ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ವಿಶಿಷ್ಟ ಗೋ ಪ್ರಪಂಚ

Last Updated 4 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ದಾರಿಯುದ್ದಕ್ಕೂ ಬೆಳ್ಳಗೆ ಅರಳಿ ಸುಗಂಧ ಸೂಸುತ್ತಿರುವ ಕಾಫಿ ತೋಟಗಳ ನಡುವಿನ ಅಂಕುಡೊಂಕಿನ ಹಾದಿಯಲ್ಲಿ, ಮೂಡಿಗೆರೆ ಹ್ಯಾಂಡ್ ಪೋಸ್ಟ್‌ನಿಂದ 10 ಕಿ.ಮೀ ದೂರದಲ್ಲಿರುವ ದಾರದಹಳ್ಳಿಗೆ ಸಾಗಿಬಂದ ನಮ್ಮನ್ನು ಗೋವಿನ ಕೊಂಬಿನ ಕಹಳೆಯನ್ನು ಊದುವುದರೊಂದಿಗೆ ಸ್ವಾಗತಿಸಿದ್ದು ಅಲ್ಲಿನ ಹಿರಿಯ ಪಶುಪರೀಕ್ಷಕ ಕೃಷ್ಣರಾಜು.

ದಾರದಹಳ್ಳಿ  ಚಿಕ್ಕಮಗಳೂರು ಜಿಲ್ಲೆಗೆ ಸೇರುತ್ತದೆ. ಇಲ್ಲಿ ಎಲ್ಲಾ ಊರುಗಳಿಗಿಂತ ಭಿನ್ನವಾದ ಸರ್ಕಾರಿ ಪಶು ವೈದ್ಯ ಆಸ್ಪತ್ರೆಯಿದೆ. ಇದನ್ನು ಆಸ್ಪತ್ರೆ ಎನ್ನುವುದಕ್ಕಿಂತ ಗೋವಿನ ವಿಶ್ವರೂಪ ದರ್ಶನವೆನ್ನಬಹುದು.

ಗೋವುಗಳು ಹಾಲು ನೀಡುವುದಕ್ಕೆ, ವಿವಿಧ ರೀತಿಯಲ್ಲಿ ಉಪಯೋಗಕ್ಕೆ ಬರುವ ಸೆಗಣಿ ನೀಡುವುದಕ್ಕಷ್ಟೇ ಸೀಮಿತ ಎಂದಷ್ಟೇ ತಿಳಿದಿರುವವರಿಗೆ  ಒಂದು ಗೋವು ಏನೆಲ್ಲಾ ನೀಡಬಲ್ಲದು ಎಂಬುದರ ಸಂಪೂರ್ಣ ಮಾಹಿತಿ ದೊರಕುತ್ತದೆ.

ಒಂದು ಸಾಮಾನ್ಯ ಸರ್ಕಾರಿ ಪಶು ಆಸ್ಪತ್ರೆಯನ್ನು ಜಾನುವಾರುಗಳ ಮಹತ್ವ ಸಾರುವ ಸಂಗ್ರಹಾಲಯವನ್ನು ಮಾಡಿರುವ ಪರಿ, ಪಶು ಪರೀಕ್ಷಕ ಕೃಷ್ಣರಾಜುರವರ ಗೋವಿನ ಮೇಲಿರುವ ಪೂಜನೀಯ ಭಾವ, ಸಾಮಾಜಿಕ ಕಳಕಳಿಯನ್ನು ಎತ್ತಿ ಹಿಡಿಯುತ್ತದೆ. ಆ ಪುಟ್ಟ ಆಸ್ಪತ್ರೆಯ ಕಿರಿದಾದ ಮೂರು ಕೊಠಡಿಗಳಲ್ಲಿ ಅಚ್ಚುಕಟ್ಟಾಗಿ ಜಾನುವಾರು ಮ್ಯೂಸಿಯಂ ಅನ್ನು ಕಲಾತ್ಮಕವಾಗಿ ರೂಪಿಸಿದ್ದಾರೆ. ಇಲ್ಲಿ ಜವಾನನೂ ಇವರೇ ದಿವಾನನೂ ಇವರೇ.

ದ್ವಾರವನ್ನು ದಾಟಿ ಆ ಪುಟ್ಟ ಆವರಣವನ್ನು ಪ್ರವೇಶಿಸುತ್ತಿದ್ದಂತೆಯೆ ‘ಅಂಗ್ಯೆಯಲ್ಲಿ ಔಷಧಿ ವನ’ ನೋಡುಗರ ಗಮನ ಸೆಳೆಯುತ್ತದೆ. ಇಲ್ಲಿ 30ಕ್ಕೂ ಅಧಿಕ ಔಷಧೀಯ ಸಸ್ಯಗಳಿವೆ. ಒಳಗೆ ಅಡಿಯಿಟ್ಟೊಡನೆ ಆಕರ್ಷಿಸುವ ಮಜ್ಜಿಗೆಯಲ್ಲಿ ನಡೆವ ಗಡಿಯಾರ, ಸಗಣಿ, ಗೋಮೂತ್ರದಿಂದ ಮೂರು ತಿಂಗಳ ಕಾಲ ಉರಿವ ವಿದ್ಯುತ್ ದೀಪ, ಮೂಳೆ, ಕೊಂಬಿನ ಆಲಂಕಾರಿಕ ಸಾಮಗ್ರಿಗಳು, ಬೆರಗು ಮೂಡಿಸುತ್ತವೆ. ಹಾಗೆ ಬಲಕ್ಕೆ ತಿರುಗಿದರೆ  ಜಾನಪದ ಕೃಷಿ ಪರಿಕರಗಳು, ಬಿದಿರಿನ  ಗೊಟ್ಟಗಳು ಕಾಣಸಿಗುತ್ತವೆ.

ಪುರಾತನ ಕಾಲದಲ್ಲಿ ಬೇಸಾಯ ಮಾಡುವಾಗ ಎತ್ತುಗಳಿಗೆ ಬಳಸುತ್ತಿದ್ದ ನೊಗ, ಹೆಗಲು ಪಟ್ಟಿ, ಬಾಯಿ ಕುಕ್ಕೆಗಳೂ ಇಲ್ಲಿ ಕಾಣಸಿಗುತ್ತವೆ. ಚರ್ಮದ ನಂತರ ತೆಂಗಿನ ಕೆತ್ತನೆ, ಈಗ ಪ್ಲಾಸ್ಟಿಕ್ ರೂಪ ಪಡೆದುಕೊಂಡಿರುವ ಸಾಮಗ್ರಿಗಳ ಮಾಹಿತಿ ಮಹಾಪೂರವೇ ಇಲ್ಲಿದೆ.

ಗೋವಿನ ಕೊಂಬಿನ ಕಹಳೆ, ಕೊಂಬಿನ ದೀವಟಿಗೆ, ವಿವಿಧ ರಾಜ್ಯದಲ್ಲಿ ಬಳಕೆಯಲ್ಲಿದ್ದ ಹಲವು ಬಗೆಯ ಚಾಟಿಗಳು, ಗೋವಿನ ಚರ್ಮದ ಢಕ್ಕೆ, ಭೇರಿ, ನಗಾರಿ, ವಿಭಿನ್ನ ಶಬ್ದ ಹೊಮ್ಮಿಸುವ ತಮಟೆ, ಗಂಟೆಗಳು, ಹಲಗೆ, ಹಿಂದೆ ದೀಪದಂತೆ ಬಳಸುತ್ತಿದ್ದ ದನಗಳ ಒಸಡು, ನೂರಾರು ವರ್ಷಗಳ ಇತಿಹಾಸ ಹೇಳುವ  ಮಜ್ಜಿಗೆ ಮೊಸರು ಬೆಣ್ಣೆಯ ಮಣ್ಣಿನ ಪಾತ್ರೆ, 200 ವರ್ಷಗಳ ಹಳೆಯ ತುಪ್ಪದ ಗಿಂಡಿ, ಜಾನುವಾರಿನಿಂದ ಸಿಗುವ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ಮಜ್ಜಿಗೆಯಿಂದ ಆಗುತ್ತಿದ್ದ ಔಷಧ ತಯಾರಿಕೆ, ಕೊಂಬಿನಿಂದ ಮಾಡಿದ ಸುತ್ತಿಗೆ, ಆಯುಧ ಇತ್ಯಾದಿ ಇಲ್ಲಿವೆ.

ಇದರ ಒಳಹೊಕ್ಕರೆ ಅಭಿರುಚಿ, ಆಸಕ್ತಿಯಿರುವವರಿಗೆ ದಿನಪೂರ್ತಿ ನೋಡಿದರೂ ಮುಗಿಯದ ಮಾಹಿತಿಯಿದೆ. ಕಳೆದ 25 ವರ್ಷಗಳಿಂದ ಸ್ವಂತ ಖರ್ಚಿನಿಂದ ಗೋವು ಮತ್ತದರ ಪೂರಕ ವಸ್ತುಗಳ ಬಳಕೆ, ಪ್ರಾಚೀನ ಕೃಷಿ ಪರಿಕರಗಳ ಕುರಿತು ಕೃಷಿ ಮೇಳಗಳಲ್ಲಿ ವಸ್ತು ಪ್ರದರ್ಶನ ಏರ್ಪಡಿಸಿ ಮಾಹಿತಿ ನೀಡುತ್ತಿದ್ದಾರೆ ಕೃಷ್ಣರಾಜು.

‘ನಾನು ಜನಿಸಿದ್ದ ಸಂದರ್ಭದಲ್ಲಿ ಮನೆಯಲ್ಲಿ ಬಡತನ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ನಾನು ಹುಟ್ಟಿದ್ದೆ. ನನ್ನನ್ನು ಸಲಹುವ ಜವಾಬ್ದಾರಿ ಹೊತ್ತಿದ್ದು ನನ್ನ ತಾಯಿ. ತೀವ್ರ ಬಡತನದ ಆ ದಿನಗಳಲ್ಲಿ ಇದ್ದ ಅಲ್ಪ ಚಿನ್ನವನ್ನು ಮಾರಿ ಓದಿಸಿದಳು. ತಾಯಿಯಷ್ಟೇ ಗೋವನ್ನು ಗೌರವಿಸಬೇಕೆನ್ನುವ ಕಾರಣಕ್ಕೆ ಈ ರೀತಿ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕೃಷ್ಣರಾಜು. ಇವರು ಮನೆ ಮನೆಗೆ ತೆರಳಿ ಕಾಲಕಾಲಕ್ಕೆ ಜಾನುವಾರುಗಳ ಆರೈಕೆ, ಚಿಕಿತ್ಸೆ ಕುರಿತು ತಿಳಿ ಹೇಳುತ್ತಾರೆ. ತಮ್ಮದೇ ತಯಾರಿಯ ಮನೆಮದ್ದನ್ನು ಉಚಿತವಾಗಿ ನೀಡುತ್ತಾರೆ. ಸುತ್ತಮುತ್ತಲಿನ 16 ಹಳ್ಳಿಗರ ಪ್ರೀತಿ ಪಾತ್ರರಾಗಿದ್ದಾರೆ.

ಸೊಳ್ಳೆಗಳ ನಾಶಕ್ಕೆ ಗಂಜಲ, ಸೆಗಣಿಯಿಂದ ತಯಾರಿಸಿದ ಊದುಬತ್ತಿ, ಜಾನುವಾರು ಕಾಡುವ ಹೇನು ಉಣ್ಣೆಗಳ ನಾಶಕ್ಕೆ ಔಷಧಿ, ಮೈಗ್ರೇನ್‌ಗೆ, ಗಾಯಕ್ಕೆ ಔಷಧಿ, ಧೂಪದ ಬತ್ತಿ, ಫೆನಾಯಿಲ್, ಹಲ್ಲುಪುಡಿ, ಸಾಂಬ್ರಾಣಿ, ಕುಂಕುಮ, ಕಣ್ಣುಕಪ್ಪು, ಹೇರ್ ಆಯಿಲ್, ವಿಭೂತಿ ಸೆಗಣಿ ಹೀಗೆ ವಿವಿಧ ಬಗೆಯ ಸಾಮಗ್ರಿ, ಔಷಧಿಗಳನ್ನೂ ನೀಡುತ್ತಾರೆ.

ಪಕ್ಕದಲ್ಲೇ ಇರುವ ಮೊರಾರ್ಜಿ ಶಾಲೆಯ ಮಕ್ಕಳು ಮದ್ರಾಸ್ ಕಣ್ಣಾಗಿ ನರಳುತ್ತಿದ್ದಾಗ ಬಟ್ಟಿ ಇಳಿಸಿದ ಗಂಜಲದಲ್ಲಿ ಗುಲಾಬಿ ಹೂವು, ತುಳಸಿ ಬಳಸಿ ಸ್ವತಃ ಔಷಧ ತಯಾರಿಸಿ ಒಂದೇ ದಿನದಲ್ಲಿ ಆ ಮಕ್ಕಳ ಕಣ್ಣನ್ನು ಗುಣಪಡಿಸಿದ್ದಾರೆ.

‘ಹೊಲಕ್ಕೊಂದು ಬೇವು, ಮನೆಗೊಂದು ಗೋವು  ಇದ್ದರೆ, ಗೋವನ್ನು ಆರಾಧಿಸಿದರೆ ಆರ್ಥಿಕ ಸ್ವಾವಲಂಬನೆ ಸಾಧ್ಯ. ನಮ್ಮ ರೈತರು ದಿವಾಳಿಯಾಗಲು ಗೋವುಗಳ ಮೇಲಿನ ನಿರ್ಲಕ್ಷ್ಯವೇ ಕಾರಣ’ ಎನ್ನುತ್ತಾರೆ ಇವರು. ಹೈದರಾಬಾದ್‌ನಲ್ಲಿ ನಡೆದ 11ನೇ ವಿಶ್ವ ಸಮ್ಮೇಳನದಲ್ಲಿ ವಿದೇಶಿಗರಿಗೆ ಬೆರಗು ಮೂಡಿಸಿದ ನಮ್ಮ ಪದ್ಧತಿಗಳಿಗೆ ಇಲಾಖೆಯಲ್ಲಿ ಬೆಲೆಯಿಲ್ಲವೆನ್ನುತ್ತಾರೆ. ಆ ಸಮ್ಮೇಳನದಲ್ಲಿ ಬೆಸ್ಟ್ ಸ್ಟಾಲ್ ಎಂಬ ಹೆಗ್ಗಳಿಕೆಯೂ ಸಿಕ್ಕಿತು.

ಇವರು ವಾಣಿಜ್ಯ ಉದ್ದೇಶಕ್ಕಾಗಿ ಈ ಕಾರ್ಯಗಳನ್ನು ಮಾಡುತ್ತಿಲ್ಲ. ಆಸಕ್ತಿ ಇರುವವರಿಗೆ ವೈಜ್ಞಾನಿಕವಾಗಿ ಮನವರಿಕೆ ಮಾಡಿ ತಯಾರಿಕಾ ವಿಧಾನವನ್ನು ಕಲಿಸಿಕೊಡುತ್ತಾರೆ. ಪಕ್ಕದ ಶಾಲೆಯ ಮಕ್ಕಳು  ಇವರಿಂದ ಪ್ರಭಾವಿತರಾಗಿ ಮನೆಯಿಂದ ಗಂಜಲ ಸೆಗಣಿ ತಂದು ತರಕಾರಿ ಬೆಳೆಸಿ ಬಿಸಿ ಊಟಕ್ಕೆ ಬಳಸುತ್ತಿರುವುದೊಂದು ವಿಶೇಷ.

ರಾಜ್ಯದ, ಹೊರ ರಾಜ್ಯದ, ವಿದೇಶಿಗರ,  ಗಮನ ಸೆಳೆದಿರುವ ಈ ಗೋವಿನ ಮ್ಯೂಸಿಯಂಗೆ ದಿನ ನಿತ್ಯ ವೀಕ್ಷಕರು ಇದ್ದೇ ಇರುತ್ತಾರೆ. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು ನನ್ನ ಉದ್ದೇಶವೆನ್ನುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT