ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ್ಣ ಶಿಖರದ ನೆತ್ತಿಯಲ್ಲಿ...

ದಕ್ಷಿಣ ಕೇರಳದ ನೆಚ್ಚಿನ ಪ್ರವಾಸ ತಾಣ
Last Updated 8 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಕೇರಳದ ತಿರುವನಂತಪುರ ಎಂದ ಕೂಡಲೇ, ಅನಂತಪದ್ಮನಾಭನ ದೇವಸ್ಥಾನ ನೆನಪಿಗೆ ಬರುತ್ತದೆ. ಆದರೆ, ನಾನು ಇಲ್ಲಿ ಹೇಳ ಹೊರಟಿರುವುದು ಅದೇ ತಿರುವನಂತಪುರ ಜಿಲ್ಲೆಯ ಪೊನ್ಮುಡಿ ಎಂಬ ಅಪರೂಪದ ತಾಣದ ಬಗ್ಗೆ.

ಪೊನ್ಮುಡಿ ಎಂದರೆ ‘ಸ್ವರ್ಣ ಶಿಖರ’ ಅಥವಾ ಸ್ವರ್ಣ ಕಿರೀಟ ಎಂದರ್ಥ. ಇದು ತಿರುವನಂತಪುರದಿಂದ ಈಶಾನ್ಯ ದಿಕ್ಕಿಗೆ ಸುಮಾರು 53 ಕಿಮೀ ದೂರವಿದೆ. ಸುಮಾರು ಎರಡು ಗಂಟೆಯ ಹಾದಿ. ಈ ರಸ್ತೆ ಹಾವಿನಂತಿದೆ. ಇಪ್ಪತ್ತೆರಡು ಹೇರ್‌ಪಿನ್‌ ತಿರುವುಗಳಿವೆ. ತಿರುವುಗಳನ್ನು ಹಿಂದಿಕ್ಕಿ ಮುಂದೆ ಹೋದಂತೆಲ್ಲ ಮಂಜು ಆವರಿಸುತ್ತಾ ಹೋಗುತ್ತೆ. ಈ ದಾರಿಯಲ್ಲಿ ಸಾಗುತ್ತಿದ್ದರೆ, ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ ಏರಿದಂತೆ ಭಾಸವಾಗುತ್ತದೆ.

ಪೊನ್ಮುಡಿಯಲ್ಲಿ ಸುಮಾರು 283 ವಿವಿಧ ಜಾತಿಯ ಪಕ್ಷಿಗಳಿವೆ. ಅವುಗಳಲ್ಲಿ ಬಹುತೇಕ ಅಳಿವಿನಂಚಿನಲ್ಲಿವೆ. 195 ವಿವಿಧ ಜಾತಿಯ ಚಿಟ್ಟೆ ಪ್ರಭೇಧಗಳಿವೆಯಂತೆ. ಜತೆಗೆ ಚಿರತೆ, ಕಾಡೆಮ್ಮೆ, ಆನೆಗಳೂ ಇವೆ ಎಂದು ಹೇಳುತ್ತಾರೆ. ಹೀಗಾಗಿ ಈ ದಾರಿಯಲ್ಲಿ ಸಾಗುವವರಿಗೆ ಅದೃಷ್ಟವಿದ್ದರೆ ದೊಡ್ಡ ಗಾತ್ರದ ಜಿಂಕೆಗಳು ಕಾಣಬಹುದು. ನಾವು ನಾಲ್ಕು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇವೆ. ನಮಗೆ ಯಾವ ಪ್ರಾಣಿಗಳೂ ಕಾಣಲಿಲ್ಲ. ಒಮ್ಮೆ ಮಾತ್ರ ಜಿಂಕೆಗಳು ರಸ್ತೆ ಬದಿಯಿಂದ ಇಣುಕಿ ನಮ್ಮನ್ನು ನೋಡಿ ಚಂಗನೆ ಜಿಗಿದಿದ್ದವು.

ಹೇರ್‌ಪಿನ್‌ ತಿರುವುಗಳನ್ನು ದಾಟಿದ ಮೇಲೆ ಜಿಂಕೆಯ ಪ್ರತಿಕೃತಿಯಿರುವ ಪ್ರವೇಶ ದ್ವಾರ ಕಾಣುತ್ತದೆ. ಆ ದ್ವಾರದ ಹೊರಗೆ ವಾಹನ ನಿಲ್ಲಿಸಿ ಇನ್ನೂರು ಮೀಟರ್ ಹುಲ್ಲುಗಾವಲಿನಂತಿರುವ ಸಮತಟ್ಟಾದ ನೆಲದಲ್ಲಿ ಹೆಜ್ಜೆ ಹಾಕಿದರೆ ಸಿಗುವುದೇ ಪೊನ್ಮುಡಿ ವ್ಯೂ ಪಾಯಿಂಟ್. ಅಲ್ಲಿ ನಿಂತು ಸುತ್ತ ನೋಡಿದರೆ, ದಟ್ಟ ಮಂಜು ಕವಿದ ಬೆಟ್ಟಗಳು ಕಾಣುತ್ತವೆ. ಒಮ್ಮೊಮ್ಮೆ ಮಂಜಿನ ಹನಿಗಳು ಮೈ ಕೈಯನ್ನು ಒದ್ದೆಯಾಗಿಸುತ್ತವೆ. ಸೂರ್ಯ ಕೃಪೆ ತೋರಿದರೆ ಮಂಜು ಕರಗಿ ಕಣ್ಣಿಗೆ ಎಟಕುವಷ್ಟು ದೂರದವವರೆಗಿನ ಗಿರಿಶ್ರೇಣಿಗಳನ್ನು ಕಾಣಬಹುದು. ಜತೆಗೆ ಹಕ್ಕಿಗಳ ಚಿಲಿಪಿಲಿ ನಿನಾದವೂ ಕಿವಿಗೆ ಕೇಳಿಸುತ್ತದೆ.

ಸೂರ್ಯನ ಕಿರಣಗಳು ಭೂಮಿಗೆ ಮುತ್ತಿಕ್ಕಿದರಂತೂ ಚಿನ್ನದ ಎಳೆಗಳಂತೆ ಕಾಣುತ್ತವೆ. ಮೊಣಕಾಲೆತ್ತರದ ಹುಲ್ಲಿನ ಎಳೆಗಳ ಮೇಲೆ ಮಂಜಿನ ಹನಿಗಳ ಸಾಲು, ನೆಲದ ಮೇಲೆ ಮುತ್ತು ಪೋಣಿಸಿದಂತೆ ಕಾಣುತ್ತದೆ.

ವ್ಯೂಪಾಯಿಂಟ್‌ ಮೇಲೆ ಸುತ್ತಾಡುತ್ತಿದ್ದಾಗ, ಆಹ್ಲಾದಕರ ಗಾಳಿ, ಮನಸ್ಸಿಗೆ ಮುದ ನೀಡುತ್ತಿತ್ತು. ಮಂಜಿನ ಜತೆಗೆ ಚಲಿಸುವ ಮೋಡಗಳು, ದೂರದಲ್ಲಿ ಕಾಣುತ್ತಿದ್ದ ಸಾಲು ಸಾಲು ಹಸಿರು ಬೆಟ್ಟಗಳು... ಹಸಿರು ಕ್ಯಾನ್ವಾಸ್‌ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಿದಂತೆ ಕಾಣುತ್ತಿತ್ತು.

ಪೊನ್ಮುಡಿ, ಪ್ರವಾಸಿಗರಿಗೆ ಮಾತ್ರವಲ್ಲ, ತಿರುವನಂತ ಪುರ ಸುತ್ತಮುತ್ತಲಿನ ಕಡಲ ತಡಿಯ ಪ್ರದೇಶದವರಿಗೆ ತುಂಬಾ ಇಷ್ಟವಾದ ತಾಣ. ಏಕೆಂದರೆ, ಅವರಿಗೆ ವರ್ಷ ದುದ್ದಕ್ಕೂ ಕಾಡುವ ಭಯಂಕರ ಸೆಕೆಯಿಂದ ದೂರವಾಗಲು ಅವರೆಲ್ಲ ಇಲ್ಲಿಗೆ ಬರುತ್ತಾರೆ.

ವರ್ಷದುದ್ದಕ್ಕೂ ಸರಾಸರಿ ಇಪ್ಪತ್ತೊಂದು ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಯ್ದುಕೊಳ್ಳುವ ಈ ಪ್ರದೇಶ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಪ್ರಜಾವಾಣಿ ಸಂಗ್ರಹ ಚಿತ್ರ

ಹೋಗುವುದು ಹೇಗೆ ?

ಬೆಂಗಳೂರು ಅಥವಾ ಮೈಸೂರಿನಿಂದ ರಸ್ತೆ ಮಾರ್ಗವಾಗಿ ಹೋಗುವವರು ತಮಿಳುನಾಡಿನ ಮಧುರೈ ಅಥವಾ ಕೊಯಮತ್ತೂರು ಮೂಲಕ ಪೊನ್ಮುಡಿ ತಲುಪಬಹುದು. ಬೆಂಗಳೂರಿನಿಂದ ತಿರುವನಂತಪುರಕ್ಕೆ ವಿಮಾನ ಮತ್ತು ರೈಲು ಸಂಪರ್ಕವಿದೆ. ತಿರುವನಂತಪುರದಿಂದ ಕೇರಳ ರಸ್ತೆ ಸಾರಿಗೆ ಬಸ್‌ಗಳ ಮೂಲಕ ಪೊನ್ಮುಡಿಗೆ ತಲುಪಬಹುದು.

ಊಟ–ಉಪಹಾರ
ಶಿಖರದ ಮೇಲೆ ಪೊನ್ಮುಡಿ ದ್ವಾರದ ಪಕ್ಕ ಹೋಟೆಲ್ ಇದೆ. ಇಲ್ಲಿ ಕೇರಳ ಮಾದರಿಯ ಆಹಾರ ಸಿಗುತ್ತದೆ. ಪ್ರವಾಸಿಗರು ಬುತ್ತಿಯನ್ನೂ ಕೊಂಡೊಯ್ಯಬಹುದು.

ಭೇಟಿಗೆ ಸೂಕ್ತ ಸಮಯ

ನವೆಂಬರ್‌ನಿಂದ ಮಾರ್ಚ್ ತಿಂಗಳ ಅವಧಿ ಪೊನ್ಮುಡಿಗೆ ಪ್ರವಾಸ ಹೋಗಲು ಸೂಕ್ತ ಸಮಯ. ಈ ಸಮಯದಲ್ಲಿ ಶಿಖರ ಪೂರ್ತಿ ದಟ್ಟ ಮಂಜು ಕವಿದಿರುತ್ತದೆ. ನೋಡಲು ಮನೋಹಕವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT