ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕೋಟೆಗಳ ಮೇಲೆ ಸಾಂಸ್ಕೃತಿಕ ವೈಭವ

Published : 4 ನವೆಂಬರ್ 2019, 19:30 IST
ಫಾಲೋ ಮಾಡಿ
Comments

ಅಂಚೆ ಲಕೋಟೆಗಳ ಮೇಲೆ ನಮ್ಮ ನಾಡಿನ ಪರಂಪರೆ, ಸಂಸ್ಕೃತಿ, ಕಲೆಗೆ ಸಂಬಂಧಿಸಿದ ಚಿತ್ರಗಳನ್ನು ಪ್ರಕಟಿಸುವ ಮೂಲಕ, ವಿಶ್ವದಾದ್ಯಂತ ನಮ್ಮ ನಾಡಿನ ಸಾಂಸ್ಕೃತಿಕ ಸಿರಿವಂತಿಕೆಯನ್ನು ಅಂಚೆ ಇಲಾಖೆ ಪಸರಿಸುತ್ತಾ ಬಂದಿದೆ.

ಭೌಗೋಳಿಕ ಮಾನ್ಯತೆ ಪಡೆದ ಉಡುಪಿಯ ಮಟ್ಟುಗುಳ್ಳಕ್ಕೆ ಈಗ ಅಂಚೆ ಚೀಟಿಯಲ್ಲೂ ಕಾಣಿಸಿಕೊಳ್ಳುವ ಭಾಗ್ಯ. ಒಮ್ಮೆ ಅದೇ ಬದನೆಕಾಯಿಯನ್ನೇ ಅಂಟಿಸಿದ್ದಾರೇನೋ ಎಂಬಂತೆ ಕಾಣುವ ಉಬ್ಬು ಕಲಾಕೃತಿಯಿದು. ಧಾರವಾಡ ಸಮೀಪ ಗರಗದಲ್ಲಿ ಸಿದ್ಧವಾಗುವ ರಾಷ್ಟ್ರಧ್ವಜದ ಖಾದಿ ಬಟ್ಟೆ ಅಂಚೆ ಲಕೋಟೆಯಲ್ಲಿ ಅದೇ ರೂಪದ ಪುಟ್ಟ ಪಟ್ಟಿಯಾಗಿ ಪಟ್ಟವೇರಿದೆ.

ನಾಡಿನ ಸಂಸ್ಕೃತಿ, ಪರಂಪರೆ, ಅಭಿರುಚಿಯನ್ನು ಹೊಸ ಕಲ್ಪನೆಗಳಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಕರ್ನಾಟಕದ ಅಂಚೆ ವಲಯ ಮಂಗಳೂರಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿತು. ಕರ್ನಾಪೆಕ್ಸ್‌ –2019, ರಾಜ್ಯಮಟ್ಟದ 12ನೇ ಅಂಚೆಚೀಟಿ ಮತ್ತು ಲಕೋಟೆ ಪ್ರದರ್ಶನದ ಝಲಕ್‌ ಮೇಲಿನಂತಿತ್ತು.

ಭಾರತೀಯ ಅಂಚೆ ಚೀಟಿ ಮತ್ತು ಲಕೋಟೆಗಳು ವಿಶ್ವದಾದ್ಯಂತ ವಿಶೇಷ ಮಾನ್ಯತೆ ಹೊಂದಿವೆ. ಹಲವು ಪ್ರಾಯೋಜಕ ಸಂಸ್ಥೆಗಳೂ ಇವುಗಳನ್ನು ಸಂಗ್ರಹಯೋಗ್ಯ ಎಂದು ಪರಿಗಣಿಸಿವೆ. ಈ ಬಾರಿಯ ‘ಕರ್ನಾಪೆಕ್ಸ್‌’ನಲ್ಲಿ 10 ವಿಶೇಷ ಲಕೋಟೆಗಳನ್ನು ಬಿಡುಗಡೆ ಮಾಡಲಾಗಿದ್ದು, ಆ ಘನತೆ ಮತ್ತಷ್ಟು ವಿಸ್ತರಿಸಿದೆ. ಈ ಲಕೋಟೆಗಳೆಲ್ಲವೂ ಒಂದಕ್ಕಿಂತ ಒಂದು ಭಿನ್ನ ಮತ್ತು ಹೊಸ ಆವಿಷ್ಕಾರವನ್ನು ಒಳಗೊಂಡಿವೆ.

ನಾಡಿನ ಸಂಪ್ರದಾಯಗಳು, ಪರಂಪರೆ, ಸಂಸ್ಕೃತಿ, ಸಸ್ಯ ಮತ್ತು ಪ್ರಾಣಿಗಳ ವೈವಿಧ್ಯವನ್ನು ಸಾರ್ವಜನಿಕರಿಗೆ ಪರಿಚಯಿಸುವ ಕುರಿತು ಅಂಚೆ ಇಲಾಖೆ ವಿಶೇಷ ಒತ್ತು ನೀಡಿದೆ. ಅದಕ್ಕಾಗಿಯೇ ವಿಶೇಷ ಲಕೋಟೆ ಸರಣಿಗಳ ಎರಡು ಸಂಪುಟಗಳನ್ನು (1960 ರಿಂದ 2018 ರವರೆಗೆ ಬಿಡುಗಡೆಯಾದ ವಿಶೇಷ ಕವರ್‌ಗಳ ಸಂಕಲನ) ಪ್ರದರ್ಶನದಲ್ಲಿ ಬಿಡುಗಡೆ ಮಾಡಲಾಯಿತು.

ದಕ್ಷಿಣಕನ್ನಡ ಜಿಲ್ಲೆಯ ದೈವಾರಾಧನೆ (1984ರಲ್ಲಿ ಬಿಡುಗಡೆಯಾದದ್ದು), ಹಂಪಿಯ ದೇವಾಲಯಗಳು (1974), ಮೈಸೂರು ದಸರಾ (1992), ಮಹಾ ಮಸ್ತಕಾಭಿಷೇಕ (2002), ಚನ್ನಪಟ್ಟಣದ ಆಟಿಕೆಗಳು (2003), ಬೆಂಗಳೂರು ಕರಗ (2000), ಮಂಗಳೂರಿಗೆ ಪೋಪ್‌ ಅವರು ಭೇಟಿ ನೀಡಿದ್ದು (1986). ಇವು ಸಂಕಲನಗಳಲ್ಲಿ ಕಂಡ ಚೀಟಿಗಳಲ್ಲಿ ಮುದ್ರಣಗೊಂಡ ಪ್ರಮುಖ ಘಟನಾವಳಿಗಳು.

ನಾಡಿನ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಪರಿಚಯಿಸುವ ಚಿತ್ರಗಳೂ ಇಲ್ಲಿನ ಚೀಟಿಗಳಲ್ಲಿದ್ದವು. ಜೋಗ ಜಲಪಾತ, ಮೈಸೂರಿನಲ್ಲಿ ನಡೆದ ಆನೆಗಳ ಖೆಡ್ಡಾ ಕಾರ್ಯಾಚರಣೆ, ಬಂಡೀಪುರ ರಾಷ್ಟ್ರೀಯ ಉದ್ಯಾನ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ, ಮೈಸೂರಿನ ಚಾಮುಂಡಿ ಬೆಟ್ಟದ ಚಿತ್ರಗಳನ್ನು ಒಳಗೊಂಡ ವಿಶೇಷ ಅಂಚೆ ಲಕೋಟೆಗಳನ್ನು 70ರ ದಶಕಕ್ಕೂ ಮುನ್ನ ಅಂಚೆ ಇಲಾಖೆ ಬಿಡುಗಡೆ ಮಾಡಿತ್ತು. ವಿಶೇಷ ಲಕೋಟೆಗಳು ಸಾಮಾನ್ಯವಾಗಿ ಅಂಚೆ ಚೀಟಿಗಳ ರೀತಿಯಲ್ಲೇ ಬಿಡುಗಡೆಯಾಗುತ್ತವೆ.

‘ಅಂಚೆ ಚೀಟಿ ಸಂಗ್ರಾಹಕರು ಮತ್ತು ವೀಕ್ಷಕರು ಆಯಾ ಚೀಟಿ/ ಕವರ್‌ನಲ್ಲಿ ಮೂಡಿದ ವಸ್ತುವನ್ನು ಸ್ಪರ್ಶಿಸಿ ಅದರ ಅನುಭವ ಪಡೆಯುವಂತಾಗಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ಈ ಚೀಟಿಗಳು ಹಾಗೂ ಕವರ್‌ಗಳನ್ನು ರೂಪಿಸುತ್ತೇವೆ’ ಎಂದು ಕರ್ನಾಟಕ ವೃತ್ತದ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್‌ ಲೋಬೊ ಹೇಳುತ್ತಾರೆ.

‘ಉದಾಹರಣೆಗೆ, ಧಾರವಾಡದ ನೇಕಾರರ ಶ್ರಮವನ್ನು ಗುರುತಿಸಿ ಅದರ ಮಹತ್ವ ಹೇಳುವ ಸಲುವಾಗಿಯೇ ಲಕೋಟೆಯಲ್ಲಿ ರಾಷ್ಟ್ರಧ್ವಜದ ಪಟ್ಟಿ ಅಳವಡಿಸಿದ್ದೇವೆ. ಇಲ್ಲಿ ಬಿಡುಗಡೆಯಾದ ಎರಡೂ ಸಂಪುಟಗಳು ಅಂಚೆ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಪ್ರಮುಖ ಉಲ್ಲೇಖ ಸಾಮಗ್ರಿಗಳಾಗಿವೆ’ ಎಂದು ಲೋಬೊ ಬಣ್ಣಿಸಿದ್ದಾರೆ.

ಅಂಚೆ ಚೀಟಿ ಹಾಗೂ ಲಕೋಟೆಗಳು ಸಾಂಸ್ಕೃತಿಕ ರಾಯಭಾರಿಗಳಾಗಿ ಕೆಲಸ ಮಾಡುತ್ತವೆ. ಮಾತ್ರವಲ್ಲ ಈಗ ಪೋಸ್ಟ್‌ ಕ್ರಾಸರ್ಸ್‌ ಎಂಬ ಯೋಜನೆಯ ಮೂಲಕ ಈ ಪ್ರಕ್ರಿಯೆ ದ್ವಿಗುಣಗೊಂಡಿದೆ ಎಂದು ಮಾಹಿತಿ ನೀಡುತ್ತಾರೆ.

ಏನಿದು ಪೋಸ್ಟ್‌ ಕ್ರಾಸರ್ಸ್‌?

ಪೋಸ್ಟ್‌ ಕ್ರಾಸರ್ಸ್‌ ಎಂದರೆ ಇದೊಂದು ಆನ್‌ಲೈನ್‌ ಯೋಜನೆ. www.postcrossing.com ವೆಬ್‌ಸೈಟ್‌ನಲ್ಲಿ ನೋಂದಾಯಿಸಿ ಕೊಂಡರೆ ಸಾಕು. ಜಗತ್ತಿನಾದ್ಯಂತ ನೀವು ಪೋಸ್ಟ್‌ ಕಾರ್ಡ್‌ಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ನಾಡಿನ ಸಕ್ರಿಯ ಪೋಸ್ಟ್‌ ಕ್ರಾಸರ್‌ (ವೆಬ್‌ಸೈಟ್‌ನಲ್ಲಿ ನೋಂದಾಯಿತ ಸದಸ್ಯ) ವಿದೇಶದಲ್ಲಿರುವ ವ್ಯಕ್ತಿಗೆ ಪೋಸ್ಟ್‌ ಕಾರ್ಡ್‌/ವಿಶೇಷ ಲಕೋಟೆ ಕಳುಹಿಸುವುದಿದ್ದಲ್ಲಿ ಅವರು
₹12 ಮೌಲ್ಯದ ಅಂಚೆ ಚೀಟಿ ಅಂಟಿಸಬೇಕು. ‘ಈ ಲಕೋಟೆಯ ಮುಖಪುಟದಲ್ಲಿ ರಾಜ್ಯದ ಸಂಸ್ಕೃತಿ, ಸಂಪ್ರದಾಯ, ಜಾನಪದದ ಸಂಗತಿಗಳನ್ನು ಪ್ರತಿಬಿಂಬಿಸುವ ಚಿತ್ರಗಳಿರುತ್ತವೆ’ ಎನ್ನುತ್ತಾರೆ.

ಈ ವಿಶೇಷ ಕವರ್‌ ಕಳುಹಿಸುವ ಮೂಲಕ ವಿದೇಶದಲ್ಲಿ ಅದನ್ನು ಸ್ವೀಕರಿಸುವ ವ್ಯಕ್ತಿ ನಮ್ಮ ಪರಂಪರೆ, ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ. ಆ ದೇಶದಿಂದಲೂ ಇಂಥದ್ದೇ ಕವರ್‌ಗಳು ನಮ್ಮಲ್ಲಿಗೆ ಬರುತ್ತವೆ. ‘ಇದೊಂದು ರೀತಿಯ ಸಾಂಸ್ಕೃತಿಕ ವಿನಿಮಯದಂತಾಗುತ್ತದೆ’ ಎನ್ನುವುದು ಉಡುಪಿಯ ಪೋಸ್ಟ್‌ ಕ್ರಾಸರ್‌ ಅಮ್ಮುಂಜೆ ನಾಗೇಂದ್ರ ನಾಯಕ್‌ ಅಭಿಪ್ರಾಯ.

ಗಾಂಧಿ ಪಥದಲ್ಲಿ...

ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರಯಾಣ ಮತ್ತು ಕಾರ್ಯವನ್ನು ದಾಖಲಿಸುವ 12 ಲಕೋಟೆಗಳನ್ನು ಇಲ್ಲಿ ಬಿಡುಗಡೆ ಮಾಡಲಾಯಿತು. ಕೆಲವು ಕವರ್‌ಗಳು ಗಾಂಧೀಜಿ ಅವರ ಭಾಷಣದ ಸಾಲುಗಳನ್ನೂ ಒಳಗೊಂಡಿವೆ.

‘ಹೀಗೆ ಕರ್ನಾಟಕದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜನಪ್ರಿಯಗೊಳಿಸುತ್ತಿರುವ ಅಂಚೆ ಇಲಾಖೆಗೆ ಅತ್ಯುತ್ತಮ ಪ್ರವಾಸೋದ್ಯಮ ಉತ್ತೇಜನ ಪ್ರಶಸ್ತಿ ನೀಡಬೇಕು’ ಎಂದು ಲೋಬೊ ಕಿರುನಗೆ ನಕ್ಕರು.

ಹೊಸ ಪರಿಕಲ್ಪನೆಗಳ ಹಿಂದೆ...

ಲಕೋಟೆಗಳಲ್ಲಿ ಮೂಡಿಸುವ ಚಿತ್ರ, ವಿನ್ಯಾಸ, ಹೊಸ ಪರಿಕಲ್ಪನೆಗಳನ್ನು ರೂಪಿಸಲು ಇಲಾಖೆಯ ಅಧಿಕಾರಿಗಳ, ಅಂಚೆ ಚೀಟಿ ಸಂಗ್ರಹ ವಿಭಾಗದ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.

‘ಕರ್ನಾಪೆಕ್ಸ್‌–2019ನ್ನು ಮಂಗಳೂರಿನಲ್ಲಿ ಆಯೋಜಿಸುವ ಮೊದಲು ಈ ಸಮಿತಿ 100 ವಿಷಯಗಳನ್ನು ಆಯ್ಕೆ ಮಾಡಿತ್ತು. ಅವುಗಳ ಪೈಕಿ 10 ವಿಷಯಗಳನ್ನು ಅಂತಿಮಗೊಳಿಸಲಾಗಿದೆ’ ಎಂದು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕ ಎನ್‌. ಶ್ರೀಹರ್ಷ ವಿವರಿಸುತ್ತಾರೆ. ಇದರ ವಿನ್ಯಾಸ, ಹೊಸ ನಾವಿನ್ಯತೆಯ ಪ್ರಯೋಗಗಳಿಗಾಗುವ ವೆಚ್ಚವನ್ನು ಆಯಾ ಪ್ರಾಯೋಜಕ ಸಂಸ್ಥೆಗಳು ಭರಿಸುತ್ತವೆ ಎಂದು ಅವರು ನೀಡುವ ಮಾಹಿತಿ.

‘ಈ ವಿಶೇಷ ಕವರ್‌ಗಳಲ್ಲಿ ನಮ್ಮ ಕೆಲಸಗಳನ್ನು ಮೂಡಿಸುವ ಮೂಲಕ ನಮ್ಮ ಶ್ರಮಕ್ಕೆ ಅಂಚೆ ಇಲಾಖೆ ಅತಿದೊಡ್ಡ ಮಾನ್ಯತೆ ನೀಡಿ ಗೌರವಿಸಿದೆ’ ಎಂದು ಖಾದಿ ಧ್ವಜಗಳನ್ನು ತಯಾರಿಸುವ ಗರಗ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಎಚ್ ಬಸವ ಪ್ರಭು, ಮಟ್ಟು ಗುಳ್ಳ ಬೆಳೆಗಾರರ ಸಂಘ ವ್ಯವಸ್ಥಾಪಕ ಲಕ್ಷ್ಮಣ ಮಟ್ಟು, ಸಿದ್ದಿ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ದಿಯೋಗ್ ಬಿ ಸಿದ್ದಿ ಮತ್ತು ಪ್ರೊ.ಹರೀಶ್ ಜೋಶಿ (ಯೂಫಿಲಿಕ್ಟಿಸ್‌ ಅಲೋಯ್ಸಿ ಎಂಬ ಹೊಸ ಜಾತಿಯ ಕಪ್ಪೆಯನ್ನು ಗುರುತಿಸಿದ ವಿಜ್ಞಾನಿ) ಖುಷಿ ವ್ಯಕ್ತಪಡಿಸುತ್ತಾರೆ.

‘ಕರ್ನಾಪೆಕ್ಸ್‌’ನಲ್ಲಿವಿಶೇಷ ವ್ಯಕ್ತಿಗಳ ಅಂಚೆ ಚೀಟಿ ಬಿಡುಗಡೆ

‘ಕರ್ನಾಪೆಕ್ಸ್‌’ನ ಮೊದಲ ದಿನವೇ ಸಾಹಿತಿ ಗಿರೀಶ್‌ ಕಾರ್ನಾಡ, ಜಾರ್ಜ್‌ ಫೆರ್ನಾಂಡಿಸ್‌, ‘ಪೈ ಅಂಕಲ್‌’ ಎಂದೇ ಖ್ಯಾತರಾಗಿದ್ದ ಅಮರಚಿತ್ರ ಕಥಾ ಸರಣಿಯ ರೂವಾರಿ ಅನಂತ್ ಪೈ ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲಾಗಿತ್ತು.

ವಿಶ್ರಾಂತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರು ಜಾರ್ಜ್‌ ಫೆರ್ನಾಂಡಿಸ್‌ ಅವರ ಒಡನಾಟವನ್ನು ನೆನಪು ಮಾಡಿಕೊಂಡರು. ಜಾರ್ಜ್‌ ಸೋದರ ಮೈಕೆಲ್‌ ಫೆರ್ನಾಂಡಿಸ್‌, ಕೆಲವು ಆಸಕ್ತರ ಕೋರಿಕೆ ಮೇರೆಗೆ ಲಕೋಟೆಗಳ ಮೇಲೆ ಸಹಿ ಮಾಡಿಕೊಟ್ಟರು. ಜಾರ್ಜ್‌ ಮಂಗಳೂರಿನ ಬಿಜೈ ಮೂಲದವರು ಎಂಬುದು ವಿಶೇಷ.

ಶಾಲಾ ವಿದ್ಯಾರ್ಥಿಗಳಿಗಾಗಿ ಮೊದಲ ದಿನ ಅಮರಚಿತ್ರ ಕಥಾ ಸರಣಿಯ ಚಿತ್ರಗಳಿಗೆ ಸಂಬಂಧಿಸಿ ಸ್ಥಳದಲ್ಲೇ (ಟಿಎಂಎ ಪೈ ಕನ್ವೆನ್ಷನ್‌ ಹಾಲ್‌) ರಸಪ್ರಶ್ನೆ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT