ಅಂಬೋಲಿ ಅಮೃತಧಾರೆ

ಶುಕ್ರವಾರ, ಜೂಲೈ 19, 2019
26 °C

ಅಂಬೋಲಿ ಅಮೃತಧಾರೆ

Published:
Updated:
Prajavani

ಸಂಗಾತಿಯ ಸಾಂಗತ್ಯವಿಲ್ಲದೆ ನೊಂದು ಬೆಂದಿದ್ದ ‘ಇಳೆ’ಯ ಸಕಲ ಬಯಕೆಗಳನ್ನು ಪೂರೈಸುವಂತೆ ‘ಮಳೆ’ ಧಾರೆ ಧಾರೆಯಾಗಿ ಸುರಿಯುತ್ತಿತ್ತು. ಈ ಮುಂಗಾರಿನ ಅಭಿಷೇಕದಿಂದ ಪ್ರೀತಿ ಯಂಥ ಹಸಿರು ಕಣ್ಣಿಗೆ ತಣ್ಣಗೆ ಮುತ್ತಿಡುತ್ತಿತ್ತು. ವರ್ಷಧಾರೆಗೆ ಮೈದುಂಬಿದ ಜಲಧಾರೆಗಳು ಪ್ರವಾಸಿಗರನ್ನು ಹರ್ಷದ ಹೊನಲಿನಲ್ಲಿ ಮಿಂದೇಳಿಸುತ್ತಿದ್ದವು...

ಈ ನಯನ ಮನೋಹರ ಬಿಂಬಗಳು ಕಂಡುಬಂದಿದ್ದು, ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಜಿಲ್ಲೆಯ ‘ಜಲಪಾತಗಳ ಸ್ವರ್ಗ’ ಎನಿಸಿರುವ ಅಂಬೋಲಿಯಲ್ಲಿ.

ಉತ್ತಮ ಮಳೆಯ ಮುನ್ಸೂಚನೆ ಸಿಕ್ಕ ಕೂಡಲೇ ಅಂಬೋಲಿಯಲ್ಲಿ ಸುರಿಯುವ ಮುಂಗಾರು ಹನಿಗಳ ಲೀಲೆ ಯನ್ನು ಕಣ್ತುಂಬಿಕೊಳ್ಳಬೇಕೆಂಬ ಮನಸ್ಸಾಯಿತು. ಅಲ್ಲಿಗೆ ಹೋಗುವ ನಿರ್ಧಾರ ಮಾಡಿದ ಮೇಲೆ, ರೂಟ್‌ ಮ್ಯಾಪ್‌ ಕೂಡ ಸಿದ್ಧಪಡಿಸಿದೆವು. ಆ ವೇಳೆ ಅಂಬೋಲಿ ಸುತ್ತ ಏಳೆಂಟು ಸುಂದರ ತಾಣಗಳಿರುವುದು ಖಚಿತವಾಯಿತು. ಒಂದೇ ದಿನದಲ್ಲಿ ಕನಿಷ್ಠ ಐದಾರು ತಾಣಗಳನ್ನಾದರೂ ನೋಡಬಹುದು ಎಂಬ ಆಸೆ ಪ್ರವಾಸಕ್ಕೆ ಮತ್ತಷ್ಟು ಇಂಬು ನೀಡಿತು.

ಅಗತ್ಯ ಪರಿಕರಗಳೊಂದಿಗೆ ಮುಂಜಾನೆ 5ಗಂಟೆಗೆ ಹುಬ್ಬಳ್ಳಿ ಬಿಟ್ಟು 168 ಕಿ.ಮೀ. ದೂರದ ಅಂಬೋಲಿಗೆ ಬೈಕ್‌ನಲ್ಲಿ ಹೊರಟೆವು. ಬೆಳಗಾವಿವರೆಗೂ ಬೈಕ್‌ನಲ್ಲಿ ಹೋಗಿ ಸ್ನೇಹಿತರ ಮನೆಯಲ್ಲಿ ಬೈಕ್‌ ಪಾರ್ಕ್ ಮಾಡಿದೆವು. ಅಲ್ಲಿಂದ ನಾಲ್ವರು ಗೆಳೆಯರು ಕಾರಿನಲ್ಲಿ ಸಾವಂತವಾಡಿ ರಸ್ತೆ ಮಾರ್ಗದಲ್ಲಿ ಪ್ರಯಾಣ ಮುಂದುವರಿಸಿದೆವು.

ಮೋಡಗಳ ಸಂಚಾರ, ಮಂಜಿನ ಚಿತ್ತಾರ...

ಸಹ್ಯಾದ್ರಿ ಶ್ರೇಣಿಯಲ್ಲಿರುವ ಅಂಬೋಲಿ ಕಣಿವೆಯಲ್ಲಿ ಸಾಗುತ್ತಿದ್ದರೆ, ಮಳೆಯಿಂದ ಪುಳಕಗೊಂಡ ಪ್ರಕೃತಿ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ಬಾನಿನ ತುಂಬ ಕಪ್ಪು ಮೋಡಗಳ ಸಂಚಾರ, ಆಳ ಕಣಿವೆಯಲ್ಲಿ ಮಂಜಿನ ಚಿತ್ತಾರ, ಬೆಟ್ಟಗಳ ಸಾಲಿನಲ್ಲಿ ಜಲಪಾತಗಳ ಹರ್ಷೋದ್ಗಾರ...ಆಹಾ! ಈ ಸುಂದರ ದೃಶ್ಯ ಕಾವ್ಯವನ್ನು ಬಣ್ಣಿಸಲು ಪದಗಳೇ ಸಾಲದು. ಪ್ರಕೃತಿಯ ಈ ನಿತ್ಯೋತ್ಸವಕ್ಕೆ ಮನಸು ಮೂಕವಿಸ್ಮಿತವಾಯಿತು.

ಕಣಿವೆಯ ಆರಂಭದಲ್ಲೇ ಸಿಗುವ ನಂಗರ್ತ ಜಲಪಾತ ಬೆಳಗಾವಿ–ಸಾವಂತವಾಡಿ ಹೆದ್ದಾರಿಯ ಪಕ್ಕದಲ್ಲೇ ಇದೆ. 40 ಅಡಿ ಎತ್ತರದಿಂದ ರಭಸವಾಗಿ ಧುಮ್ಮಿಕ್ಕುವ ಈ ಜಲಪಾತ ಚಿಕ್ಕದಾದರೂ ನೋಡಲು ಬಹು ಸುಂದರ. ಹಸಿರು ಕಾಡಿನ ನಡುವೆ ನುಸುಳುತ್ತಾ ಹೋಗುತ್ತಿದ್ದ ಹೊಳೆಯ ದೃಶ್ಯ ಮನಸ್ಸಿಗೆ ಮುದ ನೀಡಿತು.

‘ಯು’ ಆಕಾರದಲ್ಲಿರುವ ‘ಕವಳೆಶೇಟ್‌ ಪಾಯಿಂಟ್‌’ನ ಕಣಿವೆಯೊಂದರಲ್ಲೇ ಏಳು ಜಲಧಾರೆಗಳು ಧುಮ್ಮಿಕ್ಕುತ್ತವೆ. ಇನ್ನೂ ವಿಶೇಷವೆಂದರೆ ಕವಳೆಶೇಟ್‌ ಜಲಪಾತ ‘ರಿವರ್ಸ್ ಫಾಲ್ಸ್‌’ ಎಂದೇ ಜನಪ್ರಿಯ. ಕಾರಣ, ಕಣಿವೆಯಿಂದ ನೀರು ಮೇಲ್ಮುಖವಾಗಿ ಕಾರಂಜಿಯಂತೆ ಚಿಮ್ಮುತ್ತದೆ. ಆದರೆ, ನಾವು ಹೋದ ದಿನ ತುಂತುರು ಹನಿಗಳು ಮಾತ್ರ ಮೇಲಕ್ಕೆ ಚಿಮ್ಮುತ್ತಿದ್ದವು. ಕಣಿವೆಯಲ್ಲಿ ರಭಸವಾದ ಗಾಳಿ ಬೀಸಿದಾಗ ಮಾತ್ರ ‘ರಿವರ್ಸ್‌ ಫಾಲ್ಸ್‌’ನ ಪೂರ್ಣ ನೋಟ ದಕ್ಕುತ್ತದೆ ಎಂಬುದು ಅರ್ಥವಾಯಿತು. ದಟ್ಟ ಮಂಜು ಕವಿದ ಕಾರಣ ಒಟ್ಟಿಗೆ ಏಳು ಜಲಪಾತ ನೋಡುವ ಅವಕಾಶ ಕಳೆದುಕೊಂಡೆವು. ಜಲಪಾತವಾಗಿ ರೂಪುಗೊಳ್ಳಲು ಧಾವಿಸಿ ಬರುತ್ತಿದ್ದ ಹೊಳೆ ಮತ್ತು ಸನಿಹದಲ್ಲಿದ್ದ ಎರಡು ಜಲಪಾತಗಳನ್ನೇ ಮನಸಾರೆ ನೋಡಿದೆವು.

ಗುಹೆಯಿಂದ ಹೊರಬರುವ ಹಿರಣ್ಯಕೇಶಿ!

ಅಂಬೋಲಿ ಸುತ್ತಮುತ್ತ ಹತ್ತಾರು ಶಿವನ ದೇವಾಲಯಗಳಿವೆ. ಅವುಗಳಲ್ಲಿ ಹಿರಣ್ಯಕೇಶಿ ದೇವಾಲಯ ಪ್ರಮುಖವಾದುದು. ಕಾರ್‌ ಪಾರ್ಕ್ ಮಾಡಿ, ಕಾಲ್ನಡಿಗೆಯಲ್ಲಿ ಒಂದು ಕಿ.ಮೀ. ಸಾಗಿದಾಗ, ಹಸಿರ ಕಾನನದ ನಡುವೆ ದೇವಾಲಯ ಕಂಡಿತು. ಅದರೊಳಗಿಂದ ನೀರು ಹೊರ ಬರುತ್ತಿತ್ತು. ‘ಅರೆ ಇದೇನಿದು’ ಎಂದು ಅಚ್ಚರಿಪಡುವಾಗ, ಅದೊಂದು ಗುಹೆಯಾಗಿದ್ದು, ಅದರೊಳಗಿಂದ ಹಿರಣ್ಯಕೇಶಿ ನದಿ ಹರಿಯುತ್ತಿತ್ತು. ಅದು ನದಿಯ ಉಗಮ ಸ್ಥಾನ ಎಂದು ನಂತರ ತಿಳಿಯಿತು. ನೀರಿನ ಹರಿವು ಹೆಚ್ಚಾಗಿದ್ದರಿಂದ ಗುಹೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇಡೀ ಗುಹೆಯನ್ನು ಒಳಗೊಂಡಂತೆಯೇ ದೇವಾಲಯ ನಿರ್ಮಿಸಲಾಗಿದೆ. ಅಲ್ಲಿ ಶಿವಲಿಂಗ ಮತ್ತು ನಂದಿಯ ವಿಗ್ರಹಗಳು ಪೂಜಿಸಲ್ಪಡುತ್ತವೆ.

ವರ್ಷಧಾರೆಗೆ ಮೈದುಂಬಿದ ಜಲಧಾರೆ

ಅಂಬೋಲಿ ಗ್ರಾಮದ ನಂತರ ಸಾವಂತವಾಡಿ ಹೆದ್ದಾರಿಯಲ್ಲಿ ಎಡಕ್ಕೆ ಹೊರಳಿ, 20 ಕಿ.ಮೀ ಸಾಗಿದರೆ ಬಾಬಾ ಫಾಲ್ಸ್‌ ಸಿಗುತ್ತದೆ. ಆ ದಾರಿಯಲ್ಲಿ ಸಿಗುವ ಹೊಳೆ, ಕಾಡು, ಬೆಟ್ಟಗಳ ಸಾಲು, ಕಣಿವೆ ವಾಹ್‌! ಪ್ರವಾಸಿಗರ ಕಣ್ಣಿಗೆ ಹಬ್ಬ. ದಟ್ಟ ಮಂಜು ಕವಿದ ಹಾದಿಯಲ್ಲಿ ಸಾಗುವ ಕ್ಷಣಗಳೇ ರೋಚಕ. ‘ಮುಖ್ಯರಸ್ತೆಯಿಂದ ಒಳಗೆ ಒಂದು ಕಿ.ಮೀ ನಡೆದು ಹೋಗಬೇಕು. ಇದು ಖಾಸಗಿ ಪ್ರದೇಶ’ ಎಂದು ಹೇಳಿ ಭದ್ರತಾ ಸಿಬ್ಬಂದಿಯೊಬ್ಬ ತಲಾ ₹ 60 ಪ್ರವೇಶ ಶುಲ್ಕ ಪಡೆದ.

ಟೆಕೆಟ್‌ ಕೌಂಟರ್‌ ಬಳಿಯೇ ಕಣ್ಣು ಹಾಯಿಸಿದರೆ ದೂರದಲ್ಲಿ ಕಾಡಿನ ನಡುವೆ ಹಾಲಿನ ನೊರೆಯಂತೆ ಧುಮ್ಮಿಕ್ಕುವ ಬಾಬಾ ಫಾಲ್ಸ್‌ ಕಾಣಿಸಿತು. ಅಲ್ಲಿಂದ ಆತುರದಲ್ಲೇ ಹೆಜ್ಜೆ ಹಾಗುತ್ತಾ ಹೋದಂತೆ, ಒಂದು ಕಿ.ಮೀ ಹಾದಿಯಲ್ಲಿ ಏಳೆಂಟು ಜಲಧಾರೆಗಳು ಕಂಡವು. ಅವು ನೀರಿನಲ್ಲಿ ಆಟವಾಡಲು ಹೇಳಿ ಮಾಡಿಸಿದಂತಿದ್ದವು. ಹಾಗಾಗಿಯೇ ಪ್ರವಾಸಿಗರು ಜಲಪಾತದ ನೀರಿಗೆ ತಲೆಯೊಡ್ಡುತ್ತಾ, ಹರ್ಷೋದ್ಗಾರ ಮಾಡುತ್ತಿದ್ದರು. ಮಳೆಯಿಂದ ಭೋರ್ಗರೆಯುತ್ತಿದ್ದ ‘ಬಾಬಾ ಫಾಲ್ಸ್‌’ ಹತ್ತಿರ ಹೋಗಲು ಆತಂಕವಾಯಿತು. ದೂರದಲ್ಲೇ ನಿಂತು ಆ ದಿವ್ಯ ಕ್ಷಣವನ್ನು ಅನುಭವಿಸಿದೆವು.

ಸಂಜೆ ಸಮೀಪಿಸುತ್ತಿದ್ದಂತೆ, ಅಂಬೋಲಿ ಜಲಪಾತ ಮತ್ತು ಸೂರ್ಯಾಸ್ತದ ಸೊಬಗನ್ನು ನೋಡಬೇಕೆನಿಸಿತು. ಕಾರಿನಲ್ಲಿ ಬಂದ ದಾರಿಯಲ್ಲೇ ಹಿಂದಿರುಗಿದೆವು. ಅಂಬೋಲಿ ಜಲಪಾತದ ಸುತ್ತಮುತ್ತ ದಟ್ಟ ಮಂಜು ಕವಿದಿತ್ತು. ಹಸಿರು ಕಾಡಿಗೆ ಶ್ವೇತ ಬಣ್ಣದ ಚಾದರ ಹೊದಿಸಿದಂತೆ ಕಾಣುತ್ತಿತ್ತು. ಮೆಟ್ಟಿಲುಗಳನ್ನು ಹತ್ತುತ್ತಾ, ಅಂಬೋಲಿ ಜಲಪಾತದ ಕೆಳಗೆ ಆಟವಾಡುತ್ತಿದ್ದ ಪ್ರವಾಸಿಗರೊಂದಿಗೆ ನಾವೂ ಸೇರಿಕೊಂಡೆವು. ಜಲಪಾತಗಳ ರಾಣಿ ಅಂಬೋಲಿಯ ವಯ್ಯಾರಕ್ಕೆ ಪ್ರವಾಸಿಗರು ಸಂಪೂರ್ಣ ಶರಣಾಗಿದ್ದರು.

ಅಲ್ಲಿಯೇ ಅಂಗಡಿಗಳ ಸಾಲಿನಲ್ಲಿ ಚಹಾ ಸೇವಿಸಿ, ಸೂರ್ಯಾಸ್ತ ನೋಡೋಣ ಎಂದು ಹೊರಟರೆ, ಮಂಜಿನ ಆರ್ಭಟಕ್ಕೆ ಹೆದರಿದಂತಿದ್ದ ಸೂರ್ಯ ಮೋಡದ ಮರೆಯಲ್ಲಿ ಅವಿತುಕೊಂಡಿದ್ದ. ಸ್ವಲ್ಪ ಬೇಸರವಾದರೂ, ಕಣಿವೆಯಲ್ಲಿ ಬೀಸುತ್ತಿದ್ದ ತಂಗಾಳಿ ಮನಸ್ಸಿಗೆ ಸಾಂತ್ವನ ನೀಡಿತು. ಬಾನಿನಲ್ಲಿ ಕಾರ್ಮೋಡ ಕರಗಿ ಮಳೆಯಾಗಿ ಸುರಿಯುತ್ತಿದ್ದರೆ, ಮನದಲ್ಲಿ ದಿಗಿಲು ಕರಗಿ, ಸಂತೋಷ ಜಿನುಗುತ್ತಿತ್ತು. ಮನಸ್ಸಿನ ತುಂಬ ಅಂಬೋಲಿ ಕಣಿವೆಯ ಬಿಂಬಗಳೇ ತುಂಬಿಕೊಂಡಿದ್ದವು.

ಹೋಗುವುದು ಹೇಗೆ?

ಅಂಬೋಲಿಗೆ 28 ಕಿ.ಮೀ. ದೂರದಲ್ಲಿ ಸಾವಂತವಾಡಿ ರೈಲ್ವೆ ನಿಲ್ದಾಣವಿದೆ. 68 ಕಿ.ಮೀ. ದೂರದಲ್ಲಿ ಬೆಳಗಾವಿ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣವಿದೆ. ಬೆಳಗಾವಿಯಿಂದ ಸಾವಂತವಾಡಿಗೆ ಹೋಗುವ ಕೆಎಸ್‌ಆರ್‌ಟಿಸಿ ಮತ್ತು ಮಹಾರಾಷ್ಟ್ರ ರಾಜ್ಯದ ಬಸ್‌ಗಳಲ್ಲಿ ಅಂಬೋಲಿ ತಲುಪಬಹುದು. ಸ್ವಂತ ಮತ್ತು ಬಾಡಿಗೆ ವಾಹನಗಳಾದರೆ ಒಂದೇ ದಿನದಲ್ಲಿ ಐದಾರು ತಾಣಗಳನ್ನು ನೋಡಬಹುದು. ಎಲ್ಲ ತಾಣಗಳಿಗೆ ಉತ್ತಮ ಡಾಂಬರು ರಸ್ತೆಯಿದೆ. ಭೇಟಿ ನೀಡಲು ಜೂನ್‌ನಿಂದ ಅಕ್ಟೋಬರ್‌ ಉತ್ತಮ ಸಮಯ.

ಊಟ–ವಸತಿ ಸೌಲಭ್ಯ

ಅಂಬೋಲಿ ಜಲಪಾತ ಮತ್ತು ಕವಳೇಶೇಟ್‌ ಪಾಯಿಂಟ್‌ ಸಮೀಪ ಬಿಸಿ ಬಿಸಿ ವಡಾಪಾವ್, ಆಮ್ಲೆಟ್‌, ಎಗ್‌ಬುರ್ಜಿ, ಆಲೂಬಜಿ, ಮ್ಯಾಗಿ, ಟೀ, ತಂಪು ಪಾನೀಯ ದೊರೆಯುತ್ತವೆ. ಅಂಬೋಲಿ ಗ್ರಾಮದ ಅಕ್ಕಪಕ್ಕ ವಿಶ್‌ಲಿಂಗ್‌ ವುಡ್ಸ್‌, ಡಾರ್ಕ್ ಫಾರೆಸ್ಟ್‌ ರೀಟ್ರೀಟ್‌, ಸಿಲ್ವರ್‌ ಸ್ಪ್ರಿಂಗ್‌ ರೆಸಾರ್ಟ್‌ ಸೇರಿದಂತೆ ಹಲವಾರು ಹೋಟೆಲ್‌ ಮತ್ತು ರೆಸಾರ್ಟ್‌ಗಳಿವೆ.

ಮಳೆಗಾಲವಾಗಿರುವುದರಿಂದ ಜಿಗಣೆಗಳ ಕಾಟ ಹೆಚ್ಚು. ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕಲ್ಲುಬಂಡೆಗಳು ಪಾಚಿಗಟ್ಟಿ ಜಾರುತ್ತವೆ. ಹಾಗಾಗಿ ಮೋಜಿಗಿಂತ ಸುರಕ್ಷತೆಗೆ ಆದ್ಯತೆ ನೀಡಬೇಕು. ಬೆಚ್ಚನೆ ಉಡುಪು, ರೈನ್‌ಕೋಟ್‌, ಕೊಡೆ ಅತ್ಯಗತ್ಯವಾಗಿ ಇರಲೇಬೇಕು.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !