ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ‘ಊಟಿ’ ರಾಣಿಪುರಮ್‌

Last Updated 16 ಮೇ 2019, 14:16 IST
ಅಕ್ಷರ ಗಾತ್ರ

ಕೇರಳದಲ್ಲೂ ಒಂದು ಉದಕ ಮಂಡಲ ಅರ್ಥಾತ್‌ ಊಟಿ ಇದೆ, ಗೊತ್ತಾ?

ಹೌದು. ಅದು ಊಟಿ ಥರವೇ. ಆದರೆ, ಊಟಿ ಅಲ್ಲ. ಅದರ ಹೆಸರು ರಾಣಿಪುರಮ್‌. ಸರ್ವ ಋತುಗಳಲ್ಲೂ ತಂಪಾಗಿರುವ, ಸದಾ ಪ್ರವಾಸಿಗರನ್ನು ಸೆಳೆಯುವ ಈ ತಾಣವನ್ನು ‘ಕೇರಳದ ಊಟಿ’ ಎನ್ನುತ್ತಾರೆ.

ಇದು ಕೇರಳ-ಕರ್ನಾಟಕ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿರುವ ಗಿರಿಧಾಮ. ಕಾಸರಗೋಡಿನಿಂದ 80 ಕಿ.ಮೀ ದೂರವಿದೆ. ಕೊಡಗು – ಭಾಗಮಂಡಲದ ಮೂಲಕವೂ ಇಲ್ಲಿಗೆ ತಲುಪಬಹುದು. ಹೀಗಾಗಿ ಕೊಡಗು ಅಥವಾ ಕಾಸರಗೋಡಿಗೆ ಹೋದವರು, ಒಂದು ದಿನದ ಚಾರಣಕ್ಕಾಗಿ ಈ ತಾಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ರಾಣಿಪುರಮ್‌ ಹಿಲ್‍ಸ್ಟೇಷನ್ ಸಮುದ್ರ ಮಟ್ಟದಿಂದ 750 ಮೀಟರ್ ಎತ್ತರದಲ್ಲಿದೆ. ವರ್ಷದ ಎಲ್ಲ ಋತುಗಳಲ್ಲೂ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ.

ಈ ಸ್ಥಳಕ್ಕೆ 1930ರವರೆಗೆ ‘ಮಾಡತ್ತುಮಲ’ ಎಂಬ ಹೆಸರಿತ್ತು. ಬ್ರಿಟಿಷರ ಕಾಲದಲ್ಲಿ ರಾಣಿಯ ಗೌರವಾರ್ಥವಾಗಿ ‘ರಾಣಿಪುರಮ್’ ಎಂಬ ಹೆಸರು ಅಸ್ತಿತ್ವಕ್ಕೆ ಬಂತು.‌ ಗಮನಿಸಬೇಕಾದ ಅಂಶವೆಂದರೆ ಈ ಊರಿನ ಪಕ್ಕದಲ್ಲಿ ‘ರಾಜಾಪುರಮ್‌’ ಎಂಬ ಹೆಸರಿನ ಊರು ಇದೆ.

ವರ್ಷದ ಬಹುತೇಕ ಕಾಲದಲ್ಲಿ ತಂಪಾದ ಹವೆಯಿರುವ ಬೆಟ್ಟ ಪ್ರದೇಶಗಳನ್ನು ಬ್ರಿಟಿಷರು ಇಷ್ಟಪಡುತ್ತಿದ್ದರು. ಕೇರಳ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಈ ಗಿರಿಧಾಮವನ್ನು ಸೇರಿಸಿಕೊಂಡಿದ್ದರಿಂದ, ಈ ಸ್ಥಳ ಮತ್ತಷ್ಟು ಪ್ರಾಮುಖ್ಯ ಪಡೆದುಕೊಂಡಿತು.

ಇಲ್ಲಿ ಏನೇನಿದೆ?

ರಾಣಿಪುರಮ್‌ನಲ್ಲಿ ನಿತ್ಯಹರಿದ್ವರ್ಣ ಕಾಡುಗಳಿವೆ. ಶೋಲಾ ಮರಗಳಿವೆ. ಜಿಂಕೆ, ಆನೆಗಳು, ವಿವಿಧ ರೀತಿಯ ಮಂಗಗಳಿವೆ. ಪಕ್ಷಿ ಪ್ರಭೇದಗಳು ಕಾಣಸಿಗುತ್ತವೆ. ವಿವಿಧ ಪ್ರಭೇದಗಳ ಚಿಟ್ಟೆ-ಪಾತರಗಿತ್ತಿಗಳಿವೆ. ಕರ್ನಾಟಕದ ತಲಕಾವೇರಿ ಅಭಯಾರಣ್ಯದೊಂದಿಗೆ ರಾಣಿಪುರಮ್‌ ತನ್ನ ಗಡಿಯನ್ನು ವಿಲೀನಗೊಳಿಸುತ್ತದೆ.

ಚಾರಣದ ಮಜಾ

ಸುಮಾರು 3-4 ಕಿ.ಮೀ ಕಡಿದಾದ ದಾರಿಯಲ್ಲಿ ಚಾರಣ ಮಾಡುತ್ತಾ ಬೆಟ್ಟ ಏರಬೇಕು. ವಿವಿಧ ಜಾತಿಯ ಮರಗಳ ನಡುವೆ ಚಾರಣ ಮಾಡುವ ಖುಷಿಯೇ ಅನನ್ಯ. ಬೆಟ್ಟದ ಮೇಲಕ್ಕೆ ತಲುಪುತ್ತಿದ್ದಂತೆ ಹುಲ್ಲುಗಳ ರಾಶಿ ಕಾಣಸಿಗುತ್ತದೆ. ನಡೆಯುವಾಗ ಸದ್ದಿಲ್ಲದೇ ಬಟ್ಟೆಯೊಳಕ್ಕೆ ಸೇರಿಕೊಂಡು ರಕ್ತ ಹೀರುವ ಜಿಗಣೆಗಳ ಬಗ್ಗೆ ಎಚ್ಚರವಹಿಸಬೇಕು.

ಅರಣ್ಯ ಹಾಗೂ ಆನೆಗಳ ವೀಕ್ಷಣೆಗೆ ಜೀಪ್ ಸವಾರಿ ಮಾಡಬಹುದು. ಇದಕ್ಕಾಗಿ ಸಮೀಪದಲ್ಲಿ ಜೀಪ್‌ಗಳು ಬಾಡಿಗೆ ಸಿಗುತ್ತವೆ. ದಟ್ಟ ಅರಣ್ಯರಾಶಿಯನ್ನು ಹೊಂದಿರುವ ರಾಣಿಪುರಮ್‌ನಲ್ಲಿ ಮಳೆಯ ಪ್ರಮಾಣವೂ ಅಧಿಕವಾಗಿದೆ. ಚಳಿಗಾಲದಲ್ಲಿ ಮಂಜು ಮುಸುಕಿದ ವಾತಾವರಣ. ಹೀಗಾಗಿ ಮಳೆಗಾಲದಲ್ಲಿ ಈ ತಾಣಕ್ಕೆ ಪ್ರವಾಸ ಹೋಗುವುದು ಸೂಕ್ತವಲ್ಲ.

ಪ್ಲಾಸ್ಟಿಕ್ ನಿಷೇಧ

ಪ್ಲಾಸ್ಟಿಕ್ ವಸ್ತುಗಳನ್ನು ಬೆಟ್ಟದ ಮೇಲೆ ಕೊಂಡೊಯ್ಯುವುದಿದ್ದರೆ ಒಂದಿಷ್ಟು ಹಣವನ್ನು ‘ಸೇಫ್ಟಿ ಡೆಪಾಸಿಟ್’ ಆಗಿ ಕೊಡಬೇಕು. ಬೆಟ್ಟದಿಂದ ವಾಪಸ್ ಬರುವಾಗಲೂ ಅದೇ ವಸ್ತುಗಳನ್ನು ಹಿಡಿದುಕೊಂಡು ಬಂದಿದ್ದರೆ ಮಾತ್ರ ನಿಮ್ಮ ದುಡ್ಡು ವಾಪಸ್. ಇದೊಂದು ರೀತಿಯಲ್ಲಿ ಪ್ಲಾಸ್ಟಿಕ್ ನಿರ್ಬಂಧ ಹೇರುವ ವಿಧಾನ. ಈ ಪ್ಲಾಸ್ಟಿಕ್ ನಿಷೇಧ ಮಾಡಿರುವ ಕಾರಣದಿಂದಲೂ ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಕರ್ಷಣೆಗೊಳಪಡಲು ಕಾರಣವಾಗಿದೆ.

ಕೇರಳ ಸರ್ಕಾರ ಪ್ರವಾಸೋದ್ಯಮ ಇಲಾಖೆ ರಾಣಿಪುರಮ್ ಗಿರಿಧಾಮವನ್ನು ತಕ್ಕಮಟ್ಟಿಗೆ ಅಭಿವೃದ್ಧಿಗೊಳಿಸಿದೆ, ನಿಜ. ಆದರೆ, ಕೆಲವೊಂದು ಅಭಿವೃದ್ಧಿ ಯೋಜನೆಗಳು ಇನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ. ಪ್ರವಾಸಿಗರಿಗಾಗಿ ಇಲ್ಲೊಂದು ರೆಸಾರ್ಟ್ ಇದೆ ಎನ್ನುವುದನ್ನು ಹೊರತುಪಡಿಸಿದರೆ ಬೇರೆ ಯಾವ ಸೌಲಭ್ಯವೂ ಇಲ್ಲಿ ಕಾಣುವುದಿಲ್ಲ.

ಪನತ್ತಡಿಯಿಂದ ರಾಣಿಪುರಮ್‌ಗೆ ಹೋಗುವ ಡಾಂಬರು ರಸ್ತೆ ಏಕಾಏಕಿ ಒಂದುಕಡೆ ನಿಂತುಬಿಡುತ್ತದೆ. ಅಲ್ಲಿ ಯಾವುದೇ ಸೂಚನಾ ಫಲಕಗಳೂ ಇಲ್ಲ. ಅರ್ಧಂಬರ್ಧ ಬೆಳೆದ ಕುರುಚಲು ಲಂಟಾನಾ ಕಾಡುಗಳಲ್ಲಿ ಇಲಿಗಳು, ಹೆಗ್ಗಣಗಳು ಓಡಾಡುತ್ತಿರುತ್ತಿವೆ. ಈ ಭಾಗದಿಂದ ಬೆಟ್ಟವನ್ನು ಪ್ರವೇಶಿಸಿದ ಪ್ರವಾಸಿಗರು ದಾರಿ ತಪ್ಪಿ ಕಾಡಿನಲ್ಲಿ ಎಲ್ಲೆಲ್ಲೋ ಹೋದ ಉದಾಹರಣೆಗಳಿವೆ.

ಇಷ್ಟೆಲ್ಲ ಕೊರತೆಗಳ ನಡುವೆಯೂ ಈ ಹಿಲ್‍ಸ್ಟೇಷನ್ ಜನರನ್ನು ಆಕರ್ಷಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ತಂಪು ವಾತಾವರಣ. ಬೆಟ್ಟದ ಮೇಲೆ ಕೈಚಾಚಿದರೆ ಮೋಡಗಳು ಕೈಗೆ ಸಿಗುತ್ತವೇನೋ ಅನ್ನಿಸುವಂಥ ಅನುಭವ. ಇಲ್ಲಿನ ಹಸಿರ ಸೌಂದರ್ಯ, ಸ್ವಚ್ಛವಾದ ತಂಪು ಗಾಳಿ ಚಾರಣದ ದಣಿವು ನಿವಾರಿಸುವಂತೆ ಮಾಡುತ್ತದೆ.

ಹೋಗುವುದು ಹೇಗೆ?

ಕಾಸರಗೋಡು ರೈಲ್ವೆ ನಿಲ್ದಾಣದಿಂದ 85 ಕಿ.ಮೀ. ದೂರದಲ್ಲಿದೆ ರಾಣಿಪುರಮ್. ಈ ತಾಣಕ್ಕೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಕಾಞಂಗಾಡ್ (45 ಕಿ.ಮೀ). ಮಂಗಳೂರಿನಿಂದ ಕಾಸರಗೋಡು ಮೂಲಕ ರಾಣಿಪುರಮ್ ತಲುಪಬಹುದು.

ರಾಣಿಪುರಮ್ ಹಿಲ್‍ಸ್ಟೇಷನ್ ಹೊಸದುರ್ಗ ತಾಲ್ಲೂಕಿನ ಪನತ್ತಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುತ್ತದೆ. ಕಾಞಂಗಾಡಿನಿಂದ ಪಾಣತ್ತೂರು ದಾರಿಯಾಗಿ ಕರಿಕ್ಕೆ, ಭಾಗಮಂಡಲಕ್ಕೆ ಹೋಗುವಾಗ ಪನತ್ತಡಿ ಸಿಗುತ್ತದೆ. ಇಲ್ಲಿಂದ ರಾಣಿಪುರಮ್‍ಗೆ ರಸ್ತೆಯ ಸೌಕರ್ಯವಿದೆ. ಹೀಗಾಗಿ ಕೊಡಗು ಮೂಲಕವೂ ಈ ತಾಣವನ್ನು ತಲುಪಬಹುದು.

ಮಂಗಳೂರುವರೆಗೆ ವಿಮಾನದಲ್ಲಿ ಬಂದು, ಅಲ್ಲಿಂದ ರಾಣಿಪುರಮ್‌ಗೆ ಬಸ್‌, ಟ್ಯಾಕ್ಸಿ ಅಥವಾ ರೈಲಿನಲ್ಲಿ ಬರಬಹುದು. ಏರ್‌ಪೋರ್ಟ್‌ನಿಂದ ಕೆಎಸ್ಆರ್‌ಟಿಸಿ ಬಸ್ ಮೂಲಕ ಕಾಞಂಗಾಡ್‌ವರೆಗೆ ಬರಬಹುದು. ಅಲ್ಲಿಂದ ಬೇರೆ ಬಸ್‌ನಲ್ಲಿ ರಾಣಿಪುರಮ್‌ ತಲುಪಬಹುದು.

ಭೇಟಿ ಸೂಕ್ತ ಸಮಯ

ಮಳೆಗಾಲದಲ್ಲಿ ತುಂಬಾ ಮಳೆ ಇರುತ್ತದೆ. ಹಾಗಾಗಿ ಚಳಿಗಾಲವೇ ಈ ಗಿರಿಧಾಮದ ಭೇಟಿಗೆ ಸೂಕ್ತ ಸಮಯ. ಅಂದರೆ, ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಈ ಪ್ರದೇಶದಲ್ಲಿ ಸುತ್ತಾಡಬಹುದು.

ಊಟ–ವಸತಿ

ಊಟ– ಉಪಹಾರಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಅಲ್ಲೊಂದು ರೆಸಾರ್ಟ್‌ ಇದೆ. ಆದರೆ ಅದು ಎಲ್ಲ ವರ್ಗದ ಪ್ರವಾಸಿಗರಿಗೆ ಕೈಗೆ ಎಟುಕುತ್ತದೆಯೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ, ಚಾರಣಿಗರು, ಪ್ರವಾಸಿಗರು ರಾಣಿಪುರಮ್‌ಗೆ ಹೋಗುವಾಗ ಊಟ–ಉಪಹಾರದ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT