ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಪಿನಲ್ಲಿ ಹಂಪಿ ನೋಡಿ

Last Updated 8 ಅಕ್ಟೋಬರ್ 2020, 11:58 IST
ಅಕ್ಷರ ಗಾತ್ರ

ನಾಳೆ ಮತ್ತು ನಾಡಿದ್ದು ಹಂಪಿ ಉತ್ಸವ ನಡೆಯುತ್ತಿದೆ. ಈ ಸಮಯದಲ್ಲಿ ಹಂಪಿಗೆ ಪ್ರವಾಸ ಹೋಗುವವರಿಗೆ ಉತ್ಸವ ಬೋನಸ್‌. ತಂಪಿನಲ್ಲಿ ಹಂಪಿ ನೋಡುತ್ತಾ, ಸಂಜೆ ವೇಳೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೋಡಿ ಆನಂದಿಸಬಹುದು.

‘ಹಂಪಿ ಸುತ್ತಾಡಬೇಕು. ಆದರೆ, ಆ ಬಿಸಿಲು ನೆನೆಸಿಕೊಂಡರೆ ಭಯ ಆಗುತ್ತದೆ..’ – ಹಂಪಿ ಪ್ರವಾಸಕ್ಕೆ ಹೋಗುವ ಅನೇಕರ ಮನದಲ್ಲಿ ಇಂಥದ್ದೊಂದು ಅಭಿಪ್ರಾಯವಿದೆ.

ಹಂಪಿ ‌ಎಲ್ಲ ಕಾಲದ ಪ್ರವಾಸಿ ತಾಣ. ಬಿಸಿಲು,‌ ಮಳೆ, ಚಳಿ ಏನೇ ಇರಲಿ. ಬಂದವರಿಗೆ‌ ಅದೆಲ್ಲವನ್ನೂ ಮರೆಸುವುದು‌ ಹಂಪಿ. ಬಂದವರೂ ಮೈಮರೆಯಬೇಕು. ಅಂಥ ಅದ್ಭುತಗಳು ಅಲ್ಲಿವೆ.

ಅದರಲ್ಲೂ ‌ಸೆಪ್ಟೆಂಬರ್‌ನಿಂದ ಜನವರಿ ಅಂತ್ಯದವರೆಗೆ ಹಂಪಿ ಸುತ್ತಮುತ್ತ ತಂಪು, ಒಮ್ಮೊಮ್ಮೆ ಮೋಡಕವಿದ ವಾತಾವರಣವಿರುತ್ತದೆ. ಸೂರ್ಯೋದಯ, ಸೂರ್ಯಾಸ್ತ ವೀಕ್ಷಿಸಲು ಬರುವವರಿಗೆ ನಿರಾಸೆ ಮೂಡಿಸುವಷ್ಟು ಮೋಡ ಮುಸುಕಿರುತ್ತದೆ. ಮುಂಜಾನೆ, ಸಂಜೆ ಮಂಜು ಕವಿದಿರುತ್ತದೆ. ಮಧ್ಯಾಹ್ನದಲ್ಲೂ ಹೇಳಿ ಕೊಳ್ಳುವಂತಹ ಬಿಸಿಲು ಇರುವುದಿಲ್ಲ.

ಈ ಕಾರಣಕ್ಕೆ ಇರಬೇಕು ಪ್ರತಿ ವರ್ಷ, ನವೆಂಬರ್‌ ತಿಂಗಳಲ್ಲಿ ಸರ್ಕಾರ ಹಂಪಿ ಉತ್ಸವ ಆಯೋಜಿಸುತ್ತದೆ. ಆದರೆ, ಈ ವರ್ಷ ಉಪ ಚುನಾವಣೆಯ ಕಾರಣ, ಜನವರಿ 10 ಮತ್ತು 11 ರಂದು ಎರಡು ದಿನ ಉತ್ಸವ ಆಯೋಜಿಸಿದೆ.

ಹಂಪಿಗೆ ಪ್ರವಾಸಕ್ಕೆ ಬರುವವರಿಗೆ ಇದು ಸಕಾಲ. ಏಕೆ ಗೊತ್ತಾ? ತಂಪಾದ ವಾತಾವರಣದಲ್ಲಿ ಬೆಳಿಗ್ಗೆ ಹಂಪಿಯ ಪ್ರವಾಸಿ ತಾಣಗಳನ್ನು ನೋಡುತ್ತಾ, ರಾತ್ರಿಯಲ್ಲಿ ಉತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ಈಗ ಹೇಗಿರುತ್ತದೆ?

ಕಾಲುವೆಗಳಲ್ಲಿ ತುಂಗಭದ್ರಾ ನದಿ ನೀರಿನ ಜುಳು ಜುಳು ನಾದ, ಗದ್ದೆ, ತೋಟಗಳಲ್ಲಿ ಬಾಳೆ, ಭತ್ತದ ಹಸಿರ ಸೊಬಗು. ಇಂಥ ವಾತಾವರಣದಲ್ಲಿ ಹಂಪಿ ಸುತ್ತಾಡುವುದೇ ವಿಶೇಷ ಅನುಭೂತಿ. ಈ ಕಾರಣಕ್ಕಾಗಿಯೇ ವಿದೇಶಿಯರು ಈ ಸಂದರ್ಭದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುತ್ತಾರೆ.

ಉತ್ಸವದಲ್ಲಿ ರಂಗೇರುವ ಹಂಪಿ

ಉತ್ಸವದಲ್ಲಿ ಸಾಹಸ ಸ್ಪರ್ಧೆಗಳಿರುತ್ತವೆ. ಇವುಗಳೆಲ್ಲ ಬೆಳಗಿನ ಹೊತ್ತಲ್ಲಿ ನಡೆಯುತ್ತವೆ. ಈ ಸ್ಪರ್ಧೆಗಳನ್ನೆಲ್ಲ ಕಣ್ತುಂಬಿಕೊಂಡು ಮಧ್ಯಾಹ್ನ ಸ್ಮಾರಕಗಳನ್ನು ನೋಡಬಹುದು. ಬೋರು ಹೊಡೆದರೆ ಚಿತ್ರಕಲೆ, ಶಿಲ್ಪಕಲೆ, ಛಾಯಾಚಿತ್ರ, ವಸ್ತು ಪ್ರದರ್ಶನ, ಮರಳು ಶಿಲ್ಪ, ಕೃಷಿ ಮೇಳ, ಆಹಾರ ಮೇಳ, ಚಿತ್ರಸಂತೆ, ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕಾಲ ಕಳೆಯಬಹುದು.

ಹೊತ್ತು ಏರಿ ಕತ್ತಲಾಗುತ್ತಿದ್ದಂತೆ ಹಂಪಿ ಮತ್ತೊಂದು ರೂಪ ಪಡೆದುಕೊಳ್ಳುತ್ತದೆ. ಉತ್ಸವದ ಪ್ರಯುಕ್ತ ಸ್ಮಾರಕಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸ ಲಾಗುತ್ತದೆ. ಬೆಟ್ಟಗುಡ್ಡಗಳು, ಬಂಡೆಗಲ್ಲುಗಳಿಗೂ ಬೆಳಕಿನ ಹೊಳಪು. ಇವೆಲ್ಲ ಪ್ರವಾಸಿಗರಿಗೆ ಹೊಸ ಲೋಕವನ್ನೇ ಸೃಷ್ಟಿಸುತ್ತವೆ.

ಅಂದ ಹಾಗೆ, ಇದೇ ಮೊದಲ ಬಾರಿಗೆ ರಾತ್ರಿ ವೇಳೆ ಹಂಪಿ ನೋಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಹತ್ತು ವರ್ಷಗಳಿಂದ ‘ಹಂಪಿ ಬೈ ನೈಟ್‌’ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ಹಿಂದೆ ಉತ್ಸವದ ವೇಳೆ ಕೆಲವೇ ಕೆಲವು ಸ್ಮಾರಕಗಳಿಗೆ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗುತ್ತಿತ್ತು. ಈ ವರ್ಷ ಯೋಜನೆ ಜಾರಿಗೊಳಿಸಿರುವುದರಿಂದ ಎಲ್ಲಾ ಸ್ಮಾರಕಗಳು ವಿದ್ಯುದ್ದೀಪಗಳಿಂದ ಝಗಮಗಿಸಲಿವೆ. ಹಗಲಲ್ಲಿ ನೋಡಲು ಇಷ್ಟಪಡದವರು ರಾತ್ರಿ ವೇಳೆಯಲ್ಲೂ ಹಂಪಿ ನೋಡಬಹುದು.

ಕಾಲ್ನಡಿಗೆಯಲ್ಲಿ ಹಂಪಿ ನೋಡಲು ಸಾಧ್ಯವಾಗದವರು ಬೈಸಿಕಲ್‌, ದ್ವಿಚಕ್ರ ವಾಹನ, ಆಟೊಗಳಲ್ಲೂ ನೋಡ ಬಹುದು. ಈ ಎಲ್ಲ ವಾಹನಗಳು ಬಾಡಿಗೆಗೆ ಲಭ್ಯ.

ಎಲ್ಲೆಲ್ಲಿ ಕಾರ್ಯಕ್ರಮಗಳು?

ಹಂಪಿ ಉತ್ಸವದಲ್ಲಿ ಬಸವಣ್ಣ ಮಂಟಪ, ಕಡಲೆಕಾಳು, ಸಾಸಿವೆಕಾಳು, ಗಾಯತ್ರಿ ಪೀಠ ಹಾಗೂ ಆನೆಸಾಲು ಮಂಟಪದ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸ್ಥಳೀಯರು ಸೇರಿದಂತೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಜಾನಪದ, ರಾಕ್‌, ಫ್ಯೂಶನ್‌, ಹಿಂದೂಸ್ತಾನಿ ಸಂಗೀತ, ಸಮೂಹ ನೃತ್ಯ, ಭರತ ನಾಟ್ಯ, ಬಯಲಾಟ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಅದರಲ್ಲೂ ಆನೆಸಾಲು ಮಂಟಪದ ಬಳಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ವಿಜಯನಗರದ ವೈಭವ ನೆನಪಿಸುತ್ತದೆ. ಈ ಕಾರ್ಯಕ್ರಮ ಸಂಜೆ 7ರಿಂದ ರಾತ್ರಿ 9.30ರವರೆಗೆ ನಡೆಯುತ್ತದೆ. ರಾತ್ರಿ ಹತ್ತು, ಹನ್ನೊಂದು ಗಂಟೆ ಬಳಿಕ ಸ್ಯಾಂಡಲ್‌ವುಡ್‌, ಬಾಲಿವುಡ್‌ ಗಾಯಕರು, ನಟ–ನಟಿಯರು ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರೆಲ್ಲರ ಕಾರ್ಯಕ್ರಮ ನೋಡಲೆಂದೇ ಜನ ಮೈಕೊರೆಯುವ ಚಳಿ ಲೆಕ್ಕಿಸದೇ ಕಾದು ಕುಳಿತಿರುತ್ತಾರೆ.

ದಿನ ಸಾಕಾಗುವುದಿಲ್ಲ..

ಹೀಗೆ ಉತ್ಸವ ನೋಡುತ್ತಿದ್ದರೆ, ಎರಡು ದಿನಗಳು ಕಳೆದು ಹೋಗಿದ್ದೇ ಗೊತ್ತಾಗುವುದಿಲ್ಲ. ಈ ಎರಡು ದಿನಕ್ಕೆ, ಇನ್ನೊಂದು ದಿನ ರಜೆ ಸೇರಿಸಿಕೊಂಡರೆ, ಸಮೀಪದಲ್ಲಿರುವ ದರೋಜಿ ಕರಡಿಧಾಮ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ತುಂಗಭದ್ರಾ ಜಲಾಶಯವನ್ನೂ ನೋಡಿಕೊಂಡು ಹೋಗಬಹುದು.

ನೆನಪಿಡಿ, ಈ ಉತ್ಸವಕ್ಕೆ ಬರುವವರು ಮುಂಚಿತವಾಗಿ ಹೋಟೆಲ್‌ ಕೊಠಡಿ ಕಾಯ್ದಿರಿಸಿಕೊಳ್ಳುವುದು ಉತ್ತಮ. ಹೊಸಪೇಟೆ, ಕಮಲಾಪುರ ಸುತ್ತಮುತ್ತ ಐಷಾರಾಮಿ ಹೋಟೆಲ್‌, ಹೋಂ ಸ್ಟೇ, ರೆಸಾರ್ಟ್‌ಗಳಿಗೇನೂ ಕೊರತೆಯಿಲ್ಲ. ಎಲ್ಲ ಮಾಹಿತಿಗಳೂ ಅಂತರ್ಜಾಲದಲ್ಲಿ ಲಭ್ಯವಿವೆ. ಆನ್‌ಲೈನ್‌ ಮೂಲಕವೂ ಬುಕ್‌ ಮಾಡಲು ಅವಕಾಶವಿದೆ.

ಈಗ ‘ಹಂಪಿ ಉತ್ಸವ’ದ ಮಾಹಿತಿ ಸಿಕ್ಕಿತಲ್ಲ. ಹಾಗಾದರೆ, ಇನ್ನೇಕೆ ತಡ, ಹೊರಡಿ ಹಂಪಿಯತ್ತ..

ತಲುಪುವುದು ಹೇಗೆ?

ಬೆಂಗಳೂರಿನಿಂದ ಹೊಸಪೇಟೆ 327 ಕಿ.ಮೀ. ದೂರದಲ್ಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಿಂದ ಹೊಸಪೇಟೆಗೆ ರೈಲು, ಬಸ್ಸುಗಳ ವ್ಯವಸ್ಥೆ ಇದೆ. ರೈಲ್ವೆ ನಿಲ್ದಾಣದಿಂದ ಸಿಟಿ ಬಸ್‌ ಅಥವಾ ಆಟೊ ಮೂಲಕ ಹಂಪಿಗೆ ಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT