ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲದ ಅಂಗಳದಲ್ಲಿ...

ಅಕ್ಷರ ಗಾತ್ರ

ಕಣ್ಣು ಕುಕ್ಕುವ ಬೆಳ್ಳಂಬೆಳ್ಳಗಿನ ಹಿಮ. ಮೈಮೂಳೆ ನೋಯಿಸುವ ಚಳಿ. ಘಟೋತ್ಕಚನಂತಹ ಪರ್ವತಗಳು. ಹಾಯಾಗಿ ಮೈಚಾಚಿ ಮಲಗಿಕೊಂಡಿರುವ ಸರೋವರಗಳು. ಕ್ಷಣದಲ್ಲಿ ಆವರಿಸಿ ಎಲ್ಲವನ್ನೂ ಮರೆಮಾಚುವ ಮೇಘಗಳು. ಅರೆಗಳಿಗೆ ಮೈಮರೆತರೆ ಬರಸೆಳೆಯುವ ಸಾವಿನ ಕಣಿವೆಗಳು. ರುದ್ರರಮಣೀಯವಾದ ಈ ಸೊಬಗಿನ ಖನಿಯನ್ನು ಕಣ್ತುಂಬಿಕೊಂಡಷ್ಟೂ ಸಾಲದು. ಅರುಣಾಚಲಪ್ರದೇಶದ ಗಡಿಯ ಪ್ರಕೃತಿಯ ಸೊಬಗಿನ ಮಡಿಲಲ್ಲಿ ಅಡಗಿ ಕುಳಿತಿರುವ ತವಾಂಗ್‌ ಎಂಬ ಈ ಪುಟ್ಟ ಜಿಲ್ಲೆ ಅನೇಕ ಕೌತುಕಗಳ ಆಗರ.

ಬಹುತೇಕ ಬೌದ್ಧಮತ ಅನುಯಾಯಿಗಳೇ ಇರುವ ಈ ಪ್ರದೇಶ ಜನನಿಬಿಡ ಪ್ರವಾಸಿತಾಣವಲ್ಲ. ತನ್ನ ಗಾಂಭೀರ್ಯ, ಶಾಂತಿ ಮತ್ತು ಸಹಜತೆಯನ್ನು ಕಾಪಾಡಿಕೊಂಡು ಬಂದಿರುವ ಸ್ಥಳ. 1962ರ ಭಾರತ- ಚೀನಾ ಯುದ್ಧದ ರಕ್ತದ ಕಲೆಗಳನ್ನು ಇತ್ತೀಚೆಗಷ್ಟೇ ತೊಳೆದುಕೊಳ್ಳುತ್ತ, ಹೊರಜಗತ್ತಿಗೆ ತೆರೆದುಕೊಳ್ಳುತ್ತಾ, ನಿಧಾನವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ಸ್ಥಳ ಅಲೆಮಾರಿ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ.

ಗುವಾಹಟಿ ಅಥವಾ ತೇಜ್‌ಪುರದಿಂದಹೊರಟು ಅಸ್ಸಾಂನ ಗಡಿ ದಾಟಿದ ನಂತರ, ‘ಭಾಲುಕ್‌ಪಾಂಗ್‌’ ಎಂಬ ಪುಟ್ಟ ಗ್ರಾಮ ಸಿಗುತ್ತದೆ. ಅಲ್ಲಿಂದ ಶುರುವಾಗುತ್ತದೆ ಆಕಾಶದಾಚೆಯಿರುವ ಮಾಯಾಗಾರ. ವಿಶಾಲವಾದ ಪಟದಲ್ಲಿ ಮೂಡಿಸಿರುವ ಚಿತ್ತಾರಗಳು, ಬೃಹತ್‌ ಪರ್ವತಗಳನ್ನು ಬಳಸುತ್ತಾ ತಿರುಗು- ಮುರುಗಾದ ರಸ್ತೆಗಳಲ್ಲಿ ಸಾಗುತ್ತಾ, ಇಕ್ಕೆಲಗಳಲ್ಲಿ ಹಸಿರು ಚಾದರ ಹೊದ್ದು ಮಲಗಿರುವ ಪರ್ವತಗಳ ರಮಣೀಯತೆ ಬಣ್ಣಿಸಿದಷ್ಟೂ ಸಾಲದು.

ಹಾದಿಯಲ್ಲಿ ಸಿಗುವ ಪುಟ್ಟ ಪುಟ್ಟ ಗ್ರಾಮಗಳನ್ನು ಬಿಟ್ಟರೆ ಇಲ್ಲಿರುವುದೆಲ್ಲವೂ ಮಾನವನ ವಿಧ್ವಂಸಕ ದೃಷ್ಟಿಯಿಂದ ದೂರ ಉಳಿದಿರುವ ನಿರ್ಮಲ ನಿಸರ್ಗ. ಗುಡ್ಡಗಳ ಕಡಿದಾದ ಹಾದಿಗಳಲ್ಲಿ ಮೇಲೇರುತ್ತಾ ಹೋದಂತೆ ಮೈತೆರೆದುಕೊಳ್ಳುವ ಸೌಂದರ್ಯದ ವೈವಿಧ್ಯದ ಪದರಗಳು, ಬಣ್ಣಬಣ್ಣದ ಹೂಗಳು, ಗಿಡಗಳು ಹಾಗೂ ‘ಲುಂಗ್‌ದಾರ್‌’ ಎಂದು ಕರೆಯಲ್ಪಡುವ ಪಂಚವರ್ಣಗಳ ಟಿಬೆಟಿಯನ್‌ ಪ್ರಾರ್ಥನಾ ಧ್ವಜಗಳು ಕಣಿವೆಗಳತ್ತ ಕಣ್ಣು ಸೆಳೆಯುವಂತೆ ಮಾಡುತ್ತವೆ. ಹಾಗೆಯೇ ಅಲ್ಲಲ್ಲಿ ತಿರುವುಗಳಲ್ಲಿ ಅನಿರೀಕ್ಷಿತವಾಗಿ ಎದುರಾಗುವ ತೆಳ್ಳಗೆ, ಬೆಳ್ಳಗೆ ಮೈಚಳಿಬಿಟ್ಟು ಧುಮುಕುತ್ತಾ ಓಡುವ ಝರಿಗಳು ಪಯಣದ ಆಯಾಸಕ್ಕೆ ಅಲ್ಪ ವಿರಾಮ ಇಡುತ್ತವೆ.

ಹೀಗೆಯೇ 100 ಕಿ.ಮೀ. ಪ್ರಯಾಣದ ನಂತರ ಸಮುದ್ರಮಟ್ಟದಿಂದ 7,200ಕ್ಕೂ ಹೆಚ್ಚು ಅಡಿ ಎತ್ತರವಿರುವ ‘ಬೊಮ್ದಿಲಾ’ ಎಂದು ಕರೆಯಲ್ಪಡುವ ಚಿಕ್ಕಹಳ್ಳಿಯನ್ನು ತಲುಪಬಹುದು. ಗುವಾಹಟಿಯಿಂದ ಬೆಳಿಗ್ಗೆ ಹೊರಟ ಪಯಣಿಗರು ಸಾಧಾರಣವಾಗಿ ಇಲ್ಲಿ ಅಥವಾ ಇಲ್ಲಿಂದ ನಲವತ್ತು ಕಿ.ಮೀ. ದೂರದಲ್ಲಿರುವ ‘ದಿರಾಂಗ್’ ಗ್ರಾಮದಲ್ಲಿ ತಂಗುತ್ತಾರೆ. ಬೆಳಿಗ್ಗೆ ನಾಲ್ಕು ಗಂಟೆಗೆ ಉದಯಿಸುವ ಹಾಗೂ ಸಂಜೆ ಐದಕ್ಕೆ ಮನೆಗೆ ಹೊರಡುವ ಸೂರ್ಯ ಇಲ್ಲಿನ ಜನಜೀವನದ ಭಿನ್ನತೆಗೆ ಮತ್ತೊಂದು ಕಾರಣ ಎನ್ನಬಹುದು. ಹಾಗಾಗಿ ಪ್ರವಾಸಿಗರು ರಾತ್ರಿಯ ಭೋಜನವನ್ನು ಸರಿಸುಮಾರು ಏಳು ಗಂಟೆಯ ಮೊದಲೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಪರ್ವತವಾಸಿಗಳ ವಿಶಿಷ್ಟ ಹಾಗೂ ರುಚಿಕರವಾದ ಪಾಕಶೈಲಿ ಇಲ್ಲಿನ ಮತ್ತೊಂದು ವಿಶೇಷ. ಬೆಳಿಗ್ಗೆ ಐದಕ್ಕೆ ಎದ್ದು ಮತ್ತೊಮ್ಮೆ ಚಕ್ರಗಳ ಮೇಲೆ ಕುಳಿತು ಗುಡ್ಡಗಳನ್ನು ಇಳಿಯುತ್ತಾ, ಏರುತ್ತಾ, ತವಾಂಗ್‌ನತ್ತ ಸಾಗುತ್ತಿದ್ದಂತೆ ಹಲವು ಅಚ್ಚರಿಗಳು ಕೈಬೀಸಿ ಕರೆಯುತ್ತವೆ.

‘ಬೊಮ್ದಿಲಾ’ದಿಂದ 100 ಕಿ.ಮೀ. ಸಾಗುತ್ತಿದ್ದಂತೆ ಸಾಗರಮಟ್ಟದಿಂದ 13,200 ಅಡಿಗಳಷ್ಟು ಎತ್ತರದಲ್ಲಿ ಇರುವ ‘ಸೆಲಾಪಾಸ್’ ಎಂಬ ಸರೋವರ ನಮ್ಮನ್ನು ಸ್ವಾಗತಿಸುತ್ತದೆ. ನವೆಂಬರ್‌ ಮತ್ತು ಮೇ ತಿಂಗಳ ಸಮಯದಲ್ಲಿ ಭೇಟಿ ನೀಡುವ ಎಲ್ಲ ಪ್ರವಾಸಿಗರಿಗೂ ಹಿಮದೌತಣವನ್ನು ಉಣಬಡಿಸುತ್ತದೆ.


-ಅನಾಮಿಕ ಸರೋವರ

ದಾರಿಬದಿಯಲ್ಲಿ ಸುಲಭವಾಗಿ ಕೈಗೆಟುಕುವ ಸ್ಥಳವಾದ್ದರಿಂದ ಹಿಮದ ರಾಶಿಯ ಜೊತೆಗೆ ಮನಸೋಇಚ್ಛೆ ಆಡಿ, ನಮ್ಮೊಳಗಿರುವ ಬಾಲ್ಯವನ್ನೊಮ್ಮೆ ತಟ್ಟಿಬರಬಹುದು. ಸರೋವರದ ಎದುರಲ್ಲಿಯೇ ಇರುವ ಪುಟ್ಟ ಗೂಡಂಗಡಿಯಲ್ಲಿ ಸಿಗುವ ಹಬೆಯಾಡುವ ಚಹಾ ಮತ್ತು ಖಾರವಾದ ನೂಡಲ್ಸ್‌ ತಿನ್ನುವ ಮಜವೇ ಬೇರೆ. ಟಿಬೆಟಿಯನ್‌ ಆಹಾರ ಪದ್ಧತಿಗಳಿಂದ ಬಲು ಪ್ರಭಾವಿತವಾಗಿರುವ ಈ ಪ್ರದೇಶದಲ್ಲಿ ಬಲು ರುಚಿಕರವಾದ ‘ಮೊಮೊ’, ‘ತುಪ್ಕಾ’ ಊಟದ ತಟ್ಟೆಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಮಕ್ಕಳಂತೆ ಮಂಜುಗಡ್ಡೆಗಳೊಂದಿಗೆ ಆಟವಾಡಿ, ದಣಿದು, ಹೊಟ್ಟೆ ತುಂಬಾ ಬಿಸಿಬಿಸಿ ಊಟ ಸವಿದು, ಗುಡ್ಡಗಳನ್ನಿಳಿಯುತ್ತಾ, ಹತ್ತುತ್ತಾ, ಬೆಟ್ಟಗಳಲ್ಲಿ ಹುಲ್ಲು ಮೇಯುತ್ತಿರುವ ಯಾಕ್‌ಗಳನ್ನು ನೋಡುತ್ತಾ, ವಾಹನ ತವಾಂಗ್‌ ಕಡೆ ಸಾಗುವಾಗ ಸಿಗುವುದು ‘ಜಸ್ವಂತ್‌ ಗರ್‌’.

1962ರ ಭೀಕರ ಯುದ್ಧದಲ್ಲಿ 300 ಚೀನಾ ಸೈನಿಕರನ್ನು ಸ್ಥಳೀಯ ಮಹಿಳೆಯರಿಬ್ಬರ ಸಹಾಯದಿಂದ ಮೂರು ದಿನಗಳ ಕಾಲ ಏಕಾಏಕಿಯಾಗಿ ಸದೆಬಡಿದ ವೀರನ ಸ್ಮರಣೆಗಾಗಿ ನಿರ್ಮಿಸಿದ ಯುದ್ಧ ಸ್ಮಾರಕ ಇಲ್ಲಿದೆ. ‘ಮಹಾವೀರ ಚಕ್ರ’ ಪಡೆದ ಈ ಧೀರ ಯೋಧನ ತ್ಯಾಗ, ಪರಾಕ್ರಮಗಳಿಗೆ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು, ಮತ್ತೆ ಪ್ರಯಾಣ ಬೆಳೆಸಿದಾಗ ಎದುರಾಗುವುದು ಎತ್ತರವಾದ ಬಂಡೆಯಿಂದ ಭೋರ್ಗರೆಯುತ್ತಾ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುವ ಗಜಗಾಮಿನಿ, ‘ನುರಾನಂಗ್’ ಜಲಪಾತ! ‘ಜಂಗ್’ ಜಲಪಾತವೆಂದೂ ಇದನ್ನು ಕರೆಯಲಾಗುತ್ತದೆ.

ಜಲಪಾತದ ಬುಡದವರೆಗೂ ಹೋಗಿ ನಿಂತರೆ, ಭೋರೆಂದು ಬೀಳುವ ಜಲಧಿಯ ಅಗಾಧವಾದ ರಭಸದಲ್ಲಿ, ಹೊರಲೋಕದ ಜಂಜಡಗಳು ಕೊಚ್ಚಿಹೋಗಿ, ಭುವಿಯಮ್ಮನ ಮಡಿಲಲ್ಲಿ ಭಯ, ಗೌರವಗಳಿಂದ ಮೇಲೆ ನೋಡುತ್ತಾ ವಿನೀತರಾಗಿ ನಿಂತ ಅನುಭವವಾಗುತ್ತದೆ. ಗಾಳಿಗೆ ಸೇರುವ ಜಲಪಾತದ ನೀರಲ್ಲಿ ತೊಯ್ದು ತೊಪ್ಪೆಯಾಗಿ ಮತ್ತೆ ಪ್ರಯಾಣ ಬೆಳೆಸಿದರೆ ತವಾಂಗ್‌ ತಲುಪಿದ ಮೇಲೆಯೇ ವಿಶ್ರಾಂತಿ. ಅಷ್ಟರಲ್ಲಿ ದಿನವೊಂದು ಕಳೆದು ಹೋದರೂ ಸುತ್ತಲಿನ ಆಶ್ಚರ್ಯ ಕಣ್ತುಂಬಿಕೊಳ್ಳುವುದರಲ್ಲಿಯೇ ಮುಳುಗಿದ ಪ್ರವಾಸಿಗರಿಗೆ ಕಾಲಾತೀತವಾದಂತಹ ಅನುಭೂತಿ ದೊರೆಯುತ್ತದೆ ಎಂದರೆ ಅತಿಶಯೋಕ್ತಿ ಆಗಲಾರದು.

ಬೌದ್ಧ ಮತಾನುಯಾಯಿಗಳಾದ ‘ಮೊನ್ಪಾ’ ಜನಾಂಗದವರ, ಭಾರತದ ಅತ್ಯಂತ ದೊಡ್ಡದಾದ ಬುದ್ಧವಿಹಾರವನ್ನು ಬೆಳೆಸಿದಂತಹ, ಚೀನಾದ ಕಪಿಮುಷ್ಟಿಗೆ 1962ರಲ್ಲಿ ನಲುಗಿದ ಕಣಿವೆಯ ನಗರ ‘ತವಾಂಗ್’. ಇಲ್ಲಿಯೂ ಒಂದು ಯುದ್ಧ ಸ್ಮಾರಕವಿದ್ದು ಯುದ್ಧದಲ್ಲಿ ಮಡಿದ ಪ್ರತಿ ಸೈನಿಕನ ಹೆಸರನ್ನು ಈ ಸ್ಮಾರಕದಲ್ಲಿ ಕೆತ್ತಲಾಗಿದೆ. ಇಲ್ಲಿನ ಬಹುಮುಖ್ಯ ಆಕರ್ಷಣೆಯೆಂದರೆ ಇಲ್ಲಿಂದ ಸುಮಾರು ಮೂವತ್ತು ಕಿಲೋ ಮೀಟರ್‌ ದೂರದಲ್ಲಿರುವ ಭಾರತ ಮತ್ತು ಚೀನಾದ ಗಡಿಯಲ್ಲಿರುವ ಸಮುದ್ರಮಟ್ಟದಿಂದ 15,200 ಅಡಿ ಎತ್ತರದಲ್ಲಿರುವ ‘ಬಮ್ಲಾಪಾಸ್’ ಎಂಬ ರಸ್ತೆ.

ಇಲ್ಲಿಗೆ ತಲುಪಲು ತವಾಂಗ್‌ನಿಂದ ಬೆಳಗಿನ ಜಾವದಲ್ಲಿ ಹೊರಟರೆ ಸೂಕ್ತ. ಹೆಜ್ಜೆಹೆಜ್ಜೆಗೆ ಸಿಗುವ ಸೈನ್ಯದ ತುಕಡಿಗಳು, ಬಂಕರ್‌ಗಳು, ಸೈನ್ಯದ ತಂಗುದಾಣಗಳು ಒಂದು ರೀತಿಯ ಸುರಕ್ಷಿತ ಭಾವವನ್ನು ತಂದುಕೊಡುವುದು ಸುಳ್ಳಲ್ಲ. ಅಲ್ಲದೆ ಎಂತಹ ಅಪಾಯಕಾರಿ ಸ್ಥಿತಿಯಲ್ಲಿಯೂ ಅಂತಹ ಗಡಿಗಳಲ್ಲಿ ನಿಂತು ದೇಶ ಕಾಯುವ ನಮ್ಮ ಸೈನ್ಯದ ಬಗ್ಗೆ ಹೆಮ್ಮೆ ತಾನಾಗಿ ಮೂಡುತ್ತದೆ. ಹಾಗೆಯೇ, ಇಂತಹ ರಾಷ್ಟ್ರ- ರಾಜಕಾರಣದ ವ್ಯವಸ್ಥೆ ಹುಟ್ಟು ಹಾಕಿ, ದೇಶಭಕ್ತಿ ಎಂಬ ಹೆಸರಲ್ಲಿ ಮನುಜರ ಜೀವ- ಜೀವನವನ್ನು ಒತ್ತೆ ಇಡುವ ಈ ಲೋಕದ ನ್ಯಾಯ ಎಷ್ಟು ಸರಿ ಎಂಬ ಆಲೋಚನೆಯೂ ಮನದಾಳದಲ್ಲಿ ಸುಳಿಯುತ್ತದೆ.

‘ಬಮ್ಲಾಪಾಸ್’ ಸಂಪೂರ್ಣ ಹಿಮಾಚ್ಛಾದಿತ ಪ್ರದೇಶ. ಅಂತಹ ಹಿಮ ಸೌಂದರ್ಯದ ಅಡಿಯಲ್ಲಿ ತಣ್ಣಗೆ ಕೊರೆಯುವ ಆಳವಾದ ಜಲಮೋಹಿನಿಗಳು ಹರಿಯುತ್ತಿರುತ್ತವೆ. ಹಾಗಾಗಿ ಅರಿವಿಲ್ಲದೆ, ಚಲನಚಿತ್ರಗಳಲ್ಲಿ ಕಾಣುವಂತೆ, ಹಿಮದ ನಡುವೆ ಓಡಿ ಕುಣಿಯುವ ನಾಯಕ-ನಾಯಕಿಯನ್ನು ಅನುಕರಿಸಲು ಹೋದರೆ ಅಪಾಯ ಕಟ್ಟಿಟ್ಟಬುತ್ತಿ. ಸುಮ್ಮನೆ ರಸ್ತೆಯಲ್ಲಿ ಕುಳಿತು ಅಥವಾ ಗಟ್ಟಿಯಾದ ಬಂಡೆಗಳ ಮೇಲೆ ಕುಳಿತು ರಸಾನುಭವ ಹೊಂದುವವರಾದರೆ ಸ್ವರ್ಗಕ್ಕೆ ಮೂರೇ ಗೇಣು.

ಹೀಗೆ ಪ್ರಕೃತಿಯ ಸೌಂದರ್ಯವನ್ನೂ, ಮನುಜನ ಸಹವಾಸವನ್ನೂ, ಮನಸ್ಸಲ್ಲಿ ತುಂಬಿಕೊಂಡು ಬೆಟ್ಟವಿಳಿದು ಬರುವಾಗ ನೋಡಲೇಬೇಕಾದಂತಹ ಮತ್ತೊಂದು ಸ್ಥಳ ‘ಸ್ಯಾನ್ಜೆಸ್ಟರ್’ ಸರೋವರ. ನಟಿ ಮಾಧುರಿ ದೀಕ್ಷಿತ್‌ ಹಾಡೊಂದಕ್ಕೆ ಇಲ್ಲಿ ಹೆಜ್ಜೆಹಾಕಿದ ದಿನದಿಂದ ಈ ಸ್ಥಳ ‘ಮಾಧುರಿ ಲೇಕ್‌’ ಎಂದೇ ಜನಜನಿತವಾಗಿದೆ.

ದೇವರು ಸಾವಕಾಶವಾಗಿ ಕುಳಿತು ತಪ್ಪಿಲ್ಲದೆ ಬಿಡಿಸಿದ ಚಿತ್ರ ಈ ಸರೋವರ. ಸಂಜೆಯಾಗುವ ಮುನ್ನ ದಾರಿಯಲ್ಲಿ ಸಿಗುವ ಇನ್ನೂ ಹಲವು ನಾಮಾಂಕಿತ ಹಾಗೂ ಅನಾಮಧೇಯ ಸರೋವರಗಳ ಅಂದ ಸವಿಯುತ್ತ ತವಾಂಗ್ ಏರಿದರೆ ಬಾಕಿ ಉಳಿದದ್ದು ಸಂತೆ ಮಾತ್ರವೇ!ಕರಕುಶಲವಸ್ತುಗಳು, ಬೌದ್ಧ ಪೂಜಾ ಸಾಮಗ್ರಿಗಳು, ಶುಭಸೂಚಕ ಎಂದು ನಂಬುವ ಪ್ರಾರ್ಥನಾ ಧ್ವಜಗಳು ಎಲ್ಲವೂ ಆಕರ್ಷಕವೇ. ಆದರೆ, ಸರಳವೆನಿಸುವ ಈ ಸಾಮಾಗ್ರಿಗಳ ಬೆಲೆ ಮಾತ್ರ ಇಲ್ಲಿನ ಶಿಖರಗಳಂತೆಯೇ ಗಗನಚುಂಬಿ! ವೈವಿಧ್ಯದ ಕಾಡು ಅಣಬೆಗಳು ಇಲ್ಲಿನ ಆಹಾರಶೈಲಿಯ ಆಕರ್ಷಣೆ. ಮಾಂಸಾಹಾರ ಮಾತ್ರವಲ್ಲದೆ ಸಸ್ಯಾಹಾರಿಗಳಿಗೂ ಬಗೆಬಗೆಯ ತಿನಿಸುಗಳ ಪರಿಚಯ ಇಲ್ಲಿ ಆಗುತ್ತದೆ.

ತವಾಂಗ್‌ನ ಮತ್ತೊಂದು ಆಕರ್ಷಣೆ ಎಂದರೆ ಇಲ್ಲಿನ ಬೌದ್ಧ ವಿಹಾರ. ಭಾರತದಲ್ಲಿಯೇ ಅತಿದೊಡ್ಡದಾಗಿರುವ ಈ ವಿಹಾರ ಪ್ರವಾಸಕ್ಕೆ ಒಂದು ಆಧ್ಯಾತ್ಮಿಕದ ಆಯಾಮ ಕೊಡುವುದು ಸುಳ್ಳಲ್ಲ. ಹಾಗೆ ನೋಡಿದರೆ ಪ್ರಕೃತಿಯ ಮಡಿಲಲ್ಲಿ ನಮ್ಮನ್ನು ಮಗುವಾಗಿಸುವ ಇಡೀ ತವಾಂಗ್‌ ಪ್ರವಾಸ ನಮ್ಮಲ್ಲಿ ಒಂದು ದಿವ್ಯವಾದ ಶಾಂತಿಯನ್ನೂ, ಸಮಾಧಾನವನ್ನೂ, ತುಂಬುವುದರಲ್ಲಿ ಸಂಶಯವಿಲ್ಲ.

ವಾಪಸ್‌ ಬರುವಾಗ ‘ಬೊಮ್ದಿಲಾ’ ನಂತರ ‘ರೂಪಾ’ ಮಾರ್ಗವಾಗಿ ನೇರವಾಗಿ ಗುವಾಹಟಿ ತಲುಪಬಹುದು. ತುಸು ಪ್ರಯಾಸ‌ ಎನಿಸಿದರೂ ಸಮಯ ಉಳಿಸಲು ಈ ಮಾರ್ಗ ಸಹಾಯಕಾರಿ. ಕನಿಷ್ಠ ಐದಾರು ದಿನಗಳು ಬೇಕಾಗುವ ಈ ಪ್ರವಾಸದಲ್ಲಿ ಅನೇಕ ರೀತಿಯ ಹವಾಮಾನದಲ್ಲಿ ನೈಸರ್ಗಿಕ ತಾಣಗಳನ್ನು ಸಂದರ್ಶಿಸಬಹುದು. ಗುವಾಹಟಿ ಅಥವಾ ತೇಜ್‌ಪುರ ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣಗಳು. ನಂತರ ತವಾಂಗ್‌ನವರೆಗೆ ರಸ್ತೆ ಪ್ರಯಾಣವನ್ನೇ ಮಾಡಬೇಕಾಗುತ್ತದೆ. ಅರುಣಾಚಲ ಪ್ರದೇಶ ಪ್ರವೇಶಿಸುವಾಗ ಪ್ರತ್ಯೇಕ ಅನುಮತಿ ಪತ್ರಗಳ ಅವಶ್ಯಕತೆಯಿದ್ದು ಅವನ್ನು ಗುವಾಹಟಿ ವಿಮಾನ ನಿಲ್ದಾಣದಲ್ಲಿ, ಗುವಾಹಟಿ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಅಥವಾ ತೇಜ್‌ಪುರ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು. ‘ಬಮ್ಲಾಪಾಸ್’ ಸಂದರ್ಶನಕ್ಕೂ ಪ್ರತ್ಯೇಕ ಪರವಾನಗಿಯ ಅವಶ್ಯಕತೆ ಇದೆ.

ತವಾಂಗ್‌ ಪ್ರವಾಸ ಮನಸ್ಸಿಗೆ ಹಾಯೆನಿಸುವ, ನೆಮ್ಮದಿಯ ಅನುಭೂತಿಯನ್ನು ತಂದುಕೊಡುವಂಥದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT