ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಕರ್ನಾಟಕ ಅಸ್ಮಿತೆಯ ಚರ್ಚೆ

Last Updated 20 ನವೆಂಬರ್ 2020, 6:05 IST
ಅಕ್ಷರ ಗಾತ್ರ

ಕನ್ನಡ, ಕರ್ನಾಟಕ ಎಂದಾಕ್ಷಣ ಮೊದಲು ನಮ್ಮ ಯೋಚನೆಗೆ ಬರುವಂಥದ್ದು ಯಾವುದು? ಹೀಗೆ ಹೇಳುವಾಗಲೇ ನಮ್ಮ ಸಾಹಿತ್ಯದಲ್ಲಿ, ಕನ್ನಡ ಪರ ಹೋರಾಟಗಳಲ್ಲಿ ಬಹುವಾಗಿ ಚರ್ಚೆಯಾಗುವ ಕೆಲವು ‘ಪಾರಿಭಾಷಿಕ’ ರೂಪಕಗಳು ಈಗಾಗಲೇ ನಮ್ಮ ತಲೆಯಲ್ಲಿ ಒಂದರ ಹಿಂದೆ ಒಂದರಂತೆ ಮೆರವಣಿಗೆ ಹೊರಡುತ್ತವೆ. ‘ಜೀವನದಿ’ ಕಾವೇರಿ, ಶ್ರೀಗಂಧ, ಮಲೆನಾಡು, ಜೋಗ ಜಲಪಾತ, ಕೋಗಿಲೆ ಇತ್ಯಾದಿ, ಇತ್ಯಾದಿ.

ಕಾವೇರಿ ಮಾತ್ರ ಯಾಕೆ ‘ಜೀವನದಿ’ ಆಗಬೇಕು? ನನ್ನ ಊರಿನ ಶರಾವತಿ ಯಾಕೆ ಜೀವನದಿ ಅಲ್ಲ, ಉತ್ತರ ಕರ್ನಾಟದಲ್ಲಿ ಹರಿಯುವ ಕೃಷ್ಣಾ ಯಾಕೆ ಜೀವನದಿ ಅಲ್ಲ. ಮಲೆನಾಡು, ಇಲ್ಲಿನ ಬೆಳಗು, ಸೂರ್ಯಾಸ್ತ, ಪರ್ವತ ಶ್ರೇಣಿಗಳು, ಜಲಪಾತ, ಪ್ರಕೃತಿಯ ಸೊಬಗು–ಹೀಗೆ ಇವು ಮಾತ್ರವೇ ಕರ್ನಾಟಕದಲ್ಲಿ ಇರುವುದೇ? ಇವು ಮಾತ್ರವೇ ಕರ್ನಾಟಕ ಎನ್ನುವ ಆಸ್ಮಿತೆಯನ್ನು ಪರಿಪೂರ್ಣ ಮಾಡುತ್ತವೆಯೇ? ಬಯಲುಸೀಮೆ ಪ್ರದೇಶಗಳು, ಜಲಪಾತ ಇಲ್ಲದ ಪ್ರದೇಶಗಳು ಇವು ಕರ್ನಾಟಕದ ಅಸ್ಮಿತೆ ಅಲ್ಲವೇ? ಕನ್ನಡ ಹೇಗೆ ಭಾಷೆಯೋ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಕೂಡ ಭಾಷೆಯೇ ಆಗಿದೆ. ಎಲ್ಲ ಭಾಷೆಯು ಭಾವನೆಗಳನ್ನು ಶಕ್ತವಾಗಿಯೇ ಪ್ರಕಟಿಸುತ್ತವೆ. ಆದ್ದರಿಂದಲೇ ಅದು ಇನ್ನು ಜೀವಂತವಾಗಿದೆ. ಕನ್ನಡ ಮಾತ್ರ ಯಾಕೆ ಚಂದದ, ಶಕ್ತ ಭಾಷೆಯಾಗಬೇಕು. ನಮಗೆ ನಮ್ಮ ಭಾಷೆ ಚಂದ; ಹೌದು. ಅದೇ ವೇಳೆಗೆ ಬೇರೆ ಭಾಷೆ ಕಡೆಗೂ ನಮಲ್ಲಿ ಗೌರವ ಇರಬೇಡವೇ?

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಕರ್ನಾಟಕವನ್ನು ಅಥವಾ ಕನ್ನಡವನ್ನು ವರ್ಣಿಸುವಾಗ ಅಥವಾ ಪರಿಚಯಿಸುವಾಗ ಇಂಥದ್ದೇ ಕೆಲವೇ ಕೆಲವು ‘ಪಾರಿಭಾಷಿಕ’ಗಳನ್ನು ಯಾಕೆ ಬಳಸಲಾಗುತ್ತದೆ. ಇದಕ್ಕೆ ಏನು ಕಾರಣ ಇರಬಹುದು ಎಂಬ ಹುಡುಕಾಟದ ಸಣ್ಣ ಪ್ರಯತ್ನ ಈ ಲೇಖನ. ಇದೇ ಸರಿ, ಇದೇ ಸರಿಯಾದ ಗ್ರಹಿಕೆ ಎನ್ನುವ ಹಟವಿಲ್ಲ. ಹೀಗೂ ಯೋಚಿಸಬಹುದೇನೋ ಎನ್ನುವ ಚಿಕ್ಕ ಪ್ರಯತ್ನವಷ್ಟೆ.

ಚಿಂತಕ ಕೆ.ವಿ ಅಕ್ಷರ ಅವರು, ‘ಸುವರ್ಣ ಕನ್ನಡದ ಆತಂಕದ ಹಾಡುಗಳು’ ಎನ್ನುವ ಲೇಖನದಲ್ಲಿ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಈ ಲೇಖನವು ನೀನಾಸಂ ಮಾತುಕತೆ 88ರಲ್ಲಿ (2008) ಪ್ರಕಟವಾಗಿದೆ. ಅಕ್ಷರ ಅವರು ಲೇಖನವನ್ನು ಮೂರು ವಿಭಾಗದಲ್ಲಿ ವಿಂಗಡಿಸಿಕೊಂಡಿದ್ದಾರೆ. ಒಂದು– ಅನಿವಾಸಿ ಅಥವಾ ಪರದೇಶಿ ಆತಂಕ (ಆ್ಯಂಗ್‌ಸೈಟಿ ಆಫ್‌ ದಿ ಎಕ್ಸೈಲ್‌), ಎರಡು– ಸೇರ್ಪಡೆ ಮತ್ತು ಬೇರ್ಪಡೆಗಳ ಆತಂಕ (ಆ್ಯಂಗ್‌ಸೈಟಿ ಆಫ್‌ ಇನ್‌ಕ್ಲೂಷನ್‌ ಆ್ಯಂಡ್‌ ಎಕ್ಸ್‌ಕ್ಲೂಷನ್‌), ಮೂರು– ಅಸ್ಮಿತೆಯ ಆತಂಕ (ಆ್ಯಂಗ್‌ಸೈಟಿ ಆಫ್‌ ಐಡೆಂಟಿಟಿ). ಈ ಆತಂಕಗಳನ್ನು ಇಟ್ಟುಕೊಂಡು ಬಂದಿರುವ ಕನ್ನಡ ಪದ್ಯಗಳನ್ನು ಲೇಖನದಲ್ಲಿ ಅವರು ಚರ್ಚಿಸುತ್ತಾರೆ.

‘ನಿಜವಾಗಿ, ಇದು (ಅಸ್ಮಿತೆಯ ಆತಂಕ) ಮೊದಲೆರೆಡು ಆತಂಕಗಳ ಮೊತ್ತ ಅಥವಾ ಫಲಶ್ರುತಿ. ಕನ್ನಡ ನನ್ನ ನಾಡು, ಅದಕ್ಕೆ ಪರಕೀಯರಿದ್ದಾರೆ. ಆದಕಾರಣವೇ ಅದು ಸ್ವದೇಶ ಎನ್ನುವುದು ಮೊದಲ ಬಗೆಯ ಆತಂಕವಾದರೆ, ಎರಡನೆಯದು ಕನ್ನಡವೆಂಬ ಕಲ್ಪಿತ ಆವರಣದಲ್ಲಿ ಏನೇನನ್ನು ಸೇರಿಸಬೇಕು, ಸೇರಿಸಬಾರದು ಎನ್ನುವ ಪ್ರಶ್ನೆಗೆ ಸಂಬಂಧಿಸಿದ ಆತಂಕ. ಇವೆರಡರ ಫಲವಾಗಿ ಹುಟ್ಟುವ ಮೂರನೆಯ ಆತಂಕ ಅವೆರಡಕ್ಕೂ ಮೂಲವಾದ ಪ್ರಶ್ನೆಗೆ ಬರುತ್ತದೆ–ಕನ್ನಡ ಅಂದರೆ ಏನು? ನಾನು ಕನ್ನಡಿಗ ಅಂದ್ರೆ ಏನರ್ಥ? ಮೊದಲಾದ ಪ್ರಶ್ನೆಗಳನ್ನಿದು ಎತ್ತುತ್ತದೆ.’

‘ಇಂಥ ಪ್ರಶ್ನೆಗಳನ್ನು ಬಂಡವಾಳವಾಗಿಟ್ಟುಕೊಂಡು ಇಡಿಯ ಜನವರ್ಗವನ್ನೇ ಸಂಘಟಿಸುವ ಒಂದು ಹೊಸಬಗೆಯ ಸಾಂಸ್ಕೃತಿಕ ರಾಜಕಾರಣ ಇವತ್ತು ಭಾರತದಲ್ಲಿ– ಅಷ್ಟೇಕೆ ಇಡಿಯ ಜಗತ್ತಿನಲ್ಲೇ– ಮುನ್ನೆಲೆಗೆ ಬರುತ್ತಿರುವುದು ನಮಗೆಲ್ಲ ಪರಿಚಿತವಾದ ಸಂಗತಿ. ಆ ಕ್ಷೇತ್ರದ ಜಿಜ್ಞಾಸೆಗಳಿಗೆ ಹೋಗದೆ, ಆ ರಾಜಕಾರಣದಿಂದ ನಮ್ಮ ಚರ್ಚೆಗೆ ಅಗತ್ಯವಾದ ಒಂದೇ ಒಂದು ಅಂಶವನ್ನು ನಾನು ಇಲ್ಲಿ ಎತ್ತಿಕೊಳ್ಳುತ್ತೇನೆ. ಈ ಅಸ್ಮಿತೆಯ ರಾಜಕಾರಣವು ಜನಗಳ ಮೇಲೆ ಸೃಷ್ಟಿಸುವ ಒಂದು ಬಹುಮುಖ್ಯವಾದ ಒತ್ತಡವೆಂದರೆ ನಮ್ಮೊಳಗಿರುವ ಹಲವು ಹತ್ತು ನನ್ನತನಗಳಲ್ಲಿ ಯಾವುದೋ ಒಂದನ್ನು ಪ್ರಮುಖವೆಂದು ಭಾವಿಸಿ ಅದಕ್ಕೆ ಪ್ರಾಮುಖ್ಯವನ್ನು ಕೊಟ್ಟಿಕೊಳ್ಳಬೇಕು ಎಂಬುದು; ಮತ್ತು ಅದೇ ಕಾರಣಕ್ಕೆ ಉಳಿದ ಅಸ್ಮಿತೆಗಳನ್ನು ನಿರಾಕರಿಸುತ್ತ ಹೋಗಬೇಕು ಎಂಬುದು. ಇದು, ನೂರಾರು ವರ್ಷಗಳ ಹಿಂದೆಯೇ ಹಲವಾರು ಕನ್ನಡ ದೇಶಭಕ್ತಿಗೀತೆಗಳಲ್ಲೂ ಕಾಣಿಸಿಕೊಂಡ ಒಂದು ಒತ್ತಡ’ ಎನ್ನುತ್ತಾರೆ ಅವರು.

ಇಂಥ ಅಸ್ಮಿತೆಯ ಆತಂಕದ ಕಾರಣಕ್ಕಾಗಿಯೇ ಕಾವೇರಿ, ಶ್ರೀಗಂಧ, ಕನ್ನಡ ಮಾತ್ರವೇ ಚೆಂದ ಎನ್ನುವುದು ಹುಟ್ಟಿಕೊಂಡಿರಬಹುದೇನೋ. ಕಾವೇರಿ ವಿಷಯ ಬಂದಾಗ ತಮಿಳುನಾಡಿನವರೂ ಬರುತ್ತಾರೆ. ಆದರೆ ಅವರು ಬೇರೆ ನಾಡಿನವರು. ಶ್ರೀಗಂಧ ಎನ್ನುವಲ್ಲಿ, ಅದಕ್ಕಿರುವ ಧಾರ್ಮಿಕ ಅಸ್ಮಿತೆ ಕಾರಣಕ್ಕೆ ಅದು ಮುಖ್ಯವಾಗಬಹುದು. ಬೇರೆ ಭಾಷೆಗಳ ‘ಆಕ್ರಮಣ’ ಎನ್ನುವಲ್ಲಿ ಕನ್ನಡ ಮಾತ್ರವೇ ಚೆಂದ ಎನ್ನುವ ಧೋರಣೆ ಹುಟ್ಟಿರಬಹುದು.

ಪ್ರಾದೇಶಿಕ ಅಸಮಾನತೆಯೂ ನಮ್ಮ ಚರ್ಚೆಯ ವಿಷಯಕ್ಕೆ ಕಾರಣವಾಗಿರಬಹುದು. ನೋಡಿ, ಕನ್ನಡ ಸಾಹಿತ್ಯ ಸಮ್ಮೇಳನ ಬಂದಾಗಲೆಲ್ಲ ಈ ಪ್ರಾದೇಶಿಕ ಅಸಮಾನತೆಯ ಚರ್ಚೆ ಮುನ್ನೆಲೆಗೆ ಬರುತ್ತದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯಿಂದ ಹಿಡಿದು ಎಲ್ಲಿ ಸಮ್ಮೇಳನ ನಡೆಯಬೇಕು ಎನ್ನುವವರೆಗೂ ಈ ಚರ್ಚೆ ವಿಸ್ತಾರಗೊಂಡಿದೆ. ಉತ್ತರ ಕರ್ನಾಟಕ ಭಾಗದ ಕವಿಗಳನ್ನು ನಿರ್ಲಕ್ಷಿಸಲಾಗುತ್ತದೆ. ಆ ಭಾಗದವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವುದಿಲ್ಲ ಎನ್ನುವ ಕೂಗು ಮೊದಲಿನಿಂದಲೂ ಇದೆ. ದಕ್ಷಿಣ ಕರ್ನಾಟಕದ ಭಾಗದ ಜನರು ಉತ್ತರ ಕರ್ನಾಟಕದ ಭಾಗದ ಜನರನ್ನು ನಿರ್ಲಕ್ಷ್ಯ ಮಾಡುವುದೂ ಸೇರಿಕೊಂಡದ್ದರಿಂದ ಕೇವಲ ಕಾವೇರಿ, ಜೋಗ ಜಲಪಾತ, ವಿಜಯನಗರ ಸಾಮ್ರಾಜ್ಯ ಎನ್ನುವಂಥ ‘ಪಾರಿಭಾಷಿಕ’ಗಳು ಮುನ್ನೆಲೆಗೆ ಬಂದಿರಬಹುದು. ಆ ಭಾಗದ ಕವಿಗಳ, ಅವರ ಸಾಹಿತ್ಯದ ನಿರ್ಲಕ್ಷ್ಯವೂ ಹೆಚ್ಚು ಕಾರಣವನ್ನು ಒದಗಿಸುತ್ತದೆ.

ಪತ್ರಿಕೆಯೊಂದರಲ್ಲಿ ಪ್ರಕಟವಾದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಕಾಗೆಯನ್ನು ಕೀಳೆಂದು ಕಾಣುವ ಮೌಢ್ಯ ಮನೋಧರ್ಮ’ ಲೇಖನದಲ್ಲೂ ಸಹ ನಮ್ಮ ಚರ್ಚೆಗೆ ಒದಗುವ ಹಲವು ಸರಕುಗಳಿವೆ. ಯಾಕೆ ಕೋಗಿಲೆ ಮಾತ್ರ ನಮಗೆ ಮುಖ್ಯವಾಗುತ್ತದೆ, ಕಾಗೆಯಾಕಲ್ಲ, ‘ಕನ್ನಡ ನಾಡು ಶ್ರೀಗಂಧದ ನಾಡು’ ಮಾತ್ರ ಯಾಕೆ ಆಗಬೇಕು, ಜಾಲಿ, ಹುಣಸೆ ಹೊಂಗೆ ಇಂಥವು ಯಾಕೆ ಕೀಳಾದವು ಎಂಬಿತ್ಯಾದಿ ಪ್ರಶ್ನೆಗಳನ್ನು ಎತ್ತಿ, ಲೇಖನದ ಕೊನೆಯಲ್ಲಿ ಅದಕ್ಕೆ ಕಾರಣವನ್ನೂ ತಿಳಿಸುತ್ತಾರೆ. ‘ಹೀಗೆ ಕಾಗೆ- ಕೋಗಿಲೆಯ ಸಂಬಂಧ, ಜಾಲಿ ಹೊಂಗೆಗಳ ಮಹತ್ವ ತಂಗಟೆ ಹೂವಿನ ಚೆಲುವು ಮುಂತಾದವುಗಳನ್ನು ನಮ್ಮ ಕಾಲದಲ್ಲಿ ಮುನ್ನೆಲೆಗೆ ತಂದ ಕಾಳಜಿಯ ಕೀರ್ತಿ ದಲಿತ-ಬಂಡಾಯ ಬರಹಗಾರರಿಗೆ ಸಲ್ಲಬೇಕು. ಮತ್ತೆ ಈ ಆಶಯಗಳು ಮುನ್ನೆಲೆಗೆ ಬಂದು ಪ್ರಾಣ ಶಕ್ತಿಯಾಗಬೇಕಾದ ಕಾಲ ಬಂದಿದೆ. ಯಾಕೆಂದರೆ ನಿಸರ್ಗದಲ್ಲಿರುವ ಈ ಅಸಮತೆಯ ನೆಲೆಗೆ ಸಾಮಾಜಿಕ ಆರ್ಥಿಕ ಅಸಮತೆಯ ವ್ಯವಸ್ಥೆಯಲ್ಲಿ ಹುಟ್ಟಿದ ನಿಲುವುಗಳು ಕಾರಣವಾಗಿವೆ.ಅಂತೆಯೇ ಶೋಷಣೆಯ ಸಾಧನವಾಗಿ ಬಳಸಿಕೊಳ್ಳುತ್ತಿರುವ ಮೂಢನಂಬಿಕೆಗಳು ದೃಷ್ಟಿ-ಧೋರಣೆಯಾಗಿ ಬೆಳೆದು ನಿಂತಿವೆ. ಮನುಷ್ಯರನ್ನು ಬಲಿ ತೆಗೆದುಕೊಳ್ಳುವುದರ ಜತೆಗೆ ಪ್ರಾಣಿ, ಪಕ್ಷಿ, ಮರ, ಗಿಡಗಳಿಗೂ ಕೇಡೆಣಿಸುವ ಮನೋಧರ್ಮದಲ್ಲಿ ಮನವೂ ಇಲ್ಲ ಧರ್ಮವೂ ಇಲ್ಲ’ ಎನ್ನುತ್ತಾರೆ ಅವರು.

ಚಿಂತಕ ಅ.ರಾ. ಶ್ರೀನಿವಾಸ ಅವರು ಬರೆದ ‘ಬಿಂಬ ಪ್ರತಿಬಿಂಬ’ (ಪ್ರತಿಫಲಿತಗೊಂಡ ಭೂಮಿ ಹೋರಾಟಗಳು: ಆಧುನಿಕ ಕನ್ನಡ ಸೃಜನಶೀಲ ಸಾಹಿತ್ಯ ಕೃತಿಗಳ ಅವಲೋಕನ) ಎನ್ನುವ ಪುಸ್ತಕದಲ್ಲಿ ಲೇಖಕರು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ರೈತ ಹೋರಾಟವು ಅಷ್ಟಾಗಿ ಪ್ರಚಲಿತವಾಗದೇ, ಸಾಗರದಲ್ಲಿ ನಡೆದ ಕಾಗೋಡು ಹೋರಾಟ ಯಾಕೆ ಅಷ್ಟೊಂದು ಪ್ರಾಮುಖ್ಯ ಪಡೆಯಿತು ಎಂದು ಚರ್ಚಿಸುತ್ತಾರೆ.

‘ಉತ್ತರ ಕನ್ನಡದಲ್ಲಿಯೂ ಸಮಾಜವಾದಿ ಪಕ್ಷದ ವತಿಯಿಂದಲೇ ರೈತ ಹೋರಾಟವು ಸುದೀರ್ಘವಾಗಿಯೇ ನಡೆದಿತ್ತು. ಅಲ್ಲಿ ಚುನಾವಣೆಯಲ್ಲಿ ಒಂದಿಬ್ಬರು ಶಾಸಕರು ಸಮಾಜವಾದಿ ಪಕ್ಷದಿಂದಲೇ ಆಯ್ಕೆಯಾಗಿದ್ದರು. ಆದರೆ ಉತ್ತರ ಕನ್ನಡವು ಆಗ ಮುಂಬಯಿ ಪ್ರಾಂತ್ಯಕ್ಕೆ ಸೇರಿತ್ತಾದ್ದರಿಂದ ಈ ಶಾಸಕರು ಮೈಸೂರು ರಾಜ್ಯದ ಭಾಗವಾಗಲಿಲ್ಲ. ಅದಕ್ಕೇನಿದ್ದರೂ ಮತ್ತೊಂದು ಸಾರ್ವತ್ರಿಕ ಚುನಾವಣೆಯ (1957) ವರೆಗೆ ಕಾಯಬೇಕಾಯಿತು. ಇದೇ ಕಾರಣವಾಗಿ ಉತ್ತರ ಕನ್ನಡ ಜಿಲ್ಲೆಯ ರೈತ ಹೋರಾಟವು ಸುದೀರ್ಘವೂ ವ್ಯಾಪಕವೂ ಪರಿಣಾಮಕಾರಿಯೂ ಆಗಿದ್ದರೂ ಕಾಗೋಡು ಹೋರಾಟದಂತಹ ‘ಚಿಕ್ಕ ಘಟನೆ’ ಇತಿಹಾಸದಲ್ಲಿ ಅದಕ್ಕಿಂತ ಹೆಚ್ಚು ಪ್ರಖ್ಯಾತವಾಯಿತು. ಕಾಗೋಡು ಹೋರಾಟದ ನಂತರ ಸಮಾಜವಾದಿ ಒಲವಿನ ಬುದ್ಧಿಜೀವಿಗಳ ಒಂದು ವರ್ಗವೇ ಕರ್ನಾಟಕದಲ್ಲಿ ನಿರ್ಮಾಣವಾಯಿತು ಮತ್ತು ಸಾಹಿತ್ಯ ಸೃಷ್ಟಿಯೂ ಆಗಿದ್ದು ಕೂಡ ಕಾಗೋಡು ಹೋರಾಟಕ್ಕೆ ಹೆಚ್ಚಿನ ಹೆಸರು ಬರುವುದಕ್ಕೆ ಕಾರಣವಾಗಿರಬಹುದು’ ಎನ್ನುತ್ತಾರೆ.

ಮೇಲೆ ಚರ್ಚಿಸಿದ ‘ಪಾರಿಭಾಷಿಕ’ಗಳು ಹುಟ್ಟಲು ಅಥವಾ ಪ್ರಚಲಿತಕ್ಕೆ ಬರಲು,ಪ್ರಾದೇಶಿಕ ಅಸಮಾನತೆ, ಅಕ್ಷರ ಅವರು ಹೇಳುವ ಅಸ್ಮಿತೆಯ ಆತಂಕ, ಬರಗೂರು ಅವರು ಹೇಳುವಂತೆ ಮೌಢ್ಯ, ಶ್ರೀನಿವಾಸರು ಹೇಳುವ ಮೈಸೂರು ಪ್ರಾಂತ್ಯ ‘ಕರ್ನಾಟಕ’ ಆಗುವಲ್ಲಿನ ಪ್ರಕ್ರಿಯೆ ಅಲ್ಲಿ ಹಲವು ವಿಚಾರಗಳು ಮುನ್ನೆಲೆಗೆ ಬರಲಿಲ್ಲ. ಮೈಸೂರು ಪ್ರಾಂತ್ಯಕ್ಕೆ ಸೇರಿಲ್ಲದ, ಆದರೆ, ಈಗ ‘ಕರ್ನಾಟಕ’ಕ್ಕೆ ಸೇರಿದ ಪ್ರದೇಶಗಳಿಗೆ ಸಿಗಬೇಕಾದ ಪ್ರಾತಿನಿಧ್ಯ ಸಿಗಲಿಲ್ಲ ಎನ್ನಿಸುತ್ತದೆ. ಇದೇ ಕಾರಣಕ್ಕಾಗಿ ಕರ್ನಾಟಕ ಎಂದಾಕ್ಷಣ ನಮಗೆ, ಕಾವೇರಿ, ಶ್ರೀಗಂಧ, ಕೋಗಿಲೆ, ಮಲೆನಾಡು ಇವೇ ಪ್ರಾಮುಖ್ಯವಾಯಿತೇನೋ ಎನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT