ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ತಿಂಗಳಲ್ಲಿ 1.23 ಲಕ್ಷ ಪ್ರವಾಸಿಗರು ಭೇಟಿ

ಲಕ್ಕುಂಡಿ, ಬಿಂಕದಕಟ್ಟಿ ಮೃಗಾಲಯ, ಭೀಷ್ಮಕೆರೆ ನೆಚ್ಚಿನ ತಾಣಗಳು; ಸೌಕರ್ಯ ಕೊರತೆ ನಡುವೆಯೂ ಆಕರ್ಷಿಸುವ ಐತಿಹಾಸಿಕ ದೇವಾಲಯಗಳು
Last Updated 27 ಸೆಪ್ಟೆಂಬರ್ 2019, 11:37 IST
ಅಕ್ಷರ ಗಾತ್ರ

ಗದಗ: ದಕ್ಷಿಣ ಭಾರತದ ಶಿಲ್ಪಕಲಾ ಮುಕುಟಮಣಿ ಎಂದೇ ಹೆಸರಾದ ಲಕ್ಕುಂಡಿ, ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ, ಗದುಗಿನ ಭೀಷ್ಮಕೆರೆ ಉದ್ಯಾನ, ಪ್ರಾಚ್ಯವಸ್ತು ಸಂಗ್ರಹಾಲಯ ಸೇರಿದಂತೆ ಜಿಲ್ಲೆಯ ಪ್ರಮುಖ 4 ಪ್ರವಾಸಿ ತಾಣಗಳಿಗೆ ಕಳೆದ 7 ತಿಂಗಳಲ್ಲಿ (ಜನವರಿಯಿಂದ ಆಗಸ್ಟ್‌ ) 1.23 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಪ್ರವಾಸಿಗರ ಸುರಕ್ಷತೆಗೆ ‘ಪ್ರವಾಸಿ ಮಿತ್ರರ’ ನೇಮಕ, ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತವು ಕೈಗೊಂಡ ಕೆಲವು ಕ್ರಮಗಳಿಂದ ಜಿಲ್ಲೆಗೆ ಭೇಟಿ ನೀಡುವ ‘ದೇಶೀಯ’ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಆದರೆ, ಪ್ರವಾಸಿ ತಾಣಗಳ ಮಾಹಿತಿಯ ಕೊರತೆಯಿಂದ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ.

ಶಿಲ್ಪಕಲಾ ಶ್ರೀಮಂತಿಕೆಯಲ್ಲಿ ಹಂಪಿಯಷ್ಟೇ ಮಹತ್ವ ಹೊಂದಿರುವ ತಾಣ ಲಕ್ಕುಂಡಿ. ಜಿಲ್ಲಾ ಕೇಂದ್ರವಾದ ಗದುಗಿನಿಂದ 12 ಕಿ.ಮೀ ದೂರದಲ್ಲಿದೆ. ಈ ಗ್ರಾಮದ ಮಧ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 63 ಹಾದು ಹೋಗುತ್ತದೆ. ಸರ್ವಧರ್ಮಗಳ ಬೀಡಾಗಿದ್ದ ಲಕ್ಕುಂಡಿಯಲ್ಲಿ ನೂರೊಂದು ಗುಡಿ, ನೂರೊಂದು ಬಾವಿಗಳು ಇದ್ದವು ಎನ್ನುತ್ತದೆ ಇತಿಹಾಸ. ಕಳೆದ 7 ತಿಂಗಳಲ್ಲಿ ಇಲ್ಲಿಗೆ ಕೇವಲ 48 ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಗದಗ ಮಾರ್ಗವಾಗಿ ‘ಹಂಪಿ’ಗೆ ಹೋಗುವ ಹಾಗೂ ಹಂಪಿಯಿಂದ ಮರಳಿ ಹುಬ್ಬಳ್ಳಿಗೆ ಬರುವ ಪ್ರವಾಸಿಗರಿಗೆ ‘ಲಕ್ಕುಂಡಿ’ ಕೂಡ ಮಹತ್ವದ ತಾಣ. ಆದರೆ, ಸಾಕಷ್ಟು ಜನರಿಗೆ ಈ ಐತಿಹಾಸಿಕ ಪ್ರವಾಸಿ ತಾಣದ ಬಗ್ಗೆ ಮಾಹಿತಿ ಇಲ್ಲವಾದ್ದರಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಇಲ್ಲಿ ನನ್ನೇಶ್ವರ ದೇವಾಲಯ, ಶಂಕರಲಿಂಗ ದೇವಾಲಯ, ನಾಗನಾಥ ದೇವಾಲಯ, ಅಲ್ಲಮಪ್ರಭು ದೇವಾಲಯ, ವೀರಭದ್ರೇಶ್ವರ ದೇವಾಲಯ ಸೇರಿದಂತೆ 11 ದೇವಸ್ಥಾನಗಳಿವೆ. ಪ್ರತಿ ದೇವಾಲಯವೂ ಶಿಲ್ಪಕಲಾ ವೈಭವದ ಮೂಲಕ ಗಮನ ಸೆಳೆಯುತ್ತದೆ. ಆದರೂ, ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಈ ತಾಣ ಹಿಂದೆ ಬಿದ್ದಿದೆ.

ಜನವರಿಯಿಂದ ಆಗಸ್ಟ್‌ ಅಂತ್ಯದವರೆಗೆ 1,785 ಪ್ರವಾಸಿಗರು ಲಕ್ಕುಂಡಿಗೆ ಭೇಟಿ ನೀಡಿದ್ದಾರೆ. ಇದೇ ಅವಧಿಯಲ್ಲಿ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯವು ಗರಿಷ್ಠ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಿದೆ. 19 ಸಾವಿರ ಪ್ರವಾಸಿಗರು ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ಗದಗ ನಗರದ ಹೃದಯ ಭಾಗದಲ್ಲಿರುವ ಭೀಷ್ಮಕೆರೆ ಮತ್ತು ಬಸವೇಶ್ವರ ಪುತ್ಥಳಿ ಉದ್ಯಾನಕ್ಕೆ ಭೇಟಿನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ. ಇಲ್ಲಿಗೆ 12,539 ಪ್ರವಾಸಿಗರು ಭೇಟಿ ನೀಡಿದ್ದಾರೆ.

‘ಡಂಬಳದ ವಿಕ್ಟೋರಿಯಾ ಕೆರೆ, ದೊಡ್ಡಬಸಪ್ಪ ದೇವಸ್ಥಾನ, ಗದುಗಿನ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ’ ಎನ್ನುವುದು ಪ್ರವಾಸೋದ್ಯಮ ಕಚೇರಿ ಮೂಲಗಳ ಮಾಹಿತಿ.

ಮೂಲಸೌಕರ್ಯದ್ದೇ ಸಮಸ್ಯೆ

ಲಕ್ಕುಂಡಿ, ಭೀಷ್ಮಕೆರೆ ಉದ್ಯಾನ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕೊರತೆ ಇದೆ ಎನ್ನುವುದು ಪ್ರವಾಸಿಗರ ದೂರು. ಭೀಷ್ಮಕೆರೆ ಬಸವೇಶ್ವರ ಪುತ್ಥಳಿ ಉದ್ಯಾನದ ಬಳಿ ಟಿಕೆಟ್‌ ಕೌಂಟರ್‌, ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸಿಗರ ವಿಶ್ರಾಂತಿಗೆ ಆಸನ, ಹೋರ್ಡಿಂಗ್ಸ್‌ ಅಳವಡಿಕೆ, ಪ್ರವಾಸಿ ತಾಣಗಳ ನಕಾಶೆ ಸಿದ್ಧಪಡಿಸಲು ₹32 ಲಕ್ಷ ವೆಚ್ಚದ ಟೆಂಡರ್‌ ಕರೆಯಲಾಗಿತ್ತು. ಆದರೆ, ಟೆಂಡರ್‌ನಲ್ಲಿ ಭಾಗವಹಿಸಿದ ಕಂಪೆನಿಗಳಿಗೆ ನಿಗದಿಪಡಿಸಿದ ತಾಂತ್ರಿಕ ಅರ್ಹತೆ ಇಲ್ಲವಾದ್ದರಿಂದ ಯಾವುದೇ ಕಂಪೆನಿ ಆಯ್ಕೆಯಾಗಿಲ್ಲ. ಪ್ರವಾಸೋದ್ಯಮ ಇಲಾಖೆ ಈಗ ಮರು ಟೆಂಡರ್‌ಗೆ ಸಿದ್ಧತೆ ನಡೆಸಿದೆ.

ಮೃಗಾಲಯಕ್ಕೆ ಪ್ರವಾಸಿಗರ ಲಗ್ಗೆ

40 ಎಕರೆ ವಿಸ್ತಾರದ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಉತ್ತರ ಕರ್ನಾಟಕದ ಪ್ರಮುಖ ಪ್ರಾಣಿ ಸಂಗ್ರಹಾಲಯ. ಚಿಕ್ಕ ಮಕ್ಕಳ ಉದ್ಯಾನವೂ ಇಲ್ಲಿದೆ. ಒಂದೂವರೆ ವರ್ಷದ ಹಿಂದೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ‘ಅನಸೂಯಾ’ ಹಾಗೂ ‘ಲಕ್ಷ್ಮಣ್‌’ ಹೆಸರಿನ ಎರಡು ಹುಲಿಗಳನ್ನು ಇಲ್ಲಿಗೆ ತರಲಾಗಿತ್ತು. ಹುಲಿ ಬಂದ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2018ರಲ್ಲಿ ಒಟ್ಟು 1.10 ಲಕ್ಷ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.

‘ಪ್ರಭಾರಿ’ಗಳಿಗೇ ಹೊಣೆ

ಜಿಲ್ಲಾ ಕೇಂದ್ರ ಗದುಗಿನಲ್ಲಿದ್ದ ‘ಪ್ರವಾಸಿ ಕಚೇರಿ’ಯನ್ನು 2016ರಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಮೊದಲ ದಿನದಿಂದ ಇಲ್ಲಿಯವರೆಗೆ ಸಹಾಯಕ ನಿರ್ದೇಶಕರ ಹುದ್ದೆ ಖಾಲಿ ಇದೆ. ‘ಪ್ರಭಾರಿ’ಗಳೇ ಕಾರ್ಯನಿರ್ವಹಿಸುತ್ತಿದ್ದಾರೆ.

**

ರಾಜ್ಯದ 20 ಪಾರಂಪರಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಲಕ್ಕುಂಡಿಯೂ ಸೇರಿದೆ. ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ
ಸೋಮಶೇಖರ ಕಮರೂರಮನೆ, ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT