ಶುಕ್ರವಾರ, ಫೆಬ್ರವರಿ 26, 2021
20 °C

ಅರಮನೆಗಳ ನಗರಿ ಜೈಪುರ

ಶಾಂತರಾಜು ಎಸ್. Updated:

ಅಕ್ಷರ ಗಾತ್ರ : | |

Deccan Herald

ರಾಜಸ್ಥಾನವೆಂದರೆ ದಟ್ಟವಾದ ಬೆಟ್ಟಗುಡ್ಡ, ಕಣ್ಣು ನೋಯುವವರೆಗೂ ರಾಚುವ ಮರುಭೂಮಿ, ಬದುಕಲಸಾಧ್ಯವಾದ ಬಿಸಿಲ ಧಗೆ ಎಂದಷ್ಟೇ ಎಣಿಸಿದ್ದೆ. ನಾನು ಅಲ್ಲಿಗೆ ಹೋದ ಮೂರು ದಿನಗಳಲ್ಲಿ ನೋಡಲು ಶಕ್ತವಾದದ್ದು ಜೈಪುರ, ಆಲ್ವಾರ್ ಜಿಲ್ಲೆಗಳನ್ನು ಮಾತ್ರ. ಎರಡೂ ಪ್ರದೇಶದ ವಾತಾವರಣ ನಮ್ಮ ಚಿತ್ರದುರ್ಗ-ತುಮಕೂರಿನಷ್ಟೇ ಸಹನೀಯ. ಉತ್ತರ ಕರ್ನಾಟಕದ ಕೋಟೆ, ಅರಮನೆಗಳಷ್ಟನ್ನೇ ಕಂಡಿದ್ದ ನನಗೆ, ಜೈಪುರದ ಅರಮನೆಗಳು, ‘ಒಂದೆರಡು ಶತಮಾನದ ಹಿಂದೆ ಹುಟ್ಟಿದ್ದರೆ’ ಎಂದೆನಿಸುವಂತೆ ಮುದನೀಡಿದವು.

ಎಲೆಕ್ಟ್ರಿಕ್ ಆಟೊದಲ್ಲಿ ನಗರದ ಯಾವ ದಿಕ್ಕಿಗೆ ಹೋದರೂ, ಹತ್ತೇ ನಿಮಿಷದಲ್ಲಿ ಒಂದು ಅರಮನೆ ಎದುರಾಗುತ್ತದೆ. ಹಗಲಲ್ಲಿ ಕಂಡ ಅರಮನೆ, ರಾತ್ರಿಯ ರಂಗಿನ ಬೆಳಕಿನಲ್ಲಿ ಬೇರೆಯದೇ ಜೀವಂತಿಕೆ ಪಡೆಯುತ್ತದೆ. ಇಲ್ಲಿನ ಸಾಧಾರಣ ಮಳೆಯೆಂದರೆ 23 ಸೆ.ಮೀ ಮಾತ್ರ. ಮುಂಗಾರಿನಲ್ಲಿ ಕೊಡಗು ಜಿಲ್ಲೆಯಲ್ಲಿ ದಿನವೊಂದಕ್ಕೆ ಈ ವರ್ಷಧಾರೆ ಸುರಿದ ಉದಾಹರಣೆಯಿದೆ. ಹಾಗಾಗಿಯೇ, ಅನೇಕ ರಾಜರು, ನೀರಿನ ಹುಡುಕಾಟದಲ್ಲಿ, ತಂಗಾಳಿಯ ಹಂಬಲಿಕೆಯಲ್ಲಿ ಹೊಸ ಹೊಸ ಜಾಗಗಳಲ್ಲಿ ಅರಮನೆ ನಿರ್ಮಿಸಿದ ಇತಿಹಾಸವಿದೆ. ಎಷ್ಟೋ ಅರಮನೆಗಳು ಇಂದಿಗೂ ರಾಜವಂಶಸ್ಥರ ಅಧೀನದಲ್ಲಿದ್ದು, ಕೆಲವನ್ನು ಐಷಾರಾಮಿ ಹೋಟೆಲ್, ರೆಸಾರ್ಟ್‌ಗಳನ್ನಾಗಿ ಪರಿವರ್ತಿಸಲಾಗಿದೆ. ರಾಜರ ಬೀಡಾಗಿದ್ದರಿಂದಲೇ ರಾಜಸ್ಥಾನವೆಂದು ಕರೆಯಲ್ಪಡುವ ಈ ರಾಜ್ಯದ ಜನ ಯಾವುದೇ ಆತುರವಿಲ್ಲದಂತೆ ಸಾವಧಾನವಾಗಿರುತ್ತಾರೆ; ಎಲ್ಲದಕ್ಕೂ ಪ್ರೀತಿಯಿಂದಲೇ ಉತ್ತರಿಸುತ್ತಾರೆ.

953 ಕಿಟಕಿಗಳ ಹವಾಮಹಲ್!

ಒಂದು ಮನೆಗೆ ಇಷ್ಟೊಂದು ಕಿಟಕಿಗಳೇಕೆ ಎಂದು ಹುಬ್ಬೇರಿಸಬಹುದು. ಮಹಾರಾಜ ಸವಾಯಿ ಪ್ರತಾಪ್ ಸಿಂಗ್ 1799ರಲ್ಲಿ ಈ ಅರಮನೆಯನ್ನು ಎರಡು ಕಾರಣಗಳಿಗಾಗಿ ಕಟ್ಟಿಸಿದನಂತೆ; ಮೊದಲನೆಯದು ಬಿಸಿಯ ಧಗೆಯಿಂದ ರಕ್ಷಿಸಿಕೊಳ್ಳಲು. ಗಾಳಿ ಹಲವಾರು ಸಣ್ಣ-ದೊಡ್ಡ ರಂಧ್ರಗಳಿಂದ ತೂರಿ ಬಂದಾಗ ಅಂತಿಮವಾಗಿ ತಣ್ಣನೆಯ ಅನುಭವವಾಗುತ್ತದೆ. ಎರಡನೆಯದು, ಹೆಂಗಸರಿಗೆ ಸಾಮಾನ್ಯ ಜನರಂತೆ ರಸ್ತೆಯಲ್ಲಿ ಓಡಾಡಲು ಅವಕಾಶವಿರಲಿಲ್ಲ. ರಾಣಿ, ಮಹಾರಾಣಿಯಾದಿಯಾಗಿ ಎಲ್ಲಾ ಹೆಂಗಸರೂ ನಾನಾ ಕಿಟಕಿಗಳಿಂದ ಲೋಕವಿಚಾರವನ್ನು, ಎತ್ತರದ ಕಟ್ಟಡದ ಕಿಟಕಿಯಿಂದ ಇತರರಿಗೆ ಕಾಣದಂತೆ ನೋಡಿ ಖುಷಿಪಡಬೇಕಿತ್ತು. ವಿಪರ್ಯಾಸವೆಂದರೆ, ಈಗಲೂ ಜೈಪುರದ ರಸ್ತೆಗಳಲ್ಲಿ ಹೆಂಗಸರು ವಿರಳ. ಬಹುತೇಕ ಪುರುಷಮಯ.

ಜಲಮೂಲ ಬಾವಡಿಗಳು

1734ರಲ್ಲಿ ಎರಡನೇ ಸವಾಯ್ ಜೈ ಸಿಂಗ್, ಜೈಪುರ ನಗರ ಕಟ್ಟಿದನೆಂಬ ಪ್ರತೀತಿ ಇದೆ. ಆದಾಗಲೇ ಅಂಬರ್ ಅಥವಾ ಅಮೀರ್ ನಗರ ಇದ್ದಾಗಿಯೂ ನೀರಿನ ಹುಡುಕಾಟದಲ್ಲಿ ಜೈಪುರಕ್ಕೆ ಸ್ಥಳಾಂತರವಾದನಂತೆ. ದೇಶದಾದ್ಯಂತ ಮೊಘಲರ ಮತ್ತು ಬ್ರಿಟಿಷರ ನಡುವಿನ ಯುದ್ಧ, ಅಂತರ್‌ ಯುದ್ಧಗಳು ನಡೆದರೂ, ಜೈಪುರದ ಬಹುತೇಕ ಅರಮನೆಗಳಿಗೆ ಯಾವುದೇ ತೊಂದರೆಯಾಗಲಿಲ್ಲ. ರಾಜ-ಬ್ರಿಟಿಷ್ ದೊರೆಗಳ ನಡುವೆ ಉತ್ತಮ ಬಾಂಧವ್ಯಕ್ಕೆ ಇದುವೇ ಸಾಕ್ಷ್ಯ. ಹೀಗೆ ಇಂದಿಗೂ ಕೊಂಚವೂ ಅಲುಗಾಡದೆ ಉಳಿದಿರುವ ಕೋಟೆಗಳಲ್ಲಿ ನಗರಗಢ ಒಂದು. ಅರಾವಳಿ ಬೆಟ್ಟಗಳ ಶಿಖರದಲ್ಲಿದೆ ನಗರಗಢ.

ಅರಾವಳಿ ಪರ್ವತಗಳ ನಡುವೆ ಪಯಣಿಸುವ ಹಾದಿ ನಮ್ಮ ಚಿಕ್ಕಮಗಳೂರಿನ ಹಾದಿಯನ್ನು ನೆನಪಿಸುತ್ತದೆ. ವ್ಯತ್ಯಾಸವೆಂದರೆ, ಎರಡೂ ಕಡೆ ಕುರುಚಲು ಕಾಡು ಮಾತ್ರ. ಇಡೀ ಕೋಟೆಯನ್ನು ಸುತ್ತಾಡಲು ಕನಿಷ್ಠ ಎರಡು ಗಂಟೆಯಾದರೂ ಬೇಕು. ಕೋಟೆಯ ಬುಡದಲ್ಲಿ ನೀರಿಗಾಗಿ ಕನಿಷ್ಠ ಅರ್ಧ ಕಿಲೋಮೀಟರ್ ಸುತ್ತಳತೆಯ ಬಾವಡಿ (ಕಟ್ಟೆ) ಇದೆ. ಕೋಟೆಯೊಳಗೆ ಬಿದ್ದ ಅಷ್ಟೂ ನೀರು ಸೋಸಿ, ಈ ಕಟ್ಟೆಯೊಳಕ್ಕೆ ಇಳಿಯುವಂತೆ ವಿನ್ಯಾಸಗೊಳಿಸಲಾಗಿದೆ. ಹತ್ತಾರು ಮೆಟ್ಟಿಲುಗಳನ್ನು ಇಳಿದು ನೀರನ್ನು ತರಬಹುದು. ಇಲ್ಲವೇ, ಏತದಿಂದಲೂ ಮೇಲೆತ್ತಿಕೊಳ್ಳಬಹುದು. ಇದೇ ರೀತಿಯ ಮೆಟ್ಟಿಲುಗಳಿರುವ ಅನೇಕ ಬಾವಡಿಗಳು ಇತರೆ ಅರಮನೆಗಳಲ್ಲೂ ಕಂಡುಬರುತ್ತವೆ. ಮಳೆನೀರು ಕೊಯ್ಲಿನ ಮಹತ್ವ ಜೈಪುರದ ರಾಜರುಗಳಿಗೆ ಮೊದಲೇ ತಿಳಿದಿದ್ದರಲ್ಲಿ ಆಶ್ಚರ್ಯವಿಲ್ಲ.

ರಾತ್ರಿ ರಂಗಿನಲ್ಲಿ ಅಮೀರ್ ಕೋಟೆ

ನಗರಗಢ ಕೋಟೆಯ ಪಕ್ಕದಲ್ಲೇ ಜಲಗಢ್ ಮತ್ತು ಅಮೀರ್ ಕೋಟೆಗಳಿವೆ. ಒಂದಕ್ಕೊಂದಕ್ಕೆ ನೇರವಾಗಿ ಹೋಗಲು ಸುರಂಗಗಳಿವೆ ಎಂದು ಹೇಳುತ್ತಾರಾದರೂ, ಹೋಗುವ ಧೈರ್ಯ ಮಾಡುವವರು ಕಡಿಮೆ. ಬಹುಶಃ ಗಾಳಿ, ಬೆಳಕಿನ ಕೊರತೆಯಿಂದ ಇರಬಹುದು. ಜಲಗಢ್ ಮತ್ತು ಅಮೀರ್ ಕೋಟೆಗಳು ಬೆಳಗಿನಲ್ಲಿ ಒಂದು ವೈಭವ ತೋರಿದರೆ ರಾತ್ರಿ ಬೆಳಕಿನಲ್ಲಿ ಒಂದು ಪಟ್ಟು ಹೆಚ್ಚಿನ ರಂಗನ್ನು ಹೊದ್ದಂತೆ ಕಂಗೊಳಿಸುತ್ತವೆ. ಕೋಟೆಯ ಬಾಗಿಲವರೆವಿಗೂ ಬಹುತೇಕ ಎಲ್ಲಾ ವಾಹನಗಳಿಗೆ ಅವಕಾಶವಿದೆ. ಒಳಪ್ರವೇಶಿಸಿದ ಕೂಡಲೇ ಭವ್ಯವಾದ ಅರಮನೆಗಳು ಎದುರಾಗುತ್ತವೆ, ಜೊತೆಗೆ ಎಲ್ಲೋ ನೋಡಿರುವೆನಲ್ಲ ಎಂಬ ನೆನಪೂ ಕೂಡ. ಹಿಂದಿ ಸಿನಿಮಾ ನೋಡುವವರು ಅನೇಕ ಬಾರಿ ಪರದೆಯ ಮೇಲೆ ಈ ಅರಮನೆಗಳನ್ನು ಕಂಡಿರಬಹುದು. ವಿಶಾಲವಾದ ಪ್ರಾಂಗಣದಲ್ಲಿನ ನೃತ್ಯದ ಸೊಬಗನ್ನು ಕಂಡಿರಬಹುದು.

ಭಯಾನಕ ಕಥೆಗಳ ರಹಸ್ಯ ಕೋಟೆ ಭಾನಗಢ್

ಜೈಪುರದಿಂದ 100 ಕಿಲೋಮೀಟರ್ ದೂರದ ಭಾನಗಢ್ ಕೋಟೆಯ ವಿಸ್ತಾರ ಇತರೆ ಕೋಟೆಗಳಿಗಿಂತ ಬೃಹತ್ತಾಗಿದ್ದರೂ, ಎಲ್ಲವೂ ನಮ್ಮ ಹಂಪಿಯಂತೆ ಮುರಿದು ಬಿದ್ದಿದೆ. ಸುಮಾರು 10,000 ಜನರು ಈ ಕೋಟೆಯೊಳಗೆ ವಾಸವಿದ್ದರು, ನೂರಾರು ನರ್ತಕಿಯರು ಇಲ್ಲಿದ್ದರು ಎಂದರೆ ನಂಬಲಾಗದಷ್ಟು ನಶಿಸಿಹೋಗಿದೆ. ನಾವು ಭಾನಗಢ್‍ಗೆ ಹೋಗುತ್ತಿದ್ದೇವೆ ಎಂದಾಕ್ಷಣ, ಅಂತರ್ಜಾಲದಿಂದ ಹಿಡಿದು ಟೀ ಮಾರುವವರೂ ನಮ್ಮನ್ನು ಸಾಕಷ್ಟು ಬಾರಿ ಎಚ್ಚರಿಸಿದ್ದರು. ಇಲ್ಲಿ ಸಂಜೆಯಾದ ಮೇಲೆ ಅದೆಂತಹ ದೆವ್ವಗಳಿವೆ ನೋಡೋಣ ಎಂದು ಠಿಕಾಣಿ ಹೂಡಿದವರು ಹೆಣವಾಗಿದ್ದಾರಂತೆ. ನಾವು ಭಯಪಡುವ ಉಮೇದಿನಿಂದಲೇ ಹೋದೆವು. ದಾಳಿಯಿಂದ ಇಡೀ ಕೋಟೆ ಭಗ್ನವಾಗಿದ್ದರೂ, ರಾತ್ರಿಹೊತ್ತು ರಾಣಿ, ಅರ್ಚಕ ಬರುತ್ತಾರೆ, ಮಾತನಾಡುತ್ತಾರೆ ಎಂದು ಸ್ಥಳೀಯರು ಇಂದಿಗೂ ನಂಬುತ್ತಾರೆ. ತ್ರಿಲೋಕ ಸುಂದರಿ ರಾಣಿಯನ್ನು ಪಡೆಯಲು ಮಾಟಗಾರ ಹೂಡಿದ ವಿಫಲ ತಂತ್ರ, ಅವನ ಶಾಪದಿಂದ ಕೋಟೆಯ ನಾಶ ಇತ್ಯಾದಿ ಕಥೆಗಳು ರಾಜಸ್ಥಾನದ ಪ್ರಸ್ತುತ ಶಾಲಾಪಠ್ಯದಲ್ಲಿವೆ!

ಅಲ್ಬರ್ಟ್ ಮ್ಯೂಸಿಯಂ

ರಾಜಸ್ಥಾನದ ಅತ್ಯಂತ ಹಳೆಯ ಸಂಗ್ರಹಾಲಯವನ್ನು ವೇಲ್ಸ್‌ನ ರಾಜನ 1876ರ ಭೇಟಿಯ ನೆನಪಿನಲ್ಲಿ ಆಲ್ಬಲ್ಟ್ ಮ್ಯೂಸಿಯಂ ಎಂದು ಕರೆಯಲಾಗುತ್ತದೆ. ಜೈಪುರದ ಬಹುತೇಕ ಕಲಾಜಗತ್ತು ಈ ಸರ್ಕಾರಿ ಸಂಗ್ರಹಾಲಯಲ್ಲಿ ಅಡಕವಾಗಿದೆ. ಜೈಪುರದ ಜನರು ಪಾರಿವಾಳ ಪ್ರಿಯರು. ಅವುಗಳಿಗೆ ಕಾಳು ಹಾಕುವುದನ್ನು ಧಾರ್ಮಿಕತೆಯಿಂದ ಆಚರಿಸುತ್ತಾರೆ. ನೂರಾರು ಜನ ಮ್ಯೂಸಿಯಂ ಎದುರು ಹಣಕೊಟ್ಟು ಕಾಳುಗಳನ್ನು ಪಡೆದು, ನಮಿಸಿ ಪಾರಿವಾಳಗಳಿಗೆ ಎರಚುವುದು ಸಾಮಾನ್ಯ ದೃಶ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು