ಕಣ್ಣು ಹಾಯಿಸಿದಷ್ಟೂ ದೂರ ಬೆಟ್ಟಗಳ ಸಾಲು, ವಿಶಾಲವಾಗಿ ಹರಿಯುವ ತುಂಗಭದ್ರಾ ನದಿಯ ಸೊಬಗಿನ ನಡುವೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಡಗರ, ನದಿಯ ತಟದಲ್ಲಿ ಹಾಡಿಗೆ ನೃತ್ಯ ಮಾಡುವ, ಮೈ ಕೊರೆಯುವ ಚಳಿಯಿದ್ದರೂ ನದಿಯಲ್ಲಿ ಈಜಾಡುವ ಮಕ್ಕಳ ಉತ್ಸಾಹ, ನೀರಿನಲ್ಲಿ ಜಿಗಿಯುತ್ತ ತಾವು ಸಂಭ್ರಮಿಸುತ್ತ ಪ್ರವಾಸಿಗರನ್ನೂ ಖುಷಿ ಪಡಿಸುವ ಸ್ಥಳೀಯರು.

ಇದು ಕಿಷ್ಕಿಂಧೆ ಪ್ರದೇಶವೆಂದು ಖ್ಯಾತಿಯಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಭಾಗದಲ್ಲಿ ಪ್ರಕೃತಿ ಮಡಿಲಲ್ಲಿ ಕಂಡುಬರುವ ಚಟುವಟಿಕೆಗಳು. ಕೊಪ್ಪಳ ಜಿಲ್ಲೆ ಎಂದಾಕ್ಷಣ ಬಿಸಿಲು ಎನ್ನುವ ಪದವೂ ಜೊತೆಯಲ್ಲಿಯೇ ನೆನಪಾಗುತ್ತದೆ. ಆದರೆ ಕಿಷ್ಕಿಂಧೆ ಪ್ರದೇಶದಲ್ಲಿರುವ ಸುಂದರ ಪ್ರಕೃತಿ ಬಿಸಿಲೂರಿನಲ್ಲಿಯೂ ಮಲೆನಾಡಿನ ವಾತಾವರಣದ ನೆನಪು ಮಾಡುತ್ತದೆ.

ತುಂಗಭದ್ರಾ ನದಿಯ ಒಂದು ಭಾಗದಲ್ಲಿ ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿ, ಇನ್ನೊಂದು ಭಾಗದಲ್ಲಿ ಕೊಪ್ಪಳ ಜಿಲ್ಲೆಯ ಕಿಷ್ಕಿಂಧೆ ಪ್ರದೇಶವಿದ್ದು ಈ ಎರಡು ಐತಿಹಾಸಿಕ ಸ್ಥಳಗಳ ನಡುವೆ ನದಿ ಟಿಸಿಲೊಡೆದು ಹರಿಯುತ್ತದೆ. ಈ ಪ್ರದೇಶದಲ್ಲಿರುವ ಸಾಣಾಪುರ ಹಾಗೂ ಸುತ್ತಲಿನ ಪ್ರವಾಸಿ ತಾಣ ಪ್ರಾಕೃತಿಕವಾಗಿ ದೇಶ, ವಿದೇಶಗಳ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಮುಂಬೈ, ದೆಹಲಿ, ಕೋಲ್ಕತ್ತ, ಪುಣೆ, ಹೈದರಾಬಾದ್ ಹೀಗೆ ದೇಶದ ಎಲ್ಲ ಭಾಗಗಳಿಂದಲೂ ಪ್ರವಾಸಿಗರು ಸಾಣಾಪುರಕ್ಕೆ ಬರುತ್ತಾರೆ. ಹಂಪಿಯಲ್ಲಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ, ಸ್ಥಳಗಳ ಅಧ್ಯಯನಕ್ಕಾಗಿ ಬರುವ ವಿದೇಶಿಗರು ತಿಂಗಳಾನುಗಟ್ಟಲೆ ಕಿಷ್ಕಿಂಧೆ ಪ್ರದೇಶದ ಸಾಣಾಪುರದಲ್ಲಿ ಉಳಿದುಕೊಂಡು ಸುತ್ತಮುತ್ತಲಿನ ಆನೆಗೊಂದಿಯ ಗಗನ್ ಮಹಲ್, ಚಿಂತಾಮಣಿ, ನವವೃಂದಾವನ, ರಾಮಾಯಣದ ಐತಿಹ್ಯ ಹೊಂದಿರುವ ಪಂಪಾಸರೋವರ, ಅಂಜನಾದ್ರಿ ಡಬೆಟ್ಟ, ಋಷ್ಯಮುಖ ಪರ್ವತ ಹೀಗೆ ಅನೇಕ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳನ್ನು ನೋಡುತ್ತಾರೆ. ತುಂಗಭದ್ರಾ ನದಿಗೆ ಅಂಟಿಕೊಂಡೇ ಸಾಣಾಪುರದಲ್ಲಿ ಸಾಕಷ್ಟು ರೆಸಾರ್ಟ್ಗಳು ಹಾಗೂ ಹೋಂಸ್ಟೇಗಳು ಇರುವುದರಿಂದ ಪ್ರವಾಸಿಗರು ಕಿಷ್ಕಿಂಧೆ ಪ್ರದೇಶದ ಪ್ರಾಕೃತಿಕ ಜಲಸೌಂದರ್ಯ ಸವಿಯಲು ಅಲ್ಲಿಯೇ ಉಳಿದುಕೊಳ್ಳುವುದು ಹೆಚ್ಚು. ಸಾಣಾಪುರದಲ್ಲಿ ಎತ್ತರದ ಪ್ರದೇಶದಲ್ಲಿರುವ ವಿಶಾಲವಾದ ಕೆರೆ, ನೀರಿನಲ್ಲಿ ಚಿನ್ನಾಟ, ಹರಿಗೋಲು ಹಾಕಿ ಸ್ಥಳೀಯ ಯುವಕರು ಸುತ್ತಾಡಿಸುತ್ತಲೇ ಪ್ರವಾಸಿಗರಿಗೆ ಮನರಂಜನೆ ನೀಡುತ್ತಾರೆ. ಈ ಯಾನ ಪ್ರವಾಸಿಗರಿಗೆ ಮುದ ನೀಡುತ್ತದೆ.

ಇಸ್ರೇಲ್, ಅಮೆರಿಕ, ರಷ್ಯಾ, ಜರ್ಮನಿ ದೇಶಗಳ ಪ್ರವಾಸಿಗರು ಹೆಚ್ಚಾಗಿ ಬರುವ ಈ ತಾಣದಲ್ಲಿ ಸುತ್ತಾಡುವ ಜೊತೆಗೆ ಈ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಭತ್ತದ ಕಣಿವೆಗಳಲ್ಲಿ ಓಡಾಡುತ್ತ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತ ಸೌಂದರ್ಯವನ್ನು ಅನುಭವಿಸುತ್ತಾರೆ. ವರ್ಷದ ಹತ್ತು ತಿಂಗಳು ಕೆಲಸ ಮಾಡುವ ಇಸ್ರೇಲಿಗರು ಉಳಿದ ಎರಡು ತಿಂಗಳ ಬಿಡುವಿನ ಸಮಯವನ್ನು ವಿದೇಶಗಳ ಪ್ರವಾಸಕ್ಕಾಗಿ ಮೀಸಲಿಡುತ್ತಾರೆ. ಅದರಲ್ಲಿ ಬಹಳಷ್ಟು ಜನ ಮುಂಬೈ, ದೆಹಲಿ, ಗೋವಾ ಪ್ರವಾಸ ಮುಗಿಸಿಕೊಂಡು ಹಂಪಿ ಹಾಗೂ ಕಿಷ್ಕಿಂಧೆ ಪ್ರದೇಶದಲ್ಲಿ ಸುತ್ತಾಡುತ್ತಾರೆ. ಡಿಸೆಂಬರ್ ಅಂತ್ಯಕ್ಕೆ ಶುರುವಾಗುವ ಅವರ ಪ್ರವಾಸ ಮಾರ್ಚ್ ಮೊದಲ ವಾರದ ತನಕ ಜೋರಾಗಿರುತ್ತದೆ. ಹೀಗಾಗಿ ಭಾರತದ ಪಾಲಿನ ಹೊಸವರ್ಷದ ಆಚರಣೆ ಕಿಷ್ಕಿಂಧೆ ಹಾಗೂ ಹಂಪಿ ಪ್ರದೇಶದಲ್ಲಿ ಜೋರು. ಸಾಣಾಪುರ ಭಾಗದಲ್ಲಿ ಕತ್ತಲಾಗುತ್ತಿದ್ದಂತೆಯೇ ಮದ್ಯದ ಲೋಕ ರಂಗೇರುತ್ತದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ತಮ್ಮ ದೇಶದ ನಾಲ್ಕೈದು ಜನರ ಸ್ನೇಹಿತರ ತಂಡ ಕಟ್ಟಿಕೊಂಡು ಬರುವವರ ಗುಂಪು ಒಂದೆಡೆಯಾದರೆ, ಬೇರೆ ಬೇರೆ ದೇಶಗಳಿಂದ ಬಂದು ಇಲ್ಲಿ ಸ್ನೇಹಿತರ ತಂಡ ಕಟ್ಟಿಕೊಳ್ಳುವ ವಿದೇಶಿ ಪ್ರವಾಸಿಗರ ತಂಡ ಇನ್ನೊಂದೆಡೆ. ದಿನಪೂರ್ತಿ ಮೋಹಕ ತಾಣಗಳಲ್ಲಿ ಸುತ್ತಾಡಿ ಪ್ರಕೃತಿ ಸೌಂದರ್ಯ ಅನುಭವಿಸಿ ಸಂಜೆಯಾಗುತ್ತಿದ್ದಂತೆಯೇ ರೆಸಾರ್ಟ್ ಅಥವಾ ಹೋಂ ಸ್ಟೇಗಳಲ್ಲಿ ಸೇರಿಕೊಳ್ಳುತ್ತಾರೆ. ಸೂರ್ಯೋದಯವಾಗುತ್ತಿದ್ದಂತೆಯೇ ಮತ್ತೆ ಅವರ ಅಲೆದಾಟ ಹಾಗೂ ಹೊಸತನದ ಹುಡುಕಾಟ ನಡೆಯುತ್ತಲೇ ಇರುತ್ತದೆ.

ಕಿಷ್ಕಿಂಧೆ ಪ್ರದೇಶ ಪ್ರವಾಸಿಗರ ಪಾಲಿಗೆ ಬಿಸಿಲುನಾಡಿನಲ್ಲಿಯೂ ಮಲೆನಾಡಿನ ಅನುಭವ ಒದಗಿಸಿದರೆ, ‘ವಿದೇಶಿಗರ ಮಿನಿ ದೇಶ’ವೇ ಆಗಿರುವ ಸಾಣಾಪುರ ಎನ್ನುವ ಪುಟ್ಟ ಗ್ರಾಮ ದೇಶ ಹಾಗೂ ವಿದೇಶಿ ಪ್ರವಾಸಿಗರಿಂದಾಗಿ ತನ್ನೂರಿನ ಜನರಿಗೆ ಸ್ಥಳೀಯವಾಗಿ ಉದ್ಯೋಗಗಳನ್ನು ದೊರಕಿಸಿಕೊಟ್ಟಿದೆ.

ಸ್ಥಳೀಯ ಜನ ವಿದೇಶಿಗರಿಗೆ ಸೈಕಲ್, ಬೈಕ್ಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸುತ್ತಾರೆ. ಪ್ರವಾಸಿಗರು ಮೆಚ್ಚಿಕೊಳ್ಳುವ ಬಟ್ಟೆ ತಯಾರಿಕೆ, ಅಲಂಕಾರಿಕ ವಸ್ತುಗಳ ಉತ್ಪಾದನೆ, ಬಾಳೆನಾರು ಬಳಸಿಕೊಂಡು ಕರಕುಶಲ ವಸ್ತಗಳ ತಯಾರಿಕೆ, ಹೋಟೆಲ್, ಹೋಂಸ್ಟೇ ಉದ್ಯಮಗಳನ್ನು ಆರಂಭಿಸಿದ್ದಾರೆ. ಇವುಗಳ ಭರ್ತಿ ವ್ಯಾಪಾರದಿಂದಲೂ ಸ್ಥಳೀಯರಿಗೆ ಆರ್ಥಿಕವಾಗಿ ಅನುಕೂಲವಾಗಿ ದೈನಂದಿನ ಬದುಕು ನಡೆಯುತ್ತಿದೆ. ಪ್ರವಾಸಿಗರ ಕಣ್ಣುಗಳು ಕೂಡ ಪ್ರಕೃತಿಯ ಮೋಹಕತೆಯಿಂದ ಸಂತಸ ಪಡುತ್ತಿವೆ.

ಸುರಕ್ಷತೆಗೂ ಬೇಕು ಒತ್ತು

ಹಂಪಿ ಹಾಗೂ ಕಿಷ್ಕಿಂಧೆ ಪ್ರದೇಶಕ್ಕೆ ಬಂದು ತಿರುಗಾಡುವ ಪ್ರವಾಸಿಗರಿಗೆ ಸ್ಥಳೀಯ ಆಡಳಿತ ಸುರಕ್ಷತೆಗೆ ಒತ್ತು ಕೊಡಬೇಕಾಗಿದೆ.

ವಿದೇಶಿಗರು ಸೈಕಲ್ ಬಾಡಿಗೆ ಪಡೆದು ಕೊರಕಲು ಸ್ಥಳಗಳಿಗೆ ತೆರಳುತ್ತಾರೆ. ಎಲ್ಲೆಂದರಲ್ಲಿ ಓಡಾಡುತ್ತಾರೆ. ಬಹಳಷ್ಟು ಸಂದರ್ಭದಲ್ಲಿ ಇಬ್ಬರು, ಮೂವರು ಮಾತ್ರ ಇರುತ್ತಾರೆ. ಕಳೆದ ವರ್ಷ ಸಾಣಾಪುರದಲ್ಲಿ ಇಸ್ರೇಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರದ ಘಟನೆ ಬಳಿಕ ಪ್ರವಾಸೋದ್ಯಮದ ಬೆಳವಣಿಗೆಗೆ ಪೆಟ್ಟು ಬಿದ್ದಿದೆ. ಘಟನೆ ಬಳಿಕ ಪೊಲೀಸರು ಕಿಷ್ಕಿಂಧೆ ಪ್ರದೇಶದಾದ್ಯಂತ ಚೆಕ್ಪೋಸ್ಟ್ಗಳನ್ನು ಅಳವಡಿಸಿ, ಬ್ಯಾರಿಕೇಡ್ಗಳನ್ನು ಹಾಕಿ ನಿಯಮಿತ ತಪಾಸಣೆ ಮಾಡುತ್ತಿದ್ದಾರೆ. ಈಗಿರುವ ಬಿಗಿಭದ್ರತೆ ಇದೇ ರೀತಿ ಮುಂದುವರಿದರೆ ಪ್ರವಾಸಿಗರಿಗೆ ಸಾಣಾಪುರ ಹಾಗೂ ಕಿಷ್ಕಿಂಧೆ ಪ್ರದೇಶ ಮತ್ತಷ್ಟು ಮೋಹಕವಾಗಿ ಸೆಳೆಯುತ್ತಲೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.