ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆ ಕಾಡಿನ ಅಭಿವೃದ್ಧಿ‌ ಕಹಿ ಸತ್ಯಗಳು

Last Updated 23 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ದಶಕಗಳೀಚೆಗೆ ಮರ ಕಡಿದಿದ್ದು ಕಂಡಿಲ್ಲ, ಆದರೂ ಭೂಮಿ ಕುಸಿದಿದ್ದು ಏಕೆ? ಅರಣ್ಯ ನಾಶ ಭೂ ಕುಸಿತಕ್ಕೆ ಕಾರಣವಾಗುವುದಾದರೆ ಅರಣ್ಯವಿದ್ದೂ ಭೂಮಿ ಕುಸಿದಿದ್ದಕ್ಕೆ ಕಾರಣವೇನು? – ಮಡಿಕೇರಿಯ ರವಿ ಚಂಗಪ್ಪ ಪ್ರಶ್ನಿಸಿದ್ದರು.

ಕಾಡಲ್ಲಿ ಇವತ್ತು ಮರ ಕಡಿದಾಗ ಮರದ ಬೊಡ್ಡೆ ಕಣ್ಣಿಗೆ ಢಾಳಾಗಿ ಕಾಣಿಸುತ್ತದೆ. ವರ್ಷ ಉರುಳಿದಂತೆ ಅದು ಚಿಗುರುತ್ತ, ಒಣಗುತ್ತ ಸಾಯುವ ಪ್ರಕ್ರಿಯೆ ಶುರುವಾಗುತ್ತದೆ. ಮರ ಕರಗಿಸುವ ಕಾರ್ಯಕ್ಕೆ ಅಣಬೆ, ಹಾವಸೆ, ಗೆದ್ದಲು ಮುನ್ನುಗ್ಗುತ್ತವೆ. ಬೊಡ್ಡೆ ಎಷ್ಟು ವರ್ಷಕ್ಕೆ ಸಂಪೂರ್ಣ ಮಣ್ಣಾಗುತ್ತದೆಂದು ಹೇಳಲಾಗುವುದಿಲ್ಲ. ಹೊನ್ನೆ, ಮತ್ತಿ, ಬೀಟೆ, ಮಾವು, ಸುರಹೊನ್ನೆ, ಹೊಳಗೇರು, ಹೈಗ, ತೇಗ ಹೀಗೆ ಮರಜಾತಿ ಗುಣ ನೋಡಿ ಅಂದಾಜಿಸಬೇಕು. ಅವು ಗಟ್ಟಿ ಜಾತಿಯ ವೃಕ್ಷಗಳಾಗಿದ್ದರೆ 25-30 ವರ್ಷಗಳಷ್ಟು ಸಮಯವೂ ಹಿಡಿಯಬಹುದು. 1970ರ ಅವಧಿಯಲ್ಲಿ ತೇಗ ಬೆಳೆಸಲೆಂದು ಪಶ್ಚಿಮ ಘಟ್ಟದ ಕಾಡನ್ನು ಕಡಿದ ನೆಲೆಯಲ್ಲಿ ಈಗಲೂ ಮರಗಳ ಬುಡ ನೋಡಬಹುದು. ನೈಸರ್ಗಿಕ ಕಾಡಿನ ಮಧ್ಯೆ ಕಡಿತ, ಬೆಂಕಿ, ರೋಗದ ಹಾವಳಿಯಿಂದ ಮರ ಸಾವನ್ನಪ್ಪಿದ್ದು ತಲೆಮಾರಿಗೆ ಗಮನಕ್ಕೆ ಬರದಿದ್ದರೂ ಆ ಕುಸಿತದಂತಹ ಅನಾಹುತಗಳಿಗೆ ಬೆಲೆ ತೆರುವಂತಾಗಿದೆ.

ಮರ ಮಣ್ಣಾಗಿ ಕರಗುತ್ತಿದ್ದಂತೆ ಭೂಮಿಯ ಆ ಭಾಗ ನಾಲ್ಕಾರು ಅಡಿ ಪೊಳ್ಳಾಗುತ್ತದೆ, ಬೇರಿನ ಜಾಲಗಳಲ್ಲಿ ಮಳೆ ನೀರು ಇಳಿಯುತ್ತದೆ. ಅಂತರ್ಜಲ ಹೆಚ್ಚಳಕ್ಕೆ ನೆರವಾಗುತ್ತವೆ. ಹೆಚ್ಚು ಮರ ಕಡಿದಿದ್ದರೆ ಮಹಾಮಳೆಗೆ ಭೂಮಿ ಕುಸಿಯಬಹುದು. ಇಂಥ ಭೂಕುಸಿತ ಏಕಾಯಿತು ಎಂದು ತಿಳಿಯಬೇಕಾದರೆ ಅರಣ್ಯ ಕಾರ್ಯ ಯೋಜನೆಯ ಬ್ರಿಟಿಷ್ ದಾಖಲೆಗಳನ್ನು ನೋಡಬೇಕು. ಸ್ವಾತಂತ್ರ್ಯ ನಂತರದಲ್ಲಿ ನೈಸರ್ಗಿಕ ಸಂಪನ್ಮೂಲ ಬಳಸಿ ಕೈಗಾರಿಕೆ ಬೆಳೆಸಲು ಹೊರಟು ಬೆಂಕಿಕಡ್ಡಿ, ಪಲ್ಪ್‌ವುಡ್‌, ಫ್ಲೈವುಡ್‌ ತಯಾರಿಕೆಗೆ ಮರ ಕಡಿದ ಕಾರಣಗಳಿಂದಲೂ ತಿಳಿಯಬಹುದು.

ನರ್ಸರಿ ಗೆಲುವಿನಲ್ಲಿ ನೆಡುತೋಪು ಮುಖ

ಏಕಜಾತಿ ನೆಡುತೋಪು ಅರಣ್ಯಾಭಿವೃದ್ಧಿ ಹಾಗೂ ನದಿ ಪುನಶ್ಚೇತನದ ಪ್ರಶ್ನೆಗಳು ಕಣ್ಣೆದುರಿಗಿವೆ. ಈ ವಿಷಯ ಚರ್ಚೆಯಾದಾಗಲೆಲ್ಲ ಗಿಡ ನೆಡುವ ಪರಿಹಾರ ಮುಂದೆ ಬರುತ್ತದೆ. ಈಗ ಕಾವೇರಿ ಕಣಿವೆಯಲ್ಲಿ 242 ಕೋಟಿ ಸಸಿಗಳನ್ನು ರೈತರ ಭೂಮಿಗಳಲ್ಲಿ ನೆಡುವ ‘ಕಾವೇರಿ ಕೂಗು’ ಗಮನ ಸೆಳೆಯುತ್ತಿದೆ. ಈ ಯೋಜನೆಯಲ್ಲಿ ಮರ ಬೆಳೆಸುವುದರಿಂದ ಐದರಿಂದ ಏಳು ವರ್ಷಗಳಲ್ಲಿ ರೈತರ ಆದಾಯ 300-800 ಪಟ್ಟು ಏರುತ್ತದೆಂದು ಹೇಳಲಾಗಿದೆ! ಅರಣ್ಯದಿಂದ ಹೊರಗಡೆ ಅರಣ್ಯ ಅಭಿವೃದ್ಧಿಗೊಳಿಸುವ ಮುಖ್ಯ ಕಾರ್ಯವಿದು. ಕೃಷಿ ನೆಲದ ಸತ್ವ ನಾಶದ ತಡೆಗೆ ಬರಡು ಭೂಮಿಗೆ ಹಸಿರು ಹೊದಿಕೆ ಅಗತ್ಯ. ಈಗ ರೈತರಲ್ಲಿ ಮರ ಪ್ರೀತಿ ಬೆಳೆಸಲು ಲಾಭದ ನೀತಿಗಳನ್ನು ಹೆಣೆಯಲಾಗಿದೆ. ಒಬ್ಬ ರೈತನ ಗೆಲುವು ಇನ್ನಷ್ಟು ಜನಕ್ಕೆ ಪ್ರೇರಣೆ ನೀಡುತ್ತದೆಯೇ ಹೊರತು ಬರೀ ಭಾಷಣ, ಘೋಷಣೆಗಳಿಂದ ಯಾವತ್ತೂ ಸಾಧ್ಯವಿಲ್ಲ. ರಚನಾತ್ಮಕ ಮಾದರಿಗಳ ಮೂಲಕ ಕೆಲಸಗಳು ಪರಿಣಾಮಕಾರಿಯಾಗಿ ಮುಂದಕ್ಕೆ ಹೋಗುತ್ತವೆ.

‘ಮರ ನೆಡಬೇಕು, ಬೆಳೆಸಬೇಕು’ ಎಂದಾಗ ಮರ ಬೆಳೆಯುವ ಸಮಯ, ಮಾರುಕಟ್ಟೆ, ಅರಣ್ಯ ಕಾನೂನು, ಲಾಭಗಳತ್ತ ಜನ ಯೋಚಿಸುತ್ತಾರೆ. ಕೃಷಿ ಮನಸ್ಸು ಹೇಗಿದೆ ಯೆಂದರೆ ದಿಢೀರ್ ದುಡ್ಡು ಮಾಡಬೇಕು. ಬಹುವಾರ್ಷಿಕ ಹಲಸು, ತೆಂಗಿನಮರಗಳೂ ಒಂದೇ ವರ್ಷಕ್ಕೆ ಫಲ ಕೊಡಬೇಕು ಎನ್ನುವಷ್ಟು ಅವಸರವಿದೆ. ಇದಕ್ಕಾಗಿ ಶೀಘ್ರ ಬೆಳೆವ ಮರಜಾತಿಯತ್ತ ಹೊರಡುತ್ತೇವೆ. ಹೆಬ್ಬೇವು, ಅಕೇಶಿಯಾ, ಸಿಲ್ವರ್, ಕ್ಯಾಸುರಿನಾ, ಮಹಾಗನಿಯಂಥ ಸಸ್ಯಗಳು ವಿಜೃಂಭಿಸುತ್ತವೆ. ಕೋಟ್ಯಂತರ ಸಸಿಗಳನ್ನು ನೆಡುವ ಗುರಿ ನಿಗದಿಪಡಿಸಿದರಂತೂ ಸುಲಭದಲ್ಲಿ ಬೆಳೆಯುವಂತಹ ಬೆರಳೆಣಿಕೆಯ ಸಸ್ಯಗಳೇ ಮೇಲುಗೈ ಸಾಧಿಸುತ್ತವೆ. ನರ್ಸರಿಗಳಲ್ಲಿ ಯಾವ ಸಸಿ ಇದೆಯೋ ಅದನ್ನು ರೈತರಿಗೆ ಹಂಚುತ್ತೇವೆ. ಯಾವ ಬೀಜ ನರ್ಸರಿಗೆ ದೊಡ್ಡ ಪ್ರಮಾಣದಲ್ಲಿ ದೊರೆತು ಆರು ತಿಂಗಳ ಸೀಮಿತ ಸಮಯದಲ್ಲಿ ಸಸಿ ಬೆಳೆಸುವ ಸಾಧ್ಯತೆಯಿದ್ದವೋ ಅವು ಮುಂದೆ ನಿಲ್ಲುತ್ತವೆ. ಕೃಷಿ ಅರಣ್ಯ ಬೆಳೆಸುವುದಕ್ಕೆ ಶುರುಮಾಡಿ ಮರಳಿ ಸಸ್ಯಗಳತ್ತ ನೋಡಿದರೆ, ಅದು ಇನ್ನೊಂದು ಖಾಸಗಿ ಏಕಜಾತಿಯ ನೆಡುತೋಪಾಗಿರುತ್ತದೆ.

ಅವೆಲ್ಲ ನಾವು ಬೆಳೆಸಿದಲ್ಲ...

ನದಿ ಕಣಿವೆಗಳ ಸಸ್ಯ ಸಂಪತ್ತು ನಾವು ಬೆಳೆಸಿದ್ದಲ್ಲ. ಈಗ ನಮಗೇನು ಬೇಕು ಎಂಬುದಕ್ಕೆ ಮಹತ್ವ ನೀಡುತ್ತೇವೆ. ಕೋಟ್ಯಂತರ ವರ್ಷಗಳಿಂದ ಪರಿಸರಕ್ಕೆ ತಕ್ಕಂತೆ ಹುಲ್ಲು, ಬಳ್ಳಿ, ಮುಳ್ಳು ಕಂಟಿ, ಪೊದೆ, ಗಗನಚುಂಬಿ ವೃಕ್ಷ ಮೇಳೈಸಿವೆ. ಮರ ಸಾಗಾಟಕ್ಕೆ ಲಾರಿಗಳಿಲ್ಲದ ಕಾಲದಲ್ಲಿ ನದಿ, ನಾಲೆಗಳ ಪ್ರವಾಹದಲ್ಲಿ ದೊಡ್ಡ ದೊಡ್ಡ ನೈಸರ್ಗಿಕ ತೇಗದ ಮರಗಳನ್ನು ಕತ್ತರಿಸಿ ಸಾಗಿಸಿದ್ದೇವೆ. ತೇಗದ ತೋಟ ಬೆಳೆಸುವ 1840- 1900 ಇಸವಿಯ ಹೊತ್ತಿನಲ್ಲಿ ಕಡಿದಾದ ಗುಡ್ಡಗಳ ನೈಸರ್ಗಿಕ ಅರಣ್ಯ ಕಡಿದು ಬೆಂಕಿಯಿಂದ ಸುಟ್ಟು ಮಾನೋಕಲ್ಚರ್ ಹಬ್ಬಿಸಿದ್ದೇವೆ. ಸಾಗಾಟಕ್ಕೆ ಅನುಕೂಲವೆಂದು ನದಿಯಂಚಿನಲ್ಲಿ ನೆಡುತೋಪು ಎದ್ದಿದೆ. ನದಿ ಕಣಿವೆಗಳಲ್ಲಿ ಕೃಷಿ, ಉದ್ಯಮಗಳ ಕಾರಣದಿಂದ ಅರಣ್ಯ ಸ್ವರೂಪಗಳನ್ನು ಅಸಡಾಬಸಡಾ ತಿದ್ದಿದ್ದೇವೆ, ವಿರೂಪಗೊಳಿಸಿ ನಾಶಗೊಳಿಸಿದ್ದೇವೆ. ಈಗ ನದಿ ಸಂರಕ್ಷಣೆಗೆ ಕೃಷಿ ಅರಣ್ಯ ಒಂದು ದಾರಿಯೇ ಹೊರತೂ ಅದೇ ಸಮಗ್ರವಲ್ಲ.

ಇನ್ನು ಸಸ್ಯಾಭಿವೃದ್ಧಿಯ ಪ್ರಶ್ನೆ. ಇದು ಬಹಳ ಸೂಕ್ಷ್ಮದ ವಿಷಯ. ಈ ಪ್ರಕ್ರಿಯೆಯಲ್ಲಿ ಪಕ್ಷಿ, ಪ್ರಾಣಿ, ಕ್ರಿಮಿ ಕೀಟಗಳು ಜೀವಾವಾಸದ ಜೊತೆಗೆ ಆಹಾರ ಸಂಬಂಧವಿದೆ. ‘ಇಲ್ಲಿ ಮಾತ್ರ ಸಿಂಗಳೀಕವಿದೆ, ಹುಲಿಯಿದೆ’ ಎಂದು ನಿಗದಿತ ಪ್ರದೇಶ ತೋರಿಸಿ ಹೇಳುವಾಗ, ಅಲ್ಲಿ ಪೂರಕವಾದ ಸಸ್ಯ ವ್ಯವಸ್ಥೆಗಳಿವೆ ಎಂದು ನೆನಪಿಡಬೇಕು.

ಮನುಷ್ಯ ನದಿ ಸಂರಕ್ಷಣೆ, ಅರಣ್ಯಾಭಿವೃದ್ಧಿ ಮಾಡುವುದಾಗಿ ಎಷ್ಟೇ ಯೋಜಿಸಿದರೂ ನಮ್ಮ ತಿಳಿವಳಿಕೆ ಮಟ್ಟದಲ್ಲಿ ನಿರ್ಧಾರ ನಿಲ್ಲುತ್ತದೆ. ಬಳ್ಳಾರಿಯ ಹಗರಿಹಳ್ಳದ ಸೀಮೆಯಲ್ಲಿ ಆಷಾಡದ ಗಾಳಿಯಲ್ಲಿ ಕೃಷಿ ಭೂಮಿಯ ಮರಳು ಹಾರಾಟ ತಡೆಯಲು ಪ್ರೀತಿಯಿಂದ ಬರಮಾಡಿ ಕೊಂಡ ಬಳ್ಳಾರಿ ಜಾಲಿಯಿದೆ. ಅದು ಈಗ ಕಳೆಯಾಗಿ ರಾಜ್ಯವಾಳುತ್ತಿದೆ. ಯಶಸ್ಸು, ಸಾಧನೆಯನ್ನು ಲೆಕ್ಕ ಹಾಕುತ್ತ ಗೆಲ್ಲುವುದಕ್ಕೆ ಹೋಗಿ ಸೋತಿದ್ದೇವೆ.

ನದಿಗೆ ಯಾವ ಸಸ್ಯ ಅಗತ್ಯವೆಂದು ಅಳಿದುಳಿದ ಕಣಿವೆ ಕಾಡುಗಳು ಸಾಕ್ಷ್ಯ ಹೇಳುತ್ತವೆ. ವಿಚಿತ್ರವೆಂದರೆ ಇಲ್ಲಿಯೂ ಇವತ್ತಿನ ಕಾಡು ನೋಡಿ ಹೆಜ್ಜೆಯಿಟ್ಟರೂ ಮೋಸ ಹೋಗುತ್ತೇವೆ. ಏಕೆಂದರೆ ಎತ್ತರದ ವೃಕ್ಷ ಬೆಳೆಸಿದ ನೆಲೆ ಒಂದು ಕಾಲದಲ್ಲಿ ಹುಲ್ಲು, ಕಂಟಿ, ಬಳ್ಳಿ, ಬಿದಿರುಗಳಿಂದ ಸಸ್ಯಾವರಣ ಬದಲಿಸುತ್ತ ಇಂದು ಮರ ವನ್ನು ಎತ್ತಿ ನಿಲ್ಲಿಸಿದೆ. ಅರಣ್ಯ ನೋಡಿ ಅದೇ ಸಸ್ಯ ಜಾತಿ ನೆಡಲು ಹೋದರೆ ಮಣ್ಣು ಸಸ್ಯವನ್ನು ಒಪ್ಪದೇ ಸೋಲಿಸಬಹುದಲ್ಲವೇ? ಮಣ್ಣಿಗೆ ಶಕ್ತಿ ದೊರೆತಾಗ, ಬೆಳೆಯುವ ವಾತಾವರಣ ದೊರೆತಾಗ ಯಾವ ಸಸ್ಯ ಅಗತ್ಯವೆಂದು ನದಿಯೇ ತೋರಿಸುತ್ತದೆ.

ಸಂರಕ್ಷಣೆಯ ಕಾರ್ಯಕರ್ತರು ಬೇಕು

ಕಲ್ಲುಗುಡ್ಡದಲ್ಲಿ ಮುಳ್ಳುಕಂಟಿ ಮಾತ್ರವಿದೆ, ಇದು ಕಾಡಲ್ಲ ಎಂದು ಬಯಲುಸೀಮೆಯ ಅರಣ್ಯ ನೋಡಿ ಮಾತಾಡುತ್ತೇವೆ. ಕಾಡು ಕಟ್ಟುವ ಪ್ರಥಮ ಕೆಲಸಗಳು ಮುಳ್ಳು, ಹುಲ್ಲಿನಿಂದ ನಡೆಯುತ್ತಿವೆಯೆಂದು ಭಾವಿಸುವುದಿಲ್ಲ. ಇಂಥ ನೆಲೆಗಳಲ್ಲಿ ಬೀಜದುಂಡೆ ಬಿತ್ತಿ ಕಾಡಿನ ಕನಸು ಕಾಣುತ್ತೇವೆ. ನಮಗಿಂತ ಮುಖ್ಯವಾಗಿ ಆಹಾರ, ಆವಾಸ ಕಾಣುತ್ತಿರುವ ಪಕ್ಷಿ ಹಾಗೂ ಪ್ರಾಣಿ ಸಂಕುಲಗಳು ನೆಲಕ್ಕೆ ಯೋಗ್ಯ ಸ್ಥಳೀಯ ಸಸ್ಯಗಳ ಬೀಜಗಳನ್ನು ಸಹಸ್ರಾರು ವರ್ಷಗಳಿಂದ ಬಿತ್ತುತ್ತಿವೆಯಲ್ಲವೇ? ಎಲೆಮರೆಯ ಈ ಅರಣ್ಯ ಕೃಷಿಕರ ಕೊಡುಗೆ ಕೋಟಿ ಬೀಜದುಂಡೆ ಕಾಯಕ್ಕಿಂತ ದೊಡ್ಡದಿದೆ. ಅದರಲ್ಲಿಯೂ ಯಾವುದೋ ಬೀಜ ಎಲ್ಲಿಯೋ ಬಿತ್ತುವುದು ತಪ್ಪಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ವನ್ಯಜೀವಿ ತಜ್ಞ ಕೃಪಾಕರ್ ಇತ್ತೀಚೆಗೆ ಸರಿಯಾಗಿ ಎಚ್ಚರಿಸಿದ್ದಾರೆ.

ಬೆಂಕಿ, ಕಟಾವು, ಅತಿಕ್ರಮಣ, ದನಕರು, ಆಡು, ಕುರಿ ಮೇವಿನ ಒತ್ತಡಗಳ ಕಾರಣಗಳಿಂದ ಸಸ್ಯ ಬೆಳವಣಿಗೆ ಕುಂಠಿ ತವಾಗಿದೆ. ಮಣ್ಣು ಸೋತಿದೆ, ಸ್ಥಳ ಗಮನಿಸಿ ನೆಲ ಜಲ ಸಂರ ಕ್ಷಣೆಯಿಂದಲೂ ಕೆಲವೊಮ್ಮೆ ಅರಣ್ಯಗಳಿಗೆ ಮರುಜೀವ ನೀಡಬಹುದು. ಕಾಡಿಗೆ ಯಾವತ್ತೂ ಬೀಜದ ಕೊರತೆಯಿಲ್ಲ. ಸಂರಕ್ಷಣೆಯ ಸರಿಯಾದ ಹೆಜ್ಜೆಯಿಂದ ಕಾಡಿನ ಮೇಲೆ ಒತ್ತಡ ಕಡಿಮೆಯಾದರೆ ಹತ್ತಾರು ವರ್ಷಗಳಲ್ಲಿ ಪರಿಸರ ಸ್ವರೂಪ ಅಚ್ಚರಿಯಲ್ಲಿ ಬದಲಾಗುತ್ತದೆ. ಭೂಗತದ ಸಸ್ಯ ಬೇರುಗಳಂತೂ ಕಲ್ಲುಗುಡ್ಡ, ಬರದ ನೆಲೆಯಲ್ಲೂ ಜೀವ ಹಿಡಕೊಂಡು ನೂರಾರು ವರ್ಷಗಳಿಂದ ಮರವಾಗುವ ಕ್ಷಣಕ್ಕೆ ಶಬರಿಯಂತೆ ಕಾತರಿಸಿ ಕಾಯುತ್ತಿವೆ.

ಅರಣ್ಯಾಭಿವೃದ್ಧಿಯ ಮುಖ್ಯ ಸವಾಲು ಇರುವುದು ಸಂರಕ್ಷಣೆಯಲ್ಲಿ! ಸೂಕ್ತ ರಕ್ಷಣೆ ದೊರೆತ ಕಾರಣಕ್ಕೆ ಕಲ್ಲುಗುಡ್ಡದ ಜಮಖಂಡಿಯ ಕಲ್ಲಳ್ಳಿಯಲ್ಲಿ ಹೊಂಗೆ, ಬೇವು ಸೇರಿದಂತೆ ನೂರಾರು ಜಾತಿ ಮೇಲೆದ್ದಿವೆ. ಮಲೆನಾಡಿನ ಸಸ್ಯಜಾತಿ ಚಿತ್ರದುರ್ಗದ ಜೋಗಿಮಟ್ಟಿಯಲ್ಲೂ ಕಾಣಿಸಿದೆ. 300 ಮಿಲಿ ಮೀಟರ್ ಮಳೆಯ ಇದೇ ಜಿಲ್ಲೆಯ ಬಾಂಡ್ರಾವಿಯ ರಾಂಪುರದಲ್ಲಿ ಕಮರಾ ಕಾಡು ಕಳ್ಳಿಗಿಡ, ಕಂಟಿಗಳ ಜೊತೆಯಲ್ಲಿ ಅರಳಿದೆ. ಆದರೆ ಇಲ್ಲಿ ಕೆಲಸ ನಿರ್ವಹಿಸಿದ ಕೃಷಿಕರು, ಸಿಬ್ಬಂದಿ ಯಾವತ್ತೂ ಅಂತರರಾಷ್ಟ್ರೀಯ ಪರಿಸರ ಸೆಮಿನಾರು ಸಂಕುಲವಲ್ಲದ್ದರಿಂದ ಕಾಡಿನ ಕಾಯಕವನ್ನು ಗಂಭೀರವಾಗಿ ಯಾರೂ ಗಮನಿಸಿಲ್ಲ ಅಷ್ಟೇ !

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT