ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಢ ಕೆಂಪು+ಕೊಂಚ ಖಾರ+ಜಾಸ್ತಿ ಪರಿಮಳ = ಬ್ಯಾಡಗಿ ಮೆಣಸಿನಕಾಯಿ

Published 10 ಮಾರ್ಚ್ 2024, 0:30 IST
Last Updated 10 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಎಲ್ಲಿಂದಲೋ ಬಂದ ಮೆಣಸಿನಕಾಯಿ ತಳಿಯೊಂದು ಹೊರ ಜಗತ್ತಿಗೆ ಅಪರಿಚಿತವಾಗಿದ್ದ ಊರಿಗೆ ತನ್ನದೇ ಬ್ರ್ಯಾಂಡ್‌ ಐಡೆಂಟಿಟಿಯನ್ನು ತಂದುಕೊಟ್ಟ ಕತೆಯೇ ಸ್ವಾರಸ್ಯಕರ...

ಈ ‘ಕೆಂಪು ಬೆಡಗಿ’ಯ ತವರೂರು ದೂರದ ಮೆಕ್ಸಿಕೊ. ಈಕೆಯನ್ನು 15 ನೇ ಶತಮಾನದ ಅಂತ್ಯದಲ್ಲಿ ಗೋವಾಕ್ಕೆ ಪರಿಚಯಿಸಿದವರು ಪೋರ್ಚುಗೀಸರು. ಇವರು ತಮ್ಮ ಆಹಾರಕ್ಕಾಗಿ ಜತೆಯಲ್ಲಿ ಈಕೆಯನ್ನು ಕರೆತಂದರು. ಈಕೆ ಕರ್ನಾಟಕಕ್ಕೂ ಕಾಲಿಟ್ಟಳು. ಅಲ್ಲಿಯವರೆಗೂ ಇಲ್ಲಿ ‘ಕಪ್ಪು ಸುಂದರಿ’ (ಕಾಳುಮೆಣಸು)ಯದೇ ದರ್ಬಾರು. ಯಾವಾಗ ಇಲ್ಲಿಯ ಜನ ‘ಕೆಂಪು ಬೆಡಗಿ’ಯ ಬಣ್ಣ, ರುಚಿ, ಸುವಾಸನೆಗೆ ಮರುಳಾದರೋ, ಅಂದಿನಿಂದ ಇಂದಿನವರೆಗೂ ಈ ಬೆಡಗಿಯದೇ ಕಾರುಬಾರು. ಈಕೆ ಯಾರು ಎಂದು ತಿಳಿದಿದ್ದೀರಿ? ಅದೇ, ‘ಬ್ಯಾಡಗಿ ಬೆಡಗಿ’ ಎಂದೇ ಕರೆಸಿಕೊಳ್ಳುವ ‘ಬ್ಯಾಡಗಿ ಮೆಣಸಿನಕಾಯಿ!’ ಇದು ಎಲ್ಲಿಂದಲೋ ಬಂದು ಹೆಸರು ಮಾಡಿದ್ದು ಮಾತ್ರ ನಮ್ಮ ಬ್ಯಾಡಗಿಯಲ್ಲಿ!

ಈ ಬ್ಯಾಡಗಿ ಮೆಣಸಿನಕಾಯಿ ಕುಗ್ರಾಮದ ಅಡುಗೆಮನೆಯಲ್ಲಿ ಅರೆಯುವ ಶೇಂಗಾ ಚಟ್ನಿಯಿಂದ ಹಿಡಿದು ಮಹಾನಗರಗಳಲ್ಲಿ ಜಗಮಗಿಸುವ ಮಾಲ್‌ಗಳಲ್ಲಿ ದೊರೆಯುವ ಪಿಜ್ಜಾ, ಬರ್ಗರ್‌ವರೆಗೂ ವಿವಿಧ ರೂಪಗಳಲ್ಲಿ ಬಳಕೆಯಾಗುತ್ತಿದೆ. ಆಹಾರ ಮತ್ತು ಔಷಧ ಉದ್ಯಮಕ್ಕೆ ಮಾತ್ರವಲ್ಲದೇ ಸೌಂದರ್ಯವರ್ಧಕಗಳಾದ ಉಗುರುಬಣ್ಣ, ತುಟಿಬಣ್ಣಕ್ಕೂ ‘ಬ್ಯಾಡಗಿ ಬೆಡಗಿ’ ರಂಗು ತುಂಬಿದ್ದಾಳೆ. ರಾಜ್ಯದ ಮುಖ್ಯ ವಾಣಿಜ್ಯ ಹಾಗೂ ಮಸಾಲೆ (ಸಾಂಬಾರು) ಬೆಳೆಯಾಗಿದ್ದು ದೇಶದ ರಫ್ತು ಉದ್ಯಮದಲ್ಲಿ ವಿಶೇಷ ಸ್ಥಾನ ಗಳಿಸಿಕೊಂಡಿದೆ. 

ಗಾಢ ಕೆಂಪು ಬಣ್ಣ, ಕಡಿಮೆ ಖಾರ ಮತ್ತು ಸುವಾಸನೆಯ ವಿಶಿಷ್ಟ ಗುಣಗಳನ್ನು ಮೈಗೂಡಿಸಿಕೊಂಡಿರುವ ಈ ಮೆಣಸಿನಕಾಯಿ ಜಗತ್ಪ್ರಸಿದ್ಧ. ದೀರ್ಘಕಾಲದವರೆಗೆ ಬಣ್ಣಗೆಡುವುದಿಲ್ಲ, ರುಚಿ ಕಳೆದುಕೊಳ್ಳುವುದಿಲ್ಲ ಎಂಬುದೇ ಇದರ ಹೆಗ್ಗಳಿಕೆ. ನೆರಿಗೆಯುಕ್ತ ಕಾಯಿಯಲ್ಲಿ ಅಡಕವಾಗಿರುವ ‘ಓಲಿಯೊರೈಸಿನ್‌’ ಎಣ್ಣೆ ವಿಶ್ವ ಮನ್ನಣೆ ತಂದುಕೊಟ್ಟಿದೆ. 2011ರಲ್ಲಿ ಭೌಗೋಳಿಕ ಸೂಚಿಯಾಗಿಯೂ (Geographical Indication–129) ಮಾನ್ಯತೆ ಪಡೆದಿದೆ. ಅಷ್ಟೇ ಏಕೆ, 2021ರಿಂದ ಅಂಚೆ ಇಲಾಖೆ ಲಕೋಟೆ ಮೇಲೆಯೂ ಬ್ಯಾಡಗಿ ಮೆಣಸಿನಕಾಯಿ ರಾರಾಜಿಸುತ್ತಿದೆ.

ಆಂಧ್ರ ಪ್ರದೇಶದ ಗುಂಟೂರು ಸಣ್ಣಂ, ತಮಿಳುನಾಡಿನ ವಿಲಾತಿಕುಲಂ ಗುಂಡು, ಕೇರಳದ ಎಡ್ಯೂರ್‌ ಚಿಲ್ಲಿ, ಗೋವಾದ ಖೋಲಾ, ಹರ್ಮಲ್‌–ಹೀಗೆ ಹದಿನಾರಕ್ಕೂ ಹೆಚ್ಚು ಮೆಣಸಿನಕಾಯಿ ತಳಿಗಳು ಭೌಗೋಳಿಕ ಸೂಚಿ (ಜಿಐ) ಮಾನ್ಯತೆ ಪಡೆದಿವೆ. ಇವುಗಳಲ್ಲಿ ಬ್ಯಾಡಗಿಯ ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿಗೆ ವಿಶಿಷ್ಟ ಸ್ಥಾನವಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ತಳಿಯಾಗಿದೆ.

ಆರಂಭದಲ್ಲಿ ಹಾವೇರಿ ಜಿಲ್ಲೆಯ ಅರೆ ಮಲೆನಾಡು ಪ್ರದೇಶವಾದ ಹಿರೇಕೆರೂರು ಮತ್ತು ರಟ್ಟೀಹಳ್ಳಿ ಭಾಗಗಳಲ್ಲಿ ಈ ಬೆಳೆ ಪ್ರವರ್ಧಮಾನಕ್ಕೆ ಬಂದಿತು. ಕಾರಣ ಇಲ್ಲಿಯ ಆರ್ದ್ರತೆಯ ಹವಾಮಾನ ಮತ್ತು ಮಣ್ಣಿನ ಗುಣ ಮೆಣಸಿನಕಾಯಿ ಬೆಳೆಗೆ ಹೇಳಿ ಮಾಡಿಸಿದಂತಿತ್ತು. ಮುಂಗಾರು–ಹಿಂಗಾರು ಮಳೆ ಸಮ ಪ್ರಮಾಣದಲ್ಲಿ ಬೀಳುತ್ತಿತ್ತು. ಹೀಗಾಗಿ, ವಾಣಿಜ್ಯ ಮತ್ತು ಮಿಶ್ರಬೆಳೆಯಾಗಿ ಮೆಣಸಿನಕಾಯಿ ರೈತರ ಮನ ಗೆದ್ದಿತು. 

‘ಹಾವೇರಿ ಭಾಗದಲ್ಲಿ ಮೆಣಸಿನಕಾಯಿ ಬೆಳೆ ಕ್ಷೇತ್ರ ಹೆಚ್ಚು ವಿಸ್ತರಣೆಯಾದಂತೆ, ಬ್ಯಾಡಗಿ ಪಟ್ಟಣ ವ್ಯಾಪಾರ ಕೇಂದ್ರವಾಗಿ ರೂಪುಗೊಂಡಿತು. ಇಲ್ಲಿನ ಮಾರುಕಟ್ಟೆಯಿಂದಲೇ ಕಡ್ಡಿ ಮತ್ತು ಡಬ್ಬಿ ತಳಿ ಮೆಣಸಿನಕಾಯಿಗೆ ‘ಬ್ಯಾಡಗಿ’ ಎಂಬ ಹೆಸರು ತಳಕು ಹಾಕಿಕೊಂಡು, ವಿಶ್ವದಾದ್ಯಂತ ತನ್ನ ಘಾಟು ಪರಿಮಳವನ್ನು ಪಸರಿಸಿದೆ’ ಎನ್ನುತ್ತಾರೆ ಬ್ಯಾಡಗಿಯ ಉದ್ಯಮಿ ಎಸ್‌.ಆರ್.ಪಾಟೀಲ. 

ಇದೇ ವರ್ಷ ಒಂದು ದಿನ ಬ್ಯಾಡಗಿ ಮಾರುಕಟ್ಟೆಯಲ್ಲಿ  4.09 ಲಕ್ಷ ಚೀಲ (1,02,280 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿ ದಾಖಲೆ ಬರೆಯಿತು! ಭಾರತದ ಮಸಾಲೆ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವಾರ್ಷಿಕವಾಗಿ  ₹9 ಲಕ್ಷ ಕೋಟಿಗೂ ಅಧಿಕ ವಹಿವಾಟು ನಡೆಸುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದೆ. ಪ್ರಸಿದ್ಧ ಮಸಾಲೆ ಪದಾರ್ಥ ತಯಾರಿಕ ಕಂಪನಿಗಳಿಗೆ ಬ್ಯಾಡಗಿ ಮಾರುಕಟ್ಟೆಯಿಂದಲೇ ಮೆಣಸಿನಕಾಯಿಯ ಖಾರದಪುಡಿ ಪೂರೈಕೆಯಾಗುತ್ತದೆ. ಅಮೆರಿಕ, ರಷ್ಯಾ, ಮಲೇಷಿಯಾ, ಇಂಡೊನೇಷ್ಯಾ, ಸಿಂಗಪುರ, ಶ್ರೀಲಂಕಾ, ಅರಬ್‌, ಯುರೋಪ್‌ ಸೇರಿದಂತೆ ಹಲವು ದೇಶಗಳಿಗೆ ಬ್ಯಾಡಗಿ ಮೆಣಸಿನಕಾಯಿ ರಫ್ತಾಗುತ್ತದೆ. 

‘ಒಣಬೇಸಾಯದಲ್ಲಿ ಬೆಳೆದ ಬ್ಯಾಡಗಿ ತಳಿಯ ಎರಡು ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹82 ಸಾವಿರದಂತೆ ಮಾರಾಟವಾಗಿದ್ದು, ಚಿನ್ನದ ಬೆಲೆ ಸಿಕ್ಕಿದೆ. ನಾನು ಬೆಳೆದ ಮೆಣಸಿನಕಾಯಿ ಬೀಜವನ್ನು ಖರೀದಿಸಲು ರೈತರು ಮುಗಿಬಿದ್ದಿದ್ದಾರೆ. ಬ್ಯಾಡಗಿ ಮೆಣಸಿನಕಾಯಿ ಬೆಳೆಗಾರರ ಪಾಲಿನ ಕೆಂಪು ಬಂಗಾರ’ ಎನ್ನುತ್ತಾರೆ ಗದಗ ಜಿಲ್ಲೆಯ ಬೆಟಗೇರಿಯ ರೈತ ಎಂ.ಬಿ. ಕರಿಬಿಸ್ಟಿ.

ಬ್ಯಾಡಗಿ ಮಾರುಕಟ್ಟೆಯಲ್ಲಿ ಇ–ಟೆಂಡರ್‌ ಪ್ರಕ್ರಿಯೆ ಇದ್ದು, ಉತ್ಪನ್ನ ಮಾರಾಟವಾದ ದಿನವೇ ರೈತರಿಗೆ ಹಣ ಪಾವತಿಯಾಗುತ್ತದೆ.  ಪಟ್ಟಣದಲ್ಲಿ 30ಕ್ಕೂ ಹೆಚ್ಚು ಶೈತ್ಯಾಗಾರಗಳಿದ್ದು, ಮೆಣಸಿನಕಾಯಿ ಬಣ್ಣ ಮತ್ತು ಗುಣಮಟ್ಟವನ್ನು ಸಂರಕ್ಷಣೆ ಮಾಡಲು ಅನುಕೂಲವಾಗಿದೆ. ವಿದೇಶಿ ಕಂಪನಿಗಳೂ ಖರೀದಿಗೆ ಬರುತ್ತಿದ್ದು, ಉಳಿದೆಡೆಗಿಂತ ಉತ್ತಮ ಬೆಲೆ ಸಿಗುತ್ತಿದೆ. ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ರೈತರು ನೂರಾರು ಕಿಲೊಮೀಟರ್‌ಗಳಿಂದ ಬ್ಯಾಡಗಿ ಮಾರುಕಟ್ಟೆಗೆ ಉತ್ಪನ್ನವನ್ನು ವಾಹನಗಳಲ್ಲಿ ತರುತ್ತಾರೆ.

ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮೊದಲು ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿ ಮಾತ್ರ ಆವಕವಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಹೈಬ್ರಿಡ್‌ ತಳಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಸುಧಾರಿತ ತಳಿಗಳಲ್ಲಿ ಅತಿಯಾದ ಖಾರ, ಅತಿಯಾದ ಬಣ್ಣ, ಅಧಿಕ ಇಳುವರಿ ಸಿಗುತ್ತಿದೆ. ಆದರೆ, ರುಚಿ, ಬಣ್ಣ, ಸುವಾಸನೆ ಎಲ್ಲವನ್ನೂ ಹದವಾದ ಪ್ರಮಾಣದಲ್ಲಿ ಹೊಂದಿರುವ ಮೂಲ ತಳಿಯ ಗುಣಮಟ್ಟ ಬೇರ‍್ಯಾವುದರಲ್ಲೂ ಸಿಗುತ್ತಿಲ್ಲ. ಹೀಗಾಗಿಯೇ ಬ್ಯಾಡಗಿ ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿ ಖರೀದಿಸಲು ವ್ಯಾಪಾರಸ್ಥರು ಮತ್ತು ಮಸಾಲೆ ಪದಾರ್ಥ ತಯಾರಕರು ಮುಗಿಬೀಳುತ್ತಾರೆ.

ಬ್ಯಾಡಗಿ ಮಾರುಕಟ್ಟೆ ಪ್ರಾಂಗಣದ ನೋಟ

ಬ್ಯಾಡಗಿ ಮಾರುಕಟ್ಟೆ ಪ್ರಾಂಗಣದ ನೋಟ 

ಅವಸಾನದ ಅಂಚಿನಲ್ಲಿ ಮೂಲತಳಿ

‘ಮೂಲ ತಳಿಯಾದ ಕಡ್ಡಿ ಮತ್ತು ಡಬ್ಬಿ ಮೆಣಸಿನಕಾಯಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವಸಾನದ ಅಂಚಿನಲ್ಲಿದೆ. ಬ್ಯಾಡಗಿ ಮಾರುಕಟ್ಟೆಗೆ 50ಕ್ಕೂ ಹೆಚ್ಚು ತಳಿಗಳು ಬರುತ್ತಿದ್ದು, ಒಟ್ಟು ಆವಕದಲ್ಲಿ ಶೇಕಡ 15ರಷ್ಟು ಮಾತ್ರ ಮೂಲತಳಿ ಪೂರೈಕೆಯಾಗುತ್ತಿದೆ. ಮೂಲತಳಿಯನ್ನು ಅಭಿವೃದ್ಧಿಪಡಿಸುವಂತೆ ಇಲ್ಲಿಯ ವರ್ತಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ, ಈವರೆಗೂ ಮೂಲತಳಿಯನ್ನು ಉಳಿಸಿ, ಬೆಳೆಸುವ‌ ಕಾರ್ಯ ನಡೆಯುತ್ತಿಲ್ಲ’ ಎಂದು ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಬೇಸರ ವ್ಯಕ್ತಪಡಿಸುತ್ತಾರೆ. 

ಆಶ್ಚರ್ಯವೆಂದರೆ, ಬ್ಯಾಡಗಿ ಮೆಣಸಿನಕಾಯಿ ಬೆಳೆ ಹಾವೇರಿ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಕಣ್ಮರೆಯಾಗಿ, ಮಾರುಕಟ್ಟೆಯೊಂದೇ ಉಳಿದಿದೆ. ಮೆಣಸಿನಕಾಯಿಗೆ ತಗಲುವ ರೋಗ, ಕೀಟಗಳ ಹಾವಳಿ ಹಾಗೂ ಹವಾಮಾನ ವೈಪರೀತ್ಯದಿಂದ ಬೇಸತ್ತ ಹಾವೇರಿ ಜಿಲ್ಲೆಯ ಹೆಚ್ಚಿನ ರೈತರು ಮೆಕ್ಕೆಜೋಳಕ್ಕೆ ಮೊರೆ ಹೋಗಿದ್ದಾರೆ. ಈಗೇನಿದ್ದರೂ ಧಾರವಾಡ ಜಿಲ್ಲೆಯ ಕುಂದಗೋಳ, ಸಂಶಿ, ಗುಡಗೇರಿ, ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ರಾಯಚೂರು ಜಿಲ್ಲೆಗಳ ರೈತರು ಹೆಚ್ಚಾಗಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. 

ರಾಜ್ಯದಲ್ಲಿ 2.50 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಮೆಣಸಿನಕಾಯಿ ಬಿತ್ತನೆ ಕ್ಷೇತ್ರ ಈಗ 88 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಬ್ಯಾಡಗಿ ಮೂಲತಳಿ ಹೆಸರಿನಲ್ಲಿ ಮಧ್ಯವರ್ತಿಗಳು ಕಳಪೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವ ಮೂಲಕ ರೈತರನ್ನು ವಂಚಿಸುತ್ತಿದ್ದಾರೆ. ಕಳಪೆ ಬೀಜಗಳಿಂದ ಇಳುವರಿ ಕುಂಠಿತವಾಗಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಪರಿಹಾರವೆಂದರೆ, ಸ್ಪೈಸ್‌ ಕಂಪನಿಗಳು, ವರ್ತಕರು ಹಾಗೂ ರೈತರ ಸಹಯೋಗದಲ್ಲಿ ಸಹಕಾರ ಸಂಘದ ಮಾದರಿಯಲ್ಲಿ ಬೀಜ ಬ್ಯಾಂಕ್‌ ಸ್ಥಾಪನೆಯಾಗಬೇಕು. ಆಗ ಉತ್ತಮ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಬಿತ್ತನೆ ಬೀಜಗಳು ರೈತರಿಗೆ ಸಿಗುತ್ತವೆ. ಈ ಮೂಲಕ ಬ್ಯಾಡಗಿ ಮೆಣಸಿನಕಾಯಿಯ ಮೂಲತಳಿಯನ್ನು ಸಂರಕ್ಷಣೆ ಮತ್ತು ಸಂವರ್ಧನೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಹುಬ್ಬಳ್ಳಿಯ ಯುವ ವರ್ತಕ ಬಸವರಾಜ ಹಂಪಾಳಿ ಅವರ ಅಭಿಮತ.  

‘ಬ್ಯಾಡಗಿ ಮೂಲತಳಿಯನ್ನೇ ಹೋಲುವ ಸುಧಾರಿತ ತಳಿಗಳು ಹೆಚ್ಚಿನ ಇಳುವರಿ ನೀಡುತ್ತಿವೆ. ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ‘ರುದ್ರ (ಜಿಪಿಎಂ 120 ಎಸ್‌–1) ಸುಧಾರಿತ ತಳಿ ಅಭಿವೃದ್ಧಿಪಡಿಸಿದ್ದು, ಖುಷ್ಕಿ ಬೆಳೆಯಲ್ಲಿ ಹೆಕ್ಟೇರ್‌ಗೆ 10–15 ಕ್ವಿಂಟಲ್‌ ಇಳುವರಿ ಪಡೆಯಬಹುದು’ ಎನ್ನುತ್ತಾರೆ ದೇವಿಹೊಸೂರು ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಪ್ರಭುದೇವ ಅಜ್ಜಪ್ಪಳವರ.

ಇವೆಲ್ಲ ಏನೇ ಇರಲಿ, ಕಾಲದ ಒತ್ತಡದಲ್ಲಿ ರೈತರು ಕಡಿಮೆ ರಿಸ್ಕ್‌ ಇರುವ ಬೆಳೆಗಳತ್ತ ಮುಖ ಮಾಡುವುದು ಸಹಜ. ಆದರೆ, ಅಪರೂಪದ ತಳಿಯನ್ನು ಉಳಿಸಿ, ಸಂವರ್ಧನೆ ಮಾಡುವುದು ಸರ್ಕಾರದ ಆದ್ಯತೆಯ ಕೆಲಸವಾಗಬೇಕು. ಇದಕ್ಕೆ ರೈತರು, ಕೃಷಿ ವಿಜ್ಞಾನಿಗಳೂ ಕೈ ಜೋಡಿಸಬೇಕು.

ಮೆಣಸಿನಕಾಯಿ ಆರಿಸುತ್ತಿರುವ ಮಹಿಳೆ

ಮೆಣಸಿನಕಾಯಿ ಆರಿಸುತ್ತಿರುವ ಮಹಿಳೆ

ನಮ್ಮ ಬ್ರ್ಯಾಂಡ್‌ ಮೂಲಕ 24 ಬಗೆಯ ಉಪ್ಪಿನಕಾಯಿ, 9 ರೀತಿಯ ಚಟ್ನಿಗಳು, 4 ತರಹದ ಹಪ್ಪಳ ಸೇರಿದಂತೆ 50 ಬಗೆಯ ಪದಾರ್ಥಗಳನ್ನು ತಯಾರಿಸುತ್ತೇವೆ. ನಾವು ಶುದ್ಧ ಬ್ಯಾಡಗಿ ಮೆಣಸಿನಕಾಯಿಯನ್ನೇ ಬಳಸುವುದು. ಅಮೆಜಾನ್‌, ಫ್ಲಿಪ್‌ಕಾರ್ಟ್‌, ಡಿ–ಮಾರ್ಟ್, ರಿಲಯನ್ಸ್‌ ಸೇರಿದಂತೆ ಹಲವು ಕಂಪನಿಗಳ ಮಳಿಗೆ ಮತ್ತು ಜಾಲತಾಣಗಳ ಮೂಲಕ ನಮ್ಮ ಉತ್ನನ್ನಗಳು ಮಾರಾಟವಾಗುತ್ತವೆ.
ರಾಜಶೇಖರ ಉಮದಿ ವ್ಯಾಪಾರಿ, ವಿಜಯಪುರ
‘ಬ್ಯಾಡಗಿ’ ರುಚಿಗೆ ಸರಿಸಾಟಿಯಿಲ್ಲ ಮೂವತ್ತು ವರ್ಷಗಳಿಂದ ಬ್ಯಾಡಗಿ ಮೆಣಸಿನಕಾಯಿ ಬಳಸುತ್ತಿದ್ದೇನೆ. ಇದರಿಂದ ಕರಿಂಡಿ, ಕೆಂಪಿಂಡಿ, ಉಪ್ಪಿನಕಾಯಿ ಮಾಡುತ್ತೇನೆ. ತುಪ್ಪ ಹಚ್ಚಿಕೊಂಡು ಬಿಸಿಅನ್ನ ಮತ್ತು ಚಪಾತಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ. ಒಣಮೆಣಸಿನಕಾಯಿ ಹುರಿದುಕೊಂಡು ಜೀರಿಗೆ, ಕೊತ್ತಂಬರಿ, ಕರಿಬೇವು, ಬೆಳ್ಳುಳ್ಳಿ ಹಾಕಿ ಸಿದ್ಧಪಡಿಸಿದ ಖಾರದಪುಡಿ ಬೇರೇನೇ ಟೇಸ್ಟ್‌ ಕೊಡುತ್ತದೆ
ರತ್ನಾ ಶಿರಿಗಣ್ಣವರ, ಗೃಹಿಣಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT