ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರುವಿನ ಪವಿತ್ರ ಕಣಿವೆಯಲ್ಲಿ

ಅಕ್ಷರ ಗಾತ್ರ

ನಮ್ಮ ಕನಸುಗಳಿಗೆ ಎಂಥ ಅದ್ಭುತ ಶಕ್ತಿ ಇದೆ! ಕನಸು ಕಾಣಬೇಕು ಅಷ್ಟೇ ಹಾರಲು ರೆಕ್ಕೆಗಳು ಮೊಳೆಯುತ್ತವೆ. ಆರಂಭವಷ್ಟೇ ಕಷ್ಟ, ಮೊದಲು ಹೆಜ್ಜೆ ಇಟ್ಟಂತೆ ಹಾದಿ ಸುಗಮ ಎನ್ನುವ ಲೇಖಕಿ ನೇಮಿಚಂದ್ರ ದಕ್ಷಿಣ ಅಮೆರಿಕದ ಪೆರುವಿನಲ್ಲಿ ಅಲೆದ ಅನುಭವಗಳಿಗೆ ಅಕ್ಷರ ರೂಪ ನೀಡಿದ್ದಾರೆ.

ಉತ್ತರ ಅಮೆರಿಕದ ಜೀವವಿಲ್ಲದ ಕಟ್ಟಡದ ಆಧುನಿಕತೆಯನ್ನ ನೋಡುವ ಬದಲು ದಕ್ಷಿಣ ಅಮೆರಿಕದ ಜೀವಂತ ಪರಿಸರವನ್ನು ಕಾಣುವ ಉತ್ಕಟ ಆಸೆಯೊಂದಿಗೆ ಹೊರಟ ಲೇಖಕಿ ತಮ್ಮೆಲ್ಲಾ ಕನಸು‌ ನನಸಾದ ಕ್ಷಣವನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ.

ಇಲ್ಲಿ ಅನುಭವವಷ್ಟೇ ಹೇಳದೆ ಅಲ್ಲಿನ, ಪ್ರಕೃತಿ, ಸಂಸ್ಕೃತಿ, ನಾಗರಿಕತೆ, ರಾಜಕೀಯ ಎಲ್ಲವನ್ನು ಬೆರಗುಗಣ್ಣಿನಿಂದ ನೋಡುತ್ತಾ ಪೆರುವಿನ ವಿಶ್ವ ರೂಪವನ್ನೇ ತೆರೆದಿಟ್ಟಿದ್ದಾರೆ. ಪುಸ್ತಕ ಓದುತ್ತಿರುವಾಗ ನಾವು ಪೆರುವನ್ನು ಸುತ್ತಾಡಿದಂತೆ, ಅಮೆಜಾನ್ ನದಿ ತೀರದಲ್ಲಿ ಅಲೆದಂತೆ, ನಾಸ್ಕಾ ಗೆರೆ ಗಳನ್ನು ನೋಡಿದಂತೆ, ಇಂಕ ನಾಗರಿಕತೆ ನೆಲದಲ್ಲಿ ಅಲೆದಂತೆ ಅನುಭವವಾಗುತ್ತದೆ.

‘ನನಗೆ ಮೋಡದ ಮೇಲೆ ಹಾರಬೇಕಾಗಿಲ್ಲ ಈ ನೆಲದ ಅನುಭವ ಬೇಕಿತ್ತು’ ಎನ್ನುತ್ತಾ ಪೆರುವಿನಲ್ಲಿ ಅಲೆಮಾರಿಯಂತೆ ತಿರುಗಾಡುವಾಗ ಗಾಂಧಿ ನೆಲದವರೆಂಬ ಅಭಿಮಾನದ ಅದ್ಭುತ ಸ್ವಾಗತವನ್ನು ನೆನಪಿಸಿಕೊಳ್ಳುತ್ತಾರೆ.

ಲೇಖಕಿಗೆ ‘ಚಾರಿಯಟ್ ಆಫ್ ದಿ ಗಾಡ್’ಎಂಬ ಪುಸ್ತಕ ಓದಿಯೇ ಪೆರು ನೋಡುವ ಆಸೆ ಚಿಗುರೊಡೆದಿತ್ತು. ನ್ಯಾಷನಲ್ ಜಿಯೋಗ್ರಫಿ ವಾಹಿನಿಯಲ್ಲಿಯಲ್ಲಿ ಕಂಡ ದಕ್ಷಿಣ ಅಮೆರಿಕವನ್ನು ಕಣ್ತುಂಬಿಕೊಳ್ಳುವ ಹಂಬಲದಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಪೆರುವಿನ ಪ್ರಯಾಣದ ಕುರಿತು ಆಲೋಚಿಸುತ್ತಾರೆ. ಪೆರುವಿಗೆ ನೇರವಾಗಿ ಹೋದರೆ ವಿಮಾನದ ಟಿಕೆಟಿಗೆ ಲಕ್ಷ ಆಗುತ್ತೆ ಎಂದು ತಿಳಿದಾಗ ಅಮೆರಿಕದ ಪಶ್ಚಿಮದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಇಳಿದು ಅಲ್ಲಿಂದ ರೈಲಿನಲ್ಲಿ ಪೂರ್ವಕ್ಕೆ ಹೊರಟು ನಂತರ ಉತ್ತರದ ತುತ್ತತುದಿ ಕೆನಡಾ ತಲುಪಿ ಅಲ್ಲಿಂದ ದಕ್ಷಿಣದ ಮಿಯಾಮಿ ಹೊಕ್ಕು ನಂತರ ಪೆರುವಿನ ರಾಜಧಾನಿ ಲೀಮಾಕ್ಕೆ ತಲುಪುತ್ತಾರೆ. ನಾಸ್ಕಾ, ಅರಿಕೇಫಾ, ಕುಸ್ಕೋ, ಮಾಚುಪಿಚು, ಅಮೆಜಾನ್ ಬೇಸ್‌ಗಳಲ್ಲಿ ರೈಲು, ಬಸ್ಸು, ದೋಣಿಯಲ್ಲಿ ದೇಶದಿಂದ ದೇಶಕ್ಕೆ ಜಿಗಿಯುತ್ತಾರೆ.

ಲೇಖಕಿ, ಪೆರುವಿನ ಕೊನೆಯ ಊರು ಸಂತಾರೋಸಾದಿಂದ ದೋಣಿಯಲ್ಲಿ ಬ್ರೆಜಿಲ್‌ನ ತವತಿಂಗ ತಲುಪಿ ಅಲ್ಲೆಲ್ಲಾ ಉತ್ಸಾಹದಿಂದ ತಿರುಗಾಡುತ್ತಿರುತ್ತಾರೆ. ಅಲ್ಲಿ ಒಂದು ಕಲ್ಲು ಸ್ಮಾರಕದ ಮೇಲೆ ಇತ್ತ ಕಡೆ ಬ್ರೆಜಿಲ್ ಅತ್ತ ಕಡೆಗೆ ಕೊಲಂಬಿಯಾ ಎಂದು ಬರೆದಿದ್ದನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ. ಒಂದು ದೇಶದ ಗಡಿಗೂ ಇನ್ನೊಂದು ದೇಶದ ಗಡಿಗೂ ಯಾವ ಅಂತರವೂ ಇಲ್ಲದೆ ಎರಡು ಒಂದೇ ಎನ್ನುವ ರೀತಿಯಲ್ಲಿ ಕಾಣುತ್ತಿದ್ದ ಕೊಲಂಬಿಯಾದಲ್ಲಿ ವೀಸಾ ಇಲ್ಲದೇ, ಪಕ್ಷಿಗಳಂತೆ ಸ್ವಚ್ಛಂದವಾಗಿ ಓಡಾಡಿ ಬಂದ ಅನುಭವವನ್ನು ಮನೋಜ್ಞವಾಗಿ ಅಕ್ಷರದಲ್ಲಿ ಹಿಡಿದಿಟ್ಟಿದ್ದಾರೆ. ಈ ಪುಸ್ತಕವನ್ನು ಓದಿದ ಪ್ರತಿಯೊಬ್ಬರಿಗೂ ಪೆರುವನ್ನು ಸುತ್ತುವ ಹುಚ್ಚು ಹೆಚ್ಚಿಸುತ್ತದೆ.

ಪೆರುವಿನ ಕಣಿವೆಯಲ್ಲಿ.. ಕೃತಿ ಇಲ್ಲಿಯವರೆಗೆ ಹತ್ತು ಮುದ್ರಣಗಳನ್ನು ಕಂಡಿದೆ. ಹಾಗಾಗಿ, ಪ್ರವಾಸ ಪುಸ್ತಕಗಳಲ್ಲೇ ಅತ್ಯಂತ ಜನಪ್ರಿಯವಾಗಿರುವ ಕೃತಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT