ಮುಂಗಾರು ಮಳೆಗೆ ಶೃಂಗಾರಗೊಂಡಿದ್ದ ಜಾಮೀಯಾ ಮಸೀದಿಯ ಸುತ್ತಲಿನ ಇಳೆಯನ್ನು ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನ ಕಿರಣಗಳು ಚುಂಬಿಸುತ್ತಾ ರಮಣೀಯತೆಯನ್ನು ಸೃಷ್ಟಿಸಿದ್ದವು. ಆಹ್ಲಾದಕರ ಪರಿಸರದಲ್ಲಿ ಪರಾಗವನ್ನು ಹೀರಲು ಬಂದಿದ್ದ ಚಿಟ್ಟೆಗಳನ್ನು ಕಬಳಿಸುತ್ತಿದ್ದ ಕಾಜಾಣ ಹಾಗೂ ಚದುರಿದ್ದ ಕಾಳುಗಳನ್ನು ಹೆಕ್ಕುತ್ತಿದ್ದ ಬೆಳವಗಳನ್ನು ನೋಡುತ್ತಾ ಭವ್ಯವಾದ ಪಾರಂಪರಿಕ ಪ್ರಾರ್ಥನಾ ಮಂದಿರದೊಳಗೆ ನಾವು ಪ್ರವೇಶಿಸಿದೆವು. ಮಸೀದಿಯ ಒಳಗಡೆ ಇಮಾಮರು ಸಲ್ಲಿಸುತ್ತಿದ್ದ ಪ್ರಾರ್ಥನೆ ಕಿವಿಗಳಿಗೆ ಬಿತ್ತು. ಬೃಹತ್ ಕಂಬಗಳ ಮೇಲೆ ಬಿಲ್ಲಿನಂತೆ ಬಾಗಿದ್ದ ಕಮಾನುಗಳ ನಡುವೆ ಸುಮಾರು 60 ಮೀಟರ್ ದೂರದಲ್ಲಿ ಸಲ್ಲಿಸುತ್ತಿದ್ದ ಪ್ರಾರ್ಥನೆಯು ಸ್ಪಷ್ಟವಾಗಿ ಕೇಳಿಸುತ್ತಿತ್ತು.

ಹೌದು! ನಾವೀಗ ಕಾಲಕಾಲಕ್ಕೆ ತನ್ನ ಹೆಸರನ್ನು ಕಲಬುರಗಿ, ಆಸನಾಬಾದ್ ಹಾಗೂ ಗುಲ್ಬರ್ಗಾ ಎಂದು ಬದಲಾಯಿಸಿಕೊಳ್ಳುತ್ತಾ ಈಗ ಮತ್ತೆ ಕಲಬುರಗಿ ಎಂದು ಕರೆಸಿಕೊಳ್ಳುತ್ತಿರುವ ಕಲ್ಯಾಣ ಕರ್ನಾಟಕದ ಪ್ರಮುಖ ನಗರಕ್ಕೆ ಮಲೆನಾಡಿನಿಂದ ಬಂದಿಳಿದಿದ್ದೆವು. ಬೆಳ್ಳಂಬೆಳಿಗ್ಗೆ ಶುರುವಾದ ಒಂದು ದಿನದ ನಮ್ಮ ನಗರ ಪ್ರವಾಸ ಶತಮಾನದ ಹಿಂದೆ ನಿರ್ಮಿಸಿದ ಕಲಾತ್ಮಕ ಕೆತ್ತನೆಯ ಶ್ರೀ ಶರಣಬಸವೇಶ್ವರ ಗುಡಿಯಿಂದ ಪ್ರಾರಂಭವಾಯಿತು. ಭಕ್ತಾದಿಗಳಿಂದ ತುಂಬಿದ್ದ ಗುಡಿಯ ವಿಶಾಲವಾದ ಪ್ರಾಂಗಣವನ್ನು ಸುತ್ತಿ , ಸ್ವಾಮಿಗಳ ಗದ್ದುಗೆಯ ದರ್ಶನ ಮಾಡಿ, ನಗರದ ಐತಿಹಾಸಿಕ ಕೋಟೆಗೆ ಲಗ್ಗೆ ಇಟ್ಟೆವು. ಕೋಟೆಯ ಪ್ರವೇಶದೊಂದಿಗೆ ಎಡ ಬದಿಯಲ್ಲಿ ತುಸು ಸಾಗಿದಾಗ ನಮಗೆ ಏಷಿಯಾದಲ್ಲಿಯೇ ದೊಡ್ಡದೆನ್ನಲಾದ ಜಾಮಿಯಾ ಮಸೀದಿ ಎದುರಾಯಿತು. ಪರ್ಷಿಯಾದ ವಾಸ್ತುಶಿಲ್ಪಿ ಮಹಮ್ಮದ ರಘಿಯಾ ಮಾರ್ಗದರ್ಶನದಲ್ಲಿ ಬಹಮನಿಯ ರಾಜ ಒಂದನೆಯ ಮಹಮದ ಶಾಹ್ ನ ಆಳ್ವಿಕೆಯಲ್ಲಿ ಕ್ರಿ.ಶ. 1367 ರಲ್ಲಿ ಇದನ್ನು ನಿರ್ಮಿಸಲಾಗಿದೆ. ಇಂಡೋ ಇಸ್ಲಾಂ ಶೈಲಿಯ ಅದ್ಭುತ ಮಸೀದಿಯಲ್ಲಿ 115 ಕಂಬಗಳು, ವಿವಿಧಾಕಾರದ 250 ಕಮಾನುಗಳು ಹಾಗೂ 105 ಗುಮ್ಮಟಗಳಿವೆ. 150 ಪುಷ್ಪಗಳಿಂದ ಅಲಕೃಂತ ಭವನದಲ್ಲಿ ತಂಪು ವಾತಾವರಣವಿರುವಂತೆ ಹಾಗೂ ಪ್ರತಿಧ್ವನಿಯಾಗದಂತೆ ರಚಿಸಿದ ವಾಸ್ತು ಬೆರಗುಗೊಳಿಸಿತು.

ಮಸೀದಿ ಸುತ್ತಲಿರುವ ಕೋಟೆಯ ಕೊತ್ತಲುಗಳನ್ನು ಏರಿಳಿಯುತ್ತಾ ಏಷಿಯಾದಲ್ಲೇ ಅತಿ ಉದ್ದವೆಂಬ ಹೆಗ್ಗಳಿಕೆಯ ತೋಪು ವೀಕ್ಷಿಸಿ, ಕೋಟೆಯ ಪ್ರವೇಶ ದ್ವಾರದ ರಕ್ಷಣೆಗೆ ಕಟ್ಟಲಾದ ‘ರಣಮಂಡಲ’ವೆಂಬ ಚೌಕಾಕಾರದಲ್ಲಿರುವ ಬೃಹದಾಕಾರದ ಕಟ್ಟಡವನ್ನು ಹತ್ತಿಳಿದೆವು. ಕೋಟೆಯನ್ನು ಸುತ್ತಾಡಿದ ತರುವಾಯ ಬಹಮನಿ ಅರಸರ ಸಮಾಧಿಗಳಿರುವ ‘ಹಫ್ತ್ ಗುಂಬಜ್’ಗಳತ್ತ ಸಾಗಿದೆವು. ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿರುವ ಒಟ್ಟು ಏಳು ಸಮಾಧಿಗಳು ನಗರದ ಮಧ್ಯಭಾಗದಲ್ಲಿಯೇ ಇವೆ. ತುಘಲಕ, ಇಂಡೋ ಇಸ್ಲಾಂ ಹಾಗೂ ರಜಪೂತ ಶೈಲಿಯಲ್ಲಿ ಇವುಗಳನ್ನು ಕಟ್ಟಲಾಗಿವೆ.

‘ಹಫ್ತ್ ಗುಂಬಜ್’ ಮುಂದೆ ಇರುವ ರಸ್ತೆಯಿಂದ ಬಲಕ್ಕೆ ನೇರವಾಗಿ ಸಾಗಿದರೆ 15ನೆ ಶತಮಾನದಲ್ಲಿ ಕಲಬುರಗಿಯಲ್ಲಿ ನೆಲೆ ನಿಂತಿದ್ದ ಪ್ರಸಿದ್ಧ ಸೂಫಿ ಸಂತ ಬಂದೇ ನವಾಜರ ದರ್ಗಾವಿದೆ. ಬಹಮನಿ ಸುಲ್ತಾನ ಅಹಮ್ಮದ ಶಹನಿಂದ ಗುರುಗಳ ಸ್ಮರಣಾರ್ಥ ಕಟ್ಟಿಸಿದ ದರ್ಗಾವು ನಗರದ ಅತ್ಯಂತ ಜನನಿಬಿಡ ಸ್ಥಳದಲ್ಲಿದೆ. ಇಲ್ಲಿಗೆ ದೇಶ–ವಿದೇಶಗಳಿಂದ ಭಕ್ತರು ಬರುತ್ತಾರೆ. ಬಂದೇ ನವಾಜ ದರ್ಗಾದ ಗುಮ್ಮಟದ ಒಳಭಾಗದಲ್ಲಿ ಇತ್ತೀಚಿಗೆ ಬಣ್ಣಬಣ್ಣದ ಗಾಜುಗಳಿಂದ ಅಲಂಕಾರವನ್ನು ಮಾಡಲಾಗಿದೆ. ಇಲ್ಲಿನ ಕುಸುರಿ ಕೆಲಸ ಸೆಳೆಯುತ್ತದೆ. ಸ್ಥಳೀಯರು ಹಾಗೂ ಇತಿಹಾಸದ ಉಪನ್ಯಾಸಕರಾದ ಶಂಭುಲಿಂಗ ವಾಣಿಯವರ ಸಲಹೆಯಂತೆ ಬೆಳಿಗ್ಗೆಯೇ ಸ್ಥಳಗಳ ಪಟ್ಟಿಯನ್ನು ಕ್ರಮವಾಗಿ ಹೊಂದಿಸಿಕೊಂಡಿದ್ದರಿಂದ ನಮ್ಮ ಸುತ್ತಾಟದ ನಿರ್ವಹಣೆ ವ್ಯವಸ್ಥಿತವಾಗಿ ನಡೆದಿತ್ತು.

ಅರ್ಧ ದಿನದಲ್ಲಿ ನಗರದ ಮಧ್ಯದಲ್ಲಿರುವ ತಾಣಗಳನ್ನು ನೋಡಿ ಮುಗಿಸಿದ್ದ ನಾವು ಇನ್ನುಳಿದ ದೋ ಮಿನಾರ್, ಹಸನ್ ಗಂಗು ಗೋರಿ, ಶಹಾ ಬಜಾರ್ ಮಸೀದಿ , ಚೋರ್ ಗುಂಬಜ್ ಹಾಗೂ ಮುಂತಾದ ತಾಣಗಳನ್ನು ನೋಡ ಬೇಕಿತ್ತು. ಖಾನಾವಳಿಯೊಂದನ್ನು ಹೊಕ್ಕು ಊಟ ಮಾಡಿದ ನಂತರ ತಿರುಗಾಟ ಮುಂದುವರಿಯಿತು. ಕೆಲ ಪಾರಂಪರಿಕ ಸ್ಥಳಗಳು ಸ್ವಲ್ಪ ದೂರವಿರುವ ಕಾರಣ ಆಟೊ ಒಂದನ್ನು ಬಾಡಿಗೆಗೆ ಗೊತ್ತುಪಡಿಸಿ ಒಂದೊಂದೆ ಸ್ಥಳಗಳನ್ನು ಹುಡುಕಿ ಹುಡುಕಿ ನೋಡಿದೆವು.

ದೇಶ–ವಿದೇಶಗಳ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯಬಲ್ಲ ಅವಕಾಶವಿರುವ ಕಲಬುರಗಿಯಲ್ಲಿ ಅನೇಕ ಸ್ಮಾರಕಗಳು ಯಾವುದೇ ನಿರ್ವಹಣೆಯಿಲ್ಲದೆ ಹಾಳು ಕೊಂಪೆಗಳಾಗಿವೆ. ನಗರದ ಮತ್ತೊಂದು ಪ್ರಸಿದ್ಧ ತಾಣ ಬುದ್ಧ ವಿಹಾರಕ್ಕೆ ಬಸ್ ಏರಿ ಸುಮಾರು ಎಂಟು ಕಿಲೋಮೀಟರ್ ದೂರ ಕ್ರಮಿಸಿದೆವು. ಪ್ರಶಾಂತ ಸ್ಥಳದಲ್ಲಿರುವ ಶ್ವೇತ ವರ್ಣದ ಬುದ್ದ ವಿಹಾರವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ವಿಹಾರದಲ್ಲಿ ಧ್ಯಾನ ಮಾಡಿ ಸುತ್ತಲಿರುವ ಉದ್ಯಾನವನದಲ್ಲಿ ಕೆಲ ಹೊತ್ತು ತಿರುಗಾಡಿ ಮನ ಹಗುರಮಾಡಿಕೊಂಡೆವು.

ಬುದ್ಧ ವಿಹಾರದಿಂದ ಹಿಂದಿರುಗುತ್ತಾ ಪಟ್ಟಿಯಲ್ಲಿದ್ದ ಕೊನೆಯ ಸ್ಥಳ ಪ್ರಾಚ್ಯ ವಸ್ತು ಸಂಗ್ರಹಾಲಯ ಹೊಕ್ಕೆವು. ಬಹಮನಿ ಕಾಲದ ಸ್ಮಾರಕಗಳಲ್ಲಿ ಮೌರ್ಯ, ಚಾಲುಕ್ಯ, ರಾಷ್ಟ್ರಕೂಟ , ಬಹಮನಿ, ಹೊಯ್ಸಳ, ವಿಜಯನಗರ ಕಾಲದ ಪ್ರಾಚ್ಯ ವಸ್ತುಗಳನ್ನು ಅಲ್ಲದೆ ಜೈನ, ಬೌದ್ಧ ಹಾಗೂ ಸಿಂಧೂ ನಾಗರಿಕತೆಯ ಅನೇಕ ವಸ್ತುಗಳನ್ನು ಪ್ರದರ್ಶಿಲಾಗಿದೆ. ಪ್ರಾಚೀನ ವಸ್ತುಗಳನ್ನು ನೋಡಿ ಹೊರ ಬರುತ್ತಿದ್ದಂತೆ ದಿಗಂತದ ಅಂಚಿಗೆ ಸೂರ್ಯನು ನಿರ್ಗಮಿಸುತ್ತಿದ್ದ. ನಗರದ ಅಪ್ಪನ ಕೆರೆಯ ಮುಗಿಲಿನಲ್ಲಿ ಬೆಳ್ಳಕ್ಕಿಗಳು ಮರಳಿ ಗೂಡು ತಲುಪುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.