ಭಾನುವಾರ, ಮೇ 29, 2022
31 °C

ಗಣರಾಜ್ಯೋತ್ಸವ: ಕರ್ನಾಟಕದ ಸ್ತಬ್ಧಚಿತ್ರದಲ್ಲಿ ಕರಕುಶಲ ವೈವಿಧ್ಯ

ನಿರಂಜನ ಕಗ್ಗೆರೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನವದೆಹಲಿಯ ರಾಜ್‌ಪಥದಲ್ಲಿ ನಡೆಯಲಿರುವ 73ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವು ಸಾಂಪ್ರದಾಯಿಕ ಕರಕುಶಲ ಹಾಗೂ ಕಲಾ ವೈವಿಧ್ಯತೆಯನ್ನು ಪ್ರದರ್ಶಿಸಲಿದೆ.

ರಾಜ್ಯದ ಸ್ತಬ್ಧಚಿತ್ರವು ‘ಕರ್ನಾಟಕ: ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ವಿಷಯಾಧಾರಿತವಾಗಿದ್ದು, ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರವಾಗಿದೆ. ಈ ವರ್ಷದ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ದೊರೆತ 12 ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ.

ಕರ್ನಾಟಕವು ದಾಖಲೆಯ 13ನೇ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ತಬ್ಧಚಿತ್ರವನ್ನು ಪ್ರದರ್ಶಿಸುತ್ತಿದೆ.

ಸ್ತಬ್ಧಚಿತ್ರವು ‘ಜಿಯೊಗ್ರಾಫಿಕಲ್ ಇಂಡಿಕೇಷನ್ (ಜಿಐ) ಟ್ಯಾಗ್ ಹೊಂದಿರುವ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನೇ ಒಳಗೊಂಡಿರಲಿದೆ.

‘ಕರ್ನಾಟಕವು ದೇಶದಲ್ಲೇ ಅತಿಹೆಚ್ಚು ‘ಜಿಐ ಟ್ಯಾಗ್’ ಹೊಂದಿರುವ ರಾಜ್ಯವಾಗಿದೆ. ಭಾರತದಲ್ಲಿ ಒಟ್ಟು 346 ಕರಕುಶಲ ಉತ್ಪನ್ನಗಳಿಗೆ ‘ಜಿಐ ಟ್ಯಾಗ್‌’ ನೀಡಲಾಗಿದ್ದು, ಈ ಪೈಕಿ ಕರ್ನಾಟಕದಲ್ಲಿ 46 ಇವೆ. ‘ಜಿಐ ಟ್ಯಾಗ್‌’ನಿಂದ ಈ ಕರಕುಶಲ ವಸ್ತುಗಳ ಮಾರಾಟ ಮತ್ತು ರಫ್ತಿಗೆ ನೆರವಾಗುತ್ತದೆ. ಕರ್ನಾಟಕದ ಸ್ತಬ್ಧಚಿತ್ರದಲ್ಲಿ ‘ಜಿಐ ಟ್ಯಾಗ್‌’ ಹೊಂದಿರುವ 16 ಸಾಂಪ್ರದಾಯಿಕ ಕರಕುಶಲ ವಸ್ತುಗಳು ಪ್ರದರ್ಶನಗೊಳ್ಳಲಿವೆ. ಇದು ಈ ಕರಕುಶಲ ಉತ್ಪನ್ನಗಳ ಪರಂಪರೆಯನ್ನು ಮುಂದುವರಿಸಲು ಅವಿರತವಾಗಿ ಶ್ರಮಿಸುತ್ತಿರುವ ರಾಜ್ಯದ ವಿವಿಧ ಭಾಗಗಳಲ್ಲಿನ 50,000ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ನೀಡುವ ಗೌರವವಾಗಿದೆ’ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್.ಹರ್ಷ ಹೇಳಿದ್ದಾರೆ.

ಇದಲ್ಲದೆ, ಸ್ತಬ್ಧಚಿತ್ರವು ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಸಾಮಾಜಿಕ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಚಿತ್ರಣವನ್ನೂ ಒಳಗೊಂಡಿರಲಿದೆ. ಇವರು ‘ಭಾರತೀಯ ಸಾಂಪ್ರದಾಯಿಕ ಕರಕುಶಲ ವಸ್ತುಗಳ ತಾಯಿ’ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.

‘ಕಮಲಾದೇವಿ ಕನ್ನಡಿಗರು ಹಾಗೂ ಭಾರತೀಯ ಕರಕುಶಳ ಮಂಡಳಿ ಸ್ಥಾಪಿಸುವ ಮೂಲಕ ಸಾಂಪ್ರದಾಯಿಕ ಕರಕುಶಲ ಕೈಗಾರಿಕೆಯ ಪುನಶ್ಚೇತನಗೊಳಿಸಿದವರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇವರು ರಾಷ್ಟ್ರಮಟ್ಟದಲ್ಲಿ ಇತರ ಸಾಂಸ್ಕೃತಿಕ ಸಂಸ್ಥೆಗಳನ್ನೂ ಸ್ಥಾಪಿಸಿದ್ದರು’ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂಭಾಗದಲ್ಲಿ ಮೈಸೂರು ರೋಸ್‌ವುಡ್ ಕೆತ್ತನೆಯೊಂದಿಗೆ ಚಿತ್ರಿಸಿರುವ ಏಷ್ಯಾಟಿಕ್ ಆನೆಯ ಮಾದರಿಯನ್ನು ಸ್ತಬ್ಧಚಿತ್ರ ಹೊಂದಿದೆ. ಜೊತೆಗೆ ದಂತದ ಕೆತ್ತನೆಗಳೂ ಇವೆ.

ಸ್ತಬ್ಧಚಿತ್ರದ ಮಧ್ಯಭಾಗದಲ್ಲಿ ಕಿನ್ಹಾಲ್ ಕ್ರಾಫ್ಟ್ ಹಾಗೂ ಚನ್ನಪಟ್ಟಣ ಗೊಂಬೆಗಳು ಇರಲಿವೆ. ಗಂಧದ ಸಂಕೀರ್ಣ ಕೆತ್ತನೆಗಳೂ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖ್ಯಾತ ಕಲಾ ನಿರ್ದೇಶಕ ಶಶಿಧರ್ ಅಡಪ ಸೇರಿದಂತೆ 150 ಮಂದಿ ಕಲಾವಿದರು ಸ್ತಬ್ಧಚಿತ್ರ ವಿನ್ಯಾಸಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ. ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಸ್ತಬ್ಧಚಿತ್ರಕ್ಕೆ ಸಂಗೀತ ಕಂಪೋಸ್ ಮಾಡಿದ್ದಾರೆ. ಎಂದೂ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು