ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆಯಲ್ಲೊಂದು ಧ್ಯಾನ ಮಂದಿರ

Last Updated 28 ಡಿಸೆಂಬರ್ 2015, 19:51 IST
ಅಕ್ಷರ ಗಾತ್ರ

ಗುಡ್ಡ ಸೀಳಿದಂತೆ ಕಾಣುವ ಪುಟ್ಟ ರಸ್ತೆ. ಇಕ್ಕೆಲಗಳಲ್ಲಿ ಮುಗಿಲೆತ್ತರದ ಮರಗಳು. ತೋರಣದಂತೆ ಬಳ್ಳಿಗಳು. ಚಿಲಿಪಿಲಿ ಹಕ್ಕಿಗಳ ಕಲರವ. ಎಡಬದಿಯಲ್ಲಿ ಹಸಿರು ಹೊದ್ದ ಬೆಟ್ಟ. ಬಲ ಬದಿಯಲ್ಲಿ ಇಳಿಜಾರಿನ ಅಂಗಳ. ಬೆಟ್ಟಗಳ ಹಿಂಬದಿಯಲ್ಲಿ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವ ಕಿರು ಜಲಾಶಯದ ಹಿನ್ನೀರು. ಮತ್ತೊಂದು ಸಹೋದರ ಬೆಟ್ಟದ ಮೇಲೆ ಉದ್ಯಾನ, ಕೆಳಭಾಗದಲ್ಲಿ ಧ್ಯಾನ ಮಂದಿರ.

ತುಮಕೂರು ಜಿಲ್ಲೆಯ ಹುಳಿಯಾರು - ಸಿರಾ ರಸ್ತೆಯಲ್ಲಿ ಸಾಗುತ್ತಿದ್ದರೆ ಬಲಬದಿಯಲ್ಲಿ ಇಂಥದ್ದೊಂದು ‘ಹಸಿರ ತುಣುಕು’ ಸಾಗುವವರ ಕಣ್ಮನ ಸೆಳೆಯುತ್ತದೆ. ಹಸಿರಾಕರ್ಷಣೆಗೆ ಮನಸೋತು, ಈ ಪ್ರದೇಶಕ್ಕೆ ಹೊಕ್ಕರೆ, ಇಳಿಜಾರಿನಲ್ಲಿ ಶ್ವೇತವರ್ಣದ ಮಂದಿರ. ಬಲಭಾಗದಲ್ಲಿ ಪುಟ್ಟದೊಂದು ಉದ್ಯಾನ ಇದೆ. ಸುವರ್ಣಮುಖಿ ನದಿಗೆ ಅಡ್ಡಲಾಗಿ ಎರಡು ಗುಡ್ಡಗಳ ನಡುವೆ ನಿರ್ಮಿಸಿರುವ ಬೋರನಕಣಿವೆ ಜಲಾಶಯದ ಹಿಂಬದಿಯಲ್ಲಿರುವುದೇ ಈ ಹಸಿರುಡುಗೆಯ ಸಾಯಿಬಾಬಾ ಧ್ಯಾನ ಮಂದಿರ.

ಪರಿಸರ, ಮಂದಿರ ರೂಪುಗೊಂಡಿದ್ದು ದಶಕದ ಹಿಂದೆ ಬೋರನಕಣಿವೆ ಜಲಾಶಯದ ಹಿಂದಿರುವ ಗುಡ್ಡಗಳು ಬೋಳಾಗಿದ್ದವು. ಕುರುಚಲು ಗಿಡಗಳನ್ನು ಹೊರತುಪಡಿಸಿದರೆ, ಎತ್ತರವಾದ ಮರಗಿಡಗಳಿರಲಿಲ್ಲ. ಮಳೆಗಾಲದಲ್ಲಿ ಕಣಿವೆಯಲ್ಲಿ ನೀರು ಕಾಣಿಸುತ್ತಿತ್ತು. ಉಳಿದಂತೆ ಗುಡ್ಡಗಳಲ್ಲಿ ಕುರುಚಲು ಗಿಡಗಳದ್ದೇ ಸಾಮ್ರಾಜ್ಯ.

ಬಯಲು ಸೀಮೆಯ ಇಂಥ ಅಪರೂಪದ ಪರಿಸರದಲ್ಲಿ ಆಧ್ಯಾತ್ಮಿಕ ಚಟುವಟಿಕೆಯ ಕೇಂದ್ರವನ್ನು ಆರಂಭಿಸಬೇಕೆಂದು ಸಂಕಲ್ಪ ಮಾಡಿದ್ದು ಸ್ಥಳೀಯ ನಿವಾಸಿ ಬಿ. ವಿಠಲ್. ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ತವರಿನ ಪ್ರೀತಿ, ಆಸಕ್ತಿಗೆ, ಚಿಂತನೆಗೆ ಸ್ಥಳೀಯರು, ಸಾಹಿತಿ, ಚಿಂತಕ ಪ್ರೊ.ಎಸ್. ಜಿ.ಸಿದ್ದರಾಮಯ್ಯ ಅವರಂಥವರು ಸಾಥ್ ನೀಡಿದರು. ಮೂಲತಃ ಸಿದ್ದರಾಮಯ್ಯ ಅವರದ್ದೂ ಇಲ್ಲೇ ಆಸುಪಾಸಿನ ಸ್ಥಳವಾಗಿದ್ದದು, ಈ ಯೋಜನೆಗೆ ನೆರವಾಗಲು ಪ್ರೇರೇಪಣೆಯಾಯಿತು.

ಏಳೆಂಟು ವರ್ಷಗಳ ಕಾಲ ಹಲವು ಗೆಳೆಯರು ನಡೆಸಿದ ಸಾಹಸದೊಂದಿಗೆ ಐದು ಎಕರೆ ಪ್ರದೇಶದಲ್ಲಿ ಸುಂದರ ಸಾಂಸ್ಕೃತಿಕ, ಆಧ್ಯಾತ್ಮಿಕ ಕೇಂದ್ರ ರೂಪುಗೊಂಡಿತು. ಆ ಕೇಂದ್ರವನ್ನು ಸಾಮಾಜಿಕ ಚಟುವಟಿಕೆಯ ತಾಣವಾಗಿಸಬೇಕೆಂಬ ಮನಸ್ಸುಗಳು ಜೊತೆಯಾಗಿದ್ದರಿಂದ, ಧ್ಯಾನದ ಜೊತೆಗೆ, ‘ಸೇವಾ ಚೇತನ’ ಎಂಬ ಸಮಿತಿ ಅಡಿಯಲ್ಲಿ ಆರೋಗ್ಯ, ಅರಿವು, ಮಕ್ಕಳ ಸೇವಾ ಕೇಂದ್ರದಂತಹ ಚಟುವಟಿಕೆಗಳು ಆರಂಭವಾದವು. ಸದ್ಯ ಈ ಎಲ್ಲಾ ಚಟುವಟಿಕೆಗಳನ್ನು ಪ್ರಸಾದ್ ನಿರ್ವಹಿಸುತ್ತಿದ್ದಾರೆ.

ಧ್ಯಾನಾಸಕ್ತರಿಗೆ, ಆಸ್ತಿಕರಿಗೆ ಇಲ್ಲಿ ಸಾಯಿಬಾಬಾ ದೇಗುಲವಿದೆ. ಪರಿಸರಾಸಕ್ತರು, ಮಕ್ಕಳಿಗೆ ಪುಟ್ಟದೊಂದು ಉದ್ಯಾನವನವಿದೆ. ಬೆಟ್ಟದ ಮೇಲ್ಭಾಗದಲ್ಲಿ ನೇಪಾಳ ಶೈಲಿಯ ಮಂಟಪವೊಂದನ್ನು ನಿರ್ಮಿಸಿ, ಬುದ್ಧನ ಪ್ರತಿಮೆ ಸ್ಥಾಪಿಸಲಾಗಿದೆ. ಅದೇ ಲುಂಬಿನಿ ವನ. ಈ ವನದಲ್ಲಿ ಔಷಧೀಯ ಗಿಡಗಳಿವೆ. ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯಂತಹ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ವರ್ಷದ ಪ್ರಮುಖ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳೂ ನಡೆಯುತ್ತವೆ.

ಕೇವಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ಕೆ ಮೀಸಲಿಡದೇ, ಸಮಾಜಮುಖಿ ಕಾರ್ಯಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿಯೇ ಮಂದಿರದ ಹಿಂಬದಿಯಲ್ಲಿ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ. ಗ್ರಾಮೀಣ ಮಹಿಳೆಯರಿಗಾಗಿ ‘ಆರೋಗ್ಯ ಚೇತನ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಚಿತ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಚಿಕಿತ್ಸೆಗಳನ್ನು ನಡೆಸುತ್ತಾರೆ.

ತಿಂಗಳಿಗೊಮ್ಮೆ ಬೆಂಗಳೂರಿನಿಂದ ವೈದ್ಯರು ಇಲ್ಲಿಗೆ ಬಂದು, ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಾರೆ. ಅನಾಥ ಮಕ್ಕಳಿಗೆ ‘ಪುನರ್ವಸತಿ ಕೇಂದ್ರ’ (ಅನಾಥಾಶ್ರಮ) ವನ್ನು ತೆರೆದಿದ್ದಾರೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಾರೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಯಕ್ಷಗಾನ, ಗೀತಗಾಯನ, ಚಿತ್ರಕಲೆ, ಶಿಲ್ಪಕಲೆ ಮತು ಕ್ರೀಡೆಗಳನ್ನು ಪ್ರೋತ್ಸಾಹಿಸಲು ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಅಧ್ಯಾತ್ಮ, ಪರಿಸರ, ಆರೋಗ್ಯ, ಸಾಮಾಜಿಕ ಕಳಕಳಿ ಪಸರಿಸುವ ಈ ಸುಂದರ ತಾಣದಲ್ಲಿ ಜಗತ್ತಿಗೆ ಶಾಂತಿ, ಸಮಾನತೆ ಬೋಧಿಸಿದ ‘ಗೌತಮ ಬುದ್ಧ’ನ ಸಂದೇಶಗಳೂ ಇರಬೇಕು ಎಂಬ ಹಿನ್ನೆಲೆಯಲ್ಲಿ ಧ್ಯಾನಮಂದಿರ ಸಮಿತಿ ಗೌರವಾಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರು ಗೌತಮ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.

ಇದರೊಂದಿಗೆ, ಜಗತ್ತಿಗೆ ಒಳಿತನ್ನು ಬಯಸಿದ ‘ಕಾಯಕ ಯೋಗಿ’ ಬಸವಣ್ಣ, ದಾಸ ಶ್ರೇಷ್ಠ ಕನಕದಾಸರು, ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಂ, ರಾಷ್ಟ್ರಪಿತ ಗಾಂಧೀಜಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗಳಿವೆ. ಉದ್ಯಾನವನದ ನಡುವೆ ನಿಂತರೆ ಮೇಲ್ಭಾಗದಲ್ಲಿ ಬುದ್ಧನ ಧ್ಯಾನ ಮಂಟಪ, ಕೆಳಭಾಗದಲ್ಲಿ ಕಣಿವೆಯ ಹಿನ್ನೀರು, ಬಲಭಾಗದಲ್ಲಿ ಸಾಯಿಬಾಬಾ ಧ್ಯಾನಮಂದಿರ... ಹೀಗೆ ಹಲವು ವೈವಿಧ್ಯ ಸನ್ನಿವೇಶಗಳು ಅನಾವರಣಗೊಳ್ಳುತ್ತವೆ.

ಪ್ರವಾಸಿ ತಾಣ ತಲುಪುವುದು ಹೀಗೆ
ಬೆಂಗಳೂರಿನಿಂದ 180 ಕಿ.ಮೀ ದೂರದಲ್ಲಿ ಈ ಧ್ಯಾನಕೇಂದ್ರವಿದೆ. ಸಿರಾ- ಹುಳಿಯಾರ ರಸ್ತೆ ಅಥವಾ ಹುಳಿಯಾರು-ಸಿರಾ ರಸ್ತೆಯಲ್ಲಿ ಎಂಟು ಕಿ.ಮೀ ದೂರದಲ್ಲಿದೆ. ಕೆ.ಬಿ ಕ್ರಾಸ್ ಮುಖಾಂತರ ಈ ತಾಣವನ್ನು ತಲುಪಬಹುದು.

ಇಳಿಯುವ ಸ್ಥಳ: ಬೋರನ ಕಣಿವೆ ಬಸ್ ನಿಲ್ದಾಣದಲ್ಲಿ ಇಳಿದು ಮಂದಿರಕ್ಕೆ ಹೋಗಬಹುದು. ಹೊಯ್ಸಳ ಕಟ್ಟೆಯಿಂದ ಆಟೊ ಹಿಡಿದು ಧ್ಯಾನ ಮಂದಿರವನ್ನು ತಲುಪಬಹುದು. ಹುಳಿಯಾರ್‌ನಿಂದ ಖಾಸಗಿ ಬಸ್‌ಗಳ ಸಂಚಾರದ ವ್ಯವಸ್ಥೆಯೂ ಇದೆ.
*
ಏನಿದು ಬೋರನ ಕಣಿವೆ ಜಲಾಶಯ ?
ಎರಡು ಗುಡ್ಡಗಳ ನಡುವೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆಯೇ ಬೋರನ ಕಣಿವೆ ಜಲಾಶಯ. ಸುವರ್ಣಮುಖಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಮೈಸೂರು ಅರಸರಾದ ಚಾಮರಾಜೇಂದ್ರ ಒಡೆಯರ್ ಈ ಜಲಾಶಯದ ನಿರ್ಮಾತೃ. ಮೈಸೂರು ಸಂಸ್ಥಾನದ ಅಂದಿನ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್, ಸಂಸ್ಥಾನದ ಮುಖ್ಯ ಎಂಜಿನಿಯರ್ ಕರ್ನಲ್ ಮೈಕನಿಲ್ ಕ್ಯಾಂಪೈಲರ್ ಶ್ರಮದಿಂದ ಜಲಾಶಯ ರೂಪುಗೊಂಡಿದೆ.

ಜಯಚಾಮರಾಜೇಂದ್ರ ಒಡೆಯರ್ ಸ್ಥಳ ಪರಿಶೀಲನೆಗೆ ಬಂದಾಗ ಅಲ್ಲಿ ಕುರಿ ಮೇಯಿಸುತ್ತಿದ್ದ ಬೋರನೆಂಬ ವ್ಯಕ್ತಿ ಇಲ್ಲಿ ಜಲಾಶಯ ನಿರ್ಮಿಸುವಂತೆ ಮನವಿ ಮಾಡಿಕೊಂಡನಂತೆ. ಆ ಕಾರಣದಿಂದ ಜಲಾಶಯಕ್ಕೆ ಬೋರನ ಕಣಿವೆ ಎಂದು ಹೆಸರಿಸಲಾಯಿತು ಎಂಬ ಮಾತಿದೆ. ಜಲಾಶಯಕ್ಕೆ ಈಗ 123 ವರ್ಷ (1892ರಲ್ಲಿ ನಿರ್ಮಾಣ). ಅಣೆಕಟ್ಟೆ ಮುಂಭಾಗದಲ್ಲಿ ಭೈರವೇಶ್ವರನ ದೇವಸ್ಥಾನ ಇದೆ. ಈ ಪ್ರದೇಶಕ್ಕೆ ‘ಭೈರವ ಕಣಿವೆ’ ಎಂಬ ಹೆಸರಿದ್ದು ಅದು ಕ್ರಮೇಣ ಬೋರನಕಣಿವೆ ಆಗಿರಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT