 3,346; 4,551; 2,343; 18,048; 22,171

ತಮಿಳುನಾಡು; 2,302; 4,605; 5,905; 8,930; 10,116

ತೆಲಂಗಾಣ; 1,225; 1,806; 3,219; 3,134; 1,850

 

ರಾಜ್ಯದ ಸಾಲದ ಪ್ರಮಾಣ ದುಪ್ಪಟ್ಟು

ಕರ್ನಾಟಕ ರಾಜ್ಯದ ಸಾಲದ ಪ್ರಮಾಣ ಐದು ವರ್ಷಗಳಲ್ಲಿ ದುಪ್ಪಟ್ಟು ಆಗಿದೆ.

ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಸಚಿವರು, ‘2018ರಲ್ಲಿ ₹2.45 ಲಕ್ಷ ಕೋಟಿ ಇದ್ದ ರಾಜ್ಯದ ಸಾಲ 2022ರಲ್ಲಿ ಮಾರ್ಚ್‌ ಅಂತ್ಯಕ್ಕೆ ₹4.73 ಲಕ್ಷ ಕೋಟಿಗೆ ಏರಿದೆ’ ಎಂದು ತಿಳಿಸಿದ್ದಾರೆ.

2025–26ನೇ ಆರ್ಥಿಕ ವರ್ಷಕ್ಕೆ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ ₹ 7,38,510 ಕೋಟಿ ತಲುಪಲಿದೆ ಎಂದು ಕರ್ನಾಟಕದ ಹಣಕಾಸು ಇಲಾಖೆ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ (2022–26ರ ಅವಧಿ) ಈಗಾಗಲೇ ಅಂದಾಜು ಮಾಡಿದೆ.

2022–23ನೇ ಆರ್ಥಿಕ ವರ್ಷದಲ್ಲಿ ಸಾಲದ ಪ್ರಮಾಣ ₹60,334 ಕೋಟಿ
ಯಷ್ಟು ಹೆಚ್ಚಲಿದ್ದು, ₹ 5,18,366 ಕೋಟಿ ತಲುಪಲಿದೆ. ಮುಂದಿನ ನಾಲ್ಕು ಆರ್ಥಿಕ ವರ್ಷಗಳಲ್ಲಿ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತದಲ್ಲಿ ₹ 2,80,468 ಕೋಟಿಯಷ್ಟು ಹೆಚ್ಚಳವಾಗಲಿದೆ. ಪ್ರಸ್ತುತ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 26.61ರಷ್ಟಿದೆ. ಮುಂದಿನ ವರ್ಷದಿಂದ ಗಣನೀಯ ಏರಿಕೆಯಾಗಲಿದ್ದು, 2025ರಲ್ಲಿ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತವು ರಾಜ್ಯದ ಆಗಿನ ಜಿಎಸ್‌ಡಿಯಶೇ 27.55ರಷ್ಟಾಗಲಿದೆ ಎಂದೂ ಆರ್ಥಿಕ ಇಲಾಖೆ ಅಂದಾಜಿಸಿದೆ.‌

ತೆರಿಗೆ ಪಾಲಿನಲ್ಲೂ ಗಣನೀಯ ಹೆಚ್ಚಳ ಇಲ್ಲ

ರಾಜ್ಯ; 2017–18; 2021–22 (₹ಮೊತ್ತ ಕೋಟಿಗಳಲ್ಲಿ)

ಕರ್ನಾಟಕ; 31,751; 33,283

ಮಹಾರಾಷ್ಟ್ರ; 37,203; 54,318

ತಮಿಳುನಾಡು; 27,099; 37,458

ಉತ್ತರ ಪ್ರದೇಶ; 1,20,940; 1,60,358

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು