ಮಂಗಳವಾರ, ಸೆಪ್ಟೆಂಬರ್ 28, 2021
21 °C

ಜೋಗ ಜಲಪಾತ| ಕೋವಿಡ್‌ ಮಾರ್ಗಸೂಚಿಯಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ಕೊರೊನಾ 3ನೇ ಅಲೆ ಕಾರಣ ಆ. 5ರಿಂದ ಜಿಲ್ಲೆಯ ಎಲ್ಲ ಪ್ರವಾಸಿತಾಣಗಳ ಭೇಟಿಗೆ ಕೋವಿಡ್ ಮಾರ್ಗಸೂಚಿ ವಿಧಿಸಿದ್ದು, ಜೋಗ ಜಲಪಾತದಲ್ಲಿ ಗುರುವಾರ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡು ಬಂದಿತು.

ಪ್ರತಿದಿನ ಸರಾಸರಿ 4 ಸಾವಿರದಿಂದ 5 ಸಾವಿರ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಬರುತ್ತಿದ್ದರು. ಗುರುವಾರ ಕೇವಲ 2 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಪ್ರವಾಸಿಗರ ಸಂಖ್ಯೆ ಶೇ 60ರಷ್ಟು ಕ್ಷೀಣಿಸಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಹೆದ್ದಾರಿ 206ರ ಸೀತಾಕಟ್ಟೆ ಸೇತುವೆಯ ಬಳಿ ಪ್ರವಾಸಿ ಮಿತ್ರ, ಪೊಲೀಸ್‌, ಹೋಂ ಗಾರ್ಡ್ಸ್ ಸಿಬ್ಬಂದಿ ಪ್ರಾಧಿಕಾರದ ತಪಾಸಣಾ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ದೃಢೀಕರಣ ಪತ್ರವನ್ನು ತೋರಿಸಿದಲ್ಲಿ ಪ್ರವಾಸಿಗರಿಗೆ ಜೋಗ ಜಲಪಾತದ ಪ್ರಧಾನ ಪ್ರವೇಶ ದ್ವಾರಕ್ಕೆ ಪ್ರವೇಶ ಮಾಡಲು ಟೋಕನ್ ನೀಡಲಾಗುತ್ತದೆ. ಕಾರ್ಗಲ್, ವಡನ್ ಬೈಲು, ಲಿಂಗನಮಕ್ಕಿ, ತಳಕಳಲೆ ಪ್ರದೇಶದ ವೀಕ್ಷಣೆಗೆ ಹೋಗುವವರಿಗೆ ಈ ತಪಾಸಣಾ ಗೇಟ್‌ನಲ್ಲಿ ಯಾವುದೇ ತಡೆ ಇರುವುದಿಲ್ಲ.

‘ಇದಲ್ಲದೆ ಜೋಗ ಜಲಪಾತ ವೀಕ್ಷಣೆಯ ಮತ್ತೊಂದು ಪ್ರಮುಖ ವೀಕ್ಷಣಾ ತಾಣವಾದ ಮುಂಬಯಿ ಬಂಗಲೆ ಪ್ರವಾಸಿಗರಿಗೆ ಮುಕ್ತವಾಗಿದೆ. ಇಲ್ಲಿಂದ ಜಲಪಾತ ವೀಕ್ಷಣೆಗೆ ಯಾವುದೇ ರೀತಿಯ ಕೋವಿಡ್ ನಿರ್ಬಂಧಗಳು ಇರುವುದಿಲ್ಲ. ಏಕೆಂದರೆ ಮುಂಬಯಿ ಬಂಗಲೆ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿರುವುದರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಬಾಂಬೇ ಟಿಬಿ ಪ್ರದೇಶದಲ್ಲಿ ಜಾರಿಯಲ್ಲಿರುವುದಿಲ್ಲ’ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು