ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬಿಳಿಗಿರಿರಂಗನಬೆಟ್ಟದ ಕಾಫಿ ತೋಟಗಳ ಹಿಂದಿನ ಕಥೆ...

ಬಿಆರ್‌ಟಿ ಹಕ್ಕಿ ಹಬ್ಬದಲ್ಲಿ ಕಾಡಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಪಕ್ಷಿ ತಜ್ಞ ಎಸ್‌.ಸುಬ್ರಹ್ಮಣ್ಯ
Last Updated 6 ಜನವರಿ 2021, 10:09 IST
ಅಕ್ಷರ ಗಾತ್ರ

ಜೀವ ವೈವಿಧ್ಯಗಳ ತಾಣ ಬಿಳಿಗಿರಿರಂಗನಾಥಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ ಕಾಫಿ ತೋಟಗಳಿಗೂ ಹೆಸರುವಾಸಿ. ಬಿಳಿಗಿರಿರಂಗನಬೆಟ್ಟ, ಬೇಡಗುಳಿಯ ವ್ಯಾಪ್ತಿಯಲ್ಲಿ ಕಾಫಿ ತೋಟಗಳಿವೆ. ನಾಲ್ಕೈದು ದೊಡ್ಡ ಎಸ್ಟೇಟ್‌ಗಳಿವೆ. ಬ್ರಿಟಿಷರ ಕಾಲದಲ್ಲೇ (1880ರ ನಂತರ) ಇಲ್ಲಿ ಕಾಫಿ ತೋಟಗಳನ್ನು ಮಾಡಲಾಗಿತ್ತು. ಈ ಕಾಫಿ ತೋಟಗಳಿಗೂ ಸ್ಕಾಟ್ಲೆಂಡ್‌ಗೂ ಒಂದು ಸಂಬಂಧ ಇದೆ.

***

ಗಡಿ ಜಿಲ್ಲೆ ಚಾಮರಾಜನಗರದಲ್ಲಿ 540 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ, ಜೀವವೈವಿಧ್ಯಗಳ ತಾಣ ಬಿಳಿಗಿರಿರಂಗನಾಥಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ ಕಾಫಿ ತೋಟಗಳಿಗೂ ಹೆಸರುವಾಸಿ. ಬಿಳಿಗಿರಿರಂಗನಬೆಟ್ಟ, ಬೇಡಗುಳಿಯ ವ್ಯಾಪ್ತಿಯಲ್ಲಿ ಕಾಫಿ ತೋಟಗಳಿವೆ. ನಾಲ್ಕೈದು ದೊಡ್ಡ ಎಸ್ಟೇಟ್‌ಗಳಿವೆ. ಬ್ರಿಟಿಷರ ಕಾಲದಲ್ಲೇ ಇಲ್ಲಿ ಕಾಫಿ ತೋಟಗಳನ್ನು ಮಾಡಲಾಗಿತ್ತು.

ಈ ಕಾಫಿ ತೋಟಗಳಿಗೂ ಸ್ಕಾಟ್ಲೆಂಡ್‌ಗೂ ಒಂದು ಸಂಬಂಧ ಇದೆ. ಕಾಫಿ ತೋಟಗಳನ್ನು ಅಭಿವೃದ್ಧಿಪಡಿಸಿದ ಸ್ಕಾಟ್ಲೆಂಡ್‌ನ ಮೋರಿಸ್‌ ಕುಟುಂಬ,1886ರಿಂದ 1956ರವರೆಗೆ 70 ವರ್ಷಗಳ ಕಾಲ ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶವನ್ನು ಅಕ್ಷರಶಃ ಆಳಿತ್ತು. ಕಾಫಿತೋಟಗಳನ್ನು ನಿರ್ವಹಿಸುವುದರ ಜೊತೆಗೆ ಬಿಳಿಗಿರಿರಂಗನಬೆಟ್ಟದ ಕಾಡು, ಅಲ್ಲಿನ ಪ್ರಾಣಿ, ಪಕ್ಷಿಗಳ ಬಗ್ಗೆ ಕುಟುಂಬದ ಸದಸ್ಯರು ತಿಳಿದುಕೊಂಡು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದರು. ಬಹುತೇಕರಿಗೆ ಈ ವಿಷಯ ಗೊತ್ತಿಲ್ಲ.

ಬಿಆರ್‌ಟಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ರಾಜ್ಯ ಮಟ್ಟದ ಏಳನೇ ಹಕ್ಕಿ ಹಬ್ಬದಲ್ಲಿ ಖ್ಯಾತ ಪಕ್ಷಿ ತಜ್ಞ ಡಾ.ಎಸ್‌.ಸುಬ್ರಹ್ಮಣ್ಯ ಅವರು ಈ ವಿಚಾರದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಬಿಳಿಗಿರಿರಂಗನಬೆಟ್ಟದ ಕಾನನದ ಇತಿಹಾಸದ ಬಗ್ಗೆ ವಿಶೇಷ ಉಪನ್ಯಾಸ ನೀಡಿರುವ ಅವರು, ಸೀನಿಯರ್‌ ಮೋರಿಸ್‌ (ರಾಂಡಾಲ್ಫ್‌ ಹೇಟನ್‌ ಮೋರಿಸ್‌) ಹಾಗೂ ಜ್ಯೂನಿಯರ್‌ ಮೋರಿಸ್‌ (ರಾಲ್ಫ್‌‌ ಕ್ಯಾಮರಾಕ್ಸ್‌ ಮೋರಿಸ್‌) ಅವರು ಬಿಳಿಗಿರಿರಂಗನಬೆಟ್ಟ ಅರಣ್ಯದಲ್ಲಿ ಮಾಡಿದ ಸಾಹಸಗಳು, ಅವರ ಜೀವನ ಶೈಲಿಯ ಬಗ್ಗೆ ವಿವರಿಸಿದ್ದಾರೆ. ವಿಶೇಷವಾಗಿ ರಾಲ್ಫ್‌ ಮೋರಿಸ್‌ ಅವರು ದಕ್ಷಿಣ ಭಾರತದ ವನ್ಯಜೀವಿಗಳ ತಜ್ಞರಾಗಿ ರೂಪುಗೊಂಡ ಬಗೆಯನ್ನು ತಿಳಿಸಿದ್ದಾರೆ.

ಬಾಲಸುಬ್ರಹ್ಮಣ್ಯ ಅವರ ಉಪನ್ಯಾಸದ ವಿವರ ಇಲ್ಲಿದೆ

ಸುಬ್ರಹ್ಮಣ್ಯ ಅವರು ಉಪನ್ಯಾಸದಲ್ಲಿ ರಾಲ್ಫ್‌ ಮೋರಿಸ್‌ ಅವರ ಬಗ್ಗೆ ಪವರ್‌ ಪಾಯಿಂಟ್ ಮೂಲಕ ವಿವರಣೆ ನೀಡಿದರು (ಉಪನ್ಯಾಸದ ವಿಡಿಯೊದಿಂದ ಸ್ಕ್ರೀನ್‌ಶಾಟ್ ತೆಗೆದ ಚಿತ್ರ)
ಸುಬ್ರಹ್ಮಣ್ಯ ಅವರು ಉಪನ್ಯಾಸದಲ್ಲಿ ರಾಲ್ಫ್‌ ಮೋರಿಸ್‌ ಅವರ ಬಗ್ಗೆ ಪವರ್‌ ಪಾಯಿಂಟ್ ಮೂಲಕ ವಿವರಣೆ ನೀಡಿದರು (ಉಪನ್ಯಾಸದ ವಿಡಿಯೊದಿಂದ ಸ್ಕ್ರೀನ್‌ಶಾಟ್ ತೆಗೆದ ಚಿತ್ರ)

ಸ್ಕಾಟ್ಲೆಂಡ್‌ನ ಪರ್ತ್‌ಶೈರ್‌ನ ಮುತಿಲ್‌ ಎಂಬ ಪ್ರದೇಶದ, ಕಾಫಿ ಬೆಳೆಗಾರರ ಕುಟುಂಬದವರಾದ ರಾಂಡಾಲ್ಫ್‌ ಹೇಟನ್‌ ಮೋರಿಸ್‌ ಅವರು ತಮ್ಮ 19ನೇ ವಯಸ್ಸಿನಲ್ಲಿ (1877) ಕರ್ನಾಟಕದ ಕೊಡಗಿಗೆ ಬಂದಿದ್ದರು. ಅಲ್ಲಿನ ಎರಡು ರಬ್ಬರ್‌ ಎಸ್ಟೇಟ್‌ಗಳಲ್ಲಿ ಕೆಲಸ ಮಾಡಿದ್ದ ಮೋರಿಸ್,‌ ನಂತರ ನೀಲಿಗಿರಿಗೆ (ಊಟಿ) ತೆರಳಿ,ಮೂರು ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡಿದ್ದರು.

ಗುಡಾನಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅವರ ದೃಷ್ಟಿ, ಅಲ್ಲಿಂದ ಈಶಾನ್ಯಕ್ಕಿರುವ ಬೆಟ್ಟದ ಸಾಲುಗಳ ಮೇಲೆ ಬಿತ್ತು. ಆ ಪ್ರದೇಶದ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸುವಾಗ, ‘ಅಲ್ಲಿ ಕಾಡಾನೆಗಳು ಹೆಚ್ಚಿವೆ. ಮಲೇರಿಯ ಕಾಯಿಲೆಯೂ ತೀವ್ರವಾಗಿದೆ’ ಎಂಬ ಮಾಹಿತಿ ಸಿಕ್ಕಿತ್ತು. ಆ ಪ್ರದೇಶವನ್ನು ವೀಕ್ಷಣೆ ಮಾಡಬೇಕು ಎಂದು ನಿರ್ಧಾರ ಮಾಡುವ ಮೋರಿಸ್‌, ಇನ್ನೊಂದು ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನೊಂದಿಗೆ 1886ರಲ್ಲಿ ಈ ಬೆಟ್ಟಗಳ ಅನ್ವೇಷಣೆಯ ಸಾಹಸಕ್ಕೆ ಕೈಹಾಕಿದರು.

ಮೊಯಾರ್‌ ಕಂದಕವನ್ನು ದಾಟಿ, ತಲೆಮಲೆಗೆ ಬಂದು ಅಲ್ಲಿಂದ ಹಸನೂರು ತಲುಪಿ, ಆ ಬಳಿಕಮೂರುಕೆರೆ ಬೆಟ್ಟಕ್ಕೆ ತಲುಪಿದರು. ಅಲ್ಲಿಂದ ಪುಣಜನೂರು ತಲುಪುವ ಇಬ್ಬರೂ, ನಂತರ ಬೇಡಗುಳಿಗೆ ಬಂದರು. ಬೇಡಗುಳಿ ಪ್ರದೇಶ ಕಾಫಿ ಬೆಳೆಗೆ ಸೂಕ್ತ ವಾತಾವರಣ ಹೊಂದಿದೆ ಎಂದು ಅರಿತ ಮೋರಿಸ್‌, 1887ರಲ್ಲಿ ಕೊಯಮತ್ತೂರು – ಮೈಸೂರು ಸರ್ಕಾರಗಳಿಂದ 2,000 ಎಕರೆ ಅರಣ್ಯ ಪ್ರದೇಶವನ್ನು ಗುತ್ತಿಗೆಗೆ ಪಡೆದರು.

1888ರಲ್ಲಿ ಬೇಡಗುಳಿಯಿಂದ ಪುಣಜನೂರುವರೆಗೆ ರಸ್ತೆಯನ್ನು ನಿರ್ಮಿಸಿದ ಅವರು, 1890ರಲ್ಲಿ ಅತ್ತೀಕಾನೆ ಬಂಗಲೆಯನ್ನು ಕಟ್ಟಿಸಿದರು. ನಂತರ ಇಂಗ್ಲೆಂಡ್‌ಗೆ ತೆರಳಿ, ಕಾಫಿ ಎಸ್ಟೇಟ್‌ ಮಾಡಲು ನೆರವು ನೀಡಿದ್ದ ಹೆರಾಲ್ಡ್‌ ಓಲಿವರ್‌ ಎಂಬ ಸ್ನೇಹಿತನ ಸಹೋದರಿ ಮಬೆಲ್‌ ಅವರನ್ನು ಮದುವೆಯಾದರು.

ಮುಂದಿನ 20 ವರ್ಷಗಳಲ್ಲಿ ಮೋರಿಸ್‌ ದಂಪತಿ,ಕತ್ತರಿಕೆರೆ, ಗೊರಹಟ್ಟಿ,ಬೆಳ್ಳಾಜಿ, ಬೇಡಗುಳಿಗಳಲ್ಲೂ ಬಂಗಲೆಗಳನ್ನು ನಿರ್ಮಿಸಿ ಕಾಫಿ ತೋಟವನ್ನು ಮತ್ತಷ್ಟು ವಿಸ್ತರಿಸಿದರು.

ಜ್ಯೂ.ಮೋರಿಸ್‌ ಆಗಮನ: 1895ರಲ್ಲಿ ಅತ್ತೀಕಾನೆಯಲ್ಲೇ ಮೋರಿಸ್ ಅವರ‌ ಪತ್ನಿ, ಎರಡನೇ ಮಗ ರಾಲ್ಫ್‌ ಕ್ಯಾಮರಾಕ್ಸ್‌ ಮೋರಿಸ್‌ಗೆ ಜನ್ಮ ನೀಡಿದರು. ರಾಲ್ಫ್‌ಗೆ ಕೇವಲ ಆರು ವಾರಗಳಾಗುವಾಗ ಮೋರಿಸ್‌ ಅವರು ಕಾಟಿ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದರು.

ಬೇಟೆಗಾಗಿ ಹೋಗಿದ್ದ ಸಂದರ್ಭದಲ್ಲಿ ಮೋರಿಸ್‌ ಅವರ ಸ್ನೇಹಿತನಿಂದ ಗಾಯಗೊಂಡಿದ್ದ ಕಾಟಿಯೊಂದು ಮೋರಿಸ್‌ ಅವರ ಮೇಲೆ ದಾಳಿ ಮಾಡಿತ್ತು. ಅದ ತೀವ್ರತೆ ಎಷ್ಟಿತ್ತೆಂದರೆ, ಕಾಟಿಯ ಕೊಂಬು ಮೋರಿಸ್ ಪಕ್ಕೆಲುಬನ್ನು ಹೊಕ್ಕು, ಒಂದು ಶ್ವಾಸಕೋಶವೇ ಕಿತ್ತು ಬಂದಿತ್ತು. ಜೀವನ್ಮರಣ ಸ್ಥಿತಿಯಲ್ಲಿದ್ದ ಮೋರಿಸ್‌ಗೆ 10 ದಿನಗಳ ನಂತರ ಬೆಂಗಳೂರಿನಿಂದ ಬಂದ ವೈದ್ಯರೊಬ್ಬರು ಚಿಕಿತ್ಸೆ ನೀಡಿದ್ದರು. ಪವಾಡ ಸದೃಶ್ಯವಾಗಿ ಮೋರಿಸ್‌ ಬದುಕುಳಿದಿದ್ದರು.

1918ರಲ್ಲಿ ನಿಧನ ಹೊಂದಿದ ಮೋರಿಸ್‌ ಅವರ ಅಂತ್ಯ ಸಂಸ್ಕಾರವನ್ನು ಬಿಳಿಗಿರಿರಂಗನಬೆಟ್ಟದ ಬೆಳ್ಳಾಜಿಯಲ್ಲಿರುವ ಬೆಟ್ಟದ ಮೇಲೆ ಮಾಡಲಾಗಿದೆ (ಕುಟುಂಬದ ಹಲವರ ಸಮಾಧಿ ಈಗಲೂ ಅಲ್ಲಿ ಇದೆ). ಅವರ ನಿಧನದ ನಂತರ ಪತ್ನಿ ಮೆಬಲ್‌ ಅವರು, ಕಾಟಿ ದಾಳಿ ಮಾಡಿದ ಸ್ಥಳದಲ್ಲೇ ‘ಕಾಟಿ ಬಸವ’ ಶಿಲೆಯನ್ನು ಕೆತ್ತಿಸಿ, ಒಂದು ಕಲ್ಲಿನ ಮೇಲೆ ಸ್ಥಾಪನೆ ಮಾಡಿದ್ದರು. ಈಗ ಅಲ್ಲಿ ಕಾಟಿ ಬಸವ ದೇವಾಲಯ ಇದೆ.

ಶಿಕ್ಷಣ ಪಡೆಯಲು ಇಂಗ್ಲೆಂಡ್‌ಗೆ ಹೋಗಿದ್ದ ಮೋರಿಸ್‌ ಅವರ ಎರಡನೇ ಮಗ ರಾಲ್ಫ್‌ ಮೋರಿಸ್‌ ಅವರು1919ರಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ಬಂದು ತಂದೆಯ ವ್ಯವಹಾರಗಳನ್ನು ಮುಂದುವರಿಸಿದರು. ನೀಲಗಿರಿಯ ಕೋಟಗಿರಿಯಲ್ಲಿ ಕಾಫಿ ಬೆಳೆಗಾರ, ಪಕ್ಷಿ ತಜ್ಞರಾಗಿದ್ದ ಆಗಸ್‌ ಮುರ್ರೇ ಅವರ ಹಿರಿಯ ಮಗಳು ಹಿದರ್‌ ಎಂಬುವವರನ್ನು ಮದುವೆಯಾಗುವ ರಾಲ್ಫ್‌ ಅವರು, ಹೊನ್ನಮೆಟ್ಟಿ ಭಾಗದಲ್ಲಿ ಕಾಫಿ ತೋಟ ಮಾಡಿ, 1923ರಲ್ಲಿ ಬಂಗಲೆ ನಿರ್ಮಿಸಿದರು. ಈಗಲೂ ಆ ಬಂಗಲೆ ಇದೆ.

ಬೇಟೆಗಾರ, ವನ್ಯಜೀವಿ ತಜ್ಞ:ಬೇಟೆಯಲ್ಲಿ ಪಳಗಿದ್ದ ರಾಲ್ಫ್,‌ ಸೋಲಿಗರ ಗೆಳೆತನ ಸಂಪಾದಿಸಿದ್ದರು. ಸಾಹಸಿ ಪ್ರವೃತ್ತಿಯ ಅವರು ವನ್ಯಜೀವಿಗಳ ಬಗ್ಗೆ ಸಾಕಷ್ಟು ಅಧ್ಯಯನವನ್ನೂ ನಡೆಸಿದ್ದರು.1922 ಮತ್ತು 1958ರ ನಡುವಿನ ಅವಧಿಯಲ್ಲಿ ಬಿಳಿಗಿರಿರಂಗನಬೆಟ್ಟದ ಅರಣ್ಯದಲ್ಲಿನ ಜೀವ ವೈವಿಧ್ಯಗಳ ಬಗ್ಗೆ ಜರ್ನಲ್‌ ಆಫ್‌ ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯಲ್ಲಿ 100ಕ್ಕೂ ಹೆಚ್ಚು ಲೇಖನಗಳನ್ನು ಬರೆಯುವ ಮೂಲಕ ದಕ್ಷಿಣ ಭಾರತದ ಅರಣ್ಯದ ಬಗ್ಗೆ ಮಾಹಿತಿ ಹೊಂದಿರುವಂತಹ ವನ್ಯಜೀವಿ ತಜ್ಞರಾಗಿ ರೂಪುಗೊಂಡಿದ್ದರು. ಅಮೆರಿಕದ ನ್ಯಾಚುರಲ್‌ ಮ್ಯೂಸಿಯಂಗಾಗಿ ಪ್ರಾಣಿಗಳ ಮಾದರಿಗಳನ್ನು ಸಂಗ್ರಹಿಸಲು ಬರ್ಮಾ (ಈಗಿನ ಮ್ಯಾನ್ಮಾರ್‌), ಥಾಯ್ಲೆಂಡ್‌ ಮುಂತಾದ ಕಡೆಗಳಲ್ಲೂ ಅವರು ಸುತ್ತಾಟ ನಡೆಸಿದ್ದರು.

ಸಲೀಂ ಅಲಿ ಸ್ನೇಹ: ರಾಲ್ಫ್‌ ದಂಪತಿ ಜಗತ್ತಿನ ಪ್ರಮುಖ ಗಣ್ಯರಿಗೆ ತಮ್ಮ ಹೊನ್ನಮೆಟ್ಟಿ ಬಂಗಲೆಯಲ್ಲಿ ಆತಿ‌ಥ್ಯ ನೀಡಿದ್ದಾರೆ. ಅವರಲ್ಲಿ ಖ್ಯಾತ ಪಕ್ಷಿ ತಜ್ಞ ಡಾ. ಸಲೀಂ ಅಲಿ, ಮೈಸೂರಿನ ನಾಲ್ಕನೇ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಮುಖರು.

1932ರಲ್ಲಿ ಕೊಟಗಿರಿಯಲ್ಲಿ (ರಾಲ್ಫ್‌ ಅವರ ಅತ್ತೆಯ ಮನೆ) ಮೊದಲ ಬಾರಿಗೆ ನಡೆದ ಸಲೀಂ ಅಲಿ ಹಾಗೂ ರಾಲ್ಫ್‌ ನಡುವಿನ ಅನೌಪಚಾರಿಕ ಭೇಟಿ ಇಬ್ಬರ ಸ್ನೇಹವನ್ನು ಗಾಢವಾಗಿಸುತ್ತದೆ. 1977ರಲ್ಲಿ ರಾಲ್ಫ್‌ ಅವರು ಲಂಡನ್‌ನಲ್ಲಿ ನಿಧನರಾಗುವವರೆಗೂ ಇಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು.

ಹಕ್ಕಿ ಹಬ್ಬ
ಹಕ್ಕಿ ಹಬ್ಬ

ಸಲೀಂ ಅಲಿ ಅವರು ನಡೆಸಲು ಉದ್ದೇಶಿಸಿದ್ದ ಟ್ರ್ಯಾವೆಂಕೂರ್‌ ಮತ್ತು ಕೊಚ್ಚಿನ್‌ ಹಕ್ಕಿ ಸಮೀಕ್ಷೆ ಹಾಗೂ ಮೈಸೂರು ಹಕ್ಕಿ ಸಮೀಕ್ಷೆ (1939) ಯೋಜನೆಯ ರೂಪು ರೇಷೆಗಳ ಸಿದ್ಧತೆಗೆ ರಾಲ್ಫ್‌ ಅವರು ನೆರವಾಗಿದ್ದರು. 1934ರ ಫೆಬ್ರುವರಿಯಿಂದ ಡಿಸೆಂಬರ್‌ ನಡುವೆ ಬಿಳಿಗಿರಿರಂಗನಬೆಟ್ಟದಲ್ಲಿ 138 ಪ್ರಬೇಧಗಳ 436 ಹಕ್ಕಿಗಳನ್ನು ಗುರುತಿಸಿ ಸಲೀಂ ಅವರ ಕಾರ್ಯಕ್ಕೆ ರಾಲ್ಫ್‌ ನೆರವಾಗಿದ್ದರು.ಸಲೀಂ ಅಲಿ ಪತ್ನಿ ಹಾಗೂ ಸಂಬಂಧಿಕರು ಕೂಡ ಹೊನ್ನಮೆಟ್ಟಿ ಎಸ್ಟೇಟ್‌ಗೆ ಭೇಟಿ ನೀಡಿ ರಾಲ್ಫ್‌ ಆತಿಥ್ಯ ಪಡೆದಿದ್ದರು.

ಆ ಕಾಲಕ್ಕೆ ಆಧುನಿಕವಾಗಿದ್ದ ಬಂದೂಕುಗಳನ್ನು ಹೊಂದಿದ್ದ ರಾಲ್ಫ್‌ ಮೊರಿಸ್‌, ತೀವ್ರ ಕಾಟ ಕೊಡುತ್ತಿದ್ದ ಆನೆಗಳು, ಹುಲಿಗಳನ್ನು ಕೊಲ್ಲುತ್ತಿದ್ದರು. ಸೋಲಿಗರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ಅರಣ್ಯದ ಬಗ್ಗೆ ತಿಳಿದುಕೊಳ್ಳಲು ಹಾಗೂ ನಿಗಾ ಇಡಲು ಅವರನ್ನು ಬಳಸಿಕೊಳ್ಳುತ್ತಿದ್ದರು. 1955ರಲ್ಲಿ ಎಸ್ಟೇಟ್‌ ತೊರೆದು ಲಂಡನ್‌ಗೆ ತೆರಳಿದ್ದ ಅವರು 1977ರಲ್ಲಿ ನಿಧನರಾದರು. 1980ರಲ್ಲಿ ಅವರ ಪತ್ನಿ ಹಿದರ್‌ ಮೊರೀಸ್‌ ಲಂಡನ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT