ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಿರಿಯ ಸುತ್ತಿ, ಬೀಜ ಬಿತ್ತಿ...

ಬೆಂಗಳೂರು ಗ್ರಾಮಾಂತರ ಜಿಲ್ಲೆಯಶಿವಗಂಗೆ ಬೆಟ್ಟದ ಪಕ್ಕದಲ್ಲೇ ನನ್ನೂರು ಅದರಂಗಿ. ಬಾಲ್ಯದಿಂದಲೂ ಈ ಬೆಟ್ಟದ ಪಾಸಲೆಯಲ್ಲಿ ಬೆಳೆದವನು. ಜಾತ್ರೆ, ಹಬ್ಬಗಳಲ್ಲಿ ಬೆರೆಯುತ್ತಾ ಬೆಳೆದವನು. ಇಲ್ಲಿನ ಪರಿಸರದಲ್ಲಿರುವ ಕರಡಿ, ಚಿರತೆಗಳನ್ನು ಕಂಡು ಬೆದರಿದವನು. ಹೀಗಾಗಿ ನನಗೆ ಅಂದಿಗೂ ಇಂದಿಗೂಶಿವಗಂಗೆಬೆಟ್ಟ ಬೆರಗು.

ಶಿವಗಂಗೆ ಬೆಟ್ಟದ ಬಗ್ಗೆ ಬೆಟ್ಟದ‌ಷ್ಟು ಪ್ರೀತಿ ಇಟ್ಟುಕೊಂಡಿರುವ ನನ್ನನ್ನು ಶಿವಗಂಗೆ ಗಿರಿ ಪ್ರದಕ್ಷಿಣೆ ಸಮಿತಿ ಅಧ್ಯಕ್ಷ ಚಂದ್ರಪ್ಪ, ‘ನಮ್ಮ ಗಿರಿ ಪ್ರದಕ್ಷಿಣೆಗೆ ಒಮ್ಮೆ ಬನ್ನಿ. ಸ್ಥಳೀಯರಾದ ನೀವೇ ಬರದಿದ್ದರೆ ಹೇಗೆ’ ಎಂದು ಆಹ್ವಾನಿಸಿದರು. ಆಹ್ವಾನ ಸಿಕ್ಕಿದ್ದೇ ತಡ, ಹುಣ್ಣಿಮೆಯ ಹಿಂದಿನ ದಿನ ರಾತ್ರಿಯೇ ಆ ಗಿರಿಪ್ರದಕ್ಷಿಣೆ ತಂಡದ ಜತೆಗೆ ಸೇರಿಕೊಂಡೆ.

ಗಿರಿಯ ಅಂದಕ್ಕೆ ಮನಸೋತರು

‘ಗಿರಿ ಪ್ರದಕ್ಷಿಣೆ’ ಬಗ್ಗೆ ಸಣ್ಣದಾಗಿ ಹೇಳಿಬಿಡುತ್ತೇನೆ. ಇದು ಹದಿನೇಳು ವರ್ಷಗಳ ಹಿಂದಿನ ಕಥೆ. ಬೆಂಗಳೂರಿನ ಚಂದ್ರಪ್ಪ ಅವರು ಆಗ ಶಿವಗಂಗೆ ಬೆಟ್ಟ ನೋಡಲು ಬಂದರು. ಇಲ್ಲಿನ ಪರಿಸರಕ್ಕೆ ಮನಸೋತರು. ನಂತರ ಬೆಟ್ಟದ ಸುತ್ತಲಿರುವ ಕಾಡು ಅಲೆದು, ಕಲ್ಲು ಮುಳ್ಳುಗಳನ್ನು ತುಳಿಯುತ್ತಾ, ಮೊದಲ ಬಾರಿಗೆ ಗಿರಿ ಪ್ರದಕ್ಷಿಣೆ ಹಾಕಿದರು. ಖುಷಿಯ ಜತೆಗೆ ಭಕ್ತಿ ಪರವಶವಾದರು. ಅಲ್ಲಿಂದಲೇ ತಿಂಗಳಿಗೊಮ್ಮೆ ಹುಣ್ಣಿಮೆ ದಿನ ಶಿವಗಂಗೆ ಗಿರಿ ಪ್ರದಕ್ಷಿಣೆ ಮಾಡುವ ಸಂಕಲ್ಪ ಮಾಡಿದರು. ಅಲ್ಲಿಂದ ಇಲ್ಲಿವರೆಗೆ ತಿಂಗಳಿಗೊಮ್ಮೆ ಗಿರಿ ಪ್ರದಕ್ಷಿಣೆ ನಡೆಯುತ್ತಿದೆ. ಚಂದ್ರಪ್ಪನವರ ಈ ಪ್ರಯತ್ನಕ್ಕೆ ಮೇಲಣಗವಿ, ಹೊನ್ನಂಗವಿ ಮಠದ ಸ್ವಾಮೀಜಿಗಳು ಹಾಗೂ ಸ್ಥಳೀಯರು ಕೈ ಜೋಡಿಸಿದರು.

ಗಿರಿ ಪ್ರದಕ್ಷಿಣೆಯಲ್ಲಿ ಮೊದ ಮೊದಲು ಪೂಜೆ, ಭಜನೆ, ಧ್ಯಾನ, ಯೋಗ, ಪ್ರಾಣಾಯಾಮದಂತಹ ಧಾರ್ಮಿಕ – ಆರೋಗ್ಯ ಚಟುವಟಿಕೆಗಳು ನಡೆಯುತ್ತಿದ್ದವು. ಯಾವಾಗ ಸುತ್ತಲಿನ ಪರಿಸರಕ್ಕೆ ಧಕ್ಕೆಯಾಗುತ್ತಿರುವ ವಿಚಾರ ಗೊತ್ತಾದಾಗ ಆಗ ಪ್ರದಕ್ಷಿಣೆಯಲ್ಲಿ ಪರಿಸರ ರಕ್ಷಣೆ, ಜನಜಾಗೃತಿಯಂತಹ ಚಟುವಟಿಕೆಗಳನ್ನೂ ಸೇರಿಸಿಕೊಳ್ಳಲಾಯಿತು.

ಅದಕ್ಕೆ ಕಾರಣವೂ ಇದೆ. ಶಿವಗಂಗೆ ಧಾರ್ಮಿಕ ತಾಣದ ಜತೆಗೆ, ಪರಿಸರ ವಿಚಾರದಲ್ಲೂ ಶ್ರೀಮಂತವಾಗಿದೆ. ಇದು ಆನೆ ಕಾರಿಡಾರ್ ವ್ಯಾಪ್ತಿಗೆ ಸೇರುವ ಜಾಗ. ಒಂದು ಕಾಲದಲ್ಲಿ ಆನೆಗಳು ಪೂರ್ವ ಘಟ್ಟದಿಂದ ಪಶ್ಚಿಮಘಟ್ಟದ ಕಡೆಗೆ ಆಹಾರ, ಸಂತಾನಕ್ಕಾಗಿ ಇದೇ ದಾರಿಯಲ್ಲಿ ಸಂಚರಿಸುತ್ತಿದ್ದವು. ಈಗಲೂ ಆನೆಗಳು ಅದೇ ದಾರಿಯಲ್ಲೇ ಸಾಗುತ್ತಿರುತ್ತವೆ. ‌ ಕಳೆದ ವರ್ಷ ಎರಡು ಆನೆಗಳು ಸಾವನ್ನಪ್ಪಿದವು. ಆ ಕಾರಣಕ್ಕೋ ಏನೋ ಈ ವರ್ಷ ಆನೆಗಳು ಬಂದಿಲ್ಲ.

ಇಂಥ ಪರಿಸರವನ್ನು ಸಂರಕ್ಷಿಸಬೇಕು. ಇನ್ನೊಂದು ಕಡೆ ಈ ಬೆಟ್ಟದ ಸುತ್ತ ಜಾಗದಲ್ಲಿ ಕಲ್ಲಿನ ಕ್ವಾರಿಯಿಂದಾಗುವ ಅನಾಹುತಗಳನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಉದ್ದೇ ಈ ಗಿರಿಪ್ರದಕ್ಷಿಣೆಯ ಕಾರ್ಯಕ್ರಮದ್ದು.

ಈ ಹಿನ್ನೆಲಯಲ್ಲೇ ಇತ್ತೀಚೆಗೆ ಗುರುಪೂರ್ಣಿಮೆಯಂದು ವಿಶೇಷ ಗಿರಿಪ್ರದಕ್ಷಿಣೆ ಆಯೋಜಿಸಿದ್ದರು. ನನ್ನನ್ನು ಅದಕ್ಕೆ ಆಹ್ವಾನಿಸಿದ್ದರು. ನಾನು ಹಿಂದಿನ ದಿನ ರಾತ್ರಿಯೇ ಪ್ರದಕ್ಷಿಣೆ ಸಮಿತಿಯ ತಂಡವನ್ನು ಸೇರಿಕೊಂಡೆ. ಮುಂಜಾನೆ 5 ಗಂಟೆಗೆ ಬೆಟ್ಟದ ಕೆಳಗಿರುವ ಗಂಗಾಧ ರೇಶ್ವರ ದೇವಸ್ಥಾನದಿಂದ ಪ್ರದಕ್ಷಿಣೆ ಆರಂಭವಾಯಿತು. ಮೊದಲು ಎಂಟು ಕಲ್ಯಾಣಿಗಳ ದರ್ಶನ, ದೇವಸ್ಥಾನಗಳಿಗೆ ಭೇಟಿ.

ನಂತರ ಬೆಟ್ಟದ ವಿವಿಧ ಭಾಗಗಳಲ್ಲಿ ಸಿದ್ಧಪಡಿಸಿದ್ದ ಕಾಡು ಮರಗಳ ಬೀಜದ ಉಂಡೆಗಳನ್ನ ನಾಟಿ ಮಾಡಲಾಯಿತು. ಈ ಬಾರಿ ಹುಣಸೆ, ಕಾಡಹಲಸು, ಸೀತಾಫಲ, ಪುತ್ರಂಜಿ, ಹೊಂಗೆ, ನೇರಳೆ, ಈಚಲು ಬೀಜಗಳನ್ನು, ಮಾವಿನ ವಾಟೆಗಳನ್ನು ಬಿತ್ತನೆ ಮಾಡಲಾಯಿತು. ವನಕಲ್ಲು ಮಠದ ಬಸವರಮಾನಂದ ಸ್ವಾಮೀಜಿ ಬೀಜಗಳನ್ನು ವಿತರಿಸುವ ಮೂಲಕ ಪ್ರದಕ್ಷಿಣೆಗೆ ಚಾಲನೆ ನೀಡಿದರು.

‘ಪ್ರತಿ ಹುಣ್ಣಿಮೆಯಂದು ಬೀಜದುಂಡೆಗಳ ಮೂಲಕ ಗಿಡ ಬೆಳೆಸುವ ಕಾರ್ಯ ನಡೆಯುತ್ತಿದೆ. ಮುಂದೆ ಸಸಿಗಳನ್ನು ನೆಡುವುದಕ್ಕಾಗಿ ಈ ಬಾರಿ ಒಂದೂವರೆ ಸಾವಿರ ಗುಂಡಿಗಳನ್ನು ತೆಗೆಯಲಾಗಿದೆ’ ಎಂದು ಸಮಿತಿ ಸದಸ್ಯರು ಮಾಹಿತಿ ಹಂಚಿಕೊಂಡರು.

‘ಪ್ರದಕ್ಷಿಣೆ ಮಾಡಿದರಷ್ಟೇ ಸಾಲು, ಪರಿಸರದ ರಕ್ಷಣೆಯ ಸಂಕಲ್ಪ ಮಾಡಬೇಕು’ ಎಂಬುದು ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ವಿನಂತಿಸಿದರು. ಈಗ ಮುಂಗಾರಿನಲ್ಲಿ ಬೀಜಗಳನ್ನು ಬಿತ್ತಿದ್ದೇವೆ. ಮುಂದೆ ಇದೇ ಜಾಗದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಯುರ್ವೇದ ಗಿಡಮೂಲಿಕೆ ವನ ನಿರ್ಮಾಣ, 10 ಸಾವಿರ ಗಿಡ ನೆಡುವ ಯೋಜನೆಯೂ ಸಿದ್ಧವಾಗಿದೆ.

ಮುಂದಿನ ವರ್ಷದ ಪರಿಸರ ಚಟುವಟಿಕೆಗೆ ಈಗಿನಿಂದಲೇ ಸಿದ್ಧತೆ ಮಾಡುವುದಾಗಿ ಸದಸ್ಯರು ಘೋಷಿಸಿದರು. ‘ಮನೆಯಲ್ಲಿ ತಿಂದ ಹಣ್ಣಿನ ಬೀಜಗಳನ್ನು ಸಂಗ್ರಹಿಸಿಡಿ. ಸಂಗ್ರಹಿಸಿದ ಬೀಜಗಳನ್ನು ಮೂರು ಭಾಗ ಮಣ್ಣಿಗೆ ಒಂದು ಭಾಗ ಗೊಬ್ಬರವನ್ನು ಸೇರಿಸಿ ನೀರಿನಲ್ಲಿ ಕಲೆಸಿ ಮಧ್ಯದಲ್ಲಿ ಬೀಜವನ್ನಿಟ್ಟು ಬೀಜದ ಉಂಡೆ ಮಾಡಿ. ನಂತರ ಒಣಗಿಸಿ ಮುಂದಿನ ಮುಂಗಾರಿನಲ್ಲಿಶಿವಗಂಗೆಕಾಡಿನಲ್ಲಿ ಬಿತ್ತನೆ ಮಾಡಲಾಗುವುದು’ ಎಂದು ಬೀಜದುಂಡೆ ತಯಾರಿಸುವ ತರಬೇತಿಯನ್ನು ಪ್ರದಕ್ಷಿಣೆ ವೇಳೆ ನೀಡಲಾಯಿತು.

ಮುಂಜಾನೆಯಿಂದ ಆರಂಭವಾದ ಗಿರಿ ಪ್ರದಕ್ಷಿಣೆ 9 ಗಂಟೆಗೆ ಮುಗಿಯಿತು. ಬೆಟ್ಟ ಸುತ್ತಾಡಿದ ದಣಿವು ಗೊತ್ತಾಗಲಿಲ್ಲ. ಬೀಜದುಂಡೆ ಬಿತ್ತಿದ್ದು ಮನಸ್ಸಿಗೆ ಖುಷಿಕೊಟ್ಟಿತು.

ಆಸಕ್ತರು ಪಾಲ್ಗೊಳ್ಳಬಹುದು...

ಶಿವಗಂಗೆ ಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸಲು ಆಸಕ್ತಿ ಇರುವವರಿಗೆ ಹುಣ್ಣಿಮೆಯ ಹಿಂದಿನ ರಾತ್ರಿ ಶಿವಗಂಗೆಗೆ ಬರಬೇಕು. ದೇವಾಂಗಮಠದಲ್ಲಿ ಉಳಿಯುವ ವ್ಯವಸ್ಥೆ ಇದೆ. ಸಮಿತಿಯವರು ವಸತಿ, ರಾತ್ರಿಯ ಊಟ ಮತ್ತು ಬೆಳಿಗ್ಗೆ ಉಪಾಹಾರವನ್ನು ಏರ್ಪಡಿಸಲಾಗುತ್ತದೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭಜನೆ ನಡೆಯುತ್ತದೆ.

ಮುಂಜಾನೆ ಐದು ಗಂಟೆಗೆ ಗಂಗಾಧರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗಿರಿಪ್ರದಕ್ಷಿಣೆ ಪ್ರಾರಂಭವಾಗುತ್ತದೆ. ಇಲ್ಲಿಂದ ಮೇಲಣಗವಿ ಮಠದ ಮಾರ್ಗವಾಗಿ, ಮುದ್ದೀರೇಶ್ವರ ದೇವಸ್ಥಾನದಲ್ಲಿ ಪೂಜೆ ಹಾಗೂ ಪ್ರಸಾದ ನಡೆದು, ಮಾರ್ಗದಲ್ಲಿ ಬರುವ ಪುರಾತನ ದೇವಸ್ಥಾನ, ಪುಷ್ಕರಣಿ, ತೀರ್ಥೋದ್ಭವ ಸ್ಥಳಗಳನ್ನು ನೋಡುತ್ತಾ ಹೆಜ್ಜೆ ಹಾಕಬೇಕು. ಮುಂದೆ ಬೆಟ್ಟದ ಪಶ್ಚಿಮ ಭಾಗದ ಬಂಡೆಯ ಮೇಲೆ ಸಾಮೂಹಿಕ ಧ್ಯಾನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ನಂತರ ದೊಡ್ಡ ಗಣೇಶ ದೇವಸ್ಥಾನ ನೋಡಿಕೊಂಡು ಮರಳಿ 8 ಗಂಟೆ ಹೊತ್ತಿಗೆ ಶಿವಗಂಗೆ ಬೆಟ್ಟದ ಮುಖ್ಯದ್ವಾರದಲ್ಲಿ ಗಿರಿ ಪ್ರದಕ್ಷಿಣೆ ಕೊನೆಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 90604 00677, 9449680165.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT