ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮ್ಮತ್ತೂರು: ಇದು ಬಸದಿಗಳ ಊರು

ಎರಡು ಬಸದಿಗಳು ಇರುವುದು ವಿಶೇಷ, ಪ್ರೇಕ್ಷಣೀಯ ಸ್ಥಳವಾಗಿರುವ ಮಹಾವೀರರ ಬಸದಿ
Last Updated 12 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಹೋಬಳಿ ವ್ಯಾಪ್ತಿಯ ಉಮ್ಮತ್ತೂರು ಗ್ರಾಮವನ್ನು ಪಾಳೇಗಾರರು ಆಳ್ವಿಕೆ ನಡೆಸುವ ಮೊದಲೇ ಇಲ್ಲಿ ಜೈನರ ಪ್ರಾಬಲ್ಯ ಇತ್ತು ಎಂಬುದಕ್ಕೆ ಇಲ್ಲಿನ ಜೈನ ಬಸದಿಗಳು ಸಾಕ್ಷಿಯಾಗಿ ನಿಂತಿವೆ.

ಗ್ರಾಮದಲ್ಲಿರುವ ಭಗವಾನ್ ಮಹಾವೀರ ಹಾಗೂ ವೃಷಭನಾಥ ಬಸದಿಗಳಿಗೆ 1000 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಭಗವಾನ್ ಮಹಾವೀರ ಬಸದಿ ಹಾಗೂ ವೃಷಭನಾಥ ತೀರ್ಥಂಕರ ಬಸದಿ ಇರುವುದು ಮೈಸೂರು ಪ್ರಾಂತ್ಯದ ಉಮ್ಮತ್ತೂರಿನಲ್ಲಿ ಮಾತ್ರ. ಇತರೆ ಕಡೆಗಳಲ್ಲಿ ಒಬ್ಬ ತೀರ್ಥಂಕರರ ಬಸದಿ ಮಾತ್ರ ಇದೆ. ಎರಡು ಬಸದಿಗಳು ಒಂದೇ ಗ್ರಾಮದಲ್ಲಿರುವುದು ಇಲ್ಲಿನ ವಿಶೇಷ.

ಗ್ರಾಮದ ಮೂಲ ಜೈನ ಸಹೋದರರಿಬ್ಬರು ಆಂಧ್ರಪ್ರದೇಶದ ಪೆನ್ನುಗೊಂಡಕ್ಕೆ ಹೋಗಿ ಅಲ್ಲಿ ರಾಜಾಶ್ರಯ ಪಡೆದು ವಿದ್ಯಾಬ್ಯಾಸ ಮುಂದುವರಿಸುತ್ತಾರೆ. ವಿದ್ಯಾಬ್ಯಾಸ ಮುಗಿದ ನಂತರ ವಾಪಸ್ ಬರುವಾಗ ಅಲ್ಲಿನ ರಾಜ ಇವರಿಗೆ ಧನ ಕನಕಗಳನ್ನು ನೀಡುತ್ತಾನೆ. ಅದನ್ನು ಪಡೆದ ಇವರು ಉಮ್ಮತ್ತೂರು ಗ್ರಾಮದಲ್ಲಿ ಜೈನ ಬಸದಿಗಳನ್ನು ನಿರ್ಮಿಸುತ್ತಾರೆ.

ಅದರಲ್ಲಿ ಭಗವಾನ್ ಮಹಾವೀರರ ಬಸದಿ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾಗಿ ಜೈನ ಯಾತ್ರಿಕರ ತಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದ ಮುಂಭಾಗದಲ್ಲಿ ವಿವಿಧ ತೀರ್ಥಂಕರರ ಮೂರ್ತಿಗಳಿವೆ. 10 ಗುಂಟೆಗೂ ಹೆಚ್ಚು ವಿಸ್ತೀರ್ಣದಲ್ಲಿರುವ ಈ ಬಸದಿಯನ್ನು ಸಂಪೂರ್ಣ ಕಲ್ಲಿನಿಂದ ನಿರ್ಮಿಸಲಾಗಿದೆ. ಬಸದಿಯ ಪ್ರವೇಶ ದ್ವಾರ ಪ್ರವೇಶಿಸುತ್ತಿದ್ದಂತೆ ಪ್ರಧಾನಬಲಿ ಕಲ್ಲು ಇದೆ.

ದೇವಸ್ಥಾನ ವಿಶಾಲವಾಗಿದ್ದು, ಗರ್ಭಗುಡಿಯಲ್ಲಿ ಭಗವಾನ್‌ ಮಹಾವೀರನ ಏಕಶಿಲಾ ವಿಗ್ರಹವಿದೆ. ಇದರ ಬಲ ಭಾಗದಲ್ಲಿ ಸಿದ್ಧಾಯಿನಿ ಯಕ್ಷಿ ವಿಗ್ರಹವಿದೆ. ಇಂದಿಗೂ ಇಲ್ಲಿ ಪ್ರತಿದಿನ ಪೂಜೆ ನಡೆಯುತ್ತದೆ. ವಿವಿಧ ಕಡೆಗಳಿಂದ ಬರುವ ಜೈನ ಮುನಿಗಳು ಇಲ್ಲಿ ಬಂದು ವ್ಯಾಸ್ತವ್ಯ ಹೂಡುತ್ತಾರೆ.

ಇಂದಿಗೂ ಗ್ರಾಮದ ಹೊಸ ಬಡಾವಣೆಯಲ್ಲಿ ಮನೆಗಳನ್ನು ನಿರ್ಮಿಸಲು ಅಡಿಪಾಯ ತೆಗೆಯುವಾಗ ಕೆತ್ತನೆಯ ಕಲ್ಲುಗಳು ಸಿಗುತ್ತಿವೆ. ಅವುಗಳನ್ನು ತಂದು ಬಸದಿಯಲ್ಲಿ ಸಂರಕ್ಷಿಸಿಡಲಾಗುತ್ತಿದೆ.

ಗ್ರಾಮದಲ್ಲಿ ಇತರೆ ಪಾಳೆಗಾರರು ಪ್ರಾಬಲ್ಯಕ್ಕೆ ಬಂದಾಗ ಇವರ ಮೇಲೆ ದಬ್ಬಾಳಿಕೆ ನಡೆಯುತ್ತದೆ. ಇದರಿಂದ ಇಲ್ಲಿದ್ದ ಜೈನರು ಬೇರೆ ಸ್ಥಳಗಳಿಗೆ ಪಲಾಯಾನ ಮಾಡಿದರು ಎಂದು ಹೇಳುತ್ತಾರೆ ಗ್ರಾಮದ ಹಿರಿಯರು.

ಜೀರ್ಣೊದ್ಧಾರ: ಗ್ರಾಮದಜೈನ ಬಸದಿಗಳು ಶಿಥಿಲಾವಸ್ಥೆ ತಲುಪಿದ್ದವು. 2004 ರಲ್ಲಿ ಜಿಲ್ಲೆಯ ಕಾರ್ಯಕ್ರಮವೊಂದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಬಂದಿದ್ದಾಗ ದಾರಿ ಮಧ್ಯೆ, ಉಮ್ಮತ್ತೂರಿನಲ್ಲಿ ಬಸದಿಗಳನ್ನು ಕಂಡಿದ್ದರು. ಬಸದಿ ವೀಕ್ಷಿಸಿದ ಅವರು, ಜೀರ್ಣೋದ್ಧಾರಕ್ಕಾಗಿ ಸರ್ಕಾರದ ಅನುದಾನದ ಜೊತೆಗೆ ₹ 9 ಲಕ್ಷ ಅನುದಾನ ನೀಡಿದರು. ಈ ಅನುದಾನದಲ್ಲಿ ಶಿಥಿಲಾವಸ್ಥೆ ತಲುಪುತ್ತಿದ್ದ ಬಸದಿಯನ್ನು ಜೀರ್ಣೋದ್ಧಾರಗೊಳಿಸಲಾಯಿತು.

ಇಂದಿಗೂ ಇತಿಹಾಸ ವಿದ್ಯಾರ್ಥಿಗಳು ಈ ಬಸದಿಗೆ ಆಗಮಿಸಿ ಜೈನ ಇತಿಹಾದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

‘ಸಂರಕ್ಷಿಸಿ, ಅಭಿವೃದ್ಧಿ ಪಡಿಸಿ‘

‘ಗ್ರಾಮದಲ್ಲಿ ಪಾಳೇಗಾರರು ಆಡಳಿತ ನಡೆಸುವಾಗ ಕೆಲವು ಧರ್ಮಗಳ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಈ ದೇವಸ್ಥಾನಗಳ ಜೊತೆಗೆ ಜೈನ ಬಸದಿಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣಗಳನ್ನಾಗಿ ಮಾಡಬೇಕು’ ಎಂದು ಗ್ರಾಮದ ಮುಖಂಡ ಚಿಕ್ಕಬಸಪ್ಪ ಅವರು ಹೇಳಿದರು.

‌‘ಇತಿಹಾಸದ ಗತ ವೈಭವವನ್ನು ಇಲ್ಲಿನ ಜೈನ ಬಸದಿಗಳು ಸಾರುತ್ತಿವೆ. ಈ ಬಸದಿಗಳನ್ನು ಸಂರಕ್ಷಿಸುವ ಸಲುವಾಗಿ ಸರ್ಕಾರ ಮುಜರಾಯಿ ಇಲಾಖೆಗೆ ಒಳಪಡಿಸಿ ಅಭಿವೃದ್ಧಿಪಡಿಸಲು ಮುಂದಾಗಬೇಕು’ ಎಂದು ಬಸದಿಯ ಅರ್ಚಕ ಲಕ್ಷ್ಮಿಪತಿ ಪಂಡಿತ್ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT