ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಳಗುಮ್ಮಟ; ‘ಆಡಿಯೊ ಗೈಡ್‌’ ನೆರವು

ವಿಶ್ವ ಪ್ರವಾಸೋದ್ಯಮ ದಿನವಾದ ಆ್ಯಪ್ ಬಿಡುಗಡೆ ಇಂದು
Last Updated 27 ಸೆಪ್ಟೆಂಬರ್ 2019, 12:13 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿಯ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಜಿಲ್ಲಾಡಳಿತ ಆಡಿಯೊ ಗೈಡ್ ನೆರವು ಒದಗಿಸಲು ಸಿದ್ಧತೆ ನಡೆಸಿದೆ.

ಗೋಳಗುಮಟ್ಟದ ಆವರಣದಲ್ಲಿ ಸದ್ಯ ಸಾಕಷ್ಟು ಸಂಖ್ಯೆಯಲ್ಲಿ ನುರಿತ ಗೈಡ್‌ಗಳು ಇದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಕೆಲವರು ತೆಲಗು ಭಾಷೆಯಲ್ಲೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಆದರೆ, ಎಲ್ಲರೂ ಗೈಡ್‌ಗಳ ಸೇವೆ ಪಡೆಯುವುದು ಕಷ್ಟ ಎಂಬುದನ್ನು ಅರಿತ ಜಿಲ್ಲಾಡಳಿತ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಆಡಿಯೊ ಮತ್ತು ಪಠ್ಯವನ್ನು ಹೊಂದಿರುವ ಆ್ಯಪ್‌ ಅನ್ನು ಸಿದ್ಧಪಡಿಸಲು ನಗರದ ‘6ಐ ಸಲ್ಯುಷನ್ಸ್‌’ ಕಂಪನಿಗೆ ವಹಿಸಿದೆ.

‘ವಿಜಯಪುರದ ಐತಿಹಾಸಿಕ ಹಿನ್ನೆಲೆ ಮತ್ತು ಗೋಳಗುಮ್ಮಟದ ಇತಿಹಾಸವನ್ನು ಪ್ರವಾಸಿಗರಿಗೆ ನಿಖರವಾಗಿ ಮತ್ತು ಉಚಿತವಾಗಿ ಒದಗಿಸುವ ಉದ್ದೇಶದಿಂದ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಆ್ಯಪ್ ಸಿದ್ಧತಾ ಕಾರ್ಯ ಪೂರ್ಣಗೊಂಡಿದ್ದು, ಸೆ.27ರಂದು ಲೋಕಾರ್ಪಣೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ್ಯಂಡ್ರಾಯ್ಡ್‌ ಪ್ಲೇ ಸ್ಟೋರ್‌ನಿಂದ ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊ ಳ್ಳಬಹುದು. ಮೊದಲ ಬಾರಿ ಡೌನ್‌ಲೋಡ್ ಮಾಡಿಕೊಳ್ಳುವವರು ತಮ್ಮ ಹೆಸರು, ಊರು, ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿ ಕೊಳ್ಳಬೇಕು’ ಎಂದು ‘6ಐ ಸಲ್ಯುಷನ್ಸ್‌’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕಿರಣ ಕುಲಕರ್ಣಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಗೋಳಗುಮ್ಮಟ ಆವರಣವನ್ನು 10 ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರವೇಶ ದ್ವಾರ, ಪಿಸುಮಾತಿನ ಗ್ಯಾಲರಿ, ಉದ್ಯಾನ, ನಗರಖಾನಾ, ಆದಿಲ್‌ಶಾಹಿ ಗೋರಿ ಹೀಗೆ 10 ಪಾಯಿಂಟ್ ಆಫ್ ಇಂಟ್ರೆಸ್ಟ್‌ ಸ್ಥಳಗಳ ಬಗ್ಗೆ ಪ್ರವಾಸಿಗರು ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ. ಎಲ್ಲ ಸ್ಥಳಗಳ ಫೋಟೊ, ಆಡಿಯೊ ಮತ್ತು ಪಠ್ಯ ಏಕಕಾಲಕ್ಕೆ ಲಭ್ಯವಾಗುತ್ತವೆ. ಪ್ರವಾಸಿಗರು ಆ್ಯಪ್‌ ಮೂಲಕ ಮೊದಲೇ ಮಾಹಿತಿ ತಿಳಿದುಕೊಂಡು ನಂತರವೂ ಭೇಟಿ ನೀಡಬಹುದಾಗಿದೆ’ ಎಂದು ತಿಳಿಸಿದರು.

**

ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಗೋಳಗುಮ್ಮಟದ ಮಾಹಿತಿ ಒಳಗೊಂಡ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಯಶಸ್ಸಿನ ಬಳಿಕ ಇತರ ಸ್ಮಾರಕಗಳ ಬಗ್ಗೆಯೂ ಆ್ಯಪ್ ಸಿದ್ಧಪಡಿಸಲಾಗುವುದು
- ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ, ವಿಜಯಪುರ

**

ಆ್ಯಪ್‌ಗೆ ‘ವಿಜಯಪುರ ವರ್ಚುವಲ್ ಗೈಡ್’ ಎಂದು ನಾಮಕರಣ ಮಾಡಲಾಗಿದೆ. ಹೊಸ ಹೆಸರು ಸೂಚಿಸುವುದಕ್ಕೂ ಅವಕಾಶ ಇದೆ. ಪ್ರವಾಸಿಗರು ಸೂಚಿಸುವ ಹೆಸರುಗಳಲ್ಲೇ ಒಂದನ್ನು ಅಂತಿಮಗೊಳಿಸಲಾಗುವುದು,
- ಕಿರಣ ಕುಲಕರ್ಣಿ, ಸಿಇಒ, 6ಐ ಸಲ್ಯುಷನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT